Asianet Suvarna News Asianet Suvarna News

ಜೆಟ್‌ ಏರ್‌ವೇಸ್‌ಗೆ ಗೋಯಲ್‌ ಗುಡ್ ಬೈ: ತಾನೇ ಸ್ಥಾಪಿಸಿದ್ದ ಕಂಪೆನಿಯಿಂದ ಹೊರನಡೆದ ಉದ್ಯಮಿ!

ಜೆಟ್‌ ಏರ್‌ವೇಸ್‌ಗೆ ಚೇರ್ಮನ್‌ ನರೇಶ್‌ ಗೋಯಲ್‌ ರಾಜೀನಾಮೆ| 25 ವರ್ಷದ ಹಿಂದೆ ತಾನೇ ಸ್ಥಾಪಿಸಿದ್ದ ಕಂಪನಿಯಿಂದ ಹೊರನಡೆದ ಉದ್ಯಮಿ| ತೀವ್ರ ನಷ್ಟದಲ್ಲಿರುವ ಕಂಪನಿಗೆ ಹರಿದುಬಂದ 1500 ಕೋಟಿ ರು. ಬಂಡವಾಳ

Jet Airways Chairman Naresh Goyal steps down
Author
Bangalore, First Published Mar 26, 2019, 9:32 AM IST

ಮುಂಬೈ[ಮಾ.26]: ತೀವ್ರ ನಷ್ಟದಲ್ಲಿ ಸಿಲುಕಿರುವ ವಿಮಾನಯಾನ ಸಂಸ್ಥೆ ಜೆಟ್‌ ಏರ್‌ವೇಸ್‌ಗೆ ಕಂಪನಿಯ ಸಂಸ್ಥಾಪಕ ಹಾಗೂ ಚೇರ್ಮನ್‌ ನರೇಶ್‌ ಗೋಯಲ್‌ ರಾಜೀನಾಮೆ ನೀಡಿದ್ದಾರೆ. ಚೇರ್ಮನ್‌ ಹುದ್ದೆಯ ಜೊತೆಗೆ ಕಂಪನಿಯ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನದಿಂದಲೂ ಅವರು ಹೊರನಡೆದಿದ್ದಾರೆ. ಗೋಯಲ್‌ ಜತೆ ಅವರ ಪತ್ನಿ ಅನಿತಾ ಗೋಯಲ್‌ ಹಾಗೂ ಜೆಟ್‌ ಏರ್‌ವೇಸ್‌ನಲ್ಲಿ ಶೇ.24ರಷ್ಟುಷೇರು ಹೊಂದಿರುವ ಎತಿಹಾಡ್‌ ಏರ್‌ವೇಸ್‌ನಿಂದ ನಿಯೋಜಿತರಾಗಿದ್ದ ನಿರ್ದೇಶಕ ಕೆವಿನ್‌ ನೈಟ್‌ ಕೂಡ ಆಡಳಿತ ರಾಜೀನಾಮೆ ನೀಡಿದ್ದಾರೆ.

ಮೂವರು ರಾಜೀನಾಮೆ ನೀಡುತ್ತಿದ್ದಂತೆ 8000 ಕೋಟಿ ರು. ಸಾಲದಲ್ಲಿರುವ ಜೆಟ್‌ ಏರ್‌ವೇಸ್‌ಗೆ 1500 ಕೋಟಿ ರು. ಬಂಡವಾಳ ಹೂಡಿಕೆ ಮಾಡಲು ಈ ಹಿಂದೆ ಜೆಟ್‌ ಏರ್‌ವೇಸ್‌ಗೆ ಸಾಲ ನೀಡಿದ್ದ ಎಸ್‌ಬಿಐ ನೇತೃತ್ವದ ಬ್ಯಾಂಕುಗಳ ಒಕ್ಕೂಟ ನಿರ್ಧರಿಸಿದೆ. ಈ ಸುದ್ದಿ ಹೊರಬೀಳುತ್ತಿದ್ದಂತೆ ಷೇರು ಮಾರುಕಟ್ಟೆಯಲ್ಲಿ ಜೆಟ್‌ ಏರ್‌ವೇಸ್‌ನ ಷೇರುಗಳ ಬೆಲೆ ಶೇ.4.23ರಷ್ಟುಏರಿಕೆಯಾಗಿ 235.4 ರು.ಗೆ ಜಿಗಿದಿದೆ.

ಸೋಮವಾರ ನಡೆದ ಜೆಟ್‌ ಏರ್‌ವೇಸ್‌ನ ಆಡಳಿತ ಮಂಡಳಿಯ ಸಭೆಯಲ್ಲಿ ಕಂಪನಿಯನ್ನು ಉಳಿಸಲು ಎಸ್‌ಬಿಐ ನೇತೃತ್ವದ ಬ್ಯಾಂಕುಗಳ ಒಕ್ಕೂಟ ತಯಾರಿಸಿದ್ದ ಯೋಜನೆಗೆ ಒಪ್ಪಿಗೆ ನೀಡಲಾಯಿತು. ಅದರಂತೆ ನರೇಶ್‌ ಗೋಯಲ್‌ ಹಾಗೂ ಪತ್ನಿ ರಾಜೀನಾಮೆ ನೀಡಿದರು. 25 ವರ್ಷದ ಹಿಂದೆ ಎನ್‌ಆರ್‌ಐ ಉದ್ಯಮಿ ನರೇಶ್‌ ಗೋಯಲ್‌ ಅವರೇ ಜೆಟ್‌ ಏರ್‌ವೇಸ್‌ ಸ್ಥಾಪನೆ ಮಾಡಿದ್ದರು. ವಿದೇಶಗಳಿಗೂ ವಿಮಾನ ಹಾರಾಟ ನಡೆಸುತ್ತಿದ್ದ ಜೆಟ್‌ ಏರ್‌ವೇಸ್‌, ಇತ್ತೀಚಿನ ವರ್ಷಗಳಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ, 80 ವಿಮಾನಗಳ ಹಾರಾಟ ನಿಲ್ಲಿಸಿತ್ತು. ಕೆಲ ತಿಂಗಳಿನಿಂದ ಎಂಜಿನಿಯರ್‌ ಹಾಗೂ ಪೈಲಟ್‌ಗಳಿಗೆ ವೇತನ ಪಾವತಿ ಮಾಡದಿದ್ದುದರಿಂದ ಅವರು ಕೆಲಸ ಸ್ಥಗಿತಗೊಳಿಸುವ ಬೆದರಿಕೆ ಹಾಕಿದ್ದರು.

Follow Us:
Download App:
  • android
  • ios