ಬೆಂಗಳೂರು (ನ.07): ಫ್ಲಿಪ್‌ಕಾರ್ಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯಿಂದ 26.95 ಕೋಟಿ ರು. ಬಾಕಿ ವಸೂಲಾತಿ ಪ್ರಕ್ರಿಯೆ ಆರಂಭಿಸಲು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. 

ಈ ಕುರಿತಂತೆ ದೇವರಬೀಸನಹಳ್ಳಿಯಲ್ಲಿರುವ ಫ್ಲಿಪ್‌ಕಾರ್ಟ್ ಇಂಡಿಯಾ ಕಂಪನಿ ಕಚೇರಿ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ. ಜತೆಗೆ, ಅರ್ಜಿಯಲ್ಲಿ ಪ್ರತಿವಾದಿಯಾದ ಮುಂಬೈನ ಮೆಸರ್ಸ್ ಕ್ಲೌಡ್ ವಾಕರ್ ಸ್ಟ್ರೀಮಿಂಗ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ನಿರ್ದೇಶಕರಿಗೆ ನೋಟಿಸ್ ಜಾರಿ ಮಾಡಿದೆ. ಎಲ್‌ಇಡಿ ಟಿವಿ ಸೆಟ್‌ಗಳನ್ನು ಖರೀದಿಸುವ ಸಂಬಂಧ ತಮ್ಮ ಕಂಪನಿಯೊಂದಿಗೆ ಫ್ಲಿಪ್ ಕಾರ್ಟ್ ಕಂಪನಿ ಒಪ್ಪಂದ ಮಾಡಿಕೊಂಡಿತ್ತು.

2020ರಲ್ಲಿ ಸಂಬಳ ಶೇ.10ರಷ್ಟು ಏರಿಕೆ: ಮೋದಿ ಪ್ಲ್ಯಾನ್ ತಿಳಿಯಬೇಕೆ?...

ಆದರೆ, ನಿಗದಿತ ಸಮಯದಲ್ಲಿ ಟಿ.ವಿ.ಸೆಟ್‌ಗಳನ್ನು ಖರೀದಿ ಮಾಡದ ಹಿನ್ನೆಲೆಯಲ್ಲಿ ತಮ್ಮ ಕಂಪನಿಗೆ 26.95 ಕೋಟಿ ರು. ನಷ್ಟವಾಗಿದೆ. ಆ ನಷ್ಟ ಭರಿಸುವಂತೆ ನೀಡಿದ ಡಿಮ್ಯಾಂಡ್ ನೋಟಿಸ್‌ಗಳಿಗೂ ಫ್ಲಿಪ್ ಕಾರ್ಟ್ ಸೂಕ್ತ ರೀತಿಯಲ್ಲಿ ಸ್ಪಂದಿಸಿಲ್ಲ. 

ಆದ್ದರಿಂದ ಈ 26.95 ಕೋಟಿ ರು. ನಷ್ಟವನ್ನು ಭರಿಸಲು ಫ್ಲಿಪ್‌ಕಾರ್ಟ್ ಕಂಪನಿಗೆ ನಿರ್ದೇಶಿಸುವಂತೆ ಕೋರಿ ಕ್ಲೌಡ್ ವಾಕರ್ ಎನ್‌ಸಿಎಲ್‌ಟಿ ಮುಂದೆ ಅರ್ಜಿ ಸಲ್ಲಿಸಿತ್ತು. ಅದನ್ನು ಪುರಸ್ಕರಿಸಿದ್ದ ಎನ್‌ಸಿಎಲ್‌ಟಿ ಬೆಂಗಳೂರಿನ ನ್ಯಾಯಪೀಠ, ಫ್ಲಿಪ್ ಕಾರ್ಟ್ ಕಂಪನಿ ವಿರುದ್ಧ 26.95 ಕೋಟಿ ವಸೂಲಾತಿ ಪ್ರಕ್ರಿಯೆ ಜರುಗಿಸಲು ಆದೇಶಿಸಿತ್ತು. ಆ ಆದೇಶವನ್ನು ಫ್ಲಿಪ್ ಕಾರ್ಟ್ ಕಂಪನಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು.