ಬೆಂಗಳೂರು, (ಮಾ.08): ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಇಂದು (ಸೋಮವಾರ) ಮಂಡಿಸಿರುವ ಕರ್ನಾಟಕ ಬಜೆಟ್ 2021ರಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹಲವು ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ.

ಜಿಲ್ಲಾ ಕೇಂದ್ರಗಳಲ್ಲಿ 50 ಮೆಟ್ರಿಕ್ ನಂತರದ ಹಾಸ್ಟೆಲ್ ಗಳ ಸ್ಥಾಪನೆ ಮಾಡುವುದಾಗಿ ಹೇಳಿರುವ ಯಡಿಯೂರಪ್ಪ, ಇದಕ್ಕಾಗಿ 50 ಕೋಟಿ ರೂಪಾಯಿ ವ್ಯಯಿಸಲಾಗುವುದು, ಇದರಿಂದ 5 ಸಾವಿರ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದಿದ್ದಾರೆ.

ಕರ್ನಾಟಕ ಬಜೆಟ್‌ನ ಸಂಪೂರ್ಣ ಮಾಹಿತಿ

ಸರ್ಕಾರಿ ಶಾಲೆಗಳ ಪೀಠೋಪಕರಣಕ್ಕೆ 50 ಕೋಟಿ ರೂಪಾಯಿ ಮೀಸಲು, ಸ್ಮಾರ್ಟ್ ಕ್ಲಾಸ್ ರೂಂಗಳಿಗಾಗಿ 50 ಕೋಟಿ ರೂ.ಅನುದಾನ ನೀಡಲಾಗುವುದು ಎಂದು ಘೋಷಿಸಿದ್ದಾರೆ. ನುರಿತ ಮಾನವ ಸಂಪನ್ಮೂಲ ಅಭಿವೃದ್ದಿಗೆ ಹಬ್ ಮತ್ತು ಸ್ಪೋಕ್ ಮಾದರಿಯಲ್ಲಿ 150 ಸರ್ಕಾರಿ ತರಬೇತಿ ಸಂಸ್ಥೆಗಳಿಗೆ 4 ಸಾವಿರದ 636 ಕೋಟಿ ಅನುದಾನ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಇದರಲ್ಲಿ 4080 ಕೋಟಿ ರೂಪಾಯಿಗಳನ್ನು ಟಾಟಾ ಟೆಕ್ನಾಲಜಿಸ್ ಲಿಮಿಟೆಡ್ ಭರಿಸಲಿದೆ. ಶಿಕ್ಷಕರ ತರಬೇತಿ ಕೇಂದ್ರಕ್ಕೆ 18 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಕಟ್ಟಡ ನಿರ್ಮಾಣ ಕಾರ್ಮಿಕರ ಮಕ್ಕಳಿಗಾಗಿ 100 ಕಿತ್ತೂರು ರಾಣಿ ಶಿಶುಪಾಲನಾ ಕೇಂದ್ರ, ಕೃಷಿ ವಿವಿಯಲ್ಲಿ ರೈತರ ಮಕ್ಕಳಿಗೆ ಶೇ.40-50 ರಷ್ಟು ಮೀಸಲಾತಿ, ಶಿವಮೊಗ್ಗದ ಆಯುರ್ವೇದ ಕಾಲೇಜು ಆಯುಷ್ ವಿವಿಯಾಗಿ ಮೇಲ್ದರ್ಜೆಗೇರಿಸಲಾಗುತ್ತದೆ.

 ರಾಜ್ಯದ 4 ವಿಭಾಗಗಳಲ್ಲಿ ಮುರಾರ್ಜಿ ವಸತಿ ಶಾಲೆ ಆರಂಭಿಸಲಾಗುವುದು, ಪರಿಶಿಷ್ಟ ಪಂಗಡದ ಆಶ್ರಮದ ಶಾಲೆಗಳಿಗೆ ವಾಲ್ಮೀಕಿ ಶಾಲೆಗಳೆಂದು ಮರು ನಾಮಕರಣ ಮಾಡಲಾಗುವುದು. ರಾಜ್ಯದ 400 ಸರ್ಕಾರಿ ಉರ್ದು ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಬೋಧನೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಬಜೆಟ್‌ನಲ್ಲಿ ಘೋಷಣೆ ಮಾಡಿದರು.