* ಅಗತ್ಯ ವಸ್ತುಗಳ ದರ ಇಳಿಸದಿದ್ದರೆ ನಿರಂತರ ಜನಜಾಗೃತಿ: ಡಿಕೆಶಿ, ಸಿದ್ದು* ಇತ್ತೀಚೆಗೆ ಸಾಂಕೇತಿಕ ಪ್ರತಿಭಟನೆ* ಪೆಟ್ರೋಲ್, ಡೀಸೆಲ್, ಎಲ್‌ಪಿಜಿ, ಅಡುಗೆ ಎಣ್ಣೆ, ಗೊಬ್ಬರ, ಔಷಧ ಸೇರಿ ಅಗತ್ಯ ವಸ್ತುಗಳ ದರ ಏರಿಕೆಗೆ ಆಕ್ರೋಶ
ಬೆಂಗಳೂರು(ಏ.04): ಪೆಟ್ರೋಲ್, ಡೀಸೆಲ್, ಎಲ್‌ಪಿಜಿ ಗ್ಯಾಸ್, ಅಡುಗೆ ಎಣ್ಣೆ, ರಸಾಯನ ಗೊಬ್ಬರ, ಔಷಧಗಳು ಸೇರಿದಂತೆ ಅಗತ್ಯ ವಸ್ತುಗಳ ತೀವ್ರ ಬೆಲೆ ಏರಿಕೆಯನ್ನು ಖಂಡಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲು ಪ್ರತಿಪಕ್ಷ ಕಾಂಗ್ರೆಸ್ ಸಜ್ಜಾಗಿದೆ.
ಈ ಬಗ್ಗೆ ಭಾನುವಾರ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಧೋರಣೆ ವಿರುದ್ಧ ಕಿಡಿಕಾರಿದರು.
‘ಇತ್ತೀಚೆಗಷ್ಟೇ ಬೆಲೆ ಏರಿಕೆ ಖಂಡಿಸಿ ಸಾಂಕೇತಿಕ ಪ್ರತಿಭಟನೆ ನಡೆಸಿದ್ದೇವೆ. ಇನ್ನು ಮುಂದೆ ರಾಜ್ಯಾದ್ಯಂತ ಪ್ರತಿಭಟನೆಗಳನ್ನು ತೀವ್ರಗೊಳಿಸಲಾಗುವುದು. ಕೇಂದ್ರ ಸರ್ಕಾರ ದರ ಏರಿಕೆ ಬೂಟಾಟಿಕೆಯನ್ನು ತಕ್ಷಣ ನಿಲ್ಲಿಸಿ ದರ ಇಳಿಕೆ ಮಾಡಬೇಕು. ಇಲ್ಲದಿದ್ದರೆ ಬೆಲೆ ಏರಿಕೆ ವಿರುದ್ಧ ಜನಜಾಗೃತಿ ಮೂಡಿಸಿ ಈ ಸರ್ಕಾರವನ್ನು ಕಿತ್ತೊಗೆಯುವವರೆಗೂ ನಿರಂತರವಾಗಿ ಹೋರಾಟ ಮುಂದುವರೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ರೈತರ ರಕ್ತ ಕುಡಿವ ಮೋದಿ- ಸಿದ್ದು:
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ‘ಪಂಚರಾಜ್ಯಗಳ ಚುನಾವಣೆ ಬಳಿಕ ದಿನನಿತ್ಯವೂ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ ಮಾಡಲಾಗುತ್ತಿದೆ. ಅಡುಗೆ ಅನಿಲದ ಸಬ್ಸಿಡಿ ರದ್ದು ಮಾಡಿದ್ದಲ್ಲದೆ ಇದೀಗ ಮತ್ತೆ 50 ರು. ಹೆಚ್ಚಳ ಮಾಡಿ ಬಡವರ ಸುಲಿಗೆ ಮಾಡುತ್ತಿದೆ. ಇನ್ನು ಮಾ.1 ರಂದು ಕೇಂದ್ರ ಸರ್ಕಾರ ಡಿಎಪಿ ಬೆಲೆಯನ್ನು ಯದ್ವಾತದ್ವಾ ಹೆಚ್ಚಳ ಮಾಡಿದೆ. ರಾಜ್ಯ ರೈತರಿಂದಲೇ ಈ ಮೂಲಕ 3,600 ಕೋಟಿ ರು. ಸುಲಿಗೆ ಮಾಡುತ್ತಿದೆ. ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆಂದು ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ರೈತರ ರಕ್ತ ಕುಡಿಯಲು ಆರಂಭಿಸಿದ್ದಾರೆ’ ಎಂದು ಕಿಡಿಕಾರಿದರು.
‘ಬೆಳೆಗಳಿಗೆ ರೈತರು ಬಳಸುವ ಔಷಧಿ ಮೇಲಿನ ಜಿಎಸ್‌ಟಿ ಹೆಚ್ಚಿಸಿದ್ದಾರೆ. ರೈತರು ಬೆಳೆದ ರಾಗಿಯನ್ನು ಸಹ ಸರ್ಕಾರ ಸಮರ್ಪಕವಾಗಿ ಖರೀದಿಸುತ್ತಿಲ್ಲ. ಇದರಿಂದ ರೈತರಿಗೆ ಪ್ರತಿ ಕ್ವಿಂಟಾಲ್‌ಗೆ 1500 ರು. ನಷ್ಟವಾಗುತ್ತದೆ. ಇದೇ ರೀತಿ ಮೆಕ್ಕೆಜೋಳ ಮತ್ತು ಭತ್ತ ಖರೀದಿಯಲ್ಲಿಯೂ ರೈತರಿಗೆ ಅನ್ಯಾಯವಾಗಿದೆ’ ಎಂದರು.
‘ನವೆಂಬರ್‌ನಿಂದ ಮಾಚ್‌ರ್‍ವರೆಗೂ ಪಂಚರಾಜ್ಯ ಚುನಾವಣೆ ಫಲಿತಾಂಶ ಬರುವವರೆಗೂ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ ಮಾಡಲಿಲ್ಲ. ಆದರೆ ಚುನಾವಣೆ ಫಲಿತಾಂಶ ಬಂದ ಬಳಿಕ 8 ರು. ಹೆಚ್ಚಾಗಿದೆ. ಸಗಟು ಡೀಸೆಲ್ ದರ 25 ರು. ಹೆಚ್ಚಳ ಮಾಡಲಾಗಿದೆ. ವಾಣಿಜ್ಯ ಗ್ಯಾಸ್ ಬೆಲೆ 250 ರು. ಹೆಚ್ಚಳ ಆಗಿದೆ. ಡಾಲರ್ ಎದುರು ರುಪಾಯಿ ಬೆಲೆ ಕುಸಿಯುತ್ತಲೇ ಇದೆ. ಕೇಳಿದರೆ ಕೇಂದ್ರ ಸಚಿವರು ಯಾವುದು ನಮ್ಮ ಕೈಲಿ ಇಲ್ಲ ಎನ್ನುತ್ತಾರೆ. ಯಾಕೆ ಜನರಿಗೆ ಸುಳ್ಳು ಹೇಳುತ್ತೀರಾ ಮೋದಿಯವರೇ’ ಎಂದು ಪ್ರಶ್ನಿಸಿದರು.
‘ನಮ್ಮ ಅವಧಿಯಲ್ಲಿ ಗ್ಯಾಸ್ ಬೆಲೆ 414 ರು. ಇತ್ತು. ಆದರೆ ಈಗ 1000 ರು. ತಲುಪಿದೆ. ನಮ್ಮ ಸರ್ಕಾರ ಗ್ಯಾಸ್ ಮೇಲೆ ಶೇ.50 ಸಬ್ಸಿಡಿ ನೀಡಿತ್ತು. ಆದರೆ ಮೋದಿ 2020ರಿಂದ ಸಬ್ಸಿಡಿ ನಿಲ್ಲಿಸಿದ್ದಾರೆ. ಇದರಿಂದಾಗಿಯೇ ಎಲ್‌ಪಿಜಿ ಬೆಲೆ ಏರಿದೆ. ಅಡುಗೆ ಎಣ್ಣೆ ಬೆಲೆ ಲೀಟರ್‌ಗೆ 220 ರು., ಕಬ್ಬಿಣ ಟನ್‌ಗೆ 90 ಸಾವಿರ ರು. ಆಗಿದೆ. ಜನೌಷಧದ ಬೆಲೆಯನ್ನೂ ಶೇ.10 ರಷ್ಟುಹೆಚ್ಚಿಸಲಾಗಿದೆ. ಈ ದುಬಾರಿ ಬೆಲೆಯಲ್ಲಿ ಜನ ಬದುಕಲು ಸಾಧ್ಯವೇ?’ ಎಂದು ಕಿಡಿಕಾರಿದರು.
ಡಬಲ್ ಎಂಜಿನ್‌ನಿಂದ ಲೂಟಿ- ಡಿಕೆಶಿ:
ಡಿ.ಕೆ. ಶಿವಕುಮಾರ್ ಮಾತನಾಡಿ, ‘2014ಕ್ಕೆ ಹೋಲಿಸಿದರೆ ಅಬಕಾರಿ ಶುಲ್ಕ ಪೆಟ್ರೋಲ್ ಮೇಲೆ ಶೇ.203, ಡೀಸೆಲ್ ಮೇಲೆ ಶೇ.531ರಷ್ಟುಏರಿದೆ. ಇದರಿಂದ ಕಳೆದ 8 ವರ್ಷದಲ್ಲಿ 26 ಲಕ್ಷ ಕೋಟಿ ರು. ಸಂಗ್ರಹವಾಗಿದೆ. ಹೀಗಾಗಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ಅಂತಾರಾಷ್ಟ್ರೀಯ ತೈಲಪೇಟೆಯಲ್ಲ, ಮೋದಿ ಸರ್ಕಾರದ ದುರಾಸೆ ಕಾರಣ’ ಎಂದು ಕಿಡಿಕಾರಿದರು.
‘ಕೃಷಿ ಮೇಲೂ ತೆರಿಗೆ ವಿಧಿಸಿದ್ದಾರೆ. ರಸಗೊಬ್ಬರದ ಮೇಲೆ ಶೇ. 5ರಷ್ಟು, ಕಳೆನಾಶಕದ ಮೇಲೆ ಶೇ.18ರಷ್ಟು, ಟ್ರ್ಯಾಕ್ಟರ್ ಹಾಗೂ ಕೃಷಿ ಸಲಕರಣೆಗಳ ಮೇಲೆ ಶೇ.12ರಷ್ಟುತೆರಿಗೆ ವಿಧಿಸಲಾಗಿದೆ. ಈ ಸರ್ಕಾರವನ್ನು ಕಿತ್ತೊಗೆಯಲು ರಾಜ್ಯಾದ್ಯಂತ ಹೋರಾಟ ರೂಪಿಸಲಾಗುವುದು’ ಎಂದರು.
