ಬೆಳಕಿನ ಹಬ್ಬಕ್ಕೆ ಎಲ್ಐಸಿಯ ಹೊಸ ಪಾಲಿಸಿ; ಸುರಕ್ಷತೆಯ ಜೊತೆಗೆ ಉಳಿತಾಯಕ್ಕೆ ಧನ್ ವರ್ಷ
ಭಾರತೀಯ ಜೀವ ವಿಮಾ ನಿಗಮ ಆಗಾಗ ಹೊಸ ಪಾಲಿಸಿಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಈ ಬಾರಿ ದೀಪಾವಳಿ ಹಬ್ಬಕ್ಕೆ ಜೀವ ವಿಮೆಯಲ್ಲಿ ಹೂಡಿಕೆ ಮಾಡಲು ಬಯಸುವವರಿಗೆ ಧನ್ ವರ್ಷ ಎಂಬ ಹೊಸ ಯೋಜನೆಯನ್ನು ಪರಿಚಯಿಸಿದೆ. ಧನ್ ವರ್ಷ ಪಾಲಿಸಿಯ ವಿಶೇಷತೆಗಳೇನು? ಯಾರು ಖರೀದಿಸಬಹುದು? ಇಲ್ಲಿದೆ ಮಾಹಿತಿ.
ನವದೆಹಲಿ (ಅ.18): ಜೀವ ವಿಮೆ ಎಂದ ತಕ್ಷಣ ಮೊದಲಿಗೆ ನೆನಪಾಗೋದೇ ಭಾರತೀಯ ಜೀವ ವಿಮಾ ನಿಗಮ (ಎಲ್ ಐಸಿ). ಆಯಾ ವಯೋಮಾನದ, ಎಲ್ಲ ವರ್ಗದ ಜನರಿಗೆ ಹೊಂದುವಂತಹ ಅನೇಕ ಪಾಲಿಸಿಗಳನ್ನು ಎಲ್ ಐಸಿ ಹೊಂದಿರೋದೇ ಇದಕ್ಕೆ ಕಾರಣ. ಅಲ್ಲದೆ, ಎಲ್ ಐಸಿ ಸರ್ಕಾರಿ ಬೆಂಬಲಿತ ಸಂಸ್ಥೆಯಾಗಿರುವ ಕಾರಣ ಸುರಕ್ಷಿತ ಎಂಬ ಭಾವನೆ ಕೂಡ ಜನರಲ್ಲಿದೆ. ಹೀಗಾಗಿ ಇಂದು ಅದೆಷ್ಟೇ ಖಾಸಗಿ ವಿಮಾ ಕಂಪನಿಗಳು ತಲೆ ಎತ್ತಿದ್ರು ಕೂಡ ಎಲ್ ಐಸಿ ಪಾಲಿಸಿಗಳಿಗೆ ಬೇಡಿಕೆ ತಗ್ಗಿಲ್ಲ. ಧನ್ ವರ್ಷ ಎನ್ನುವ ಹೊಸ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆ 2022ರ ಅಕ್ಟೋಬರ್ 17ರಿಂದಲೇ ಜಾರಿಗೆ ಬಂದಿದೆ. ಇದು ನಾನ್ ಲಿಂಕ್ಡ್, ವೈಯಕ್ತಿಕ, ಉಳಿತಾಯದ ಏಕೈಕ ಪ್ರೀಮಿಯಂ ಹೊಂದಿರುವ ಜೀವ ವಿಮೆ ಪ್ಲ್ಯಾನ್ ಆಗಿದ್ದು, ಸುರಕ್ಷತೆ ಹಾಗೂ ಉಳಿತಾಯ ಎರಡನ್ನೂ ಒದಗಿಸುತ್ತದೆ. ಇದು ಪಾಲಿಸಿದಾರ ಪಾಲಿಸಿ ಅವಧಿಯಲ್ಲಿ ಆಕಸ್ಮಿಕವಾಗಿ ಸಾವನ್ನಪ್ಪಿದ್ರೆ ಆತನ ಕುಟುಂಬಕ್ಕೆ ಆರ್ಥಿಕ ಬೆಂಬಲ ಒದಗಿಸುತ್ತದೆ. ಇನ್ನು ಪಾಲಿಸಿಯ ಮೆಚ್ಯುರಿಟಿ ಅವಧಿ ಪೂರ್ಣಗೊಂಡ ಬಳಿಕ ಗ್ಯಾರಂಟಿ ನೀಡಿರುವ ಮೊತ್ತವನ್ನು ಪಾಲಿಸಿದಾರನಿಗೆ ಪಾವತಿಸುತ್ತದೆ.
ಎರಡು ಆಯ್ಕೆಗಳು
ಮರಣ ಹೊಂದಿದ್ರೆ ಕ್ಲೈಮ್ ಮಾಡಿಕೊಳ್ಳಲು ಎರಡು ಆಯ್ಕೆಗಳಿವೆ. ಒಂದು ಆಯ್ಕೆಯು ವಿಮಾ ಮೊತ್ತದ 10 ಪಟ್ಟು ಮತ್ತು ಇನ್ನೊಂದು ಆಯ್ಕೆಯು ವಿಮಾ ಮೊತ್ತದ 1.25 ಪಟ್ಟು ಹಣವನ್ನು ಮೆಚ್ಯುರಿಟಿ ಬಳಿಕ ಒದಗಿಸುತ್ತವೆ. ಪಾಲಿಸಿದಾರ 10 ಅಥವಾ 15 ವರ್ಷಗಳ ಅವಧಿಗೆ ಪಾಲಿಸಿಯನ್ನು ಆಯ್ಕೆ ಮಾಡಬಹುದು.
ಕ್ರೆಡಿಟ್ ಕಾರ್ಡ್ ಕ್ಲೋಸ್ ಮಾಡಲು ಬಯಸುತ್ತಿದ್ದೀರಾ? ಹಾಗಾದ್ರೆ ಇಲ್ಲಿದೆ ನೋಡಿ ಆರ್ ಬಿಐ ಹೊಸ ಗೈಡ್ ಲೈನ್ಸ್
ವಯೋಮಿತಿ
10 ವರ್ಷಗಳ ಅವಧಿಯ ಈ ಪಾಲಿಸಿಗೆ ಚಂದಾದಾರರಾಗಲು ಕನಿಷ್ಠ ವಯೋಮಿತಿ 8 ವರ್ಷಗಳು. ಹಾಗೆಯೇ 15 ವರ್ಷಗಳ ಅವಧಿಯ ಪಾಲಿಸಿಗೆ ಚಂದಾದಾರರಾಗಲು ಕನಿಷ್ಠ ವಯಸ್ಸು 3ವರ್ಷ. ಇನ್ನು ಈ ಪಾಲಿಸಿ ಆಯ್ಕೆ ಮಾಡಿಕೊಳ್ಳಲು ವಯಸ್ಸಿನ ಗರಿಷ್ಠ ಮಿತಿ ಅವಧಿ ಹಾಗೂ ಡೆತ್ ಕ್ಲೈಮ್ ಆಧರಿಸಿ 35ರಿಂದ 60 ವರ್ಷಗಳ ತನಕ ನಿಗದಿಪಡಿಸಲಾಗಿದೆ. ಅಂದರೆ ಗರಿಷ್ಠ ವಯೋಮಿತಿ 60 ವರ್ಷಗಳು.
ಈ ಪಾಲಿಸಿಯಲ್ಲಿ ಭರವಸೆ ನೀಡಿರುವ ಕನಿಷ್ಠ ಮೂಲ ಮೊತ್ತ 1,25,000 ರೂ. ಗರಿಷ್ಠ ಮೂಲ ಮೊತ್ತಕ್ಕೆ ಯಾವುದೇ ಮಿತಿ ವಿಧಿಸಿಲ್ಲ. ಪಾಲಿಸಿ ಕನಿಷ್ಠ ಮೆಚ್ಯೂರಿಟಿ ವಯಸ್ಸು 18 ವರ್ಷಗಳು.
ಧನ್ ವರ್ಷ ಪಾಲಿಸಿಯು ವೈದ್ಯಕೀಯ ಮತ್ತು ವೈದ್ಯಕೀಯೇತರ ಎರಡು ಆಯ್ಕೆಗಳಲ್ಲಿ ಲಭ್ಯವಿದ್ದು, ಪಾಲಿಸಿದಾರರು ತಮ್ಮ ಆದ್ಯತೆ ಮೇರೆಗೆ ಆಯ್ಕೆ ಮಾಡಿಕೊಳ್ಳಬಹುದು. ಈ ಆಯ್ಕೆಯ ಆಧಾರದಲ್ಲಿ ಪಾಲಿಸಿಯ ಪ್ರಯೋಜನಗಳು ಕೂಡ ಬದಲಾಗುತ್ತವೆ.
ಗೃಹಸಾಲದ ಇಎಂಐ ಮಿಸ್ ಆದ್ರೆ ಏನೆಲ್ಲ ಸಮಸ್ಯೆಯಾಗುತ್ತೆ? ಮುಂದೇನು ಮಾಡ್ಬೇಕು? ಇಲ್ಲಿದೆ ಮಾಹಿತಿ
ಸಾಲ ಸೌಲಭ್ಯ
ಪಾಲಿಸಿ ಅವಧಿ ಆರಂಭಗೊಂಡ ಮೂರು ತಿಂಗಳು ಅಥವಾ ಫ್ರೀ ಲುಕ್ ಅವಧಿಯ ಮುಕ್ತಾಯ ಈ ಎರಡರಲ್ಲಿ ಯಾವುದು ಮೊದಲು ಬರಲಿದೆಯೋ ಆ ದಿನಾಂಕದ ಬಳಿಕ ಸಾಲ ಸೌಲಭ್ಯ ದೊರೆಯುತ್ತದೆ.
ಮಕ್ಕಳ ಭವಿಷ್ಯಕ್ಕೆ ಹೂಡಿಕೆ ಮಾಡಲು ಬಯಸೋರು ಅಥವಾ ನಿವೃತ್ತಿ ಬದುಕಿಗೆ ಉಳಿತಾಯ ಮಾಡಲು ಇಚ್ಛಿಸುವವರು ಧನ್ ವರ್ಷ ಪಾಲಿಸಿ ಖರೀದಿಸಬಹುದು. ಈ ಪಾಲಿಸಿಯನ್ನು ಹತ್ತಿರದ ಎಲ್ ಐಸಿ ಕಚೇರಿಗೆ ನೇರವಾಗಿ ಭೇಟಿ ನೀಡಿ ಖರೀದಿಸಬಹುದು. ಇಲ್ಲವೇ ಎಲ್ ಐಸಿ ಏಜೆಂಟ್ ರ ಮೂಲಕ ಕೂಡ ಈ ಪಾಲಿಸಿ ಮಾಡಿಸಬಹುದು. ಇನ್ನು ಆನ್ ಲೈನ್ ನಲ್ಲಿ ಕೂಡ ಪಾಲಿಸಿ ಖರೀದಿಸುವ ಆಯ್ಕೆ ಲಭ್ಯವಿದೆ.