ಬೆಂಗಳೂರು (ಫೆ.12):  ಬಡವರಿಗಾಗಿ ಪ್ರಧಾನಿ ನರೇಂದ್ರ ಮೋದಿ ಜಾರಿಗೊಳಿಸಿರುವ ಪ್ರಧಾನ ಮಂತ್ರಿ ಆವಾಸ್‌ ಯೋಜನೆ ಮತ್ತು ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಗಳ ಅನುಷ್ಠಾನಕ್ಕೆ ವಿಳಂಬ ಧೋರಣೆ ಅನುಸರಿಸದೆ ತ್ವರಿತವಾಗಿ ಸಾಲ ವಿತರಣೆ ಮಾಡಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಬ್ಯಾಂಕುಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಈ ಎರಡು ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಪ್ರಧಾನ ಮಂತ್ರಿ ಆವಾಸ್‌ ಯೋಜನೆಯ ಸಿಎಲ್‌ಎಲ್‌ಎಸ್‌ ಯೋಜನೆಯಡಿ ರಾಜ್ಯದಲ್ಲಿ 53,695 ಅರ್ಜಿಗಳಿಗೆ ಮಾತ್ರ ಮಂಜೂರಾತಿ ದೊರೆತಿದೆ. ಅದೇ ರೀತಿ ಪಾಲುದಾರಿಕೆಯಲ್ಲಿ ಕೈಗೆಟಕುವ ವಸತಿ ಯೋಜನೆಯಡಿ ಮಂಜೂರಾಗಿರುವ 3,46,414 ಪ್ರಕರಣಗಳ ಪೈಕಿ 1,16,168 ಪ್ರಕರಣಗಳಿಗೆ ಕಾರ್ಯಾದೇಶ ನೀಡಲಾಗಿದ್ದು, ಕೇವಲ 19,658 ಮನೆಗಳು ಮಾತ್ರ ಪೂರ್ಣಗೊಂಡಿವೆ. ಇತರ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಪ್ರಗತಿ ಕುಂಠಿತವಾಗಿದೆ. ವೈಯಕ್ತಿಕವಾಗಿ ತಮಗೆ ಸಾವಿರಾರು ದೂರುಗಳು ಬಂದಿವೆ. ನೀವು ಸರಿಯಾಗಿ ಸಾಲ ನೀಡಿಲ್ಲ ಎಂಬುದು ದಾಖಲೆಗಳಿಂದ ತಿಳಿದು ಬರುತ್ತದೆ. ಎಲ್ಲ ದಾಖಲೆ ಸರಿ ಇದ್ದರೂ ಸಾಲ ನೀಡದೇ ಇರುವುದು ಸರಿಯಲ್ಲ ಎಂದರು.

100 ಪ್ರಕರಣ ಹಾಕಿಸಿದರೂ ನಾನು ಜಗ್ಗುವುದಿಲ್ಲ, ಮೋದಿ-ಶಾ ಬೆಂಬಲ ಇರೋವರೆಗೆ ನಾನೇ ಸಿಎಂ..! .

ಯೋಜನೆಗಳ ಅನುಷ್ಠಾನಕ್ಕೆ ಬ್ಯಾಂಕರುಗಳು ಆದ್ಯತೆ ನೀಡಬೇಕು. ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು 15 ದಿನದೊಳಗೆ ಆಯಾ ಜಿಲ್ಲೆಗಳ ಲೀಡ್‌ ಬ್ಯಾಂಕುಗಳಿಗೆ ಸಲ್ಲಿಸಲಾಗುವುದು. ಜಿಲ್ಲಾ ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕರು ಅವುಗಳನ್ನು ವಿವಿಧ ಬ್ಯಾಂಕುಗಳಿಗೆ ಕಳುಹಿಸಿ ಮಂಜೂರಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕೆಂದು ಸೂಚನೆ ನೀಡಿದರು.

ಯೋಜನೆಯಡಿ ಬ್ಯಾಂಕಿನಿಂದ ನೀಡುವ ಸಾಲ ಪ್ರಕ್ರಿಯೆ ಪ್ರಾರಂಭವಾಗದಿರುವುದು ಯೋಜನೆಗೆ ಪೂರಕವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಯಡಿಯೂರಪ್ಪ, ಯೋಜನೆಯ ಯಶಸ್ವಿಗೆ ಎಲ್ಲ ಬ್ಯಾಂಕುಗಳು ಹಾಗೂ ಅನುಷ್ಠಾನ ಸಂಸ್ಥೆಗಳು ಸಂಬಂಧಪಟ್ಟಇಲಾಖೆಗಳೊಂದಿಗೆ ಸಮನ್ವಯ ಸಾಧಿಸಬೇಕು ಎಂದು ಸಲಹೆ ನೀಡಿದರು.

ಸ್ವನಿಧಿ ಶೀಘ್ರ ಮಂಜೂರಾತಿಗೆ ಸೂಚನೆ:

ಪ್ರಧಾನಮಂತ್ರಿ ಸ್ವನಿಧಿ ಯೋಜನೆಯಡಿ ಬೀದಿ ವ್ಯಾಪಾರಿಗಳಿಗೆ 10 ಸಾವಿರ ರು.ಗಳ ದುಡಿಯುವ ಬಂಡವಾಳ ಸೌಲಭ್ಯ ನೀಡಲಾಗುತ್ತದೆ. ನಿಯಮಿತ ಪಾವತಿಗೆ ಶೇ.7ರ ಬಡ್ಡಿ ದರದಂತಹ ಪ್ರೋತ್ಸಾಹಕ ಮತ್ತು ಡಿಜಿಟಲ್‌ ವಹಿವಾಟಿಗೆ ಪುರಸ್ಕಾರ ನೀಡಲಾಗುತ್ತದೆ. ಆದರೆ ಈವರೆಗೆ 2,24,368 ಅರ್ಜಿಗಳನ್ನು ಯೋಜನೆಯಡಿ ಸ್ವೀಕರಿಸಲಾಗಿದ್ದು, ಕೇವಲ 66,423 ಅರ್ಜಿಗಳಿಗೆ ಮಂಜೂರಾತಿ ದೊರೆತಿದೆ. ರಾಜ್ಯದ ಬ್ಯಾಂಕುಗಳು ಕೇವಲ ಶೇ.30ರಷ್ಟುಅರ್ಜಿಗಳನ್ನು ಮಾತ್ರ ವಿಲೇವಾರಿ ಮಾಡಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೋವಿಡ್‌ ಸಾಂಕ್ರಾಮಿಕ ರೋಗದಿಂದ ತತ್ತರಿಸಿರುವ ಬಡ ಜನರಿಗೆ ಈ ಯೋಜನೆ ಪ್ರಯೋಜನವಾಗುವುದರಿಂದ ಬಾಕಿ ಇರುವ ಎಲ್ಲ ಅರ್ಜಿಗಳನ್ನು ಬ್ಯಾಂಕುಗಳು ಅತಿ ಶೀಘ್ರವಾಗಿ ಮಂಜೂರಾತಿ ನೀಡಿ ವಿಲೇವಾರಿ ಮಾಡಬೇಕೆಂದು ಸೂಚಿಸಿದರು. ಜೊತೆಗೆ ಯೋಜನೆಯಡಿ ವಿವಿಧ ನಗರಗಳಿಗೆ ಸಾಲ ಮಂಜೂರಾದರೂ ವಿತರಣೆಯಾಗದಿರುವ ಹಿನ್ನೆಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲವಾಗುವ ವೇಳಾಪಟ್ಟಿನಿಗದಿಪಡಿಸಿ ಸಾಲ ವಿತರಿಸುವಂತೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸೂಚನೆ ನೀಡಿದರು.

ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಾ. ಸಿ.ಎನ್‌. ಅಶ್ವತ್ಥನಾರಾಯಣ, ವಸತಿ ಸಚಿವ ವಿ. ಸೋಮಣ್ಣ, ಮುಖ್ಯಕಾರ್ಯದರ್ಶಿ ಪಿ. ರವಿಕುಮಾರ್‌, ಅಪರ ಮುಖ್ಯಕಾರ್ಯದರ್ಶಿ ವಂದಿತಾ ಶರ್ಮಾ, ಕೆನರಾ ಬ್ಯಾಂಕ್‌ ಕಾರ್ಯನಿರ್ವಾಹಕ ನಿರ್ದೇಶಕ ಎ. ಮಣಿ ಮೇಖಲೈ, ಭಾರತೀಯ ರಿಸವ್‌ರ್‍ ಬ್ಯಾಂಕ್‌ ಪ್ರಾದೇಶಿಕ ನಿರ್ದೇಶಕ ಜೋಸ್‌ ಜೆ. ಕಟ್ಟೂರ್‌ ಹಾಗೂ ವಿವಿಧ ಬ್ಯಾಂಕುಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.