ನವದೆಹಲಿ(ಜು.17): ರಿಸರ್ವ್ ಬ್ಯಾಂಕ್ ತನ್ನ ಬಳಿ ಇರುವ ಹೆಚ್ಚುವರಿ ಹಣವನ್ನು ಕೇಂದ್ರ ಸರ್ಕಾರಕ್ಕೆ ವರ್ಗಾಯಿಸಬೇಕು ಎಂದು, ಆರ್‌ಬಿಐ ಮಾಜಿ ಗವರ್ನರ್ ಬಿಮಲ್ ಜಲಾನ್ ನೇತೃತ್ವದ ಉನ್ನತ ಮಟ್ಟದ ಸಮಿತಿ ಹೇಳಿದೆ.

ಆರ್‌ಬಿಐ  ನಿರ್ವಹಿಸಬೇಕಾದ ಬಂಡವಾಳ ನಿಕ್ಷೇಪಗಳನ್ನು ನಿರ್ಧರಿಸಲು ರಚಿಸಲಾಗಿದ್ದ ಜಲಾನ್ ಸಮಿತಿ ಈ ಮಹತ್ವದ ವರದಿ ನೀಡಿದ್ದು, ಮುಂದಿನ ಮೂರರಿಂದ ಐದು ವರ್ಷಗಳ ಅವಧಿಯಲ್ಲಿ ಆರ್‌ಬಿಐ ತನ್ನ ಹೆಚ್ಚುವರಿ ಹಣವನ್ನು ಸರ್ಕಾರಕ್ಕೆ ವರ್ಗಾಯಿಸಬೇಕು ಎಂದು ಸ್ಪಷ್ಟಪಡಿಸಿದೆ.

ಆರ್‌ಬಿಐಗೆ ಆರ್ಥಿಕ ಬಂಡವಾಳ ಚೌಕಟ್ಟು ಅಂತಿಮಗೊಳಿಸಲು ಆರು ಸದಸ್ಯರ ಜಲಾನ್ ಸಮಿತಿಯನ್ನು  ಕಳೆದ ಡಿಸೆಂಬರ್ 26, 2018ರಂದು ಹಣಕಾಸು ಸಚಿವಾಲಯ ರಚಿಸಿತ್ತು.

ಹೆಚ್ಚುವರಿ ಹಣವನ್ನು ಆರ್‌ಬಿಐ ತನ್ನ ಬಳಿಯೇ ಇಟ್ಟುಕೊಳ್ಳಬೇಕೇ ಅಥವಾ ಅದನ್ನು ಕೇಂದ್ರ ಸರ್ಕಾರಕ್ಕೆ ರವಾನಿಸಬೇಕೇ ಎಂಬುದರ ಕುರಿತು ಕೇಂದ್ರ ಸರ್ಕಾರ ಮತ್ತು ಆರ್‌ಬಿಐ ನಡುವೆ ಮುಸುಕಿನ ಗುದ್ದಾಟ ನಡೆದೇ ಇತ್ತು.