ಚುನಾವಣೆ ಬಳಿಕ ಜನ ಸಾಮಾನ್ಯರಿಗೆ ರಾಜ್ಯ ಸರ್ಕಾರದ ಶಾಕ್, ಪೆಟ್ರೋಲ್ ಡೀಸೆಲ್ ದರ ಎರಿಕೆ!
ವಾಹನ ಸವಾರರು ಸೇರಿದಂತೆ ಜನ ಸಾಮಾನ್ಯರಿಗೆ ಕರ್ನಾಟಕ ಸರ್ಕಾರದ ಶಾಕ್ ನೀಡಿದೆ. ಲೋಕಸಭಾ ಚುನಾವಣೆ ಫಲಿತಾಂಶ ಬೆನ್ನಲ್ಲೇ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಮಾಡಿದೆ.
ಬೆಂಗಳೂರು(ಜೂ.15) ಲೋಕಸಭಾ ಚುನಾವಣೆ ಫಲಿಶಾಂತ ಬೆನ್ನಲ್ಲೇ ರಾಜ್ಯದ ಜನತೆಗೆ ಕಾಂಗ್ರೆಸ್ ಸರ್ಕಾರ ಶಾಕ್ ನೀಡಿದೆ. ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ರಾಜ್ಯ ಸರ್ಕಾರ ಹೆಚ್ಚಿಸಿದೆ. ಇದರ ಪರಿಣಾಮ ಪ್ರತಿ ಲೀಟರ್ ಪೆಟ್ರೋಲ್ ಮೇಲೆ 3 ರೂಪಾಯಿ ಹೆಚ್ಚಳವಾಗುತ್ತಿದೆ. ಇನ್ನು ಡೀಸೆಲ್ ಮೇಲೆ 3.50 ರೂಪಾಯಿ ಬೆಲೆ ಹೆಚ್ಚಳವಾಗಿದೆ. ತಕ್ಷಣದಿಂದಲೇ ಈ ಪರಿಷ್ಕೃತ ದರ ಜಾರಿಯಾಗಲಿದೆ.
ನೂತನ ದರ ಏರಿಕೆಯಿಂದ ಬೆಂಗಳೂರಿನಲ್ಲಿ ಪೆಟ್ರೋಲ್ ದರ 88 ರೂಪಾಯಿ 84 ಪೈಸೆಯಿಂದ ಇದೀಗ 103 ರೂಪಾಯಿಗೆ ಏರಿಕೆಯಾಗಿದೆ. ಇತ್ತ 85 ರೂಪಾಯಿ 93 ಪೈಸೆಯಿದ್ದ ಡೀಸೆಲ್ ಬೆಲೆ 89 ರೂಪಾಯಿ 20 ಪೈಸೆಗೆ ಏರಿಕೆಯಾಗಿದೆ. ಸರಿಸುಮಾರು ಕಳೆದೆರಡು ವರ್ಷದಿಂದ ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಯಥಾಸ್ಥಿತಿ ಕಾಪಾಡಿಕೊಂಡಿತ್ತು. ಮಾರ್ಚ್ ತಿಂಗಳಲ್ಲಿ ಪೆಟ್ರೋಲ್ ಡೀಸೆಲ್ ಮೇಲಿನ ಬೆಲೆಯಲ್ಲಿ ಗರಿಷ್ಠ 2 ರೂಪಾಯಿ ಕಡಿತಗೊಂಡಿತ್ತು. ಈ ಬದಲಾವಣೆ ಹೊರತುಪಡಿಸಿದರೆ ಪೆಟ್ರೋಲ್ ಡೀಸೆಲ್ ದುಬಾರಿಯಾದರೂ ಯಥಾಸ್ಥಿತಿ ಕಾಪಾಡಿಕೊಂಡಿತ್ತು.
12 ಜಿಲ್ಲೆಗಳಲ್ಲಿ 100 ರೂಪಾಯಿಗೂ ಕಡಿಮೆ ದರದಲ್ಲಿ ಪೆಟ್ರೋಲ್; ನಿಮ್ಮ ನಗರದ ಇಂಧನ ದರ ಇಲ್ಲಿದೆ
ಇದೀಗ ಕರ್ನಾಟಕ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಬೆಲೆ ಏರಿಕೆ ಮಾಡಿದೆ. ಗರಿಷ್ಠ 3.50 ರೂಪಾಯಿ ಏರಿಕೆ ಮಾಡಿ ಜನಸಾಮಾನ್ಯರಿಗೆ ಶಾಕ್ ನೀಡಿದೆ. ಸದ್ಯದ ಬೆಲೆ ಏರಿಕೆಯಿಂದ ಅಗತ್ಯವಸ್ತುಗಳ ಬೆಲೆಯೂ ಏರಿಕೆಯಾಗಲಿದೆ. ಆದಾಯ ಕ್ರೋಡಿಕರಿಸಲು ರಾಜ್ಯ ಸರ್ಕಾರ ಹಲವು ಮೂಲಗಳನ್ನು ಹುಡುಕುತ್ತಿದೆ. ಇದೀಗ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ನೇರವಾಗಿ ಜನಸಾಮಾನ್ಯರಿಗೆ ತಟ್ಟಲಿದೆ.
ಇತ್ತೀಚೆಗೆ ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್‌ನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವ ಆಸಕ್ತಿ ವ್ಯಕ್ತಪಡಿಸಿತ್ತು. ಈ ಕುರಿತು ನೂತನ ಪೆಟ್ರೋಲ್ ಹಾಗೂ ನೈಸರ್ಗಿಕ ಖಾತೆ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದರು. 2020ರಲ್ಲಿ ಕೇಂದ್ರ ಸರ್ಕಾರ ಈ ಪ್ರಸ್ತಾಪ ಇಡಲಾಗಿತ್ತು. ಆದರೆ ಬಹುತೇಕ ರಾಜ್ಯಗಳು ಈ ಪ್ರಸ್ತಾಪ ತಿರಸ್ಕರಿಸಿತ್ತು. ಕಾರಣ ಹಲವು ರಾಜ್ಯಗಳು ಪೆಟ್ರೋಲ್ ಡೀಸೆಲ್ ಮೇಲಿನ ರಾಜ್ಯ ತೆರಿಗೆಯಿಂದಲೇ ಆದಾಯ ಕ್ರೋಡಿಕರಿಸುತ್ತಿರುವ ಕಾರಣ ಈ ಪ್ರಸ್ತಾಪಕ್ಕೆ ಮನ್ನಣೆ ಸಿಗಲಿಲ್ಲ ಎಂದು ಪುರಿ ಹೇಳಿದ್ದರು.