ನವದೆಹಲಿ(ಫೆ.01): ಕೊರೋನಾದಿಂದ ಕಂಗೆಟ್ಟಿದ್ದ ಆರ್ಥಿಕತೆ ಮತ್ತೆ ಪುಟಿದೆದ್ದಿರುವ ಮತ್ತೊಂದು ಸ್ಪಷ್ಟಉದಾಹರಣೆ ಸಿಕ್ಕಿದೆ. ಕಳೆದ ಜನವರಿ ತಿಂಗಳಲ್ಲಿ ದೇಶದಲ್ಲಿ ದಾಖಲೆಯ 1.20 ಲಕ್ಷ ಕೋಟಿ ರು.ನಷ್ಟುಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವಾಗಿದೆ. ಇದು ದೇಶದಲ್ಲಿ ಜಿಎಸ್‌ಟಿ ರೂಪದಲ್ಲಿ ತೆರಿಗೆ ಸಂಗ್ರಹ ಆರಂಭವಾದ ಬಳಿಕದ ಅತಿ ಗರಿಷ್ಠ ಮೊತ್ತವಾಗಿದೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಕೇಂದ್ರ ಹಣಕಾಸು ಸಚಿವಾಲಯ, 2021ರ ಜ.31ರ ಸಂಜೆ 6 ಗಂಟೆಯವರೆಗಿನ ದಾಖಲೆಗಳ ಅನ್ವಯ 1.19 ಲಕ್ಷ ಕೋಟಿ ರು. ಜಿಎಸ್‌ಟಿ ಸಂಗ್ರಹವಾಗಿದೆ. ಸಂಜೆ ಬಳಿಕವೂ ಭಾರೀ ಪ್ರಮಾಣದಲ್ಲಿ ಜಿಎಸ್‌ಟಿ ಸೇಲ್ಸ್‌ ರಿಟನ್ಸ್‌ರ್‍ ಸಲ್ಲಿಕೆಯಾಗುತ್ತಿರುವ ಕಾರಣ, ಅಂತಿಮ ಪರಿಶೀಲನೆ ಬಳಿಕ ಈ ಪ್ರಮಾಣ ಇನ್ನಷ್ಟುಏರಿಕೆಯಾಗಲಿದೆ ಎಂದು ಹೇಳಿದೆ.

2019-20ನೇ ಹಣಕಾಸು ವರ್ಷದ 12 ತಿಂಗಳ ಪೈಕಿ 9 ತಿಂಗಳಲ್ಲಿ ಜಿಎಸ್‌ಟಿ ಸಂಗ್ರಹ 1 ಲಕ್ಷ ಕೋಟಿ ರು.ಮೇಲೆಯೇ ಇತ್ತು. ಆದರೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಕೊರೋನಾ ಕಾರಣ ಜಿಎಸ್‌ಟಿ ಸಂಗ್ರಹದಲ್ಲಿ ಭಾರೀ ಇಳಿಕೆಯಾಗಿತ್ತು. ಏಪ್ರಿಲ್‌ನಲ್ಲಿ ಕೇವಲ 32,172 ಕೋಟಿ ರು. ಸಂಗ್ರಹವಾಗಿತ್ತು. ನಂತರ ಮೇನಲ್ಲಿ 62151 ಕೋಟಿ, ಜೂನ್‌ನಲ್ಲಿ 90917, ಜುಲೈನಲ್ಲಿ 87422, ಆಗಸ್ಟ್‌ನಲ್ಲಿ 86,449 ಕೋಟಿ, ಸೆಪ್ಟೆಂಬರ್‌ನಲ್ಲಿ 95480 ಕೋಟಿ, ಅಕ್ಟೋಬರ್‌ನಲ್ಲಿ 1.05 ಲಕ್ಷ ಕೋಟಿ, ನವೆಂಬರ್‌ನಲ್ಲಿ 1.04 ಲಕ್ಷ ಕೋಟಿ, ಡಿಸೆಂಬರ್‌ನಲ್ಲಿ 1.15 ಲಕ್ಷ ಕೋಟಿ ರು. ಸಂಗ್ರಹವಾಗಿತ್ತು.