ನಿದ್ದೆಗೂ, ಅರ್ಥ ವ್ಯವಸ್ಥೆಗೂ ಇದೆಂತಾ ಅವಿನಾಭಾವ ಸಂಬಂಧ?| ಆಧುನಿಕ ಜೀವನಶೈಲಿಯಿಂದ ಬಾರದ ನಿದ್ದೆ| ಜಾಗತಿಕ ಅರ್ಥ ವ್ಯವಸ್ಥೆಗೆ ಒಂದು ಟ್ರಿಲಿಯನ್ ಡಾಲರ್ ನಷ್ಟ| ಸರಿಯಾಗಿ ನಿದ್ದೆಯಿಲ್ಲದೇ ಪರದಾಡುವ ಜನ| ಅರ್ಥ ವ್ಯವಸ್ಥೆಗೆ ಕೋಟ್ಯಾಂತರ ಡಾಲರ್ ನಷ್ಟವಾಗಿ ಪರದಾಡುವ ದೇಶಗಳು| ಭಾರತದ ಸ್ಥಿತಿಗತಿ ಕುರಿತು ವರದಿ ಏನು ಹೇಳುತ್ತದೆ?

ನವದೆಹಲಿ(ಜ.08): ನಿಮ್ಮ ನಿದ್ದೆಗೂ, ದೇಶದ ಅರ್ಥ ವ್ಯವಸ್ಥೆಗೂ ಗಾಢ ಸಂಬಂಧ ಇದೆ ಎಂದರೆ ನೀವು ನಂಬುತ್ತೀರಾ?. ನಂಬದೇ ಬೇರೆ ವಿಧಿಯೂ ಇಲ್ಲ ಬಿಡಿ. ಕಾರಣ ನೀವು ಸರಿಯಾಗಿ ನಿದ್ದೆ ಮಾಡದೇ ಹೋದರೆ ವಿಶ್ವದ ಅರ್ಥ ವ್ಯವಸ್ಥೆಗೆ ಟ್ರಿಲಿಯನ್ ಡಾಲರ್‌ಗಟ್ಟಲೇ ನಷ್ಟವುಂಟಾಗುತ್ತದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೆಲಸದ ಒತ್ತಡ, ಬದಲಾದ ಜೀವನ ಶೈಲಿಯಿಂದಾಗಿ ಸರಿಯಾಗಿ ನಿದ್ದೆ ಮಾಡಲೂ ಸಾಧ್ಯವಾಗುತ್ತಿಲ್ಲ. ನಿದ್ದೆಯ ಕೊರತೆಯಿಂದ ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದರೆ ಇದರಿಂದ ಆರ್ಥಿಕವಾಗಿಯೂ ಸಹ ಬಹುದೊಡ್ಡ ನಷ್ಟವುಂಟಾಗುತ್ತಿದೆ. 

ನಿದ್ದೆಯ ಕೊರತೆಯಿಂದಾಗಿ ಜಗತ್ತಿನಾದ್ಯಂತ ಒಂದು ಟ್ರಿಲಿಯನ್​ ಅಮೆರಿಕನ್​ ಡಾಲರ್​ ನಷ್ಟವುಂಟಾಗುತ್ತಿದೆ ಎಂದು ವರದಿಯೊಂದು ತಿಳಿಸಿದೆ. RAND ಆರ್ಗನೈಸೇಷನ್​ 34 OECD ಸದಸ್ಯ ರಾಷ್ಟ್ರಗಳಲ್ಲಿ ಸಂಶೋಧನೆ ನಡೆಸಿದ್ದು, ಇದರ ಅನ್ವಯ ನಿದ್ರೆಯ ಕೊರತೆ ಕೆಲಸಗಾರರ ಕಾರ್ಯಕ್ಷಮತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. 

ಈ ಪರಿಣಾಮವಾಗಿ ವೈದ್ಯಕೀಯ ವೆಚ್ಚ, ಉತ್ಪಾದಕತೆಯಲ್ಲಿನ ಕುಸಿತ, ವಾಹನ ವೆಚ್ಚ, ಅಪಘಾತ ವೆಚ್ಚ ಹಾಗೂ ಇನ್ನೂ ಹಲವು ವಿಷಯಗಳು ಆರ್ಥಿಕತೆಯನ್ನು ಕುಂಠಿತಗೊಳಿಸುತ್ತವೆ ಎಂದು ವರದಿ ತಿಳಿಸಿದೆ.
ನಿದ್ದೆಯ ಕೊರತೆಯಿಂದಾಗಿ ಅತಿಹೆಚ್ಚು ನಷ್ಟವುಂಟಾಗುತ್ತಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದ್ದು, ವಾರ್ಷಿಕ ಸುಮಾರು 411 ಬಿಲಿಯನ್​ ಡಾಲರ್​ ನಷ್ಟವುಂಟಾಗುತ್ತಿದೆ. ಜಪಾನ್​ ದ್ವಿತೀಯ ಸ್ಥಾನದಲ್ಲಿದ್ದು ಒಟ್ಟು 138 ಬಿಲಿಯನ್​ ಡಾಲರ್​, ಜರ್ಮನಿ ಮತ್ತು ಇಂಗ್ಲೆಂಡ್​ನಲ್ಲಿ ಸುಮಾರು 50-60 ಬಿಲಿಯನ್​ ಡಾಲರ್​ ನಷ್ಟವುಂಟಾಗುತ್ತಿದೆ ಎಂದು ವರದಿ ತಿಳಿಸಿದೆ.

ಈ ಪಟ್ಟಿಯಲ್ಲಿ ಜಗತ್ತಿನ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾ ಮತ್ತು ಭಾರತವನ್ನು ಪರಿಗಣಿಸಿಲ್ಲ. ಇಲ್ಲಿ ಬಹುತೇಕ ಕೆಲಸಗಾರು ಹೆಚ್ಚಿನ ಕೆಲಸದ ಒತ್ತಡ ಎದುರಿಸುತ್ತಿದ್ದಾರೆ. ಆದರೆ ಇಲ್ಲಿ ಕೆಲಸದ ಒತ್ತಡ ಮತ್ತು ನಿದ್ದೆಯ ಕೊರತೆಯಿಂದ ಆರ್ಥಿಕತೆಯ ಮೇಲೆ ಉಂಟಾಗುತ್ತಿರುವ ನಷ್ಟದ ಕುರಿತು ಅಧ್ಯಯನಗಳು ನಡೆದಿಲ್ಲ.