ಡಿಜಿಟಲ್ ಬ್ಯಾಂಕ್‌ನತ್ತ ಕರ್ಣಾಟಕ ಬ್ಯಾಂಕ್ ಹೆಜ್ಜೆ
* ‘ಕೆಬಿಎಲ್ ನೆಕ್ಸ್ಟ್’ ಪರಿಕಲ್ಪನೆಯಲ್ಲಿ ಸಂಪೂರ್ಣ ಡಿಜಿಟಲೀಕರಣ
* ಶೇರುದಾರರಿಗೆ ಶೇ.18ರ ಡಿವಿಡೆಂಡ್‌ನ್ನು ನೀಡಲು ತೀರ್ಮಾನ
* ‘ಭವಿಷ್ಯದ ಡಿಜಿಟಲ್ ಬ್ಯಾಂಕ್’ ಆಗಿ ಹೊರಹೊಮ್ಮಲಿರುವ ಕರ್ಣಾಟಕ ಬ್ಯಾಂಕ್
ಮಂಗಳೂರು(ಸೆ.03): ಕರ್ಣಾಟಕ ಬ್ಯಾಂಕ್ ‘ಭವಿಷ್ಯದ ಡಿಜಿಟಲ್ ಬ್ಯಾಂಕ್’ ಆಗುವತ್ತ ಹೆಜ್ಜೆ ಇಡುತ್ತಿದೆ ಎಂದು ಕರ್ಣಾಟಕ ಬ್ಯಾಂಕಿನ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಸಿಇಒ ಮಹಾಬಲೇಶ್ವರ ಎಂ.ಎಸ್. ಅವರು ತಿಳಿಸಿದ್ದಾರೆ.
ಆನ್‌ಲೈನ್ ಮೂಲಕ ನಡೆದ ಕರ್ಣಾಟಕ ಬ್ಯಾಂಕಿನ 97ನೇ ವಾರ್ಷಿಕ ಮಹಾಸಭೆಯಲ್ಲಿ ಬ್ಯಾಂಕಿನ ಶೇರುದಾರರನ್ನು ಉದ್ದೇಶಿಸಿ ಅವರು ಮಾತನಾಡಿದರು.
‘ಕೆಬಿಎಲ್ ವಿಕಾಸ್’ ಎನ್ನುವ ಪರಿವರ್ತನಾ ಜೈತ್ರಯಾತ್ರೆಯ ಮೂಲಕ ಬ್ಯಾಂಕಿನ ತಂತ್ರಜ್ಞಾನದಲ್ಲಿ ಅನೇಕ ಬದಲಾವಣೆ ತರಲಾಗಿದೆ. ‘ಕೆಬಿಎಲ್ ವಿಕಾಸ್’ ಇದರ ಯಶಸ್ಸಿನ ಹಾದಿಯಲ್ಲಿ ವಿಕಸನಗೊಂಡ ‘ಕೆಬಿಎಲ್ ನೆಕ್ಸ್ಟ್’ ಎನ್ನುವ ಪರಿಕಲ್ಪನೆಯಲ್ಲಿ ಸಂಪೂರ್ಣ ಬ್ಯಾಂಕಿಂಗ್ ವ್ಯವಹಾರವನ್ನು ಡಿಜಿಟಲ್ ತಂತ್ರಜ್ಞಾನದ ಮೂಲಕವೇ ನಡೆಸುವತ್ತ ಮುಂದುವರಿಯುತ್ತಿದ್ದೇವೆ. ಈ ಉಪಕ್ರಮಗಳಿಂದಾಗಿ ಕರ್ಣಾಟಕ ಬ್ಯಾಂಕ್ ‘ಭವಿಷ್ಯದ ಡಿಜಿಟಲ್ ಬ್ಯಾಂಕ್’ ಆಗಿ ಹೊರಹೊಮ್ಮಲಿದೆ.
ಕರ್ಣಾಟಕ ಬ್ಯಾಂಕ್‌ಗೆ ಪ್ರಥಮ ತ್ರೈಮಾಸಿಕದಲ್ಲಿ 106.08 ಕೋಟಿ ರು. ಲಾಭ
ಶತಮಾನೋತ್ಸವ ವರ್ಷ: 2023-24 ಬ್ಯಾಂಕಿನ ಶತಮಾನೋತ್ಸವದ ವರ್ಷವಾಗಿದ್ದು, ಈ ಸಂಭ್ರಮವನ್ನಾಚರಿಸಲು ಅಗತ್ಯವುಳ್ಳ ಎಲ್ಲ ರೀತಿಯ ಪೂರ್ವ ತಯಾರಿ ಮಾಡಲಾಗುತ್ತಿದೆ. ಮಾತ್ರವಲ್ಲ ಹೊಸ ಮತ್ತು ದೀರ್ಘಾವಧಿಯ ಉಪಕ್ರಮಗಳ ಮೂಲಕ ಬ್ಯಾಂಕಿನ ಎರಡನೇ ಶತಮಾನಕ್ಕೆ ಬಲವಾದ ಅಡಿಪಾಯವನ್ನು ಹಾಕಲಿದ್ದೇವೆ. ಅಂತೆಯೇ ಇಂದಿನ ಶೇರುದಾರರ ಮಹಾಸಭೆಯಲ್ಲಿ ಶೇರುದಾರರಿಗೆ ಶೇ.18ರ ಡಿವಿಡೆಂಡ್‌ನ್ನು ನೀಡಲು ತೀರ್ಮಾನಿಸಿದೆ ಎಂದು ಅವರು ಹೇಳಿದರು.
ಆನ್‌ಲೈನ್ ಮೂಲಕ ನಡೆದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ಬ್ಯಾಂಕಿನ ಅಧ್ಯಕ್ಷ ಪಿ.ಜಯರಾಮ್ ಭಟ್ ವಹಿಸಿದ್ದರು. ಈ ಸಭೆಯಲ್ಲಿ ಬ್ಯಾಂಕಿನ ಎಲ್ಲ ನಿರ್ದೇಶಕರು, ಹಿರಿಯ ಅಧಿಕಾರಿಗಳು ಹಾಗೂ ಶೇರುದಾರರು ಭಾಗವಹಿಸಿದ್ದರು.