ಇ-ಕಾಮರ್ಸ್‌ ಕಾರ್ಮಿಕರಿಗೆ 4 ಲಕ್ಷ ರು. ವಿಮಾ ಸೌಲಭ್ಯ. ಸ್ವಿಗ್ಗಿ, ಝೋಮ್ಯಾಟೊ, ಅಮೆಜಾನ್‌, ಫ್ಲಿಪ್‌ಕಾರ್ಟ್, ಬಿಗ್‌ ಬಾಸ್ಕೆಟ್‌ನಂಥ ನೌಕರರಿಗೆ ಅನ್ವಯ. 4 ಲಕ್ಷ ರು. ಪೈಕಿ 2 ಲಕ್ಷ ರು. ಜೀವವಿಮೆ, 2 ಲಕ್ಷ ರು. ಅಪಘಾತ ವಿಮೆ

ಬೆಂಗಳೂರು (ಸೆ.9): ರಾಜ್ಯದಲ್ಲಿ ಇ-ಕಾಮರ್ಸ್‌ ವಲಯಗಳಾದ ಸ್ವಿಗ್ಗಿ, ಝೋಮ್ಯಾಟೊ, ಅಮೆಜಾನ್‌, ಫ್ಲಿಪ್‌ಕಾರ್ಟ್, ಬಿಗ್‌ ಬಾಸ್ಕೆಟ್‌ ಮುಂತಾದವುಗಳಲ್ಲಿ ಕೆಲಸ ಮಾಡುತ್ತಿರುವ ‘ಗಿಗ್‌’ ಕಾರ್ಮಿಕರಿಗೆ ಒಟ್ಟು 4 ಲಕ್ಷ ರು.ಗಳ ವಿಮಾ ಸೌಲಭ್ಯ ಒದಗಿಸುವ ‘ಕರ್ನಾಟಕ ರಾಜ್ಯ ಗಿಗ್‌ ಕಾರ್ಮಿಕ ವಿಮಾ ಯೋಜನೆ’ ಜಾರಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಈ ನಾಲ್ಕು ಲಕ್ಷ ರು.ಗಳಲ್ಲಿ ಎರಡು ಲಕ್ಷ ರು.ಗಳ ಜೀವವಿಮಾ ಸೌಲಭ್ಯ ಹಾಗೂ ಎರಡು ಲಕ್ಷ ರು.ಗಳ ಅಪಘಾತ ವಿಮೆ ಇರಲಿದೆ. ಕಳೆದ ಆಯವ್ಯಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ವಿಮಾ ಯೋಜನೆಯನ್ನು ಜಾರಿಗೆ ತರುವುದಾಗಿ ಮಾಡಿದ್ದ ಘೋಷಣೆಯಂತೆ ವಿವಿಧ ಮಾರ್ಗಸೂಚಿ ನಿಗದಿಗೊಳಿಸಿ ಜಾರಿಯಾಗಲಿದ್ದು, ಈ ಯೋಜನೆ ರಾಜ್ಯಾದ್ಯಂತ ಎಲ್ಲ ಪ್ರದೇಶಗಳಿಗೂ ಅನ್ವಯವಾಗಲಿದೆ.

Zomato ಪ್ರಿಯರಿಗೆ ಶಾಕಿಂಗ್ ನ್ಯೂಸ್‌: ಪ್ರತಿ ಆಹಾರದ ಆರ್ಡರ್‌ಗೆ ಹೆಚ್ಚುವರಿ ಶುಲ್ಕ ವಿಧಿಸಲು ನಿರ್ಧಾರ

ನೋಂದಣಿ ಹೇಗೆ?: ಗಿಗ್‌ ಕಾರ್ಮಿಕರು ರಾಜ್ಯ ಸರ್ಕಾರದ ಸೇವಾ ಸಿಂಧು ಪೋರ್ಟಲ್‌ನಲ್ಲಿ ಅಗತ್ಯ ದಾಖಲೆಗಳೊಂದಿಗೆ ನೇರವಾಗಿ ಅರ್ಜಿ ಸಲ್ಲಿಸಿ ಗುರುತಿನ ಚೀಟಿ ಪಡೆಯಬೇಕು. ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ 18ರಿಂದ 60 ವರ್ಷದ ಎಲ್ಲ ಪ್ಲಾಟ್‌ಫಾಮ್‌ರ್‍ ಆಧಾರಿತ ಗಿಗ್‌ ಕಾರ್ಮಿಕರು ಯೋಜನೆಗೆ ಒಳಪಡುತ್ತಾರೆ. ಆದಾಯ ತೆರಿಗೆ ಪಾವತಿದಾರರಾಗಿಬಾರದು. ಇಎಸ್‌ಐ ಮತ್ತು ಇಪಿಎಫ್‌ ಸೌಲಭ್ಯ ಹೊಂದಿರಬಾರದು. ನೋಂದಣಿಗೆ ಅರ್ಜಿ ಸಲ್ಲಿಸುವ ವೇಳೆ ಉದ್ಯೋಗದಾತರಿಂದ ಪಡೆದ ಉದ್ಯೋಗ ಪ್ರಮಾಣ ಪತ್ರ/ಗುರುತಿನ ಚೀಟಿ, ಆಧಾರ ಸಂಖ್ಯೆ, ಇ-ಶ್ರಮ ಗುರುತಿನ ಚೀಟಿ ಸಂಖ್ಯೆ, ಪಾಸ್‌ ಪೋರ್ಚ್‌ ಅಳತೆಯ ಇತ್ತೀಚಿನ ಭಾವಚಿತ್ರ , ವಿಳಾಸ ಪುರಾವೆಗಾಗಿ ಯಾವುದಾದರೂ ದಾಖಲೆ (ಮತದಾರರ ಗುರುತಿನ ಚೀಟಿ, ಚಾಲನ ಪರವಾನಗಿ/ ಆಧಾರ್‌/ ಪಾಸ್‌ ಪೋರ್ಚ್‌/ ಬ್ಯಾಂಕ್‌ ಪಾಸ್‌ ಬುಕ್‌ ಇತ್ಯಾದಿ) ಸಲ್ಲಿಸಬೇಕು.

ಜಾಗೃತಿ, ತಪಾಸಣೆ,‌ ವಿಮೆ ಹೆಸರಲ್ಲಿ ಗ್ಯಾಸ್ ಬಳಕೆದಾರರಿಗೆ ಮೋಸ: ಗ್ರಾಹಕರ ಆಕ್ರೋಶ

ಯೋಜನೆಯ ಸೌಲಭ್ಯ: ಫಲಾನುಭವಿಯ ಮರಣದ ನಂತರ ಕಾನೂನು ಬದ್ದ ವಾರಸುದಾರರಿಗೆ 2 ಲಕ್ಷ ರು.ಗಳ ಜೀವ ವಿಮಾ ಪರಿಹಾರ ದೊರೆಯಲಿದೆ. ಜತೆಗೆ ವಿಮಾ ಪರಿಹಾರವಾಗಿ 2 ಲಕ್ಷ ರು. ಸೇರಿ ನಾಲ್ಕು ಲಕ್ಷ ಪರಿಹಾರ ನೀಡಲಾಗುವುದು. ಅಪಘಾತದಿಂದ ಉಂಟಾಗುವ ಸಂಪೂರ್ಣ ಶಾಶ್ವತ/ಭಾಗಶಃ ಅಂಗವೈಕಲ್ಯ ಪರಿಹಾರವಾಗಿ (ಶೇಕಡವಾರು ಅಂಗವೈಕಲ್ಯ ಆಧಾರದ ಮೇಲೆ) 2 ಲಕ್ಷ ರು. ಪರಿಹಾರ ದೊರೆಯಲಿದೆ. ಆಸ್ಪತ್ರೆ ವೆಚ್ಚ ಮರುಪಾವತಿ 1 ಲಕ್ಷ ರು.ವರೆಗೆ ಲಭ್ಯವಾಗಲಿದೆ.

ಈ ಸೌಲಭ್ಯಗಳು ಕರ್ತವ್ಯದಲ್ಲಿ ಇರುವಾಗ ಮತ್ತು ಕರ್ತವ್ಯದಲ್ಲಿ ಇರದೇ ಇದ್ದಾಗಲೂ ಸಂಭವಿಸುವ ಅಪಘಾತ ಹೊಂದಿದ್ದಲ್ಲಿ ಅನ್ವಯಿಸುತ್ತದೆ. ಈ ಸೌಲಭ್ಯಗಳು ಗಿಗ್‌ ಕಾರ್ಮಿಕರ ಉದ್ಯೋಗದಾತರು/ ಅಗ್ರಿಗೇಟರ್‌ ಸಂಸ್ಥೆಗಳು ನೀಡುತ್ತಿರುವ ಸೌಲಭ್ಯಕ್ಕೆ ಹೆಚ್ಚುವರಿಯಾಗಿ ಲಭ್ಯವಾಗುತ್ತದೆ.

ಒಂದು ವೇಳೆ ಫಲಾನುಭವಿ ಆತ್ಮಹತ್ಯೆ ಮಾಡಿಕೊಂಡಲ್ಲಿ, ಅಪಘಾತದ ವೇಳೆ ಮದ್ಯ ಅಥವಾ ಮಾದಕ ದ್ರವ್ಯ ಸೇವಿಸಿದಲ್ಲಿ, ಬುದ್ಧಿಭ್ರಮಣೆ ಕಾರಣ ಅಪಘಾತ ಸಂಭವಿಸಿದ್ದಲ್ಲಿ, ಅಪರಾಧದ ಉದ್ದೇಶದಿಂದ ಮಾಡಿದ ಯಾವುದಾದರೂ ಕಾನೂನು ಉಲ್ಲಂಘನೆಯ ಕಾರಣ ಅಪಘಾತ ಮಾಡಿದ್ದಲ್ಲಿ ಈ ಸೌಲಭ್ಯ ದೊರೆಯುವುದಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಸೌಲಭ್ಯಗಳ ನಿರಾಕರಣೆ: ಗಿಗ್‌ ಕಾರ್ಮಿಕನು 60 ವರ್ಷ ಪೂರೈಸಿದಲ್ಲಿ ಫಲಾನುಭವಿಯಾಗಿ ಮುಂದುವರೆಯಲು ಅನರ್ಹನಾಗುತ್ತಾನೆ. ಮರಣ ಅಥವಾ ಅಪಘಾತ ಸಂದರ್ಭದಲ್ಲಿ ಗಿಗ್‌ ವೃತ್ತಿಯಲ್ಲಿ ಸಕ್ರಿಯನಾಗಿರದ ಪ್ರಕರಣಗಳಲ್ಲಿ ಸೌಲಭ್ಯ ಸಿಗುವುದಿಲ್ಲ. ಮರಣ/ಅಪಘಾತ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಹೊರತು ಪಡಿಸಿ ಬೇರೆ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲಿ ಸೌಲಭ್ಯ ನಿರಾಕರಿಸಲಾಗುತ್ತದೆ.