ದಕ್ಷಿಣ ಭಾರತದಲ್ಲಿ ಜನಪ್ರಿಯ ಪಾನೀಯ ಬ್ರ್ಯಾಂಡ್ ಬಿಂದು ಜೀರಾ ಉತ್ತರ ಭಾರತ ಸೇರಿದಂತೆ ದೇಶಾದ್ಯಂತ ತನ್ನ ಮಾರುಕಟ್ಟೆಯನ್ನು ವಿಸ್ತರಿಸಲು ಯೋಜಿಸಿದೆ. ಮುಂದಿನ ಮೂರು ವರ್ಷಗಳಲ್ಲಿ 11,000 ಕೋಟಿ ಆದಾಯದ ಗುರಿಯನ್ನು ಹೊಂದಿದೆ.

ಬೆಂಗಳೂರು (ಜು.1): ಕರ್ನಾಟಕ ಹಾಲು ಒಕ್ಕೂಟದ ಬ್ರ್ಯಾಂಡ್ ನಂದಿನಿ ಉತ್ತರ ಭಾರತದ ಮಾರುಕಟ್ಟೆಗೆ ಪ್ರವೇಶಿಸಿದ ನಂತರ, ಕರ್ನಾಟಕದ ಕೆಲವು ಬ್ರ್ಯಾಂಡ್‌ಗಳು ಪ್ರಾದೇಶಿಕ ಆದ್ಯತೆಗಳನ್ನು ಬಳಸಿಕೊಳ್ಳುವ ಮೂಲಕ ರಾಷ್ಟ್ರಮಟ್ಟದಲ್ಲಿ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸಲು ಸಜ್ಜಾಗಿದೆ. ದಕ್ಷಿಣ ಭಾರತದಲ್ಲಿ ಪ್ರಬಲವಾಗಿರುವ ಕಾರ್ಬೊನೇಟೆಡ್ ಸೋಡಾ ಬ್ರಾಂಡ್ ಬಿಂದು ಜೀರಾ ಈಗ ರಾಷ್ಟ್ರವ್ಯಾಪಿ ತನ್ನ ಮಾರುಕಟ್ಟೆಯಲ್ಲಿ ವಿಸ್ತರಣೆ ಮಾಡುವ ಆಲೋಚನೆಯಲ್ಲಿದೆ.

ದೇಶೀಯ ಸಾರದ ಮತ್ತು ಪ್ರಾದೇಶಿಕ ಪಾನೀಯಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಬಳಸಿಕೊಳ್ಳಲು ಕಂಪನಿಯು FY26 ರ ಅಂತ್ಯದ ವೇಳೆಗೆ ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ಪಂಜಾಬ್ ಮತ್ತು ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಬಿಂದು ಜೀರಾ ವಿಸ್ತರಣೆ ಮಾಡುವ ಯೋಚನೆಯಲ್ಲಿದೆ.

ಪ್ರಸ್ತುತ 4560 ಕೋಟಿ ಆದಾಯ ಹೊಂದಿರುವ ಬಿಂದು ಮುಂದಿನ ಮೂರು ವರ್ಷಗಳಲ್ಲಿ 11,000 ಕೋಟಿ ಆದಾಯವನ್ನು ಗುರಿಯಾಗಿಸಿಕೊಂಡಿದೆ. ದೇಶೀಯ ಸಾರದ ಪಾನೀಯಗಳ ವಿಭಾಗದಲ್ಲಿ ಹೆಚ್ಚುತ್ತಿರುವ ಆಸಕ್ತಿಯ ಮಧ್ಯೆ ಬಿಂದು ಜೀರಾ ಈ ಘೋಷಣೆ ಮಾಡಿದೆ. ಇದು ಈಗ ಭಾರತದ 1 ಲಕ್ಷದ 67 ಸಾವಿರ ಕೋಟಿ ಆಲೋಹಾಲ್‌ ಅಲ್ಲದ ಪಾನೀಯ ಮಾರುಕಟ್ಟೆಯಲ್ಲಿ 8-10 ಪ್ರತಿಶತವನ್ನು ಹೊಂದಿದೆ.

"ದಕ್ಷಿಣದಲ್ಲಿ ನಮ್ಮ ಮಾರುಕಟ್ಟೆಯನ್ನು ಕ್ರೋಢೀಕರಿಸಿದ ನಂತರ, ನಾವು ನಮ್ಮ ಆರಂಭಿಕ ವಿಸ್ತರಣಾ ಪ್ರಯತ್ನಗಳನ್ನು ಪ್ರಾರಂಭಿಸಿದ್ದೇವೆ" ಎಂದು ಬಿಂದು ಮತ್ತು ಪ್ರವೀಣ್ ಕ್ಯಾಪಿಟಲ್ ಎರಡನ್ನೂ ಹೊಂದಿರುವ ಎಸ್‌ಜಿ ಗ್ರೂಪ್ ಆಫ್ ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕ ಸತ್ಯಶಂಕರ್ ಹೇಳಿದರು. "ಮುಂದಿನ 2-3 ವರ್ಷಗಳಲ್ಲಿ, ನಾವು ಈ ಹೆಚ್ಚುವರಿ ರಾಜ್ಯಗಳನ್ನು ಒಳಗೊಳ್ಳುವ ಗುರಿಯನ್ನು ಹೊಂದಿದ್ದೇವೆ" ಎಂದಿದ್ದಾರೆ.

ಬಿಂದುವಿನ ಜಾಲವು 5,000 ಕ್ಕೂ ಹೆಚ್ಚು ವಿತರಕರನ್ನು ಮತ್ತು 2 ಲಕ್ಷ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಉಪಸ್ಥಿತಿಯನ್ನು ಹೊಂದಿದೆ. ವಿಸ್ತರಣೆ ನಡೆಯುತ್ತಿರುವುದರಿಂದ, ಕಂಪನಿಯು ಮುಂದಿನ ಎರಡು ವರ್ಷಗಳಲ್ಲಿ 5 ಲಕ್ಷ ಚಿಲ್ಲರೆ ಮಾರಾಟ ಮಳಿಗೆಗಳನ್ನು ತಲುಪುವ ಯೋಜನೆಗಳನ್ನು ಹೊಂದಿದೆ.

ಕಂಪನಿಯು ತನ್ನ ಆದಾಯದ 75-80 ಪ್ರತಿಶತವನ್ನು ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣದಿಂದ ಪಡೆಯುತ್ತಿದ್ದರೂ, ತಮಿಳುನಾಡು ಮತ್ತು ಕೇರಳದಿಂದ ಅದರ ಪಾಲು ಪ್ರಸ್ತುತ 5 ಪ್ರತಿಶತಕ್ಕಿಂತ ಕಡಿಮೆಯಿದೆ. ಆದರೆ, ಇ-ಕಾಮರ್ಸ್ ಮತ್ತು ನೇರ ವಿತರಣೆಯ ಮೂಲಕ ಈ ರಾಜ್ಯಗಳಲ್ಲಿ ತನ್ನ ಹೆಜ್ಜೆಗುರುತನ್ನು ಬೆಳೆಸಲು ಸಕ್ರಿಯವಾಗಿ ಕೆಲಸ ಮಾಡುತ್ತಿದೆ ಎಂದು ಹೌಸ್‌ ಆಫ್‌ ಬಿಂದುವಿನ ಕಾರ್ಯತಂತ್ರ ಮತ್ತು ಮಾರುಕಟ್ಟೆ ನಿರ್ದೇಶಕಿ ಮೇಘಾ ಶಂಕರ್ ಹೇಳಿದ್ದಾರೆ.

ತಮಿಳುನಾಡು ಮತ್ತು ಕೇರಳದಲ್ಲಿ ತನ್ನ ಅಸ್ತಿತ್ವವನ್ನು ನಿರ್ಮಿಸಲು ಕಂಪನಿಯು ಕ್ವಿಕ್‌ ಕಾಮರ್ಸ್‌ ವೇದಿಕೆಗಳನ್ನೂ ಕೂಡ ಬಳಸಿಕೊಳ್ಳುತ್ತಿದೆ. "ಬ್ಲಿಂಕಿಟ್, ಇನ್‌ಸ್ಟಾಮಾರ್ಟ್ ಮತ್ತು ಜೆಪ್ಟೊದಂತಹ ಇ-ಕಾಮರ್ಸ್ ಚಾನೆಲ್‌ಗಳಲ್ಲಿ ನಾವು ಆಕ್ರಮಣಕಾರಿಯಾಗಿ ಕೆಲಸ ಮಾಡುತ್ತಿದ್ದೇವೆ. ನಾವು ಈಗಾಗಲೇ ಬೆಂಗಳೂರು, ಮುಂಬೈ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ವ್ಯಾಪಾರ ಮಾಡುತ್ತಿದ್ದೇವೆ, ಏಕೆಂದರೆ ಅದು ಹೊಸ ಮಾರುಕಟ್ಟೆಗಳನ್ನು ಪ್ರವೇಶಿಸಲು ಸ್ವಲ್ಪ ಸುಲಭವಾದ ಮಾರ್ಗವಾಗಿದೆ" ಎಂದು ಮೇಘಾ ಹೇಳಿದರು. ಇ-ಕಾಮರ್ಸ್ ಪ್ರಸ್ತುತ ಕಂಪನಿಯ ಒಟ್ಟಾರೆ ಮಾರಾಟಕ್ಕೆ ಶೇಕಡಾ 10-12 ರಷ್ಟು ಕೊಡುಗೆ ನೀಡುತ್ತದೆ.

ರಾಷ್ಟ್ರೀಯ ಮಾರುಕಟ್ಟೆಯು 5-6 ಉತ್ಪನ್ನಗಳ ಬಿಡುಗಡೆಯೊಂದಿಗೆ ಪ್ರಾರಂಭವಾಗುತ್ತದೆ, ಆರಂಭದಲ್ಲಿ ಜೀರಾ ಆಧಾರಿತ ಪಾನೀಯಗಳ ಮೇಲೆ ಕೇಂದ್ರೀಕರಿಸುತ್ತದೆ, ನಂತರ ಪ್ರಾದೇಶಿಕ ನೆಚ್ಚಿನವುಗಳಾದ ಶುಂಠಿ, ಕೋಕಮ್, ಮಾವು, ಲಿಚಿ ಮತ್ತು ಪೇರಲವನ್ನು ಸೇರಿಸಲಾಗುತ್ತದೆ.

ಉತ್ತರ ಮತ್ತು ಪಶ್ಚಿಮದಾದ್ಯಂತ ಪೂರೈಕೆ ಮತ್ತು ವಿತರಣೆಯನ್ನು ಹೆಚ್ಚಿಸಲು, ಬಿಂದು ಹರಿದ್ವಾರದಲ್ಲಿ ಕೋ-ಪ್ಯಾಕಿಂಗ್ ಸೌಲಭ್ಯವನ್ನು ಸ್ಥಾಪಿಸಿದೆ ಮತ್ತು ಉತ್ತರ ಪ್ರದೇಶ, ದೆಹಲಿ, ಹರಿಯಾಣ, ಪಂಜಾಬ್, ಮಧ್ಯಪ್ರದೇಶ, ಗುಜರಾತ್, ರಾಜಸ್ಥಾನ ಮತ್ತು ಉತ್ತರ, ಪಶ್ಚಿಮ ಮತ್ತು ಈಶಾನ್ಯ ಭಾರತದ ಇತರ ಭಾಗಗಳಿಗೆ ಸೇಲ್ಸ್‌ ಟೀಮ್‌ಗಳನ್ನೂ ಸಹ ನಿರ್ಮಿಸುತ್ತಿದೆ.