ಹುಬ್ಬಳ್ಳಿ (ಫೆ.05):  ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ನೈಋುತ್ಯ ರೈಲ್ವೆ ವಲಯಕ್ಕೆ ಬರೋಬ್ಬರಿ 3245 ಕೋಟಿ ರು. ಕೇಂದ್ರ ಸರ್ಕಾರ ಹಂಚಿಕೆ ಮಾಡಿದೆ. ಇದು ಕಳೆದ ಸಲಕ್ಕಿಂತ 536 ಕೋಟಿ (ಶೇ. 20ರಷ್ಟು) ಹೆಚ್ಚುವರಿ ಹಂಚಿಕೆ ಮಾಡಿದಂತಾಗಿದೆ. ಇದಲ್ಲದೆ ರಾಜ್ಯ ಸರ್ಕಾರ ತನ್ನ ಪಾಲಿನ  1223 ಕೋಟಿ ರು. ಕೊಡುವುದಾಗಿ ವಾಗ್ದಾನ ಮಾಡಿದೆ. ಇದರಿಂದಾಗಿ ರಾಜ್ಯ ಹಾಗೂ ಕೇಂದ್ರದ ಅನುದಾನ ಸೇರಿ ಒಟ್ಟು ರೈಲ್ವೆ ಯೋಜ​ನೆ​ಗ​ಳಿಗೆ  4467 ಕೋಟಿ ರು. ಸಿಕ್ಕಂತಾಗಿದೆ.

ಈ ವಿಚಾರ​ವನ್ನು ನೈಋುತ್ಯ ರೈಲ್ವೆ ವಲಯದ ಮಹಾಪ್ರಬಂಧಕ ಅಜಯಕುಮಾರ ಸಿಂಗ್‌ ತಿಳಿಸಿದ್ದಾರೆ. ಯಾವುದೇ ಹೊಸ ಯೋಜನೆ ಘೋಷಣೆ ಮಾಡಿಲ್ಲ. ಆದರೆ ಘೋಷಿತ ಯೋಜನೆಗಳ ಅನುಷ್ಠಾನಕ್ಕೆ ಪ್ರಸಕ್ತ ವರ್ಷದಲ್ಲಿ 3245 ಕೋಟಿ ರು. ಮೀಸಲಿಟ್ಟಿದೆ. ನೈಋುತ್ಯ ರೈಲ್ವೆ ಇತಿಹಾಸದಲ್ಲೇ ಇಷ್ಟುಪ್ರಮಾಣದ ಹಣ ಮೀಸಲಿಟ್ಟಿರುವುದು ಇದೇ ಮೊದಲು. ಕಳೆದ ವರ್ಷಕ್ಕಿಂತ  536 ಕೋಟಿ ರು. ಹೆಚ್ಚುವರಿ ಹಣ ಸಿಕ್ಕಿದೆ ಎಂದು ಹೇಳಿ​ದ್ದಾ​ರೆ.

3.5 ಕಿ.ಮೀ ಉದ್ದದ ರೈಲು ಓಡಿಸಿ ರೈಲ್ವೆ ದಾಖಲೆ! ...

ಹುಬ್ಬಳ್ಳಿ-ಚಿಕ್ಕಜಾಜೂರು ಜೋಡಿ ರೈಲು ಮಾರ್ಗ 336 ಕೋಟಿ ರು., ಅರಸೀಕೆರೆ-ತುಮ​ಕೂರು ಯೋಜನೆಗೆ 47 ಕೋಟಿ ರು. ಅನುದಾನ ತೆಗೆದಿರಿಸಲಾಗಿದೆ. ಧಾರವಾಡ-ಬೆಳಗಾವಿ ಯೋಜನೆಗೆ 50 ಕೋಟಿ ರು., ಶಿವಮೊಗ್ಗ-ಶಿಕಾರಿಪುರ-ರಾಣಿಬೆನ್ನೂರು ರೈಲು ಮಾರ್ಗಕ್ಕೆ 100 ಕೋಟಿ ರು.ದೊರೆತಿದೆ ಎಂದರು.

ಯಾವುದಕ್ಕೆ ಎಷ್ಟು?: ಘೋಷಿತ ಒಟ್ಟು 6 ಹೊಸ ರೈಲು ಮಾರ್ಗದ ಯೋಜನೆಗೆ 625 ಕೋಟಿ ರು. ಮೀಸಲಿರಿಸಲಾಗಿದೆ. 8 ಜೋಡಿ ಮಾರ್ಗ ಯೋಜನೆಗೆ  1375 ಕೋಟಿ ರು. ಇದರಲ್ಲಿ ಹುಬ್ಬಳ್ಳಿ-ಚಿಕ್ಕಜಾಜೂರು ಹಾಗೂ ಹೊಸಪೇಟೆ-ತಿನೈಘಾಟ್‌ ಯೋಜನೆಗೆ  365 ಕೋಟಿ ರು., ಹುಟಗಿ- ಕೂಡಗಿ-ಗದಗ ಮಾರ್ಗಕ್ಕೆ  165 ಕೋಟಿ ರು., ಹುಬ್ಬಳ್ಳಿ-ಚಿಕ್ಕಜಾಜೂರು 160 ರು., ಅರಸೀಕೆರೆ-ತುಮಕೂರು 336 ಕೋಟಿ ರು., ಯಶವಂತಪುರ-ಚನ್ನಸಂದ್ರಕ್ಕೆ  71 ಕೋಟಿ ರು. ನೀಡಲು ನಿರ್ಧ​ರಿ​ಸ​ಲಾ​ಗಿ​ದೆ.

ವಿದ್ಯು​ದೀ​ಕ​ರ​ಣ:  ಮೈಸೂರು-ಮಂಗಳೂರು  112 ಕೋಟಿ ರು., ಮೀರಜ್‌-ಲೋಂಡಾ 80 ಕೋಟಿ ರು., ಚಿಕ್ಕಬಾಣಾವರ-ಹಾಸನ  80 ಕೋಟಿ ರು., ಬಂಗಾರಪೇಟೆ-ಯಲಹಂಕ ಯೋಜನೆಗೆ  32 ಕೋಟಿ ರು. ಹಂಚಿಕೆ ಮಾಡಲಾಗಿದೆ ಎಂದು ಅಜಯ್‌ ಕುಮಾರ್‌ ಸಿಂಗ್‌ ತಿಳಿ​ಸಿ​ದ್ದಾ​ರೆ.

ಬೆಂಗಳೂರು ಸಬ್‌ಅರ್ಬನ್‌ಗೆ 600 ಕೋಟಿ ರು. 

18 ಸಾವಿರ ಕೋಟಿ ವೆಚ್ಚದ ಬೆಂಗಳೂರು ಸಬ್‌ಅರ್ಬನ್‌ ರೈಲು ಯೋಜನೆಗೆ 2021-22ನೇ ಸಾಲಿನಲ್ಲಿ ರಾಜ್ಯ ಸರ್ಕಾರ  300 ಕೋಟಿ ರು. ಹಾಗೂ ರೈಲ್ವೆ ಇಲಾಖೆ  300 ಕೋಟಿ ರು. ಒದಗಿಸಲಿದೆ. ಪ್ರಸಕ್ತ ಸಾಲಿನ ಅನುದಾನ ಸೇರಿ ಒಟ್ಟು ಯೋಜನೆಗೆ  1400 ಕೋಟಿ ರು. ದೊರೆತಂತಾಗಿದೆ ಎಂದು ನೈರುತ್ಯ ರೈಲ್ವೆ ವಲಯದ ಮಹಾಪ್ರಬಂಧಕ ಎ.ಕೆ. ಸಿಂಗ್‌ ತಿಳಿಸಿದ್ದಾರೆ.