ಬಜೆಟ್ ಮಂಡನೆ ವೇಳೆ ಕಿವಿ ಮೇಲೆ ಹೂವಿಟ್ಟುಕೊಂಡ ಬಂದ ಕಾಂಗ್ರೆಸ್ ನಾಯಕರು!
ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಬಜೆಟ್ ಮಂಡನೆ ಆರಂಭಿಸಿದ ಬೆನ್ನಲ್ಲಿಯೇ ವಿಪಕ್ಷ ನಾಯಕ ಸಿದ್ಧರಾಮಯ್ಯ ಸೇರಿದಂತೆ ಕಾಂಗ್ರೆಸ್ ಶಾಸಕರು ಕಿವಿಗೆ ಹೂವಿಟ್ಟುಕೊಂಡು ಬಂದಿದ್ದರು. ಆದರೆ, ಇದಕ್ಕೆ ಮುಖ್ಯಮಂತ್ರಿ ಆಕ್ಷೇಪ ವ್ಯಕ್ತಪಡಿಸಿದರು.
ಬೆಂಗಳೂರು (ಫೆ.17): ಹಾಲಿ ಬಿಜೆಪಿ ಸರ್ಕಾರದ ಕೊನೆಯ ಬಜೆಟ್ ಮಂಡನೆಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ವಿಧಾನಸಭೆಗೆ ಆಗಮಿಸಿದ ಬೆನ್ನಲ್ಲಿಯೇ ವಿಪಕ್ಷ ಕಾಂಗ್ರೆಸ್‌ನಿಂದ ವಿರೋಧ ವ್ಯಕ್ತವಾಯಿತು. ಸಿಎಂ ಬೊಮ್ಮಾಯಿ ಬಜೆಟ್ ಭಾಷಣ ಆರಂಭಿಸಿದ ಬೆನ್ನಲ್ಲಿಯೇ ವಿಪಕ್ಷ ನಾಯಕ ಸಿದ್ಧರಾಮಯ್ಯ ಹಾಗೂ ಕಾಂಗ್ರೆಸ್ ಶಾಸಕರುಸ ಕಿವಿ ಮೇಲೆ ಚೆಂಡು ಹೂ ಇರಿಸಿಕೊಂಡರು.ಸದನದಲ್ಲಿ ವಿಪಕ್ಷ ಸದಸ್ಯರು ಕಿವಿ ಮೇಲೆ ಹೂ ಇರಿಸಿಕೊಂಡಿರುವ ವಿಷಯಕ್ಕೆ ಆರಂಭದಲ್ಲಿ ಗದ್ದಲ ಏರ್ಪಟ್ಟಿತ್ತು. ಇದಕ್ಕೆ ಬಜೆಟ್ ಮಂಡನೆ ವೇಳೆ ಸಿಎಂ ಟಾಂಗ್ ಕೂಡ ನೀಡಿದರು. ಕಾಂಗ್ರೆಸ್‌ನವರು ಯಾವುದೇ ಕಾರಣಕ್ಕೂ ಕಿವಿ ಮೇಲೆ ಹೂವಿಟ್ಟುಕೊಳ್ಳುವುದು ಬೇಡ. ಅವರೇ ಹೂವಿಕಟ್ಟುಕೊಳ್ಳುತ್ತೇವೆ ಎಂದರೆ ನಾನು ಬೇಡ ಅನ್ನೋದಿಲ್ಲ. ಇಷ್ಟು ದಿನ ಅವರು ಜನರ ಕಿವಿ ಮೇಲೆ ಹೂವಿಡುತ್ತಲೇ ಬಂದಿದ್ದರು. ಈ ಜನರೇ ಈಗ ಕಾಂಗ್ರೆಸ್ ಮೇಲೆ ಹೂವಿಡುತ್ತಿದ್ದಾರೆ. ಮುಂದೆ ಅವರು ಹೂವು ಇಡೋದು ಬೇಡ, ನಾವೇ ಇಟ್ಕೋತೀವಿ ಅಂತಿದ್ದಾರೆ.. ಸಂತೋಷ ಹಾಗೇ ಆಗಲಿ ಎಂದರು. ಸಿಎಂ ಬೊಮ್ಮಾಯಿ ಅವರ ಈ ಮಾತಿಗೆ ಸಿದ್ಧರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದರು.
ಬಜೆಟ್ ಮಂಡನೆಯಾಗುವ ಮುನ್ನವೇ ಇದರ ಬಗ್ಗೆ ಸಿದ್ಧರಾಯ್ಯ ಆಕ್ಷೇಪ ವ್ಯಕ್ತಪಡಿಸಿದರು. ಸರ್ಕಾರ ನೀಡಿದ 600 ಭರವಸೆಗಳ ಪೈಕಿ 50 ಭರವಸೆಗಳನ್ನೂ ಈಡೇರಿಸಲು ಆಗಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ಈ ವಿಚಾರವಾಗಿ ಸದನದಲ್ಲಿ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ನಡುವೆ ಮಾತಿನ ಚಕಮಕಿ ನಡೆಯಿತು. ಕಿವಿ ಮೇಲೆ ಹೂವಿಟ್ಟುಕೊಂಡು ಕುಳಿತುಕೊಂಡ ಕಾಂಗ್ರೆಸ್ ಶಾಸಕರು, ಸಿಎಂ ಬೊಮ್ಮಾಯಿ ಕಿವಿ ಮೇಲೆ ಹೂ ಮುಡಿಸುತ್ತಿದ್ದಾರೆಂದು ಟಾಂಗ್ ನೀಡಿದ್ದರು.