ಕರ್ನಾಟಕ ಗೃಹ ಮಂಡಳಿ (ಕೆಎಚ್‌ಬಿ) ಸೂರ್ಯ ನಗರದಲ್ಲಿ ನಿರ್ಮಿಸುತ್ತಿರುವ 2-ಬಿಎಚ್‌ಕೆ ಫ್ಲಾಟ್‌ಗಳ ಬೆಲೆ 88 ಲಕ್ಷ ರೂ.ಗೆ ಏರಿಕೆಯಾಗಿದೆ. ನಾಲ್ಕು ವರ್ಷಗಳ ಹಿಂದಿನ ಯೋಜನೆಗೆ ಹೋಲಿಸಿದರೆ ಇದು ಮೂರು ಪಟ್ಟು ಹೆಚ್ಚು. ಈ ಬೆಲೆ ಏರಿಕೆಯು ಬಡವರು ಮತ್ತು ಮಧ್ಯಮ ವರ್ಗದವರಿಗೆ ಕೈಗೆಟುಕದಂತಿದೆ ಎಂಬ ಚರ್ಚೆಗೆ ಕಾರಣವಾಗಿದೆ.
ಬೆಂಗಳೂರು (ಜ.27): ಬಡವರು, ಮಧ್ಯಮ ವರ್ಗದವರಿಗೆ ಕೈಗೆಟುಕುವ ಬೆಲೆಯಲ್ಲಿ ಸೈಟು, ಅಪಾರ್ಟ್‌ಮೆಂಟ್‌ಗಳು ಸಿಗಬೇಕು ಎನ್ನುವ ಉದ್ದೇಶದಿಂದ ರಚಿತವಾಗಿದ್ದ ಬಿಡಿಎ (ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ), ಕೆಎಚ್‌ಬಿ (ಕರ್ನಾಟಕ ಗೃಹ ಮಂಡಳಿ) ಈಗ ಖಾಸಗಿ ಬಿಲ್ಡರ್‌ಗಳಿಗಿಂದ ದುಬಾರಿಯಾಗಿದೆ. ಅದಕ್ಕೆ ಕಾರಣ ಕೆಎಚ್‌ಬಿ ಇತ್ತೀಚೆಗೆ ನೀಡಿದ ಪ್ರಕಟಣೆ. ಕರ್ನಾಟಕ ಗೃಹ ಮಂಡಳಿ (ಕೆಎಚ್‌ಬಿ) ದಕ್ಷಿಣ ಬೆಂಗಳೂರಿನ ಚಂದಾಪುರ-ಆನೇಕಲ್ ಮುಖ್ಯ ರಸ್ತೆಯಲ್ಲಿರುವ ಸೂರ್ಯ ನಗರ 1 ನೇ ಹಂತದಲ್ಲಿ ತನ್ನ ಮುಂಬರುವ ಅಪಾರ್ಟ್‌ಮೆಂಟ್ ಸಂಕೀರ್ಣದಲ್ಲಿ 2-ಬಿಎಚ್‌ಕೆ ಫ್ಲಾಟ್‌ಗೆ ಕನಿಷ್ಠ ಬೆಲೆ 88 ಲಕ್ಷ ರೂಪಾಯಿ ನಿಗದಿ ಮಾಡಿದ್ದು ಅಚ್ಚರಿಗೆ ಕಾರಣವಾಗಿದೆ.
ಈ ಬೆಲೆ ನಾಲ್ಕು ವರ್ಷಗಳ ಹಿಂದೆ ಇದೇ ರೀತಿಯ ಯೋಜನೆಗೆ ಮಂಡಳಿಯು ವಿಧಿಸಿದ್ದಕ್ಕಿಂತ ಸುಮಾರು ಮೂರು ಪಟ್ಟು ಹೆಚ್ಚಾಗಿದೆ. ಕೆಎಚ್‌ಬಿ ಫ್ಲ್ಯಾಟ್‌ಗಳಿಗೆ ವಿಧಿಸಿರುವ ಅತಿಯಾದ ಬೆಲೆ ಬಗ್ಗೆ ಈಗ ಚರ್ಚೆ ಶುರುವಾಗಿದೆ ಎಂದು ಡೆಕ್ಕನ್ ಹೆರಾಲ್ಡ್ ಪತ್ರಿಕೆ ವರದಿ ಮಾಡಿದೆ. ಕೆಎಚ್‌ಬಿ ಈಗ ದುಬಾರಿ ಬೆಲೆಯ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಾಣ ಮಾಡುವುದರತ್ತ ಗಮನವಹಿಸಿದೆ. ಆದರೆ, ಇದನ್ನು ಸ್ಥಾಪಿಸಿದ್ದ ಉದ್ದೇಶ ಬಡವರು ಹಾಗೂ ಮಧ್ಯಮವರ್ಗದವರಿಗೆ ಕೈಗೆಟುಕುವ ಬೆಲೆಯಲ್ಲಿ ಮನೆಗಳು ಸಿಗಬೇಕು ಎನ್ನುವುದಾಗಿತ್ತು. ಇನ್ನೊಂದೆಡೆ ಅಧಿಕಾರಿಗಳು, ಖಾಸಗಿ ಬಿಲ್ಡರ್‌ಗಳಿಗೆ ಹೋಲಿಸಿದರೆ, ನಮ್ಮದು ಇನ್ನೂ ಸ್ಪರ್ಧಾತ್ಮಕ ಬೆಲೆ ಎಂದು ಹೇಳಿದ್ದಾರೆ.
ಈ ವಾರದ ಆರಂಭದಲ್ಲಿ, ಕೆಎಚ್‌ಬಿ ಹೊಸ ಯೋಜನೆಯಲ್ಲಿ 90 ಫ್ಲಾಟ್‌ಗಳನ್ನು ನಿರ್ಮಿಸುವ ಯೋಜನೆಯನ್ನು ಘೋಷಿಸಿತು.1,340 ಚದರ ಅಡಿ ವಿಸ್ತೀರ್ಣದ ಸೂಪರ್ ಬಿಲ್ಟ್-ಅಪ್ ವಿಸ್ತೀರ್ಣ ಹೊಂದಿರುವ 2-BHK ಫ್ಲಾಟ್‌ನ ಬೆಲೆ 88 ಲಕ್ಷ ರೂ.ಗಳಾಗಿದ್ದರೆ, 3-BHK ಫ್ಲಾಟ್‌ನ (2,200 ಚದರ ಅಡಿ) ಬೆಲೆ ಸುಮಾರು 1.6 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ. ಈ ಯೋಜನೆಯು ಬೊಮ್ಮಸಂದ್ರ ಮೆಟ್ರೋ ನಿಲ್ದಾಣದಿಂದ ಸುಮಾರು 5 ಕಿ.ಮೀ ದೂರದಲ್ಲಿದೆ. ಈ ಪ್ರದೇಶದಲ್ಲಿ ಭೂಮಿ ಬೆಲೆ ಏರಿಕೆಗೆ ಚದರ ಅಡಿಗೆ ₹10,000 ರಷ್ಟು ಏರಿಕೆಯಾಗಿರುವುದು ಪ್ರಮುಖ ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ನಾವು ಹೆಸರಾಂತ ಖಾಸಗಿ ಡೆವಲಪರ್‌ಗಳಿಗೆ ಸಮಾನವಾಗಿ ಸೌಲಭ್ಯಗಳನ್ನು ನೀಡುತ್ತಿದ್ದೇವೆ. ಇದೇ ರೀತಿಯ ಯೋಜನೆಗಳಿಗೆ, ಖಾಸಗಿ ಬಿಲ್ಡರ್‌ಗಳು 2-BHK ಫ್ಲಾಟ್‌ಗೆ 1.5 ಕೋಟಿ ರೂ ದರ ಹೇಳುತ್ತಿದ್ದಾರೆ. ಮಾರುಕಟ್ಟೆ ಪದ್ಧತಿಗಳಿಗಿಂತ ಭಿನ್ನವಾಗಿ, ಇಲ್ಲಿ ಯಾವುದೇ ಗುಪ್ತ ಶುಲ್ಕಗಳಿಲ್ಲ," ಎಂದು ಯೋಜನೆಯನ್ನು ಮೇಲ್ವಿಚಾರಣೆ ಮಾಡುವ ಎಂಜಿನಿಯರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ 1BHK ಮನೆ ಬಾಡಿಗೆ 70 ಸಾವಿರ ರೂ. ! ಇದಕ್ಕೆ ಕಾರಣ ಯಂಗ್ ಟೆಕ್ಕಿಗಳು?
ಕೆಎಚ್‌ಬಿ ಈ ಹಿಂದೆ ಸೂರ್ಯ ನಗರದಲ್ಲಿ ಎರಡು ಅಪಾರ್ಟ್‌ಮೆಂಟ್ ಸಂಕೀರ್ಣಗಳನ್ನು ನಿರ್ಮಿಸಿದೆ. 2007 ರಲ್ಲಿ, ಇದು 1,537 ಫ್ಲಾಟ್‌ಗಳನ್ನು ನಿರ್ಮಿಸಿತು, ನಂತರ 2021 ರಲ್ಲಿ 384 ಫ್ಲಾಟ್‌ಗಳನ್ನು ಒಳಗೊಂಡ ಒಂದು ಯೋಜನೆಯನ್ನು ನಿರ್ಮಿಸಿತು. ನಾಲ್ಕು ವರ್ಷಗಳ ಹಿಂದೆ, ಬೆಲೆಗಳು ಗಮನಾರ್ಹವಾಗಿ ಕಡಿಮೆಯಾಗಿದ್ದವು, 2-BHK ಬೆಲೆ 30 ಲಕ್ಷ ರೂ. ಮತ್ತು 3-BHK ಬೆಲೆ 47 ಲಕ್ಷ ರೂಪಾಯಿ ಇದ್ದವು. ಹಿಂದಿನ ಒಪ್ಪಂದದ ಕಾರಣಕ್ಕಾಗಿ 2021 ರ ಯೋಜನೆಗೆ ದರಗಳನ್ನು ಹೆಚ್ಚಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Breaking: ಮುಡಾ ಕೇಸ್, ಇಡಿಯಿಂದ 300 ಕೋಟಿಗೂ ಅಧಿಕ ಮೌಲ್ಯದ 142 ಸ್ಥಿರಾಸ್ತಿಗಳ ಮುಟ್ಟುಗೋಲು!
