Earning Ideas: ಇಡೀ ದಿನ ಕೆಲ್ಸ ಮಾಡಿದ್ರೂ 50 ಸಾವಿರ ಗಳಿಸೋದು ಕಷ್ಟ ಎನ್ನುವ ಜನರಿದ್ದಾರೆ. ಕೆಲವರು ಲಕ್ಷ ಗಳಿಸಿದ್ರೂ ನೆಮ್ಮದಿ ಕಳೆದುಕೊಂಡಿದ್ದಾರೆ. ಎಲ್ಲರ ಮಧ್ಯೆ ತಮ್ಮ ಕೈ ರುಚಿಯಿಂದ್ಲೇ ಮನಸ್ಸು ಗೆದ್ದ ಅಡುಗೆ ಪಂಟರು ಮಾತ್ರ ನೆಮ್ಮದಿ ಜೊತೆ ಕೈ ತುಂಬಾ ಸಂಪಾದನೆ ಮಾಡ್ತಿದ್ದಾರೆ. 

ದಿನಕ್ಕೆ ಹತ್ತಾರು ಗಂಟೆ ಕೆಲ್ಸ ಮಾಡಿ, ಕಂಪ್ಯೂಟರ್ ಮುಂದೆ ಕೀ ಬೋರ್ಡ್ ಕುಟ್ತಾ, ಮೀಟಿಂಗ್, ಡೆಡ್ ಲೈನ್ ಎನ್ನುವ ಟೆನ್ಷನ್ ನಲ್ಲಿ ಆರೋಗ್ಯ ಹಾಳ್ಮಾಡಿಕೊಳ್ತಿರುವವರ ಸಂಖ್ಯೆ ಸಾಕಷ್ಟಿದೆ. ಕೆಲ್ಸದ ಒತ್ತಡದಲ್ಲಿ ವೀಕೆಂಡ್ ರಜೆಯನ್ನೂ ಸರಿಯಾಗಿ ಕಳೆಯೋಕೆ ಜನರಿಗೆ ಆಗ್ತಿಲ್ಲ. ಇಡೀ ದಿನ ಕೆಲ್ಸ ಮಾಡಿದ್ರೂ ಕೈತುಂಬ ಸಂಬಳ ಸಿಗೋದಿಲ್ಲ ಎನ್ನುವ ನೋವು ಬೇರೆ. ಬಾಸ್ ನಿಂದ ಬೈಸಿಕೊಂಡು, ತಲೆ ಬಾರ ಮಾಡ್ಕೊಂಡು ಮನೆಗೆ ಬರುವವರೇ ಹೆಚ್ಚು. ಹಾಗಂತ ಈ ಕೆಲ್ಸ ಬಿಟ್ರೆ ಜೀವನ ಕಷ್ಟ. ಮನೆಗೆ ಬಂದ್ಮೇಲೆ ಅಡುಗೆ, ತಿಂಡಿ ಸಾಧ್ಯವೇ ಇಲ್ಲ. ಸುಸ್ತು ಅಂತ ಮಲಗುವ ಜನರಿಗೆ ಕುಕ್ (Cook) ಅನಿವಾರ್ಯ. ಈಗಿನ ಯುವಜನತೆ ಸಂಬಳಕ್ಕೆ ತಕ್ಕಂತೆ ಕುಕ್ ನೇಮಕ ಮಾಡಿಕೊಳ್ತಾರೆ. ಪ್ರತಿ ಮನೆಗೆ ಹೋಗಿ ಅಡುಗೆ ಮಾಡುವ ಈ ಕುಕ್, ಕೆಲ್ಸಕ್ಕೆ ಇಟ್ಕೊಂಡಿರೋ ಎಂಜಿನಿಯರ್ ಗಿಂತ ಹೆಚ್ಚು ದುಡಿತಾನೆ. ಆತನದ್ದು ಸ್ಮಾರ್ಟ್ ವರ್ಕ್ (Smart Work). ಗಂಟೆ ಲೆಕ್ಕದಲ್ಲಿ ಕೆಲ್ಸ. ಮನೆ ಮನೆಗೆ ಹೋಗಿ ಕೆಲ್ಸ ಮಾಡುವ ಮಹಾರಾಜ್ ನ ಸಂಬಳ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕುಕ್ ಮಹಾರಾಜ್ ಗಳಿಕೆ ಎಷ್ಟು? : ವಕೀಲೆ ಆಯುಷಿ ದೋಷಿ ತಮ್ಮ ಸೋಶಿಯಲ್ ಮೀಡಿಯಾ ಎಕ್ಸ್ ಖಾತೆಯಲ್ಲಿ ಮಹಾರಾಜ್ ಆದಾಯವನ್ನು ವಿವರಿಸಿದ್ದಾರೆ. ಮಹಾರಾಜ್, ಕೇವಲ 30-60 ನಿಮಿಷಗಳ ಕೆಲಸಕ್ಕೆ ಒಂದು ಮನೆಯಿಂದ 18,000 ರೂಪಾಯಿ ಸಂಬಳ ಪಡೀತಾನೆ. ಅದೇ ಕಾಲೋನಿಯಲ್ಲಿರುವ 10-12 ಮನೆಗಳಲ್ಲಿ ಪ್ರತಿದಿನ ಅಡುಗೆ ಕೆಲ್ಸ ಮಾಡ್ತಾನೆ. ಅಂದರೆ ಪ್ರತಿ ತಿಂಗಳ ಒಟ್ಟು ಗಳಿಕೆ 1.8 ಲಕ್ಷದಿಂದ 2 ಲಕ್ಷದವರೆಗಾಯ್ತು. ಪ್ರತಿ ಮನೆಯಲ್ಲಿ ಚಹಾ-ತಿಂಡಿ ಉಚಿತ. ಓಡಾಟದ ಖರ್ಚಿಲ್ಲ. ಎಲ್ಲ ಮನೆ ಅಕ್ಕಪಕ್ಕದಲ್ಲಿರೋದ್ರಿಂದ ಆತನ ಹಣ ಉಳಿಯುತ್ತೆ. ಇದು ಸ್ಮಾರ್ಟ್ ಪ್ಲಾನ್ ಎನ್ನುತ್ತಾರೆ ಆಯುಷಿ.

ನಂಬಿಕೆ ಮತ್ತು ಗುಣಮಟ್ಟದ ಮೇಲೆ ಸಂಬಳ : ಆಯುಷಿ ದೋಷಿ ಪ್ರಕಾರ, ಮಹಾರಾಜ್ ಹೇಗೆ ಕೆಲ್ಸ ಮಾಡ್ತಾನೆ ಎಂಬುದ್ರ ಮೇಲೆ ಸಂಬಳ ಫಿಕ್ಸ್ ಆಗುತ್ತೆ. ಅವ್ರ ಮನೆಗೆ ಕೆಲ್ಸಕ್ಕೆ ಬರುವ ಮಹಾರಾಜ್, ಕಳೆದ 10 ವರ್ಷಗಳಿಂದ ಇದೇ ಕೆಲ್ಸ ಮಾಡ್ತಿದ್ದಾನೆ. ಹಾಗಾಗಿ ಆತನ ಮೇಲೆ ಸಂಪೂರ್ಣ ನಂಬಿಕೆ ಇದೆ. ಗುಣಮಟ್ಟ ಹಾಗೂ ರುಚಿಗೆ ಆದ್ಯತೆ ನೀಡೋದ್ರಿಂದ ತಿಂಗಳಿಗೆ 18 ಸಾವಿರ ಕಣ್ಮುಚ್ಚಿಕೊಡ್ತಾರೆ ಜನ. ಈಗಷ್ಟೆ ಕೆಲ್ಸ ಶುರು ಮಾಡಿರುವ ಅಡುಗೆಯವರಿಗೆ 10- 12 ಸಾವಿರ ಸಂಬಳ ಇದೆ. ಅದೇ ಅನುಭವಿ ಕುಕ್ ಗೆ 18 ಸಾವಿರದ ಮೇಲೆ ಸಂಬಳ ಇದೆ.

ಮಹಾರಾಜನ ಗಳಿಕೆ :

• ಪ್ರತಿ ಮನೆಗೆ 18 ಸಾವಿರ ಸಂಬಳ

• ಗರಿಷ್ಠ 30 ನಿಮಿಷ ಕೆಲ್ಸ

• ಪ್ರತಿ ದಿನ 10 -12 ಮನೆ

• ತಿಂಗಳಿಗೆ 1.8 ಲಕ್ಷ ಸಂಬಳ

• ಟೀ ಮತ್ತು ಆಹಾರ ಫ್ರೀ

• ಮೀಟಿಂಗ್ ಇಲ್ಲ, ಡೆಡ್ ಲೈನ್ ಟೆನ್ಷನ್ ಇಲ್ಲ

ಇಲ್ಲಿ ಗಳಿಕೆ ಮಾತ್ರ ಮುಖ್ಯವಲ್ಲ : ಆಯುಷಿ, ತಮ್ಮ ಪೋಸ್ಟ್ ನಲ್ಲಿ ಈ ವಿಷ್ಯವನ್ನೂ ಚರ್ಚೆ ಮಾಡಿದ್ದಾರೆ. ಮಹಾರಾಜ್ ಎಷ್ಟು ಹಣ ಗಳಿಕೆ ಮಾಡ್ತಾರೆ ಅನ್ನೋದು ಮಾತ್ರ ಇಲ್ಲಿ ಮುಖ್ಯವಲ್ಲ. ಇಂದಿನ ಕಾರ್ಪೊರೇಟ್ ಜೀವನದಲ್ಲಿ, ಪದವಿ, ಒತ್ತಡ, ವಾರಾಂತ್ಯದ ಕೆಲಸ ಇದ್ದರೂ, ಜನರು ಇಷ್ಟು ಸಂಪಾದಿಸಲು ಸಾಧ್ಯವಾಗುತ್ತಿಲ್ಲ. ಇಷ್ಟು ಗಳಿಸಿದ್ರೂ ಶಾಂತಿ, ನೆಮ್ಮದಿ ಸಿಗ್ತಿಲ್ಲ ಎಂಬುದನ್ನು ತಿಳಿಸೋದು ನನ್ನ ಉದ್ದೇಶ ಎಂದು ಆಯುಷಿ ಹೇಳಿದ್ದಾರೆ.