LIC IPO: ಹೂಡಿಕೆದಾರರಿಗೆ ಶೀಘ್ರದಲ್ಲಿ ಸಿಗಲಿದೆಯಾ ಡಿವಿಡೆಂಡ್? ಎಲ್ಐಸಿ ನೀಡಿರುವ ಮಾಹಿತಿಯೇನು?
*ಬಿಎಸ್ ಇ ಫೈಲಿಂಗ್ ನಲ್ಲಿ ಹೂಡಿಕೆದಾರರಿಗೆ ಡಿವಿಡೆಂಡ್ ಪಾವತಿಸುವ ಮಾಹಿತಿ ನೀಡಿರುವ ಎಲ್ಐಸಿ
*ಮೇ 30ರಂದು ನಡೆಯೋ ನಿರ್ದೇಶಕರ ಮಂಡಳಿ ಸಭೆಯಲ್ಲಿ ಅಂತಿಮ ತೀರ್ಮಾನ
*ಗುರುವಾರ ಬಿಎಸ್ ಇ ಆರಂಭಿಕ ವಹಿವಾಟಿನಲ್ಲಿ ಎಲ್ಐಸಿ ಷೇರಿನ ದರ 820.30ರೂ.
ನವದೆಹಲಿ (ಮೇ 26): ಹೂಡಿಕೆದಾರರಿಗೆ (Investors) ಲಾಭಾಂಶ (dividends) ಪಾವತಿಸುವ ಸಂಬಂಧ ತೀರ್ಮಾನ ಕೈಗೊಳ್ಳಲು ಹಾಗೂ ಅನುಮೋದನೆ ನೀಡಲು ನಿರ್ದೇಶಕರ ಮಂಡಳಿ (Board of directors) ಸಭೆ ನಡೆಸುವುದಾಗಿ ಭಾರತೀಯ ಜೀವ ವಿಮಾ ನಿಗಮ (LIC) ಬಿಎಸ್ ಇ ಫೈಲಿಂಗ್ ನಲ್ಲಿ (BSE-filing) ತಿಳಿಸಿದೆ. ಎಲ್ಐಸಿ ನಿರ್ದೇಶಕರ ಮಂಡಳಿ ಸಭೆ ಮೇ 30ಕ್ಕೆ ನಿಗದಿಯಾಗಿದೆ.
20,557 ಕೋಟಿ ರೂ. ಬಂಡವಾಳ ಸಂಗ್ರಹಿಸುವ ಮೂಲಕ ಪ್ರಾರಂಭಿಕ ಷೇರು ಕೊಡುಗೆಯನ್ನು (IPO)ಯಶಸ್ವಿಯಾಗಿ ಮುಗಿಸಿರುವ ಎಲ್ಐಸಿ ((LIC) ಷೇರು ಮಾರುಕಟ್ಟೆಗೆ ಪದಾರ್ಪಣೆ ಮಾಡಿದೆ. ಆದರೆ, ಎಲ್ಐಸಿ ಷೇರುಗಳು ವಿತರಣೆ ಬೆಲೆಗಿಂತ (Issue price) ಶೇ.8 ರಷ್ಟು ಕಡಿಮೆ ದರಕ್ಕೆ ಲಿಸ್ಟಿಂಗ್ (Listing) ಆಗಿವೆ.
'ನಿರ್ದೇಶಕರ ಮಂಡಳಿ ಸಭೆಯನ್ನು 2022ರ ಮೇ 30 ಕ್ಕೆ ನಿಗದಿಪಡಿಸಲಾಗಿದೆ ಎಂದು ಭಾರತೀಯ ಜೀವ ವಿಮಾ ನಿಗಮ (LIC) ಬಿಎಸ್ ಇಗೆ ( BSE) ಮಾಹಿತಿ ನೀಡಿದೆ. ಈ ಸಭೆಯು ಈ ಕೆಳಗಿನ ಅಜೆಂಡಾಗಳನ್ನು ಹೊಂದಿದೆ: 2022 ರ ಮಾರ್ಚ್ 31ಕ್ಕೆ ಕೊನೆಗೊಂಡಿರುವ ತ್ರೈಮಾಸಿಕ/ವರ್ಷದ ಅಡಿಟ್ ಆಗಿರುವ ವಾರ್ಷಿಕ ಹಣಕಾಸು ಫಲಿತಾಂಶ ಹಾಗೂ ಲಾಭಾಂಶ ಪಾವತಿ ಬಗ್ಗೆ ಚರ್ಚಿಸಿ ಅನುಮೋದನೆ ನೀಡುವುದು' ಎಂದು ಬಿಎಸ್ ಇ ಫೈಲಿಂಗ್ ನಲ್ಲಿ ಎಲ್ಐಸಿ ತಿಳಿಸಿದೆ.
ಡಿವಿಡೆಂಡ್ ಅಂದ್ರೇನು?
ಆರ್ಹ ಷೇರುದಾರರಿಗೆ ಗಳಿಕೆ ಅಥವಾ ಲಾಭದ ಪಾಲಿನ ವಿತರಣೆಯೇ ಡಿವಿಡೆಂಡ್ ಅಥವಾ ಲಾಭಾಂಶ. ಈ ಲಾಭಾಂಶವನ್ನು ನಗದು ಅಥವಾ ಹೆಚ್ಚುವರಿ ಷೇರಿನ ರೂಪದಲ್ಲಿ ಪಾವತಿಸುವುದು ಕಡ್ಡಾಯ.
ಎಲ್ಐಸಿ ಷೇರು ಬೆಲೆ ಎಷ್ಟಿದೆ?
ಎಲ್ಐಸಿ ಷೇರು ಗುರುವಾರ ಮುಂಬೈ ಷೇರು ವಿನಿಮಯ ಕೇಂದ್ರದಲ್ಲಿ (BSE) 820.30ರೂ.ನೊಂದಿಗೆ ದಿನದ ಆರಂಭ ಮಾಡಿದ್ದು, ಮಧ್ಯಾಹ್ನ 12ರ ವೇಳೆಗೆ 810ರೂ. ನಲ್ಲಿ ವಹಿವಾಟುನಡೆಸುತ್ತಿತ್ತು. ಎಲ್ಐಸಿ ಷೇರು ಮೇ 17ರಂದು ಷೇರು ಮಾರುಕಟ್ಟೆಯಲ್ಲಿ ಲಿಸ್ಟಿಂಗ್ ಆಗಿದ್ದು, ಐಪಿಒ ವಿತರಣೆ ಬೆಲೆಗಿಂತ 73.55ರೂ. ಕಡಿಮೆ ಅಂದ್ರೆ 875.45ರೂ.ಗೆ ದಿನದ ಆಟ ಮುಗಿಸಿತ್ತು. ಎಲ್ಐಸಿ ಷೇರಿನ ಐಪಿಒ ವಿತರಣೆ ದರ 949ರೂ. ಡಿಸ್ಕೌಂಟ್ ಆಫರ್ ಹಿನ್ನೆಲೆಯಲ್ಲಿ ಎಲ್ಐಸಿಯ ಪ್ರತಿ ಷೇರು ಪಾಲಿಸಿದಾರರು ಹಾಗೂ ರಿಟೇಲ್ ಹೂಡಿಕೆದಾರರಿಗೆ ಅನುಕ್ರಮವಾಗಿ 889ರೂ. ಹಾಗೂ 904ರೂ. ಬೆಲೆಗೆ ದೊರಕಿತ್ತು. ಕೇಂದ್ರ ಸರ್ಕಾರ ಎಲ್ಐಸಿಯಲ್ಲಿನ ತನ್ನ ಶೇ.3.5 ಪಾಲು ಅಥವಾ 22.13 ಕೋಟಿ ಷೇರುಗಳನ್ನು ಐಪಿಒ ಮೂಲಕ ಮಾರಾಟ ಮಾಡಿತ್ತು.
ಮಾರುಕಟ್ಟೆಯಲ್ಲಿನ ಅನಿಶ್ಚಿತತೆ ಕಾರಣಕ್ಕೆ ಎಲ್ಐಸಿ ಷೇರುಗಳ ಪದಾರ್ಪಣೆ ದುರ್ಬಲವಾಗಿತ್ತು. ಆದ್ರೆ ಹೂಡಿಕೆದಾರರು ಷೇರುಗಳನ್ನು ಮಾರಾಟ ಮಾಡದೆ ಹಾಗೇ ಇಟ್ಟುಕೊಳ್ಳಬೇಕು. ದೀರ್ಘಾವಧಿಯಲ್ಲಿ ಷೇರುಗಳು ಮೌಲ್ಯ ಹೆಚ್ಚಿಸಿಕೊಳ್ಳಲಿವೆ ಎಂದು ಹೂಡಿಕೆ ಹಾಗೂ ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆ (DIPAM) ಕಾರ್ಯದರ್ಶಿ ತುಹಿನ್ ಕಾಂತ ಪಾಂಡೆ ತಿಳಿಸಿದ್ದಾರೆ.
21,000 ಕೋಟಿ ರೂ. ಗಾತ್ರದ ಭಾರತದ ಅತೀದೊಡ್ಡ ಐಪಿಒ ಎಂಬ ಹೆಗ್ಗಳಿಕೆ ಗಳಿಸಿದ ಎಲ್ಐಸಿ ಐಪಿಒ ಮೇ 4 ರಿಂದ ಮೇ 9 ರ ತನಕ ಒಟ್ಟು 6 ದಿನಗಳ ಕಾಲ ನಡೆದಿತ್ತು. ಈ ಐಪಿಒಗೆ ಹೂಡಿಕೆದಾರರಿಂದ ಭರ್ಜರಿ ಸ್ಪಂದನೆ ಸಿಕ್ಕಿತು. ಆರು ದಿನಗಳ ಬಿಡ್ಡಿಂಗ್ ನ ಕೊನೆಯಲ್ಲಿ ಎಲ್ಐಸಿ ಷೇರುಗಳು 2.95 ಬಾರಿ ಸಬ್ ಸ್ಕ್ರೈಬ್ ಆಗಿವೆ. ಷೇರುಗಳು ಅತ್ಯಧಿಕ ಬೆಲೆ ಶ್ರೇಣಿಯಲ್ಲಿ ಮಾರಾಟವಾಗುವ ಜೊತೆಗೆ ಸ್ಥಳೀಯ ಹೂಡಿಕೆದಾರರಿಂದ ಭಾರೀ ಬೇಡಿಕೆ ವ್ಯಕ್ತವಾಗಿತ್ತು. 16.2 ಕೋಟಿ ಈಕ್ವಿಟಿ ಷೇರುಗಳ ಗಾತ್ರದ ಐಪಿಒಗೆ 47.83 ಕೋಟಿ ಬಿಡ್ಡಿಂಗ್ ಗಳು ಸಲ್ಲಿಕೆ ಆಗಿದ್ದವು.