LIC IPO:ಮೊದಲ ದಿನವೇ ಷೇರುಗಳಿಗೆ ಭಾರೀ ಬೇಡಿಕೆ; ಆರಂಭವಾದ 2 ಗಂಟೆಯಲ್ಲಿ ಶೇ.28 ಷೇರುಗಳ ಮಾರಾಟ; ಇನ್ನಷ್ಟು ಮಾಹಿತಿ ಇಲ್ಲಿದೆ
*ಎಲ್ಐಸಿ ಪಾಲಿಸಿದಾರರಿಗೆ ಮೀಸಲಿಟ್ಟ ಶೇ.10ರಷ್ಟು ಷೇರುಗಳು ಪೂರ್ತಿ ಪ್ರಮಾಣದಲ್ಲಿ ಮಾರಾಟ
*ಈ ಐಪಿಒ ಮೂಲಕ ಎಲ್ಐಸಿಯ 22,13,74,920 ಷೇರುಗಳನ್ನು ಮಾರಾಟ ಮಾಡುತ್ತಿರುವ ಕೇಂದ್ರ ಸರ್ಕಾರ
*ಎಲ್ಐಸಿ ಐಪಿಒ ಮೂಲಕ 21,000 ಕೋಟಿ ರೂ. ಸಂಗ್ರಹಿಸುವ ಗುರಿ
ಮುಂಬೈ (ಮೇ 4): ಭಾರತೀಯ ಜೀವ ವಿಮಾ ನಿಗಮದ (LIC) ಬಹುನಿರೀಕ್ಷಿತ ಸಾರ್ವಜನಿಕ ಪ್ರಾರಂಭಿಕ ಷೇರು ಕೊಡುಗೆ (IPO) ಇಂದಿನಿಂದ (ಮೇ4) ಪ್ರಾರಂಭವಾಗಿದೆ. ಮೊದಲ ದಿನದ ಬಿಡ್ಡಿಂಗ್ ಬೆಳಗ್ಗೆ 11ಕ್ಕೆ ಪ್ರಾರಂಭವಾಗಿದ್ದು, ಕೇವಲ ಎರಡು ಗಂಟೆಯೊಳಗೆ ಶೇ.28 ಷೇರುಗಳ ಚಂದಾದಾರಿಕೆಯನ್ನು ಪಡೆಯಲಾಗಿದೆ. ಈ ಮೂಲಕ ಎಲ್ಐಸಿ ಐಪಿಒಗೆ ಉತ್ತಮ ಆರಂಭ ಸಿಕ್ಕಿದೆ.
ಮಧ್ಯಾಹ್ನ 1.15ರ ತನಕದ ಮಾಹಿತಿ ಅನ್ವಯ ಶೇ.36 ಷೇರುಗಳು ಖರೀದಿಸಲ್ಪಟ್ಟಿವೆ. ಇದರಲ್ಲಿ ಎಲ್ಐಸಿ ಪಾಲಿಸಿದಾರರಿಗೆ ಮೀಸಲಿಟ್ಟ ಶೇ.10ರಷ್ಟು ಷೇರುಗಳು ಪೂರ್ತಿ ಪ್ರಮಾಣದಲ್ಲಿ ಖರೀದಿಸಲ್ಪಟ್ಟಿವೆ. ಇನ್ನು ಎಲ್ಐಸಿ ಉದ್ಯೋಗಿಗಳಿಗೆ ಮೀಸಲಿಟ್ಟ ಶೇ.0.7ರಷ್ಟು ಷೇರುಗಳಲ್ಲಿ ಶೇ.64 ಹಾಗೂ ರಿಟೇಲ್ ಹೂಡಿಕೆದಾರರಿಗೆ ಮೀಸಲಿಟ್ಟ ಶೇ31.25ರಷ್ಟು ಷೇರುಗಳಲ್ಲಿ ಶೇ.39 ರಷ್ಟು ಷೇರುಗಳ ಚಂದಾದಾರಿಕೆಯನ್ನು ಪಡೆಯಲಾಗಿದೆ.
ಕೇಂದ್ರ ಸರ್ಕಾರ ಈ ಐಪಿಒ ಮೂಲಕ ಎಲ್ಐಸಿಯ ಶೇ. 3.5ರಷ್ಟು ಅಥವಾ 22,13,74,920 ಷೇರುಗಳನ್ನು ಮಾರಾಟ ಮಾಡುತ್ತಿದೆ. ಪ್ರತಿ ಷೇರಿಗೆ 902ರೂ. ನಿಂದ 949ರೂ. ದರ ನಿಗದಿಪಡಿಸಲಾಗಿದ್ದು, ಈ ಐಪಿಒ ಮೂಲಕ 21,000 ಕೋಟಿ ರೂ. ಸಂಗ್ರಹಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಬುಧವಾರ (ಮೇ 4) ಎಲ್ಐಸಿ ಪಾಲಿಸಿದಾರರು ಹಾಗೂ ಹೂಡಿಕೆದಾರರಿಗೆ ಎಲ್ಐಸಿ ಐಪಿಒ ತೆರೆಯಲ್ಪಟ್ಟಿದ್ದು, ಸೋಮವಾರದ (ಮೇ 9) ಕೊನೆಗೊಳ್ಳಲಿದೆ.
LIC IPO:ನಾಳೆಗೆ ಇಂದೇ ಸಿಕ್ಕಿತು ಶುಭ ಶಕುನ ; ಆ್ಯಂಕರ್ ಹೂಡಿಕೆದಾರರಿಂದ 5,627 ಕೋಟಿ ರೂ. ಸಂಗ್ರಹಿಸಿದ ಎಲ್ಐಸಿ
5,627 ಕೋಟಿ ರೂ. ಸಂಗ್ರಹ
ಆ್ಯಂಕರ್ ಹೂಡಿಕೆದಾರರಿಗೆ ಸೋಮವಾರದಿಂದಲೇ (ಮೇ 2) ಆರಂಭಿಕ ಷೇರುಗಳನ್ನು ಬಿಡುಗಡೆ ಮಾಡಲಾಗಿದ್ದು, ಇದಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆ್ಯಂಕರ್ ಹೂಡಿಕೆದಾರರಿಂದ 5,627 ಕೋಟಿ ರೂ. ಸಂಗ್ರಹಿಸಲಾಗಿದೆ ಎಂದು ಎಲ್ಐಸಿ ಮಂಗಳವಾರ ಮಾಹಿತಿ ನೀಡಿದೆ. 123 ಆ್ಯಂಕರ್ ಹೂಡಿಕೆದಾರರಿಗೆ ಪ್ರತಿ ಷೇರಿಗೆ 949ರೂ.ನಂತೆ 5.93 ಕೋಟಿ ಇಕ್ವಿಟಿ ಷೇರುಗಳನ್ನು ವಿತರಿಸುವ ಮೂಲಕ 5,627 ಕೋಟಿ ರೂ. ಸಂಗ್ರಹಿಸಿದೆ. ಹಂಚಿಕೆಯಾದ 5.93 ಕೋಟಿ ಇಕ್ವಿಟಿ ಷೇರುಗಳಲ್ಲಿ ಶೇ. 71ಕ್ಕೂ ಅಧಿಕ ಷೇರುಗಳನ್ನು 99 ಯೋಜನೆಗಳ ಮೂಲಕ 15ಕ್ಕೂ ಹೆಚ್ಚು ದೇಶೀಯ ಮ್ಯೂಚ್ಯುವಲ್ ಫಂಡ್ ಗಳು ಖರೀದಿಸಿವೆ. ಅದರಲ್ಲೂ ಎಸ್ ಬಿಐ ಮ್ಯೂಚ್ಯುವಲ್ ಫಂಡ್ (SBI Mutual Fund) 1,006.89 ಕೋಟಿ ರೂ. ಹೂಡಿಕೆ ಮಾಡುವ ಮೂಲಕ ಆ್ಯಂಕರ್ ಬುಕ್ ಕೋಟಾದಲ್ಲಿ ಅತೀದೊಡ್ಡ ಹೂಡಿಕೆದಾರನಾಗಿ ಕಾಣಿಸಿಕೊಂಡಿದೆ.
ಎಲ್ಐಸಿ ಪಾಲಿಸಿದಾರರಿಗೆ ಡಿಸ್ಕೌಂಟ್
ಎಲ್ಐಸಿ ಐಪಿಒನಲ್ಲಿ ಎಲ್ಐಸಿ ಪಾಲಿಸಿದಾರರಿಗೆ 2,21,37,492 ಷೇರುಗಳನ್ನು ಹಾಗೂ ಎಲ್ಐಸಿ ಉದ್ಯೋಗಿಗಳಿಗೆ 15,81,249 ಷೇರುಗಳನ್ನು ಮೀಸಲಿಡಲಾಗಿದೆ. ಅಲ್ಲದೆ, ಎಲ್ ಐಸಿ ಪಾಲಿಸಿದಾರರಿಗೆ (Policyholders) ಪ್ರತಿ ಷೇರಿನ ಮೇಲೆ 60ರೂ. ಡಿಸ್ಕೌಂಟ್ (Discount)ನೀಡಲಾಗಿದೆ. ಎಲ್ಐಸಿಯಲ್ಲಿ 30 ಕೋಟಿ ಪಾಲಿಸಿದಾರರಿದ್ದಾರೆ. ಇನ್ನು ಎಲ್ಐಸಿ ಸಿಬ್ಬಂದಿ (employees) ಹಾಗೂ ರಿಟೇಲ್ ಹೂಡಿಕೆದಾರರಿಗೆ (Retail Investors) ಪ್ರತಿ ಷೇರಿನ ಮೇಲೆ 45ರೂ. ಡಿಸ್ಕೌಂಟ್ ನೀಡಲಾಗಿದೆ.
ಪ್ರಮುಖ ದಿನಾಂಕಗಳು
ಹಂಚಿಕೆ ದಿನಾಂಕ (allotment date): ಷೇರುಗಳನ್ನು ಮೇ 12ಕ್ಕೆ ಹಂಚಿಕೆ ಮಾಡಲಾಗುತ್ತದೆ.
ಷೇರು ವರ್ಗಾವಣೆ: ಡಿಮ್ಯಾಟ್ (Demate) ಖಾತೆಗಳಿಗೆ ಮೇ 16ರಂದು ಷೇರುಗಳನ್ನು ವರ್ಗಾವಣೆ ಮಾಡಲಾಗುತ್ತದೆ.
ಲಿಸ್ಟಿಂಗ್ (listing)ದಿನಾಂಕ: ಮೇ 17ರಂದು ವಿನಿಮಯ ಕೇಂದ್ರಗಳಾದ ಬಿಎಸ್ ಇ (BSE) ಹಾಗೂ ಎನ್ಎಸ್ಇಯಲ್ಲಿ (NSE) ಷೇರುಗಳ ಲಿಸ್ಟಿಂಗ್ ನಡೆಯಲಿದೆ.
LIC IPO: ಗ್ರಾಹಕರಿಗೆ ಎಸ್ ಬಿಐ ಆಫರ್! ಯೋನೋ ಅಪ್ಲಿಕೇಷನ್ ಮೂಲಕ ಡಿಮ್ಯಾಟ್ ಖಾತೆ ತೆರೆಯಲು ಅವಕಾಶ
ಆನ್ ಲೈನ್ ನಲ್ಲಿ ಅಪ್ಲೈ ಮಾಡೋದು ಹೇಗೆ?
ಎಲ್ಐಸಿ ಐಪಿಒಗೆ ಅಪ್ಲೈ ಮಾಡಲು ನೀವು ಡಿಮ್ಯಾಟ್ ಖಾತೆ ತೆರೆಯಬೇಕು ಹಾಗೂ ಕೆವೈಸಿ (KYC) ಪೂರ್ಣಗೊಳಿಸಿರಬೇಕು. ಆ ಬಳಿಕ ಈ ಕೆಳಗೆ ವಿವರಿಸಿರುವ ಹಂತಗಳನ್ನು ಅನುಸರಿಸುವ ಮೂಲಕ ಐಪಿಒಗೆ ಅಪ್ಲೈ ಮಾಡಿ.
ಹಂತ 1: ನಿಮ್ಮ ನೆಟ್ ಬ್ಯಾಂಕಿಂಗ್ ಖಾತೆ ತೆರೆಯಿರಿ ಹಾಗೂ IPO/e-IPO ಆಯ್ಕೆಯನ್ನು ಆರಿಸಿ.
ಹಂತ 2: ದೃಢೀಕರಣ ಪ್ರಕ್ರಿಯೆ ಪೂರ್ಣಗೊಳಿಸಲು ವೆಬ್ ಸೈಟ್ ನಲ್ಲಿ ಕೇಳಿರುವ ಬ್ಯಾಂಕ್ ವಿವರಗಳು ಹಾಗೂ ಇತರ ಮಾಹಿತಿಗಳನ್ನು ನಮೂದಿಸಿ.
ಹಂತ 3: Invest In IPO ಆಯ್ಕೆ ಆರಿಸಿ ಹಾಗೂ LIC ಆಯ್ಕೆ ಮಾಡಿ.
ಹಂತ 4: ಷೇರುಗಳ ಸಂಖ್ಯೆ ಹಾಗೂ ಬಿಡ್ ಬೆಲೆ ನಮೂದಿಸಿ. ಆ ಬಳಿಕ ಪ್ರಕ್ರಿಯೆ ಪೂರ್ಣಗೊಳಿಸಲು 'Apply Now'ಆಯ್ಕೆ ಮೇಲೆ ಕ್ಲಿಕ್ ಮಾಡಿ.