Asianet Suvarna News Asianet Suvarna News

ಜಂಟಿ ಗೃಹ ಸಾಲ ಪಡೆಯೋದು ನಿಜಕ್ಕೂ ಒಳ್ಳೆಯದಾ? ಅದ್ರಿಂದ ಏನೆಲ್ಲ ಪ್ರಯೋಜನಗಳಿವೆ?

ಗೃಹಸಾಲ ಪಡೆಯಲು ಆದಾಯ ಹೆಚ್ಚಿಲ್ಲ ಅಥವಾ ಕ್ರೆಡಿಟ್ ಸ್ಕೋರ್ ಕಡಿಮೆಯಿದೆ ಅನ್ನೋರು  ಜಂಟಿಯಾಗಿ ಅರ್ಜಿ ಸಲ್ಲಿಸಬಹುದು. ಇದರಿಂದ ಸಾಲ ಸಿಗುವ ಸಾಧ್ಯತೆ ಹೆಚ್ಚುವ ಜೊತೆಗೆ ಇನ್ನೂ ಅನೇಕ ಪ್ರಯೋಜನಗಳಿವೆ. ಹಾಗಾದ್ರೆ ಜಂಟಿ ಗೃಹ ಸಾಲ ಪಡೆಯೋದ್ರಿಂದ ಏನೆಲ್ಲ ಲಾಭಗಳಿವೆ? ಇಲ್ಲಿದೆ ಮಾಹಿತಿ. 
 

Joint or Individual home loan which is better details here anu
Author
First Published Aug 28, 2023, 11:39 AM IST

Business Desk: ಸ್ವಂತ ಮನೆ ಹೊಂದಬೇಕು ಎಂಬುದು ಬಹುತೇಕರ ಜೀವನದ ದೊಡ್ಡ ಕನಸು. ಆದರೆ, ಈ ಕನಸು ತುಂಬಾ ದುಬಾರಿ ಕೂಡ. ಇಂದಿನ ವೆಚ್ಚದಲ್ಲಿ ಮನೆ ನಿರ್ಮಿಸೋದು ಅಥವಾ ಖರೀದಿಸೋದು ಅಷ್ಟು ಸುಲಭದ ಕೆಲಸವಲ್ಲ. ಬೆಂಗಳೂರಿಂತಹ ಮಹಾನಗರದಲ್ಲಿ ಇಂದು ಮನೆ ನಿರ್ಮಾಣ ಅಥವಾ ಖರೀದಿ ಲಕ್ಷವಲ್ಲ, ಕೋಟಿ ವೆಚ್ಚದ ಕೆಲಸ. ಆದರೆ, ಇಂದು ಬ್ಯಾಂಕ್ ಗಳು ಕೂಡ ಸುಲಭವಾಗಿ ಗೃಹ ಸಾಲ ನೀಡುವ ಕಾರಣ ಡೌನ್ ಪೇಮೆಂಟ್ ಗೆ ಒಂದಿಷ್ಟು ಹಣವಿದ್ದರೆ ಮನೆ ಖರೀದಿ ಕಷ್ಟದ ಕೆಲಸವೇನೂ ಅಲ್ಲ. ಆದರೆ, ಗೃಹಸಾಲ ಖರೀದಿಸಿದ ಬಳಿಕ ಅದರ ಮರುಪಾವತಿ ದೀರ್ಘಕಾಲದ ಬದ್ಧತೆಯನ್ನು ಬೇಡುತ್ತದೆ. ಅಲ್ಲದೆ, ಹೆಚ್ಚಿನ ಬಡ್ಡಿ ಕೂಡ ಖರೀದಿದಾರನ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಗೃಹಸಾಲ ಪಡೆಯುವಾಗ ಒಂದಿಷ್ಟು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಅಗತ್ಯ. ಅಲ್ಲದೆ, ಗೃಹಸಾಲದ ಹೊರೆಯನ್ನು ತಗ್ಗಿಸಿಕೊಳ್ಳುವುದು ಹೇಗೆ ಎಂಬ ಬಗ್ಗೆ ಮೊದಲೇ ಒಂದಿಷ್ಟು ಅಧ್ಯಯನ ನಡೆಸಿ ಮುಂದುವರಿಯೋದು ಉತ್ತಮ. ಹೀಗಿರುವಾಗ ಗೃಹಸಾಲವನ್ನು ಒಬ್ಬರ ಹೆಸರಿನಲ್ಲೇ ಮಾಡುವ ಬದಲು ಇನ್ನೊಬ್ಬರ ಜೊತೆಗೆ ಜಂಟಿಯಾಗಿ ಮಾಡಿದ್ರೆ ಒಂದಿಷ್ಟು ಪ್ರಯೋಜನಗಳನ್ನು ಪಡೆಯಬಹುದು. ಹಾಗಾದ್ರೆ ಜಂಟಿ ಗೃಹಸಾಲದಿಂದ ಏನೆಲ್ಲ ಪ್ರಯೋಜನಗಳು ಲಭ್ಯ?

ಜಂಟಿ ಗೃಹಸಾಲದಿಂದ ಏನ್ ಲಾಭ?
1.ಸಾಲ ಸಿಗುವ ಸಾಧ್ಯತೆ ಹೆಚ್ಚು: ದೊಡ್ಡ ಮೊತ್ತದ ಗೃಹಸಾಲಕ್ಕೆ ಒಬ್ಬರೇ ಅರ್ಜಿ ಸಲ್ಲಿಸಿದ್ರೆ, ನಿಮ್ಮ ಆದಾಯವನ್ನು ಆಧರಿಸಿ ಸಾಲ ಸಿಗೋದು ಕಷ್ಟವಾಗಬಹುದು. ಹಾಗೆಯೇ ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆಯಿದ್ದರೆ ಆಗ ಕೂಡ ತೊಂದರೆ ತಪ್ಪಿದ್ದಲ್ಲ. ಹೀಗಿರುವಾಗ ಇನ್ನೊಬ್ಬ ವ್ಯಕ್ತಿ ಅಥವಾ ನಿಮ್ಮ ಪತ್ನಿ ಜೊತೆಗೆ ಸೇರಿ ಅರ್ಜಿ ಸಲ್ಲಿಸಿದ್ರೆ ನಿಮಗೆ ಸಾಲ ಸಿಗುವ ಸಾಧ್ಯತೆ ಹೆಚ್ಚಿರುತ್ತದೆ. ಏಕೆಂದರೆ ಅವರು ಉದ್ಯೋಗ ಹೊಂದಿದ್ದರೆ ಇಬ್ಬರ ವೇತನವನ್ನು ಪರಿಗಣಿಸುವ ಕಾರಣ ದೊಡ್ಡ ಮೊತ್ತದ ಸಾಲವನ್ನು ಬ್ಯಾಂಕ್ ಗಳು ಸುಲಭವಾಗಿ ನೀಡುತ್ತವೆ.

ಯುಪಿಐಗೆ ಎಸ್ ಬಿಐ ರುಪೇ ಕ್ರೆಡಿಟ್ ಕಾರ್ಡ್ ಲಿಂಕ್ ಮಾಡೋದು ಹೇಗೆ? ಇಲ್ಲಿದೆ ಸರಳ ವಿಧಾನ

2.ತೆರಿಗೆ ಪ್ರಯೋಜನ: ಪ್ರತಿ ವರ್ಷ ಗೃಹಸಾಲದ ಮೇಲೆ 2ಲಕ್ಷ ರೂ. ತನಕ ತೆರಿಗೆ ಕಡಿತದ ಪ್ರಯೋಜನ ಪಡೆಯಬಹುದು. ಹೀಗಿರುವಾಗ ಜಂಟಿಯಾಗಿ ಗೃಹಸಾಲ ಪಡೆದಿದ್ರೆ ಈವು ಹಾಗೂ ನಿಮ್ಮ ಪತ್ನಿ ಇಬ್ಬರೂ ತಲಾ 2ಲಕ್ಷ ರೂ. ತನಕ ತೆರಿಗೆ ಕಡಿತದ ಪ್ರಯೋಜನ ಪಡೆಯಬಹುದು. ಅಂದರೆ ಒಟ್ಟು 4ಕ್ಷ ರೂ. ತೆರಿಗೆ ಕಡಿತದ ಪ್ರಯೋಜನ ಸಿಗುತ್ತದೆ. ಆದರೆ, ನೀವಿಬ್ಬರೂ ಜೊತೆಯಾಗಿ ಇಎಂಐ ಪಾವತಿಸೋದು ಕೂಡ ಮುಖ್ಯ. ಹಾಗೆಯೇ ಮನೆ ನೋಂದಣಿ, ಸ್ಟ್ಯಾಂಪ್ ಡ್ಯೂಟಿ ಸೇರಿದಂತೆ ಇತರ ವೆಚ್ಚಗಳು ಕೂಡ ಇಬ್ಬರ ನಡುವೆ ಹಂಚಿ ಹೋಗುತ್ತವೆ. 

3.ಮಹಿಳೆ ಜಂಟಿ ಅರ್ಜಿದಾರರಾಗಿದ್ರೆ ಬಡ್ಡಿ ಕಡಿಮೆ: ಇನ್ನು ನಿಮ್ಮ ಪತ್ನಿ ಕೂಡ ಗೃಹಸಾಲಕ್ಕೆ ಜಂಟಿ ಅರ್ಜಿದಾರರಾಗಿದ್ದಾರೆ. ಆಗ ಗೃಹಸಾಲದ ಮೇಲಿನ ಬಡ್ಡಿ ಕೂಡ ತಗ್ಗುವ ಸಾಧ್ಯತೆ ಇರುತ್ತದೆ. ಬಹುತೇಕ ಬ್ಯಾಂಕ್ ಗಳು ಮಹಿಳಾ ಸಹಅರ್ಜಿದಾರರಿಗೆ ಸ್ವಲ್ಪ ಕಡಿಮೆ ಬಡ್ಡಿದರ ವಿಧಿಸುತ್ತವೆ. ಹೀಗಾಗಿ ಇದು ನಿಮ್ಮ ಗೃಹಸಾಲದ ಮೇಲಿನ ಬಡ್ಡಿ ಹೊರೆಯನ್ನು ತಗ್ಗಿಸುತ್ತದೆ.

ಬ್ಯಾಂಕ್‌ ಆಫ್‌ ಮಹಾರಾಷ್ಟ್ರದಿಂದ ಕರ್ನಾಟಕದಲ್ಲಿ ಇನ್ನಷ್ಟು ಶಾಖೆ ಶೀಘ್ರ

4.ಸಾಲ ಮರುಪಾವತಿ ಜವಾಬ್ದಾರಿಯಲ್ಲಿ ಹಂಚಿಕೆ: ಇನ್ನು ಇಬ್ಬರು ಜೊತೆಯಾಗಿ ಗೃಹಸಾಲ ಪಡೆದಿದ್ರೆ ಅದರ ಭಾರ ಹಂಚಿಕೆಯಾಗುತ್ತದೆ. ಅಂದರೆ ಇಎಂಐ ಪಾವತಿ ಹೊರೆ ಒಬ್ಬರ ಮೇಲೆಯೇ ಬೀಳುವುದಿಲ್ಲ. ಇಬ್ಬರು ಕೂಡ ಇಎಂಐ ಪಾವತಿಗೆ ಕೊಡುಗೆ ನೀಡುವ ಕಾರಣ ದೊಡ್ಡ ಹೊರೆ ಅನಿಸೋದಿಲ್ಲ.

5.ಮುದ್ರಾಂಕ ಶುಲ್ಕದಲ್ಲಿ ಕಡಿತ: ಪತಿ ಹಾಗೂ ಪತ್ನಿ ಜಂಟಿಯಾಗಿ ಗೃಹಸಾಲ ಪಡೆಯೋದ್ರಿಂದ ಮುದ್ರಾಂಕ ಶುಲ್ಕ ಕಡಿಮೆಯಾಗುತ್ತದೆ. ಮಹಿಳೆಯರು ಆಸ್ತಿ ಖರೀದಿಸಿದ್ರೆ ಸರ್ಕಾರ ಕಡಿಮೆ ಮುದ್ರಾಂಕ ಶುಲ್ಕ ವಿಧಿಸುತ್ತದೆ. ಪುರುಷರಿಗೆ ಹೋಲಿಸಿದ್ರೆ ಅನೇಕ ರಾಜ್ಯಗಳು ಮಹಿಳೆಯರ ಮುದ್ರಾಂಕ ಶುಲ್ಕ ತಗ್ಗಿಸಿವೆ. ದೆಹಲಿ, ಉತ್ತರ ಪ್ರದೇಶ, ಹರಿಯಾಣ ಮುಂತಾದ ರಾಜ್ಯಗಳಲ್ಲಿ ಮಹಿಳೆಯರ ಮುದ್ರಾಂಕ ಶುಲ್ಕವನ್ನು ತಗ್ಗಿಸಲಾಗಿದೆ. 

Follow Us:
Download App:
  • android
  • ios