Asianet Suvarna News Asianet Suvarna News

ಸ್ಥಿರಾಸ್ತಿಗೂ ಬರಲಿದೆ ಆಧಾರ್‌ ರೀತಿ ವಿಶಿಷ್ಟ ಗುರುತಿನ ಸಂಖ್ಯೆ!

ಸ್ಥಿರಾಸ್ತಿಗೂ ಬರಲಿದೆ ಆಧಾರ್‌ ರೀತಿ ವಿಶಿಷ್ಟಗುರುತಿನ ಸಂಖ್ಯೆ| ವಿಶಿಷ್ಟಗುರುತಿನ ಸಂಖ್ಯೆಯಲ್ಲಿ ಜಾಗದ ಎಲ್ಲಾ ಮಾಹಿತಿ| ಭೂ ವ್ಯವಹಾರ ಸುಲಭ ಹಾಗೂ ಪಾರದರ್ಶಕಕ್ಕೆ ನೆರವು| ಬೆರಳ ತುದಿಯಲ್ಲಿ ಭೂ ದಾಖಲೆ, ಬೇನಾಮಿ ಆಸ್ತಿಗೆ ಬ್ರೇಕ್‌| ರೈತರಿಗೆ ಸುಲಭ ಸಾಲ ಸೌಲಭ್ಯ, ಭೂ ತಕರಾರುಗಳ ಶೀಘ್ರ ಇತ್ಯರ್ಥ ಸಾಧ್ಯ| ವಿಕೋಪ ಸಂದರ್ಭ ಪರಿಹಾರ ಹಂಚಿಕೆಯೂ ಸರಳ

Lands will have Aadhaar like unique ID numbers shortly
Author
Bangalore, First Published Sep 19, 2019, 12:11 PM IST

ನವದೆಹಲಿ[ಸೆ.19]: ಭೂ ವ್ಯವಹಾರ ಪ್ರಕ್ರಿಯೆಯನ್ನು ಸರಳ ಹಾಗೂ ಪಾರದರ್ಶಕಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಅದಕ್ಕಾಗಿ ಜಮೀನಿನ ಎಲ್ಲಾ ಮಾಹಿತಿಯನ್ನೊಳಗೊಂಡ ಆಧಾರ್‌ ರೀತಿಯ ವಿಶಿಷ್ಟಗುರುತಿನ ಸಂಖ್ಯೆಯನ್ನು ಕೇಂದ್ರ ಸರ್ಕಾರ ಪರಿಚಯಿಸಲಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಗುರುತಿನ ಸಂಖ್ಯೆಯೊಂದಿಗೆ ಆಧಾರ್‌ ಹಾಗೂ ಕಂದಾಯ ನ್ಯಾಯಾಲಯ ವ್ಯವಸ್ಥೆ ಸಂಖ್ಯೆಯನ್ನು ಜೋಡಣೆಗೊಳಿಸುವುದರಿಂದ, ಭೂ ಮಾಲಿಕ, ವಿಳಾಸ, ವಿಸ್ತೀರ್ಣ ಸೇರಿ ಜಮೀನಿನ ಎಲ್ಲಾ ಮಾಹಿತಿಗಳು ಬೆರಳ ತುದಿಯಲ್ಲೇ ಲಭ್ಯವಾಗಲಿದೆ. ಈ ಬಗ್ಗೆ ಕೇಂದ್ರ ಗ್ರಾಮೀಣಾಭಿವೃದ್ದಿ ಇಲಾಖೆ ಈಗಾಗಲೇ ಕೆಲಸ ಆರಂಭಿಸಿದೆ.

ಸರ್ಕಾರದ ಈ ಯೋಜನೆಯಿಂದ ಭೂ ದಾಖಲೆಗಳು ಸಂಪೂರ್ಣವಾಗಿ ಡಿಜಿಟಲೀಕರಣಗೊಳ್ಳುವುದರಿಂದ ಭೂ ಮಾಲಿಕರ ಮಾಹಿತಿ ಪತ್ತೆ ಹಚ್ಚುವುದು ಸುಲಭವಾಗಲಿದೆ. ಜತೆಗೆ ಭೂ ವ್ಯವಹಾರ, ಆಸ್ತಿ ತೆರಿಗೆ ಸಂಗ್ರಹ, ಸಾರ್ವಜನಿಕ ಯೋಜನೆಗಳಿಗೆ ಭೂ ಸ್ವಾಧೀನ, ಆಸ್ತಿ ತೆರಿಗೆ ಸಮಸ್ಯೆಗಳ ಪರಿಹಾರ ಹಾಗೂ ಪ್ರಾಕೃತಿಕ ವಿಕೋಪದ ವೇಳೆ ಪರಿಹಾರ ಹಂಚಿಕೆಯೂ ಸರಳವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಶಿಷ್ಟಸಂಖ್ಯೆ ಮೂಲಕ ಜಮೀನಿನ ಹಿಂದಿನ ಮಾಲೀಕರ ಮಾಹಿತಿಯೂ ದೊರೆಯಲಿದ್ದು, ಭೂ ವ್ಯವಹಾರದಲ್ಲಿ ಪಾರದರ್ಶಕತೆ ಇರಲಿದೆ. ಮಾಲಿಕತ್ವ ವಿವಾದದಿಂದ ಹೂಡಿಕೆಗೆ ಹಿಂಜರಿಯುವ ಸಮಸ್ಯೆ ಕೂಡ ಇದರಿಂದ ಪರಿಹಾರವಾಗಲಿದ್ದು, ಹೆಚ್ಚಿನ ವಿದೇಶಿ ಬಂಡವಾಳ ಆಕರ್ಷಿಸಲಿದೆ. ಅಲ್ಲದೇ ಬೇನಾಮಿ ಆಸ್ತಿಗಳ ಬಗ್ಗೆಯೂ ಸರ್ಕಾರಕ್ಕೆ ಸುಲಭವಾಗಿ ಮಾಹಿತಿ ಲಭ್ಯವಾಗಲಿದೆ. ಜತೆಗೆ ಜಮೀನು ಅಡವಿಟ್ಟು ಸಾಲ ಪಡೆಯಲು ರೈತರ ಬವಣೆಯನ್ನು ಇದು ಕಡಿಮೆ ಮಾಡಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ದೇಶದೆಲ್ಲೆಡೆ ಕಳೆದ 20 ವರ್ಷಗಳಿಂದ ಭೂ ವಿವಾದ ಸಂಬಂಧ ಎರಡನೇ ಮೂರರಷ್ಟುಪ್ರಕರಣಗಳು ನ್ಯಾಯಾಲಯದಲ್ಲಿ ಕೊಳೆಯುತ್ತಿದ್ದು, ಈ ಯೋಜನೆಯಿಂದ ಅವುಗಳ ಶೀಘ್ರ ವಿಲೆ ಕೂಡ ನಡೆಯಲಿದೆ. ಸರ್ಕಾರ ಈಗಾಗಲೇ ಡಿಜಿಟಲ್‌ ಇಂಡಿಯಾ ಯೋಜನೆಯಡಿ ಭೂ ದಾಖಲೆಗಳ ಡಿಜಿಟಲೀಕರಣ ಪ್ರಕ್ರೀಯೆ ಆರಂಭಿಸಿದ್ದರೂ, ಅದಕ್ಕೆ ಮಿಶ್ರ ಪ್ರಕ್ರೀಯೆ ವ್ಯಕ್ತವಾಗಿತ್ತು. ಇದೀಗ ಈ ಹೊಸ ಯೋಜನೆಯಿಂದ ಭೂ ವ್ಯವಹಾರ ಸಂಬಂಧ ಎಲ್ಲಾ ಪ್ರಕ್ರೀಯೆಗಳು ಸರಳವಾಗಲಿವೆ.

Follow Us:
Download App:
  • android
  • ios