ಎನ್ವಿಡಿಯಾ ಕಂಪನಿಯ ಸಿಇಒ ಆಗಿ ಜೆನ್ಸನ್ ಹುವಾಂಗ್ ಮರುನೇಮಕಗೊಂಡ ಬೆನ್ನಲ್ಲೇ ಕಂಪನಿಯ ಷೇರುಗಳು ಶೇ. 31ರಷ್ಟು ಏರಿಕೆ ಕಂಡಿವೆ. ಹುವಾಂಗ್ ಅವರ ನಿವ್ವಳ ಆಸ್ತಿ ಮೌಲ್ಯ ಒಂದೇ ದಿನದಲ್ಲಿ $34 ಬಿಲಿಯನ್ ಜಿಗಿತ ಕಂಡು, ಒಟ್ಟು $144 ಬಿಲಿಯನ್ ತಲುಪಿದೆ.
ಬೆಂಗಳೂರು (ನ.24): ಎನ್ವಿಡಿಯಾ (Nvidia) ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (CEO) ಜೆನ್ಸನ್ ಹುವಾಂಗ್ (Jensen Huang) ಮರಳಿದ ಬೆನ್ನಲ್ಲೇ ಕಂಪನಿಯ ಷೇರುಗಳು ಕೆಲವೇ ನಿಮಿಷಗಳಲ್ಲಿ ಶೇ. 31ರಷ್ಟು ಜಿಗಿದಿದ್ದು, ಸೋಮವಾರ ಒಂದೇ ದಿನದಲ್ಲಿ ಹುವಾಂಗ್ ಅವರ ನಿವ್ವಳ ಆಸ್ತಿ ಮೌಲ್ಯ ಸುಮಾರು $34 ಬಿಲಿಯನ್ (₹3.14 ಲಕ್ಷ ಕೋಟಿ) ಏರಿಕೆಯಾಗಿ $144 ಬಿಲಿಯನ್ (₹13.36 ಲಕ್ಷ ಕೋಟಿ) ತಲುಪಿದೆ. ಚೀನಾದ ಶಂಕಿತ ಗೂಢಚಾರಿಯೊಂದಿಗಿನ ಸಂಬಂಧದ ವಿವಾದದಿಂದಾಗಿ ತಮ್ಮ ಸಂಪತ್ತಿನ ಕಾಲುಭಾಗಕ್ಕಿಂತ ಹೆಚ್ಚಿನದನ್ನು ಕಳೆದುಕೊಂಡಿದ್ದ ಹುವಾಂಗ್, ಈಗ ಭರ್ಜರಿ ಕಮ್ಬ್ಯಾಕ್ ಮಾಡಿದ್ದಾರೆ.
ವಿಶ್ವದ ಪ್ರತಿಷ್ಠಿತ 'ಫೋರ್ಬ್ಸ್' (Forbes) ನಿಯತಕಾಲಿಕೆಯ ದಾಖಲೆಯ ಪ್ರಕಾರ, ಸೋಮವಾರ ಮಾರುಕಟ್ಟೆ ಮುಕ್ತಾಯದ ವೇಳೆಗೆ ಜೆನ್ಸನ್ ಹುವಾಂಗ್ ಅವರ ನಿವ್ವಳ ಸಂಪತ್ತು $144 ಬಿಲಿಯನ್ ದಾಖಲಾಗಿದ್ದು, ಮಾರುಕಟ್ಟೆ ಆರಂಭಕ್ಕೂ ಮುನ್ನ ಇದ್ದ ಮೊತ್ತಕ್ಕಿಂತ $33.9 ಬಿಲಿಯನ್ ಹೆಚ್ಚಾಗಿದೆ. ರಾಯಿಟರ್ಸ್ (Reuters) ವರದಿಯ ಪ್ರಕಾರ, ಎನ್ವಿಡಿಯಾ ಷೇರುಗಳು ಶೇ. 31.5ರಷ್ಟು ಏರಿಕೆ ಕಂಡಿದ್ದು, ಇದು ವಾಲ್ ಸ್ಟ್ರೀಟ್ (Wall Street) ಷೇರುಪೇಟೆಯ ವಿಶಾಲ ಚೇತರಿಕೆಗೆ ಕಾರಣವಾಯಿತು.
ವಿವಾಹೇತರ ಸಂಬಂಧಗಳ ಅದರಲ್ಲೂ ಚೀನಾದ ಶಂಕಿತ 'ಗೂಢಚಾರಿ'ಯೊಂದಿಗಿನ ಸಂಬಂಧದ ಆರೋಪಗಳು ಬಹಿರಂಗವಾದ ಹಿನ್ನೆಲೆಯಲ್ಲಿ ಹುವಾಂಗ್ ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ, ರಾಜೀನಾಮೆ ನೀಡಿದ ಎರಡು ವಾರಗಳಿಗಿಂತ ಕಡಿಮೆ ಅವಧಿಯಲ್ಲೇ ಅವರು ಸೋಮವಾರ ಕ್ಯಾಲಿಫೋರ್ನಿಯಾದ ಸಾಂತಾ ಕ್ಲಾರಾದಲ್ಲಿರುವ ಎನ್ವಿಡಿಯಾ ಪ್ರಧಾನ ಕಚೇರಿಗೆ ಮರಳಿದ್ದಾರೆ.
ಫೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿ 18ರಿಂದ 13ನೇ ಸ್ಥಾನಕ್ಕೆ ಜಿಗಿತ
ಕಳೆದ ಕೆಲವು ವಾರಗಳಲ್ಲಿ ಹುವಾಂಗ್ ಅವರ ಸಂಬಂಧಗಳ ಕುರಿತಾದ ಹಗರಣದಿಂದಾಗಿ ಅವರ ನಿವ್ವಳ ಆಸ್ತಿ ಮೌಲ್ಯ ತೀವ್ರವಾಗಿ ಕುಸಿದಿತ್ತು. ಇದರಿಂದ ಅವರ ಸಂಪತ್ತಿನ ಕಾಲುಭಾಗಕ್ಕಿಂತ ಹೆಚ್ಚು ಕರಗಿಹೋಗಿ, ಫೋರ್ಬ್ಸ್ ವಿಶ್ವದ ಅಗ್ರ 10 ಶ್ರೀಮಂತರ ಪಟ್ಟಿಯಿಂದ ಹೊರಬಿದ್ದು 18ನೇ ಸ್ಥಾನಕ್ಕೆ ಕುಸಿದಿದ್ದರು. ಆದರೆ, ಸೋಮವಾರದ ಷೇರು ಏರಿಕೆಯೊಂದಿಗೆ ಅವರು ಮತ್ತೆ 13ನೇ ಸ್ಥಾನಕ್ಕೆ ಏರಿದ್ದಾರೆ.
ಎನ್ವಿಡಿಯಾದಲ್ಲಿ ಸುಮಾರು ಶೇ. 3.6ರಷ್ಟು ಪಾಲನ್ನು ಹೊಂದಿರುವ ಹುವಾಂಗ್, ಕಂಪನಿಯ ಅತಿದೊಡ್ಡ ವೈಯಕ್ತಿಕ ಷೇರುದಾರರಾಗಿದ್ದಾರೆ (ಒಟ್ಟಾರೆ ಐದನೇ ಅತಿದೊಡ್ಡ ಷೇರುದಾರರು). ಆದರೆ, ಮೆಟಾ ಪ್ಲಾಟ್ಫಾರ್ಮ್ಸ್ನ ಮಾರ್ಕ್ ಜುಕರ್ಬರ್ಗ್ ಮತ್ತು ಸ್ಪೇಸ್ಎಕ್ಸ್ನ ಎಲೋನ್ ಮಸ್ಕ್ ಅವರಂತೆ ತಮ್ಮ ಕಂಪನಿಗಳ ಮೇಲೆ ಪರಿಣಾಮಕಾರಿ ನಿಯಂತ್ರಣ ನೀಡುವ ವಿಶೇಷ ಮತದಾನದ ಷೇರುಗಳನ್ನು (Special voting shares) ಹುವಾಂಗ್ ಹೊಂದಿಲ್ಲ.
ಅಮೆರಿಕ ಸರ್ಕಾರದ ಅಭಿಪ್ರಾಯ ಪಡೆದು ಮರುನೇಮಕ ಮಾಡಿದ ಆಡಳಿತ ಮಂಡಳಿ!
ಚೀನಾದ ಶಂಕಿತ ಏಜೆಂಟ್ ಆಲಿಸ್ ಹುವಾಂಗ್ (Alice Huang) ಮತ್ತು ಎನ್ವಿಡಿಯಾ ಕಾರ್ಯನಿರ್ವಾಹಕ ಅಧಿಕಾರಿ ಕಿಂಬರ್ಲಿ ಪೊವೆಲ್ (Kimberly Powell) ಅವರೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬ ವರದಿಗಳ ನಡುವೆ ಹುವಾಂಗ್ ನವೆಂಬರ್ 12ರಂದು ಸಿಇಒ ಹುದ್ದೆಗೆ ರಾಜೀನಾಮೆ ನೀಡಿದ್ದರು. ಆದರೆ ಸೋಮವಾರ ಆಡಳಿತ ಮಂಡಳಿಯು ಹುವಾಂಗ್ ಅವರನ್ನು ಕಂಪನಿಯ ಅಧ್ಯಕ್ಷರು, ಸಿಇಒ ಮತ್ತು ಆಡಳಿತ ಮಂಡಳಿಯ ನಿರ್ದೇಶಕರಾಗಿ "ತಕ್ಷಣದಿಂದ ಜಾರಿಗೆ ಬರುವಂತೆ" ಮರುನೇಮಕ ಮಾಡಿರುವುದಾಗಿ ಘೋಷಿಸಿದೆ.
ಈ ನಿರ್ಧಾರಕ್ಕೆ ಬರುವ ಪ್ರಕ್ರಿಯೆಯಲ್ಲಿ, ಆಡಳಿತ ಮಂಡಳಿಯು ಅಮೆರಿಕ ಸರ್ಕಾರದ ಉನ್ನತ ಮಟ್ಟದಿಂದ ಮಾಹಿತಿ ಮತ್ತು ಅಭಿಪ್ರಾಯವನ್ನು ಪಡೆದುಕೊಂಡಿದೆ. ಆ ಮಾಹಿತಿಯ ಆಧಾರದ ಮೇಲೆ, ಹುವಾಂಗ್ ಅವರ ಮರುನೇಮಕದಿಂದ ಯಾವುದೇ ರಾಷ್ಟ್ರೀಯ ಭದ್ರತೆಗೆ ಅಪಾಯವಿಲ್ಲ ಎಂಬ ವಿಶ್ವಾಸ ಮಂಡಳಿಗಿದೆ ಎಂದು ಆಡಳಿತ ಮಂಡಳಿ ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.
ಮಂಡಳಿಯ ಅಧ್ಯಕ್ಷ ಹಾರ್ವೆ ಸಿ. ಜೋನ್ಸ್ (Harvey C. Jones) ಮಾತನಾಡಿ, ಎನ್ವಿಡಿಯಾವನ್ನು ಮುನ್ನಡೆಸಲು ಜೆನ್ಸನ್ ಸೂಕ್ತ ವ್ಯಕ್ತಿ ಎಂದು ಮಂಡಳಿ ನಂಬಿದೆ. ಅವರ ಮರುನೇಮಕವು ನಮ್ಮ ಷೇರುದಾರರು, ಉದ್ಯೋಗಿಗಳು, ಪಾಲುದಾರರು ಮತ್ತು ಗ್ರಾಹಕರ ಹಿತದೃಷ್ಟಿಯಿಂದ ಉತ್ತಮವಾಗಿದೆ. ಎನ್ವಿಡಿಯಾದ ಮುಖ್ಯ ಹಣಕಾಸು ಅಧಿಕಾರಿ (CFO) ಜವಾಬ್ದಾರಿಯ ಜೊತೆಗೆ ಮಧ್ಯಂತರ ಸಿಇಒ ಆಗಿ ಅತ್ಯುತ್ತಮ ಸೇವೆ ಸಲ್ಲಿಸಿದ ಕೊಲೆಟ್ ಕ್ರೆಸ್ (Colette Kress) ಅವರಿಗೆ ನಾವು ಕೃತಜ್ಞರಾಗಿದ್ದೇವೆ ಎಂದಿದ್ದಾರೆ.
ನವ ಕೈಗಾರಿಕಾ ಕ್ರಾಂತಿಯ ಆರಂಭದಲ್ಲಿ ಮರಳಿರುವುದು ನನ್ನ ಗೌರವ: ಜೆನ್ಸನ್ ಹುವಾಂಗ್
ಮರುನೇಮಕಗೊಂಡ ಬಳಿಕ ಪ್ರತಿಕ್ರಿಯಿಸಿದ ಜೆನ್ಸನ್ ಹುವಾಂಗ್, ನವ ಕೈಗಾರಿಕಾ ಕ್ರಾಂತಿಯ ಆರಂಭದಲ್ಲಿ ವಿಶ್ವದ ಅತ್ಯಂತ ಪ್ರಭಾವಶಾಲಿ ತಂತ್ರಜ್ಞಾನ ಕಂಪನಿಗಳಲ್ಲಿ ಒಂದನ್ನು ಮುನ್ನಡೆಸಲು ಎನ್ವಿಡಿಯಾಕ್ಕೆ ಮರಳಿರುವುದು ನನಗೆ ಸಂದ ಗೌರವವಾಗಿದೆ ಎಂದು ಹೇಳಿದ್ದಾರೆ.
ನಾನು ಈ ಜವಾಬ್ದಾರಿಯನ್ನು ಅತ್ಯಂತ ನಮ್ರತೆ ಮತ್ತು ನವೀಕೃತ ಬದ್ಧತೆಯೊಂದಿಗೆ ಸ್ವೀಕರಿಸುತ್ತೇನೆ. ಈ ಪ್ರಕ್ರಿಯೆಯಲ್ಲಿ ನನ್ನ ಮೇಲೆ ವಿಶ್ವಾಸವಿಟ್ಟ ಎನ್ವಿಡಿಯಾ ಆಡಳಿತ ಮಂಡಳಿಗೆ, ಅಧ್ಯಕ್ಷ ಹಾರ್ವೆ ಜೋನ್ಸ್ ಅವರಿಗೆ ಮತ್ತು ಈ ಅವಧಿಯಲ್ಲಿ ಕಂಪನಿಯನ್ನು ಮುನ್ನಡೆಸಿದ ಕೊಲೆಟ್ ಕ್ರೆಸ್ ಹಾಗೂ ಕಾರ್ಯನಿರ್ವಾಹಕ ಸಿಬ್ಬಂದಿಗೆ ನಾನು ವಿಶೇಷವಾಗಿ ಕೃತಜ್ಞನಾಗಿದ್ದೇನೆ. ಎಲ್ಲಕ್ಕಿಂತ ಹೆಚ್ಚಾಗಿ, ನನ್ನ ಕುಟುಂಬದ ಪ್ರೀತಿ ಮತ್ತು ಬೆಂಬಲಕ್ಕೆ ನಾನು ಆಭಾರಿಯಾಗಿದ್ದೇನೆ. ಮತ್ತೆ ಕೆಲಸಕ್ಕೆ ಮರಳಲು ನಾನು ಕಾತರನಾಗಿದ್ದೇನೆ ಎಂದು ಹೇಳಿದ್ದಾರೆ.
ಹುವಾಂಗ್ ವಿರುದ್ಧದ ತನಿಖೆ ಇನ್ನೂ ನಡೆಯುತ್ತಿದೆಯೇ?
ಹುವಾಂಗ್ ಅವರು ವಿದೇಶಿ ಗುಪ್ತಚರ ಪ್ರಯತ್ನದ ಗುರಿಯಾಗಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ತನಿಖೆ ನಡೆಸಲು ಆಡಳಿತ ಮಂಡಳಿಯು ಕೇವಲ ಸ್ವತಂತ್ರ ನಿರ್ದೇಶಕರನ್ನು ಒಳಗೊಂಡ ಸಮಿತಿಯನ್ನು ರಚಿಸಿತ್ತು ಮತ್ತು ತನಿಖೆಗೆ ಸಹಾಯ ಮಾಡಲು ಸ್ವತಂತ್ರ ವಕೀಲರನ್ನು ನೇಮಿಸಿಕೊಂಡಿತ್ತು ಎಂಬುದನ್ನು ಮಂಡಳಿ ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದೆ. ಸಮಿತಿಯ ತನಿಖೆಯು ಅಂತಿಮ ಹಂತದವರೆಗೂ ಮುಂದುವರಿಯಲಿದೆ ಎಂದು ಮಂಡಳಿ ಪುನರುಚ್ಚರಿಸಿದೆ; ಹುವಾಂಗ್ ಅವರು ತನಿಖೆಯನ್ನು ಸಂಪೂರ್ಣವಾಗಿ ಬೆಂಬಲಿಸುತ್ತಾರೆ ಮತ್ತು ಅದಕ್ಕೆ ಸಹಕರಿಸಲು ಬದ್ಧರಾಗಿದ್ದಾರೆ ಎಂದು ತಿಳಿಸಲಾಗಿದೆ. ಅಲ್ಲದೆ, ವ್ಯಾಪಾರ ಅನುಸರಣೆ ಮತ್ತು ರಾಷ್ಟ್ರೀಯ ಭದ್ರತಾ ಅಪಾಯಗಳನ್ನು ಮೇಲ್ವಿಚಾರಣೆ ಮಾಡಲು ಆಡಳಿತ ಮಂಡಳಿಯು ಇತ್ತೀಚೆಗೆ ಸ್ವತಂತ್ರ ನಿರ್ದೇಶಕರನ್ನೊಳಗೊಂಡ ರಾಷ್ಟ್ರೀಯ ಭದ್ರತೆ ಮತ್ತು ರಫ್ತು ನಿಯಂತ್ರಣ ಸಮಿತಿಯನ್ನೂ (National Security and Export Control Committee) ರಚಿಸಿದೆ.
















