ನವದೆಹಲಿ/ಬೆಂಗಳೂರು[ಆ.05]: ಕೆಫೆ ಕಾಫಿ ಡೇ ಸಂಸ್ಥಾಪಕ ವಿ.ಜಿ. ಸಿದ್ಧಾರ್ಥ ನಿಗೂಢ ಸಾವಿನ ನಂತರ ಚರ್ಚೆಯಾಗುತ್ತಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಕಿರುಕುಳ ಕುರಿತು ಬಹಿರಂಗವಾಗಿ ಮಾತನಾಡದಂತೆ ತಮಗೆ ಕರೆ ಬಂದಿತ್ತು ಎಂದು ಕಾರ್ಪೊರೆಟ್‌ ಕ್ಷೇತ್ರದ ಮುಂಚೂಣಿ ಮುಖಗಳಾದ ಬಯೋಕಾನ್‌ ಮುಖ್ಯಸ್ಥೆ ಕಿರಣ್‌ ಮಜುಂದಾರ್‌ ಶಾ ಹಾಗೂ ಟಿ.ವಿ. ಮೋಹನದಾಸ್‌ ಪೈ ಹೇಳಿದ್ದಾರೆ. ಇದು ಸಂಚಲನ ಹುಟ್ಟಿಸಿದೆ.

ಇತ್ತೀಚೆಗೆ ಸರ್ಕಾರಿ ಅಧಿಕಾರಿಯೊಬ್ಬರು ಕರೆ ಮಾಡಿದ್ದರು. ‘ಅಂತಹ ಹೇಳಿಕೆಗಳನ್ನು’ ನೀಡಬೇಡಿ. ಮೋಹನದಾಸ್‌ ಪೈ ಕೂಡ ಮಾತನಾಡಬಾರದು. ಸ್ನೇಹಿತನಾಗಿ ನಿಮಗೆ ಹೇಳುತ್ತಿದ್ದೇನೆ ಎಂದು ಹೇಳಿದರು ಎಂದು ಪತ್ರಿಕೆಯೊಂದಕ್ಕೆ ಕಿರಣ್‌ ಮಜುಂದಾರ್‌ ತಿಳಿಸಿದ್ದಾರೆ. ಇದೇನು ಸಲಹೆಯೋ ಅಥವಾ ಎಚ್ಚರಿಕೆಯೋ ಎಂಬ ಪ್ರಶ್ನೆಗೆ ‘ಎರಡೂ ರೀತಿ ಅಂದುಕೊಳ್ಳಬಹುದು’ ಎಂದಿದ್ದಾರೆ. ಕಾರ್ಪೊರೆಟ್‌ ಜಗತ್ತು ಈ ವಿಷಯವಾಗಿ ಮೌನದಿಂದಿರುವುದು ಏಕೆ ಎಂದೂ ಪ್ರಶ್ನೆ ಮಾಡಿದ್ದಾರೆ.

ವೆಬ್‌ಸೈಟ್‌ವೊಂದರ ಜತೆ ಮಾತನಾಡಿರುವ ಮೋಹನದಾಸ್‌ ಪೈ, ಕಿರಣ್‌ ಹಾಗೂ ನನಗಷ್ಟೇ ಅಲ್ಲ, ಹಲವು ವ್ಯಕ್ತಿಗಳಿಗೆ ಇಂತಹ ಬೆದರಿಕೆಗಳು ಬಂದಿವೆ ಎಂದು ತಿಳಿಸಿದ್ದಾರೆ. ಯುಪಿಎ ಸರ್ಕಾರದ ಅವದಿಯಲ್ಲಿ ತೆರಿಗೆ ಭಯೋತ್ಪಾದನೆ ವ್ಯಾಪಕವಾಗಿತ್ತು. ಅದನ್ನು ನಿಯಂತ್ರಿಸುವುದಾಗಿ ಹೇಳಿ ಅಧಿಕಾರಕ್ಕೆ ಬಂದ ಬಿಜೆಪಿ ಆ ಬಗ್ಗೆ ಕ್ರಮ ತೆಗೆದುಕೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.