2023ನೇ ಹಣಕಾಸು ಸಾಲಿನ ಐಟಿಆರ್ ಸಲ್ಲಿಕೆಗೆ ಜುಲೈ 31 ಅಂತಿಮ ಗಡುವು. ಹೀಗಾಗಿ ಆದಷ್ಟು ಬೇಗ ಐಟಿಆರ್ ಸಲ್ಲಿಕೆ ಮಾಡಿ. ಹಾಗೆಯೇ ಐಟಿಆರ್ ಸಲ್ಲಿಕೆ ಸಮಯದಲ್ಲಿ ಹೆಚ್ಚು ಜನಪ್ರಿಯತೆ ಗಳಿಸದ ಈ 5 ತೆರಿಗೆ ಕಡಿತಗಳನ್ನು ಕ್ಲೇಮ್ ಮಾಡಲು ಮರೆಯಬೇಡಿ.
Business Desk: 2023ನೇ ಹಣಕಾಸಿನ ಸಾಲಿನ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಕೆ ಕೊನೆಯ ದಿನಾಂಕ ಸಮೀಪಿಸುತ್ತಿದ್ದು, ಕೇವಲ ಒಂದು ವಾರವಷ್ಟೇ ಸಮಯಾವಕಾಶವಿದೆ. ಹೀಗಾಗಿ ತೆರಿಗೆದಾರರು ಕೊನೆಯ ದಿನದ ತನಕ ಕಾಯದೆ ಆದಷ್ಟು ಬೇಗ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಮಾಡೋದು ಉತ್ತಮ. ಇಲ್ಲಿಯ ತನಕ 2022-23ನೇ ಹಣಕಾಸು ಸಾಲಿಗೆ ಸಂಬಂಧಿಸಿ ಸುಮಾರು ನಾಲ್ಕು ಕೋಟಿಗಿಂತಲೂ ಅಧಿಕ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಕೆ ಮಾಡಲಾಗಿದೆ. ಇದರಲ್ಲಿ ಸುಮಾರು ಶೇ.7ರಷ್ಟು ಹೊಸದು ಅಥವಾ ಮೊದಲ ಬಾರಿಗೆ ಸಲ್ಲಿಕೆಯಾಗಿರೋದು ಎಂದು ಸಿಬಿಡಿಟಿ ಮುಖ್ಯಸ್ಥ ನಿತಿನ್ ಗುಪ್ತ ಸೋಮವಾರ ಮಾಹಿತಿ ನೀಡಿದ್ದಾರೆ. ಐಟಿಆರ್ ಅನ್ನು ಬೇಗ ಸಲ್ಲಿಕೆ ಮಾಡೋದ್ರಿಂದ ನೀವು ಕ್ಲೇಮ್ ಮಾಡಬಹುದಾದ ಎಲ್ಲ ಕಡಿತಗಳನ್ನು ಲೆಕ್ಕ ಹಾಕಲು ಸಾಕಷ್ಟು ಸಮಯ ಸಿಗುತ್ತದೆ. ಇನ್ನು ಆದಾಯ ತೆರಿಗೆ ಕಾಯ್ದೆ 1961ರ ಅಡಿಯಲ್ಲಿ ವಿವಿಧ ತೆರಿಗೆ ಪ್ರಯೋಜನಗಳು ಲಭ್ಯವಿದ್ದು, ತೆರಿಗೆ ಹೊರೆ ತಗ್ಗಿಸಿಕೊಳ್ಳಲು ನೆರವು ನೀಡುತ್ತವೆ. ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80 ಸಿ ಅಡಿಯಲ್ಲಿ ಸ್ಟ್ಯಾಂಡರ್ಡ್ ಡಿಡಕ್ಷನ್ ಸೇರಿದಂತೆ ವಿವಿಧ ತೆರಿಗೆ ಪ್ರಯೋಜನಗಳು ಲಭ್ಯವಿವೆ. ಇನ್ನು ಆದಾಯ ತೆರಿಗೆ ಕಾಯ್ದೆ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಇನ್ನೂ ಅನೇಕ ಕಡಿತಗಳು ಲಭ್ಯವಿದ್ದು, ನೀವು ನಿಮ್ಮ ತೆರಿಗೆ ವ್ಯಾಪ್ತಿಗೊಳಪಡುವ ಆದಾಯವನ್ನು ಆದಷ್ಟು ತಗ್ಗಿಸಿಕೊಳ್ಳಬಹುದು.
ಐಟಿಆರ್ ಫೈಲ್ ಮಾಡುವಾಗ ಈ 5 ಕಡಿತಗಳನ್ನು ಕ್ಲೇಮ್ ಮಾಡಿ
1.ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ (ಎನ್ ಪಿಎಸ್) ಹೂಡಿಕೆ
ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ (NPS) ಹೂಡಿಕೆ ಮಾಡುವ ಮೂಲಕ 1.5ಲಕ್ಷ ರೂ. ಹಾಗೂ ಅದಕ್ಕಿಂತ ಹೆಚ್ಚಿನ ತೆರಿಗೆ ಪ್ರಯೋಜನಗಳನ್ನು ಕ್ಲೇಮ್ ಮಾಡಬಹುದು. ಇನ್ನು ಎನ್ ಪಿಎಸ್ ನಲ್ಲಿ ಹೂಡಿಕೆ ಮಾಡಬಹುದಾದ ಗರಿಷ್ಠ ಮೊತ್ತ 50 ಸಾವಿರ ರೂ. ಈ ಪ್ರಯೋಜನ ಸೆಕ್ಷನ್ 80CCD (1B) ಅಡಿಯಲ್ಲಿ ಲಭ್ಯವಿದೆ.
2.ಉಳಿತಾಯ ಖಾತೆಯಿಂದ ಸಿಕ್ಕ ಬಡ್ಡಿ
ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80TTA ಅಡಿಯಲ್ಲಿ ಉಳಿತಾಯ ಖಾತೆಗಳಿಂದ ಗಳಿಸಿದ ವಾರ್ಷಿಕ 10,000ರೂ. ತನಕದ ಆದಾಯ ತೆರಿಗೆದಾರರಿಗೆ ತೆರಿಗೆಮುಕ್ತವಾಗಿದೆ.
ಒಂದು ಲಕ್ಷ ಐಟಿಆರ್ ನೋಟಿಸ್ ಜಾರಿಯನ್ನು ದೃಢಪಡಿಸಿದ ಹಣಕಾಸು ಸಚಿವೆ ; ಯಾರಿಗೆಲ್ಲ ನೀಡಲಾಗಿದೆ?
3.ಶೈಕ್ಷಣಿಕ ಸಾಲದ ಮೇಲಿನ ಬಡ್ಡಿ ಕಡಿತಗಳು
ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80ಇ ಅಡಿಯಲ್ಲಿ ಶೈಕ್ಷಣಿಕ ಸಾಲದ ಮೇಲೆ ಪಾವತಿಸಿದ ಬಡ್ಡಿ ಮೇಲೆ ನೀವು ಕಡಿತ ಕ್ಲೇಮ್ ಮಾಡಬಹುದು. ನಿಮ್ಮ ಸಂಗಾತಿ, ಮಕ್ಕಳು ಅಥವಾ ವಿದ್ಯಾರ್ಥಿ ಹೀಗೆ ಯಾರಿಗೆ ನೀವು ಕಾನೂನಾತ್ಮಕ ಪಾಲಕರಾಗಿದ್ದೀರೋ ಅವರ ಉನ್ನತ ಶಿಕ್ಷಣಕ್ಕೆ ಪಡೆದ ಸಾಲದ ಮೇಲೆ ಪಾವತಿಸಿರುವ ಬಡ್ಡಿಗೆ ತೆರಿಗೆ ಕಡಿತ ಕ್ಲೇಮ್ ಮಾಡಬಹುದು. ನೀವು ಸಾಲ ಪಾವತಿಸಲು ಪ್ರಾರಂಭಿಸಿದ ವರ್ಷದಿಂದ ಎಂಟು ವರ್ಷಗಳ ಅವಧಿಯ ತನಕ ನೀವು ಈ ಕಡಿತದ ಸೌಲಭ್ಯ ಪಡೆಯಬಹುದು.
4.ದಾನಗಳ ಮೇಲಿನ ಕಡಿತಗಳು
ಕೇಂದ್ರ ಸರ್ಕಾರ ಬೆಂಬಲಿತ ನಿಧಿಗೆ ಮಾಡಿದ ದಾನಗಳ ಮೇಲೆ ಕೂಡ ತೆರಿಗೆ ಕ್ಲೇಮ್ ಮಾಡಬಹುದು. ಉದಾಹರಣೆಗೆ ನೀವು ಪ್ರಧಾನ ಮಂತ್ರಿಗಳ ಪರಿಹಾರ ನಿಧಿ, ಮುಖ್ಯಮಂತ್ರಿಗಳ ಪರಿಹಾರ ನಿಧಿ ಇತ್ಯಾದಿಗೆ ದಾನ ಮಾಡಿದ್ದರೆ ಶೇ.100ರಷ್ಟು ತೆರಿಗೆ ಕಡಿತವನ್ನು ಕ್ಲೇಮ್ ಮಾಡಬಹುದು. ಇತರ ಪ್ರಕರಣಗಳಲ್ಲಿ ನೀವು ಶೇ.50ರಷ್ಟು ಕಡಿತಗಳನ್ನು ಪಡೆಯಲು ಅರ್ಹತೆ ಹೊಂದಿದ್ದೀರಿ.
ITR Filing:ಜು. 31ರೊಳಗೆ ಐಟಿಆರ್ ಸಲ್ಲಿಕೆ ಮಾಡದಿದ್ರೆ ಬೀಳುತ್ತೆ 5 ಸಾವಿರ ರೂ. ದಂಡ; ತೆರಿಗೆ ರೀಫಂಡ್ ಕೂಡ ಇಲ್ಲ!
5. ಮುನ್ನೆಚ್ಚರಿಕಾ ಆರೋಗ್ಯ ತಪಾಸಣೆಗಳು
60 ವರ್ಷ ಕೆಳಗಿನ ಸ್ವಂತ, ಅವಲಂಬಿತ ಮಕ್ಕಳು, ಸಂಗಾತಿ ಅಥವಾ ಪೋಷಕರು ಸೆಕ್ಷನ್ 80ಡಿ ಅಡಿಯಲ್ಲಿ ಮುನ್ನೆಚ್ಚರಿಕಾ ಆರೋಗ್ಯ ತಪಾಸಣೆಗಳ ಮೇಲೆ 5,000ರೂ. ತನಕ ತೆರಿಗೆ ಪ್ರಯೋಜನಗಳನ್ನು ಪಡೆಯಬಹುದು. ಇನ್ನು 60 ವರ್ಷ ಅಥವಾ ಮೇಲ್ಪಟ್ಟ ಪೋಷಕರು 7,000ರೂ. ತನಕ ತೆರಿಗೆ ಪ್ರಯೋಜನ ಕ್ಲೇಮ್ ಮಾಡಬಹುದು ಎಂದು ಬಲ್ವಂತ್ ಜೈನ್ ತಿಳಿಸಿದ್ದಾರೆ.
