ಬೆಂಗಳೂರು(ಮಾ.16): ರಾಜ್ಯದ ಬಿಯರ್ ಪ್ರಿಯರಿಗೆ ಬೆಲೆ ಏರಿಕೆ ಬಿಸಿ ತಟ್ಟಲಿದ್ದು, ಮುಂಬರುವ ಏಪ್ರಿಲ್ 1ರಿಂದಲೇ ನೂತನ ದರ ಜಾರಿಗೆ ಬರಲಿದೆ. 

ರಾಜ್ಯ ಸರ್ಕಾರ 650 ಎಂಎಲ್ ಬಿಯರ್ ದರ ಏರಿಕೆ ಮಾಡಿ ಶೀಘ್ರದಲ್ಲೇ ಆದೇಶ ಹೊರಡಿಸಲಿದ್ದು, ಹೊಸ ದರ ಏಪ್ರಿಲ್ 1ರಿಂದಲೇ ಜಾರಿಗೆ ಬರಲಿದೆ.

ಪ್ರತಿವರ್ಷ ಸರಾಸರಿ 2,400 ಕೋಟಿ ರೂ. ಆದಾಯ ಅಬಕಾರಿ ಇಲಾಖೆ ಮೂಲಕ ಸರ್ಕಾರದ ಖಜಾನೆ ಸೇರುತ್ತಿದೆ. 10 ವರ್ಷಗಳಲ್ಲಿ ಬಿಯರ್ ಮಾರಾಟ ಪ್ರಮಾಣ 5 ಪಟ್ಟು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ 2019-20ನೇ ಸಾಲಿನಲ್ಲಿ ಸರ್ಕಾರ ಅಬಕಾರಿ ಇಲಾಖೆಗೆ 2,800 ಕೋಟಿ ರೂ. ಟಾರ್ಗೆಟ್ ನೀಡಿದೆ.

ಲೋಕಸಭಾ ಚುನಾವಣೆಯಿಂದಾಗಿ ಭಾರಿ ಬೇಡಿಕೆ ಬರುತ್ತಿರುವ ಹಿನ್ನೆಲೆ ಯಲ್ಲಿ ಈಗಾಗಲೇ ರಾಜ್ಯದ ಹಲವೆಡೆ ಮದ್ಯ ಖರೀದಿಸಿ ದಾಸ್ತಾನು ಮಾಡಿಕೊಳ್ಳಲಾಗುತ್ತಿದೆ. 

ಬಿಸಿಲಿನ ತಾಪ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬಿಯರ್​ಗೆ ಭಾರೀ ಬೇಡಿಕೆ ಬಂದಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಬಿಯರ್ ದರ ಹೆಚ್ಚಿಸುವಂತೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.