ಜರ್ಮನಿಯ ಕ್ರೋನ್ಸ್ ಕಂಪನಿ, ವೇಮಗಲ್ ಕೈಗಾರಿಕಾ ಪಾರ್ಕ್‌ನಲ್ಲಿ ಬಾಟಲಿಂಗ್ ಮತ್ತು ಪ್ಯಾಕೇಜಿಂಗ್ ಘಟಕ ಸ್ಥಾಪಿಸಲು ಕರ್ನಾಟಕ ಸರ್ಕಾರದ ಜೊತೆ ಒಪ್ಪಂದ ಮಾಡಿಕೊಂಡಿದೆ. ಸಚಿವ ಎಂ.ಬಿ. ಪಾಟೀಲ್ ನೇತೃತ್ವದ ಯುರೋಪ್ ಪ್ರವಾಸದ ಫಲಶ್ರುತಿಯಾಗಿ ಈ ಒಪ್ಪಂದ ಏರ್ಪಟ್ಟಿದೆ. ಇದು ಕರ್ನಾಟಕದ ಹೂಡಿಕೆ ಆಕರ್ಷಣೆಯ ಸಾಮರ್ಥ್ಯವನ್ನು ಬಲಪಡಿಸುತ್ತದೆ. "ಇನ್ವೆಸ್ಟ್ ಕರ್ನಾಟಕ 2025" ಸಮಾವೇಶಕ್ಕೆ ಪೂರ್ವಭಾವಿಯಾಗಿ ಈ ಒಪ್ಪಂದ ಮಹತ್ವ ಪಡೆದಿದೆ.

ಬೆಂಗಳೂರು (ಡಿ.11): 'ಬಾಟಲಿಂಗ್ ಮತ್ತು ಪ್ಯಾಕೇಜಿಂಗ್ ಉಪಕರಣಗಳ ತಯಾರಿಕೆಯಲ್ಲಿ ಜಾಗತಿಕ ಪ್ರಮುಖ ಕಂಪನಿಯಾಗಿರುವ ಜರ್ಮನಿಯ ಕ್ರೋನ್ಸ್‌ ಜೊತೆಗೆ ಕರ್ನಾಟಕ ರಾಜ್ಯ ಸರ್ಕಾರವು ಒಪ್ಪಂದಕ್ಕೆ ಸಹಿ ಹಾಕಿದೆ' ಎಂದು ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ.

'ವೇಮಗಲ್ ಕೈಗಾರಿಕಾ ಪಾರ್ಕ್‌ನ 2ನೇ ಹಂತದಲ್ಲಿ ಅತ್ಯಾಧುನಿಕ ತಯಾರಿಕಾ ಘಟಕ ಸ್ಥಾಪಿಸುವ ಸಂಬಂಧ ಕ್ರೋನ್ಸ್‌, ರಾಜ್ಯ ಸರ್ಕಾರದ ಜೊತೆ ಈ ಒಪ್ಪಂದಕ್ಕೆ ಸಹಿ ಹಾಕಿದೆ. ಜಾಗತಿಕ ಬಂಡವಾಳ ಹೂಡಿಕೆಯ ಪ್ರಮುಖ ತಾಣವಾಗಿರುವ ಕರ್ನಾಟಕದ ಸ್ಥಾನವನ್ನು ಈ ಒಪ್ಪಂದವು ಮತ್ತಷ್ಟು ಗಟ್ಟಿಗೊಳಿಸಿದೆ. ಜಾಗತಿಕ ಹೂಡಿಕೆದಾರರನ್ನು ಆಕರ್ಷಿಸುವಲ್ಲಿನ ಕರ್ನಾಟಕದ ಯಶಸ್ಸಿಗೂ ಈ ಒಪ್ಪಂದವು ಸಾಕ್ಷಿಯಾಗಿದೆ' ಎಂದು ಸಚಿವ ಪಾಟೀಲ ಹೇಳಿದ್ದಾರೆ.

ಇನ್ವೆಸ್ಟ್‌ ಕರ್ನಾಟಕಕ್ಕೆ ಜಾಗತಿಕ ಹೂಡಿಕೆದಾರರನ್ನು ಆಹ್ವಾನಿಸಲು ಯುರೋಪ್‌ ಪ್ರವಾಸದಲ್ಲಿ ಇರುವ ಸಚಿವ ಪಾಟೀಲ ನೇತೃತ್ವದಲ್ಲಿನ ರಾಜ್ಯದ ನಿಯೋಗದ ಪ್ರಯತ್ನದ ಫಲವಾಗಿ ಈ ಒಪ್ಪಂದ ಕಾರ್ಯಗತಗೊಂಡಿದೆ. ನ್ವೈಟ್‌ಹಬ್ಲಿಂಗ್‌ನಲ್ಲಿ ಇರುವ ಕ್ರೋನ್ಸ್‌ನ ಪ್ರಧಾನ ಕಚೇರಿಯಲ್ಲಿ ಕಂಪನಿಯ ಮುಖ್ಯಸ್ಥರು ಹಾಗೂ ಸಚಿವ ಎಂ.ಬಿ. ಪಾಟೀಲರ ಸಮ್ಮುಖದಲ್ಲಿ ಒಪ್ಪಂದಕ್ಕೆ ಅಂಕಿತ ಹಾಕಲಾಯಿತು. ರಾಜ್ಯದಲ್ಲಿ ಪೂರಕ ಹೂಡಿಕೆಗಳನ್ನು ಉತ್ತೇಜಿಸಲು ಹಾಗೂ ರಾಜ್ಯದ ಕೈಗಾರಿಕಾ ಬೆಳವಣಿಗೆ ಉತ್ತೇಜಿಸಲು ಕ್ರೋನ್ಸ್‌ನ ಪೂರೈಕೆದಾರರ ಜೊತೆಗೂ ಚರ್ಚೆ ನಡೆಸಲಾಯಿತು. ಈ ಯೋಜನೆಯಿಂದ ಸಾವಿರಾರು ಯುವಕರಿಗೆ ಉದ್ಯೋಗ ಲಭಿಸಲಿದೆ.

ಇದನ್ನೂ ಓದಿ: ಮುರುಡೇಶ್ವರ ದುರಂತ: ಮೃತ ನಾಲ್ವರು ವಿದ್ಯಾರ್ಥಿಗಳ ಕುಟುಂಬಕ್ಕೆ ₹ 5 ಲಕ್ಷ ಪರಿಹಾರ ಘೋಷಣೆ!

ಮುಂದಿನ ವರ್ಷ ಫೆಬ್ರುವರಿಯಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶವಾದ 'ಇನ್ವೆಸ್ಟ್ ಕರ್ನಾಟಕ 2025'ಕ್ಕೆ ಮುಂಚಿತವಾಗಿ ಬಂಡವಾಳ ಹೂಡಿಕೆ ಮತ್ತು ಪಾಲುದಾರಿಕೆಗಳನ್ನು ಆಕರ್ಷಿಸಲು ಜರ್ಮನಿಯಲ್ಲಿ ನಡೆದ ರೋಡ್‌ಷೋ, ಕರ್ನಾಟಕದ ಹೂಡಿಕೆ ಆಕರ್ಷಿಸುವ ಸಾಮರ್ಥ್ಯಗಳನ್ನು ಅಲ್ಲಿಯ ಉದ್ಯಮಿಗಳು ಹಾಗೂ ಹೂಡಿಕೆದಾರರಿಗೆ ಮನವರಿಕೆ ಮಾಡಿಕೊಡುವಲ್ಲಿ ಸಫಲವಾಗಿದೆ. ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್, ಕೈಗಾರಿಕಾ ಇಲಾಖೆ ಆಯುಕ್ತರಾದ ಶ್ರೀಮತಿ ಗುಂಜನ್ ಕೃಷ್ಣ ಅವರು ಒಪ್ಪಂದಕ್ಕೆ ಸಹಿ ಹಾಕುವ ಸಮಾರಂಭದಲ್ಲಿ ಉಪಸ್ಥಿತರಿದ್ದರು.