ಬೆಂಗಳೂರು(ಮಾ.09): ಆರ್ಥಿಕ ಮುಗ್ಗಟ್ಟಿನಿಂದ ನೆನೆಗುದಿಗೆ ಬಿದ್ದಿದ್ದ 65 ಕಿ.ಮೀ. ಉದ್ದದ .21 ಸಾವಿರ ಕೋಟಿ ಮೊತ್ತದ ಪೆರಿಫೆರಲ್‌ ರಿಂಗ್‌ ರಸ್ತೆ ಯೋಜನೆಯನ್ನು ಕೈಗೆತ್ತಿಕೊಳ್ಳುವುದಾಗಿ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಯೋಜನೆಯ ಶೀಘ್ರ ಅನುಷ್ಠಾನಕ್ಕೆ ಸ್ವಿಸ್‌ ಚಾಲೆಂಚ್‌ ಮಾದರಿ ಟೆಂಡರ್‌ ಪ್ರಕ್ರಿಯೆ ನಡೆಸುವುದಾಗಿಯೂ ಪ್ರಕಟಿಸಿದೆ.

ಇದರೊಂದಿಗೆ ದೇವನಹಳ್ಳಿ, ಹೊಸಕೋಟೆ, ಬಿಡದಿ, ದೊಡ್ಡಬಳ್ಳಾಪುರ ಸೇರಿದಂತೆ ಬೆಂಗಳೂರು ಸುತ್ತಮುತ್ತಲ ಉಪನಗರಗಳಿಗೆ ಸಂಪರ್ಕ ಕಲ್ಪಿಸುವ ಮೂಲಕ ನಗರದ ಹೃದಯಭಾಗದ ಸಂಚಾರ ದಟ್ಟಣೆ ಇಳಿಸುವ ಯೋಜನೆಗೆ ಮರು ಜೀವ ದೊರೆತಂತಾಗಿದೆ.

2006ರಲ್ಲಿ ಪ್ರಾರಂಭಗೊಂಡ ಈ ಯೋಜನೆಗೆ ಭೂ ಸ್ವಾಧೀನ ಪ್ರಕ್ರಿಯೆ ಪ್ರಾರಂಭಗೊಂಡು ನ್ಯಾಯಾಲಯದ ದಾವೆ ಹಾಗೂ ಭೂ ಸ್ವಾಧಿನಕ್ಕೆ ಆರ್ಥಿಕ ಮುಗ್ಗಟ್ಟು ಎದುರಾಗಿದ್ದರಿಂದ ನೆನೆಗುದಿಗೆ ಬಿದ್ದಿತ್ತು. ಇದೀಗ ಯೋಜನೆ ಕೈಗೆತ್ತಿಕೊಳ್ಳಲು ಮುಂದಾಗಿರುವ ಸರ್ಕಾರ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಸ್ವಿಸ್‌ ಚಾಲೆಂಜ್‌ ಅಳವಡಿಸಿ ಟೆಂಡರ್‌ ಕರೆದು ಯೋಜನೆ ಪ್ರಾರಂಭಿಸುವುದಾಗಿ ಪ್ರಕಟಿಸಿದೆ.

ಸ್ವಿಸ್‌ ಚಾಲೆಂಜ್‌ ಜತೆಗೆ ಪೆರಿಫೆರಲ್‌ ರಿಂಗ್‌ ರಸ್ತೆಯನ್ನು ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಲಾಗುತ್ತದೆ. ಹೀಗೆ ರಸ್ತೆ ನಿರ್ಮಿಸುವ ಸಂಸ್ಥೆಗೆ ಟೋಲ್‌ ಸಂಗ್ರಹಕ್ಕೆ ಅವಕಾಶ ನೀಡಲಾಗುತ್ತದೆ. ಅದಕ್ಕಾಗಿ 17 ಕಡೆ ಟೋಲ್‌ ಜಂಕ್ಷನ್‌ಗಳು ಬರಲಿದ್ದು, ಅಲ್ಲಿ ಶುಲ್ಕ ಸಂಗ್ರಹ ಮತ್ತು ರಸ್ತೆ ನಿರ್ವಹಣೆಯನ್ನು ಗುತ್ತಿಗೆ ಸಂಸ್ಥೆಯೇ ಮಾಡಬೇಕಿದೆ. ಒಟ್ಟಾರೆ 1,989 ಎಕರೆ ಭೂ-ಸ್ವಾಧೀನ ಮಾಡಿಕೊಳ್ಳಬೇಕಾಗಿದ್ದು, ಯೋಜನಾ ವೆಚ್ಚದಲ್ಲಿ .5,616 ಕೋಟಿ ಅದಕ್ಕೆ ವ್ಯಯಿಸಲಾಗುತ್ತದೆ. ಒಟ್ಟಾರೆ ಯೋಜನೆಗಾಗಿ .21 ಸಾವಿರ ಕೋಟಿ ಅವಶ್ಯಕತೆಯಿದೆ. ಒಟ್ಟು 6 ಪಥದ ರಸ್ತೆ ನಿರ್ಮಿಸಲಾಗುತ್ತದೆ.

ಸ್ವಿಸ್‌ ಚಾಲೆಂಜ್‌ ಟೆಂಡರ್‌ ಎಂದರೇನು?

ಸ್ವಿಸ್‌ ಚಾಲೆಂಜ್‌ ಟೆಂಡರ್‌ ಪ್ರಕಾರ ಸಂಸ್ಥೆಯೊಂದು ಟೆಂಡರ್‌ನಲ್ಲಿ ಬಿಡ್‌ ಮಾಡಿ ಗುತ್ತಿಗೆ ಪಡೆಯಲು ಅರ್ಹತೆ ಹೊಂದಿದ ಬಳಿಕ ಅದರ ಕಾರ್ಯವಿಧಾನವನ್ನು ಸಂಬಂಧಪಟ್ಟಆನ್‌ಲೈನ್‌ ಪ್ಲಾಟ್‌ಫಾರಂನಲ್ಲಿ ಅಪ್‌ಲೋಡ್‌ ಮಾಡಲಾಗುತ್ತದೆ. ಅದನ್ನು ವೀಕ್ಷಿಸಿ ಟೆಂಡರ್‌ನಲ್ಲಿ ಭಾಗವಹಿಸದ ಬೇರೊಂದು ಸಂಸ್ಥೆ ಕೂಡ ಗುತ್ತಿಗೆ ಪಡೆದ ಸಂಸ್ಥೆಗಿಂತ ಉತ್ತಮ ಬಿಡ್‌ ಮೊತ್ತ ಹಾಗೂ ಯೋಜನೆ ಅನುಷ್ಠಾನದ ಬಗೆಗಿನ ವಿನೂತನ ಮಾದರಿ ಕುರಿತು ಪ್ರಸ್ತಾವನೆ ಸಲ್ಲಿಸಬಹುದು. ಆ ಪ್ರಸ್ತಾವನೆಯ ಅಂಶಗಳನ್ನು ಮೊದಲು ಆಯ್ಕೆಯಾದ ಗುತ್ತಿಗೆ ಸಂಸ್ಥೆಗೆ ವಿವರಿಸಿ ಅದನ್ನು ಪಾಲಿಸುವಂತೆ ತಿಳಿಸಲಾಗುತ್ತದೆ. ಒಂದು ವೇಳೆ ಮೊದಲು ಆಯ್ಕೆಯಾದ ಗುತ್ತಿಗೆ ಸಂಸ್ಥೆ ಅದಕ್ಕೊಪ್ಪದಿದ್ದರೆ, ಟೆಂಡರ್‌ನಲ್ಲಿ ಭಾಗವಹಿಸದೆ ಪ್ರಸ್ತಾವನೆ ಸಲ್ಲಿಸಿದ ಸಂಸ್ಥೆಗೆ ಗುತ್ತಿಗೆ ನೀಡಬಹುದಾಗಿದೆ ಎಂದು ಹೇಳಲಾಗಿದೆ.

ಪಿಆರ್‌ಆರ್‌ ಯೋಜನೆ ವಿವರ

*.21 ಸಾವಿರ ಕೋಟಿ: ಯೋಜನೆ ಮೊತ್ತ ಒಟ್ಟು ಮೊತ್ತ

*1,989 ಎಕರೆ: ಯೋಜನೆಗಾಗಿ ಭೂಮಿ ಸ್ವಾಧೀನ

*.5,616 ಕೋಟಿ: ಭೂಸ್ವಾಧೀನಕ್ಕಾಗಿಯೇ ವೆಚ್ಚದ ಅಂದಾಜು

*100 ಮೀ.: 6 ಪಥದ ರಸ್ತೆ ನಿರ್ಮಾಣವಾಗಲಿದ್ದು, ರಸ್ತೆ ಅಗಲ.

*17: ಒಟ್ಟು ಟೋಲ್‌ ಜಂಕ್ಷನ್‌ಗಳು