ಮಂಗಳೂರು [ಮಾ.13] : ದೇಶ ವಿದೇಶಗಳಲ್ಲಿ ತಪ್ಪದೆ ಪಾಲಿಸಿಕೊಂಡು ಬಂದಿರುವ ‘ಬಂಡವಾಳ ಪರ್ಯಾಪ್ತತಾ ಅನುಪಾತ’ವೇ (ಸಿಆರ್‌ಎಆರ್) ಬ್ಯಾಂಕ್‌ಗಳ ಸುರಕ್ಷತೆಯ ಮಾನದಂಡವಾಗಿದೆಯೇ ಹೊರತು ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿ ದಾಡುತ್ತಿರುವ ಅರ್ಥ ವಿಲ್ಲದ ‘ಎಂ- ಕ್ಯಾಪ್ ಅನುಪಾತ’ ಅಲ್ಲ ಎಂದು ಕರ್ಣಾಟಕ ಬ್ಯಾಂಕ್‌ನ ಆಡಳಿತ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್. ಸ್ಪಷ್ಟಪಡಿಸಿದ್ದಾರೆ.

ವಿದೇಶಗಳಲ್ಲಿ ‘ಬಂಡವಾಳ ಪರ್ಯಾಪ್ತತಾ ಅನುಪಾತ’ಕ್ಕೆ ಬ್ಯಾಂಕಿನ ಮುಂಗಡ, ಹೂಡಿಕೆ ಇತ್ಯಾದಿಗಳ ಸುರಕ್ಷತೆಯ ಆಧಾರದ ಮೇಲೆ ಕನಿಷ್ಠ ಶೇ. 8 ರ ಮಾನದಂಡವನ್ನು ಪಾಲಿಸುತ್ತಿದ್ದರೆ, ಭಾರತದಲ್ಲಿ ಕನಿಷ್ಠ ಶೇ. 9 ರ ಅನುಪಾತವನ್ನು ಭಾರತೀಯ ರಿಸರ್ವ್ ಬ್ಯಾಂಕ್ ನಿಗದಿಪಡಿಸಿದೆ. ಆದರೆ ನಮ್ಮ ಕರ್ನಾಟಕ ಬ್ಯಾಂಕ್‌ನಲ್ಲಿ ನಾವು ಭಾರತೀಯ ರಿಸರ್ವ್ ಬ್ಯಾಂಕ್ ನಿಗದಿ ಪಡಿಸಿದ ಕನಿಷ್ಠ ಶೇ. 9ರ ಅನುಪಾತಕ್ಕೆ ಇನ್ನೂ ಶೇ. 1 ನ್ನು ಹೆಚ್ಚಾಗಿಯೇ ಸದಾ ಕಾಲ ಕಾಪಾಡಿಕೊಂಡು ಬಂದಿದೆ. 2019 ರ ಮಾ.31 ರ ವರ್ಷಾಂತ್ಯಕ್ಕೆ ಇದು ಅತ್ಯುತ್ತಮ ಅಂದರೆ ಶೇ. 13.17ರ ಅನುಪಾತದಲ್ಲಿದ್ದು ಈ ರೀತಿಯ ಉತ್ತಮ ಅನುಪಾತವಿರುವ ಕೆಲವೇ  ಕೆಲವು ಬ್ಯಾಂಕ್‌ಗಳಲ್ಲಿ ಕರ್ಣಾಟಕ ಬ್ಯಾಂಕ್ ಕೂಡಾ ಒಂದು ಎಂದು ಅವರು ತಿಳಿಸಿದ್ದಾರೆ. 

ಭಯ ಬೇಡ: ಖಾಸಗಿ ಬ್ಯಾಂಕ್‌ನ ಹಣ ಹಿಂಪಡೆಯದಂತೆ ಆರ್‌ಬಿಐ ಸೂಚನೆ...

ಈ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್, ಭಾರತೀಯ ಸ್ಟೇಟ್ ಬ್ಯಾಂಕ್‌ನ ಅಧ್ಯಕ್ಷರು ಹಾಗೂ ಭಾರತ ಸರ್ಕಾರದ ಚೀಫ್ ಎಕನಾಮಿಕ್ ಎಡ್ವೈಸರ್‌ಗಳ ಇತ್ತೀಚಿನ ಮಾಧ್ಯಮ ಹೇಳಿಕೆಗಳತ್ತ ಗಮನ ಸೆಳೆದ ಅವರು, ಈ ಎಲ್ಲ ಗಣ್ಯರ ಹೇಳಿಕೆಗಳು ಎಲ್ಲ ಬ್ಯಾಂಕ್ ಗ್ರಾಹಕರಿಗೆ ಸಮಯೋಚಿತ ಮಾರ್ಗಸೂಚಿ ಎಂದಿದ್ದಾರೆ.

ಕಳೆದ 96ವರ್ಷಗಳಿಂದ ಗ್ರಾಹಕರ ಅನುಪಮ ವಿಶ್ವಾಸ ಹಾಗೂ ಸಹಕಾರದಿಂದ ಪ್ರವರ್ಧಮಾನಕ್ಕೆ ಬರುತ್ತಿರುವ ಕರ್ಣಾಟಕ ಬ್ಯಾಂಕ್ ಮುಂದಿನ ವರ್ಷಗಳಲ್ಲಿ ದೇಶದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾಗಿ ಮುಂಚೂಣಿಗೆ ಬರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.