ವಿಧಾನಸಭೆ (ಫೆ.05):  ರಾಜ್ಯದ ನಗರ ಸಭೆ ಮತ್ತು ಪುರಸಭೆಗಳು ಹಾಗೂ ನಗರಪಾಲಿಕೆಗಳ ವ್ಯಾಪ್ತಿಯ ಆಸ್ತಿಗಳ ತೆರಿಗೆ ಹೆಚ್ಚಿಸಲು ಅವಕಾಶ ಕಲ್ಪಿಸುವ ಎರಡು ಪ್ರತ್ಯೇಕ ತಿದ್ದುಪಡಿ ವಿಧೇಯಕಗಳು ಪ್ರತಿಪಕ್ಷಗಳ ವಿರೋಧದ ನಡುವೆಯೇ ಅಂಗೀಕಾರವಾದವು.

ನಗರ ಸಭೆ ಹಾಗೂ ಪುರಸಭೆಯಲ್ಲಿ ತೆರಿಗೆ ಹೆಚ್ಚಳಕ್ಕೆ ಅವಕಾಶ ನೀಡುವ ‘ಕರ್ನಾಟಕ ಪೌರಸಭೆಗಳ (ಎರಡನೇ ತಿದ್ದುಪಡಿ) ವಿಧೇಯಕ-2021’ ಮತ್ತು ನಗರಪಾಲಿಕೆಗಳಲ್ಲಿ ತೆರಿಗೆ ಹೆಚ್ಚಳಕ್ಕೆ ಅವಕಾಶ ನೀಡುವ ‘ಕರ್ನಾಟಕ ನಗರ ಪಾಲಿಕೆಗಳ ತಿದ್ದುಪಡಿ ವಿಧೇಯಕ-2021’ಕ್ಕೆ ಅಂಗೀಕಾರ ದೊರೆಯಿತು.

ಟ್ಯಾಕ್ಸ್ ಸ್ಲ್ಯಾಬ್ ಬದಲಾಗದಿದ್ದರೂ ಸಣ್ಣ ತೆರಿಗೆದಾರರಿಗೆ 10 ಲಾಭ!

ಪೌರಾಡಳಿತ ಸಚಿವ ಎನ್‌.ನಾಗರಾಜ್‌ ಅವರು ಕರ್ನಾಟಕ ಪೌರಸಭೆಗಳ ತಿದ್ದುಪಡಿ ವಿಧೇಯಕ ಕುರಿತು ಮಾತನಾಡಿ, ನಗರ ಸಭೆಗಳು ಮತ್ತು ಪುರಸಭೆಗಳ ಅಭಿವೃದ್ಧಿಗೆ ಆದಾಯ ಸಂಗ್ರಹಿಸಲು ಈ ತಿದ್ದುಪಡಿ ತರಲಾಗಿದೆ. ಇದರಲ್ಲಿ ಆಸ್ತಿಗೆ ತೆರಿಗೆ ಪರಿಷ್ಕರಣೆ, ಸುಧಾರಣೆ ಹಾಗೂ ಸಾಲದ ಸಾಮರ್ಥ್ಯ ಹೆಚ್ಚಳಕ್ಕೂ ಅವಕಾಶವಿದೆ ಎಂದು ಹೇಳಿದರು.

ಈ ಎರಡು ಪ್ರತ್ಯೇಕ ತಿದ್ದುಪಡಿ ವಿಧೇಯಕಗಳಲ್ಲಿ ತೆರಿಗೆ ಏರಿಕೆ ಏಕ ಸ್ವರೂಪದಲ್ಲಿದೆ.

ಅದರಂತೆ ನಗರ ಸಭೆ, ಪುರಸಭೆ ಹಾಗೂ ನಗರಪಾಲಿಕೆಗಳ ವ್ಯಾಪ್ತಿಯ ವಾಣಿಜ್ಯ ಕಟ್ಟಡಗಳ ಮೂಲಬೆಲೆಯ ಶೇ.0.5ಕ್ಕಿಂತ ಕಡಿಮೆ ಇಲ್ಲದಂತೆ (ಸಾವಿರಕ್ಕೆ ಐದು ರು.) ಹಾಗೂ ಶೇ.3ಕ್ಕಿಂತ ಹೆಚ್ಚಾಗದಂತೆ ತೆರಿಗೆ ಹೆಚ್ಚಿಸಲು ಅವಕಾಶ ಕಲ್ಪಿಸಲಾಗಿದೆ. ಅಂತೆಯೆ ವಾಸದ ಕಟ್ಟಡ ಮತ್ತು ವಾಣಿಜ್ಯೇತರ ಕಟ್ಟಡಗಳಿಗೆ ಮೂಲಬೆಲೆಯ ಶೇ.0.3ಕ್ಕಿಂತ (ಸಾವಿರಕ್ಕೆ ಮೂರು ರು.) ಕಡಿಮೆ ಇಲ್ಲದಂತೆ ಮತ್ತು ಶೇ.1ಕ್ಕಿಂತ (ಸಾವಿರಕ್ಕೆ ಹತ್ತು ರು.) ಹೆಚ್ಚಿಲ್ಲದಂತೆ ತೆರಿಗೆ ವಿಧಿಸಲು, ಸಾವಿರ ಚದರ ಮೀಟರ್‌ಗಿಂತ ಹೆಚ್ಚು ಅಳತೆ ಇಲ್ಲದ ಖಾಲಿಭೂಮಿಗೆ ಮೂಲಬೆಲೆಯ ಶೇ.0.1ಕ್ಕಿಂತ (ಸಾವಿರಕ್ಕೆ ಒಂದು ರು.)ಗೆ ಕಡಿಮೆ ಇಲ್ಲದಂತೆ ಹಾಗೂ ಶೇ.0.5ಕ್ಕಿಂತ (ಸಾವಿರಕ್ಕೆ ಐದು ರು.) ಹೆಚ್ಚಿಲ್ಲದಂತೆ ತೆರಿಗೆ ವಿಧಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಅಂತೆಯೆ ಒಂದು ಸಾವಿರ ಚದರ ಮೀಟರ್‌ಗಿಂತ ಹೆಚ್ಚಿನ ಅಂದರೆ, ನಾಲ್ಕು ಸಾವಿರ ಚದರ ಮೀಟರ್‌ಗಿಂತ ಹೆಚ್ಚಿಲ್ಲದ ಅಳತೆತ ಖಾಲಿ ಭೂಮಿಗೆ ಶೇ.0.025(ಲಕ್ಷಕ್ಕೆ ಇಪ್ಪತೈದು ರು.) ಕಡಿಮೆ ಇಲ್ಲದಂತೆ ಹಾಗೂ ಶೇ.0.1ಕ್ಕಿಂತ(ಲಕ್ಷಕ್ಕೆ ನೂರು ರು.) ಹೆಚ್ಚಿಲ್ಲದಂತೆ ತೆರಿಗೆ ವಿಧಿಸಲು ಅವಕಾಶವಿದೆ. ಅಂತೆಯೆ ನಾಲ್ಕು ಸಾವಿರ ಚದರ ಮೀಟರ್‌ಗಿಂತ ಹೆಚ್ಚಿನ ಅಳತೆಯ ಖಾಲಿ ಭೂಮಿಗೆ ಶೇ.0.01ಕ್ಕಿಂತ(ಲಕ್ಷಕ್ಕೆ ಹತ್ತು ರು.) ಕಡಿಮೆ ಇಲ್ಲದಂತೆ ಹಾಗೂ ಶೇ.0.01ಕ್ಕಿಂತ(ಲಕ್ಷಕ್ಕೆ ನೂರು ರು.) ಹೆಚ್ಚಿಲ್ಲದಂತೆ ಆಸ್ತಿ ತೆರಿಗೆ ವಿಧಿಸಲು ಅವಕಾಶ ನೀಡಲಾಗಿದೆ ಎಂದು ಹೇಳಿದರು.

ಇದಕ್ಕೂ ಮುನ್ನ ಈ ಎರಡು ತಿದ್ದುಪಡಿ ವಿಧೇಯಕ ಕುರಿತು ಮಾತನಾಡಿದ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ, ಶಾಸಕರಾದ ಪ್ರಿಯಾಂಕ ಖರ್ಗೆ, ಡಾ.ಯತೀಂದ್ರ ಸಿದ್ದರಾಮಯ್ಯ ಹಾಗೂ ಅಜಯ್‌ ಸಿಂಗ್‌ ಅವರು ತೀವ್ರ ವಿರೋಧ ವ್ಯಕ್ತಪಡಿಸಿದರು. ಕೊರೋನಾದಿಂದ ಜನರು ಸಾಕಷ್ಟುತೊಂದರೆಯಲ್ಲಿದ್ದಾರೆ. ಇತಂಹ ಪರಿಸ್ಥಿತಿಯಲ್ಲಿ ಆಸ್ತಿಗೆ ತೆರಿಗೆ ಹೆಚ್ಚಳಕ್ಕೆ ತಿದ್ದಪಡಿ ತಂದು ಜನರ ಮೇಲೆ ತೆರಿಗೆ ಹೇರುವುದು ಸರಿಯಲ್ಲ ಎಂದು ಟೀಕಿಸಿದರು.