ಕ್ರೆಡಿಟ್ ಕಾರ್ಡ್ ಕ್ಲೋಸ್ ಮಾಡಲು ಬಯಸುತ್ತಿದ್ದೀರಾ? ಹಾಗಾದ್ರೆ ಇಲ್ಲಿದೆ ನೋಡಿ ಆರ್ ಬಿಐ ಹೊಸ ಗೈಡ್ ಲೈನ್ಸ್
ಇಂದು ಕ್ರೆಡಿಟ್ ಕಾರ್ಡ್ ಸಾಮಾನ್ಯವಾಗಿ ಎಲ್ಲರ ಕೈಯಲ್ಲೂ ಇದೆ. ಕ್ರೆಡಿಟ್ ಕಾರ್ಡ್ ಪಡೆಯೋದು ಕೂಡ ಈಗ ತುಂಬಾ ಸುಲಭ. ಆದ್ರೆ, ಕ್ರೆಡಿಟ್ ಕಾರ್ಡ್ ಬೇಡವೆನಿಸಿದ್ರೆ ಅದನ್ನು ಕ್ಲೋಸ್ ಮಾಡೋದು ಮಾತ್ರ ಅಷ್ಟು ಸುಲಭದ ಕೆಲಸವಂತೂ ಅಲ್ಲ. ಆರ್ ಬಿಐ ಕೂಡ ಈ ಬಗ್ಗೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಹೀಗಾಗಿ ಕ್ರೆಡಿಟ್ ಕಾರ್ಡ್ ಬೇಡವೆನ್ನೋರು ಈ ಬಗ್ಗೆ ತಿಳಿದಿರೋದು ಉತ್ತಮ.
ನವದೆಹಲಿ (ಅ.18): ಇಂದು ಕ್ರೆಡಿಟ್ ಕಾರ್ಡ್ ಪಡೆಯೋದು ತುಂಬಾ ಸುಲಭ. ನೀವು ಯಾವುದೇ ಬ್ಯಾಂಕಿಗೆ ಏನಾದ್ರೂ ಕೆಲಸದ ಮೇಲೆ ಭೇಟಿ ನೀಡಿದ್ರೆ ಸಾಕು, ಅಲ್ಲಿ ಕ್ರೆಡಿಟ್ ಕಾರ್ಡ್ ಖರೀದಿಸುವಂತೆ ನಿಮ್ಮ ಮನವೊಲಿಸೋದು ನಡೆದೇ ನಡೆಯುತ್ತದೆ. ಇನ್ನು ಕ್ರೆಡಿಟ್ ಕಾರ್ಡ್ ಬೇಕಾ ಎಂದು ಮೊಬೈಲ್ ಗೆ ಆಗಾಗ ಕರೆಗಳು ಬಂದ್ರೆ, ಇ-ಮೇಲ್ ವಿಳಾಸಕ್ಕೆ ಲೆಕ್ಕವಿಲ್ಲದಷ್ಟು ಮೇಲ್ ಗಳಂತೂ ಬಂದೇ ಇರುತ್ತವೆ. ಆದ್ರೆ ಕ್ರೆಡಿಟ್ ಕಾರ್ಡ್ ಕ್ಲೋಸ್ ಮಾಡೋದು ಪಡೆದಷ್ಟು ಸುಲಭದ ಕೆಲಸವಲ್ಲ. ಇದಕ್ಕೆ ನೀವು ಕೆಲವೊಂದು ಪ್ರಕ್ರಿಯೆಗಳನ್ನು ಅನುಸರಿಸಬೇಕು. ಭಾರತೀಯ ರಿಸರ್ವ್ ಬ್ಯಾಂಕ್ ನ ಹೊಸ ನಿಯಮಗಳ ಪ್ರಕಾರ ಕ್ರೆಡಿಟ್ ಕಾರ್ಡ್ ನೀಡಿರುವ ಸಂಸ್ಥೆಗಳು ಕ್ಲೋಸ್ ಮಾಡುವಂತೆ ಗ್ರಾಹಕರು ಮಾಡಿರುವ ಮನವಿಯನ್ನು ಪುರಸ್ಕರಿಸಲು ಬದ್ಧವಾಗಿರಬೇಕು. ಕ್ರೆಡಿಟ್ ಕಾರ್ಡ್ ಏಜೆಂಟ್‌ಗಳು ಕ್ರೆಡಿಟ್ ಕಾರ್ಡ್ ಕ್ಲೋಸ್ ಮಾಡದಂತೆ ಗ್ರಾಹಕರ ಮನವೊಲಿಸಲು ಕೈಲಾದಷ್ಟು ಪ್ರಯತ್ನಪಡುತ್ತಾರೆ. ಕ್ರೆಡಿಟ್ ಲಿಮಿಟ್ ಹೆಚ್ಚಳ, ವಾರ್ಷಿಕ ಕಾರ್ಡ್ ಶುಲ್ಕದಲ್ಲಿ ವಿನಾಯ್ತಿ ಸೇರಿದಂತೆ ಅನೇಕ ಕೊಡುಗೆಗಳ ಆಸೆ ತೋರಿಸಿ ಗ್ರಾಹಕರು ಕ್ರೆಡಿಟ್ ಕಾರ್ಡ್ ಅನ್ನು ತಮ್ಮ ಬಳಿಯೇ ಇಟ್ಟುಕೊಳ್ಳುವಂತೆ ಅವರ ಮನವೊಲಿಸಲು ಪ್ರಯತ್ನಿಸುತ್ತಾರೆ. ಇವೆಲ್ಲದರ ಜೊತೆಗೆ ಕ್ರೆಡಿಟ್ ಕಾರ್ಡ್ ಕ್ಲೋಸ್ ಮಾಡುವ ಮುನ್ನ ಗ್ರಾಹಕರಿಗೆ 2-3 ಬಾರಿ ಕರೆ ಮಾಡಿ ಅವರ ನಿರ್ಧಾರದ ಬಗ್ಗೆ ಖಚಿತಪಡಿಸಿಕೊಳ್ಳುತ್ತಾರೆ. ಹೀಗಾಗಿ ಕ್ರೆಡಿಟ್ ಕಾರ್ಡ್ ಕ್ಲೋಸ್ ಮಾಡೋದು ಪಡೆದಷ್ಟು ಸುಲಭದ ಕೆಲಸವಲ್ಲ. ಯಾವ ಸಂಸ್ಥೆ ಕೂಡ ತನ್ನ ಗ್ರಾಹಕರನ್ನು ಕಳೆದುಕೊಳ್ಳಲು ಸಿದ್ಧವಿರೋದಿಲ್ಲ. ಹೀಗಾಗಿಯೇ ಕ್ರೆಡಿಟ್ ಕಾರ್ಡ್ ಕ್ಲೋಸ್ ಮಾಡುವಂತೆ ಮನವಿ ಮಾಡಿದ ತಕ್ಷಣ ಬ್ಯಾಂಕ್ ಅಥವಾ ಇತರ ಸಂಸ್ಥೆಗಳು ಒಮ್ಮೆಗೆ ಅದಕ್ಕೆ ಸಮ್ಮತಿ ಸೂಚಿಸೋದಿಲ್ಲ.
ಆರ್ ಬಿಐ ಮಾಸ್ಟರ್ ಡೈರೆಕ್ಷನ್ -ಕ್ರೆಡಿಟ್ ಕಾರ್ಡ್ ಹಾಗೂ ಡೆಬಿಟ್ ಕಾರ್ಡ್-ನೀಡಿಕೆ ಹಾಗೂ ನಡವಳಿಕೆ ನಿರ್ದೇಶನಗಳು, 2022' ಕ್ರೆಡಿಟ್ ಕಾರ್ಡ್ ನೀಡಿರೋರು ಅದರ ರದ್ದತಿ ಕೋರಿ ಬರುವ ಎಲ್ಲ ಮನವಿಗಳನ್ನು ಪರಿಗಣಿಸಬೇಕು ಎಂದು ಸೂಚಿಸಿದೆ. ಗ್ರಾಹಕರು ಬಾಕಿ ಉಳಿದಿರುವ ಸಾಲವನ್ನು ತೀರಿಸಿದ ಏಳು ದಿನಗಳೊಳಗೆ ಕ್ರೆಡಿಟ್ ಕಾರ್ಡ್ ಕ್ಲೋಸ್ ಮಾಡಬೇಕು ಎಂದು ಆರ್ ಬಿಐ (RBI) ನಿರ್ದೇಶನ ನೀಡಿದೆ. 'ಕ್ರೆಡಿಟ್ ಕಾರ್ಡ್ ಕ್ಲೋಸ್ ಮಾಡಿದ ತಕ್ಷಣ ಕಾರ್ಡ್ ದಾರರಿಗೆ ಇ-ಮೇಲ್, ಎಸ್ ಎಂಎಸ್ ಇತ್ಯಾದಿ ಮೂಲಕ ಮಾಹಿತಿ ನೀಡಬೇಕು.
ಗೃಹಸಾಲದ ಇಎಂಐ ಮಿಸ್ ಆದ್ರೆ ಏನೆಲ್ಲ ಸಮಸ್ಯೆಯಾಗುತ್ತೆ? ಮುಂದೇನು ಮಾಡ್ಬೇಕು? ಇಲ್ಲಿದೆ ಮಾಹಿತಿ
ಕ್ರೆಡಿಟ್ ಕಾರ್ಡ್ ಕ್ಲೋಸ್ ಮಾಡುವಂತೆ ಮನವಿಯನ್ನು ಅನೇಕ ಮಾರ್ಗಗಳ ಮೂಲಕ ನೀಡಬಹುದಾಗಿದೆ. ಸಹಾಯವಾಣಿ, ಅದಕ್ಕಾಗಿಯೇ ಮೀಸಲಿಟ್ಟಿರುವ ಇ-ಮೇಲ್ ವಿಳಾಸ, ಐವಿಆರ್, ವೆಬ್ಸೈಟ್ ನಲ್ಲಿ ಅದಕ್ಕೆಂದೇ ಒಂದು ಲಿಂಕ್ ಮೀಸಲಿಟ್ಟಿರೋದು, ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಅಪ್ಲಿಕೇಷನ್ ಅಥವಾ ಇತರ ಯಾವುದೇ ಲಭ್ಯ ಮಾಧ್ಯಮಗಳ ಮೂಲಕ ಗ್ರಾಹಕರು ಮಾಡಬಹುದಾಗಿದೆ' ಎಂದು ಆರ್ ಬಿಐ ನಿರ್ದೇಶನದಲ್ಲಿ ತಿಳಿಸಲಾಗಿದೆ.
ಮುಚ್ಚಿರುವ ಲಕೋಟೆಗಳಲ್ಲಿ ಪೋಸ್ಟ್ ಮುಖಾಂತರ ಮನವಿಗಳನ್ನು ಕಳುಹಿಸುವಂತೆ ಬಳಕೆದಾರರಿಗೆ ಕ್ರೆಡಿಟ್ ಕಾರ್ಡ್ ಕಂಪನಿಗಳು ಒತ್ತಡ ಹೇರುವಂತಿಲ್ಲ ಎಂದು ಆರ್ ಬಿಐ ಹೇಳಿದೆ. ಒಂದು ವೇಳೆ ಗ್ರಾಹಕರು ಮನವಿ ಸಲ್ಲಿಕೆ ಮಾಡಿದ ಕಾರ್ಯನಿರತ ಏಳು ದಿನಗಳೊಳಗೆ ಕಂಪನಿ ಕ್ರೆಡಿಟ್ ಕಾರ್ಡ್ ಕ್ಲೋಸ್ ಮಾಡದಿದ್ರೆ ಆಗ ದಿನಕ್ಕೆ 500 ರೂ. ದಂಡ ವಿಧಿಸಲಾಗೋದು.
ಕೇವಲ 399 ರೂ.ಗೆ ಅಂಚೆ ಇಲಾಖೆಯ ಅಪಘಾತ ವಿಮೆ; ಸಿಗಲಿದೆ 10 ಲಕ್ಷ ರೂ. ಕವರೇಜ್!
ಕ್ರೆಡಿಟ್ ಕಾರ್ಡ್ ಅನ್ನು ಗ್ರಾಹಕ ಒಂದು ವರ್ಷಕ್ಕಿಂತ ಹೆಚ್ಚು ಸಮಯದಿಂದ ಬಳಸದಿದ್ರೆ ಆತನಿಗೆ ಈ ಬಗ್ಗೆ ಮಾಹಿತಿ ನೀಡಿ, ಕಂಪನಿ ಕ್ರೆಡಿಟ್ ಕಾರ್ಡ್ ರದ್ದತಿ ಪ್ರಕ್ರಿಯೆ ಪ್ರಾರಂಭಿಸಬಹುದು. ಕ್ರೆಡಿಟ್ ಕಾರ್ಡ್ ದಾರರು 30 ದಿನಗಳೊಳಗೆ ಪ್ರತಿಕ್ರಿಯಿಸದಿದ್ರೆ ಆಗ ಸಂಸ್ಥೆ ಆ ಗ್ರಾಹಕ ಎಲ್ಲ ಸಾಲಗಳನ್ನು ತೀರಿಸಿದ್ರೆ ಆ ಖಾತೆಯನ್ನು ರದ್ದು ಮಾಡಬಹುದು. ಕಾರ್ಡ್ ಕ್ಲೋಸ್ ಮಾಡಿದ 30 ದಿನಗಳೊಳಗೆ ಕಾರ್ಡ್ ವಿತರಣೆ ಮಾಡಿದ ಸಂಸ್ಥೆ ಕ್ರೆಡಿಟ್ ಮಾಹಿತಿ ಕಂಪನಿಗೆ ಈ ಬಗ್ಗೆ ತಿಳಿಸಬೇಕು. ಇನ್ನು ಕ್ರೆಡಿಟ್ ಕಾರ್ಡ್ ಖಾತೆ ಕ್ಲೋಸ್ ಮಾಡಿದ ಬಳಿಕ ಉಳಿದ ಬ್ಯಾಲೆನ್ಸ್ ಅನ್ನು ಕಾರ್ಡ್ ಹೊಂದಿದ್ದ ವ್ಯಕ್ತಿಯ ಬ್ಯಾಂಕ್ ಖಾತೆಗೆ ವರ್ಗಾಯಿಸಬೇಕು.