ITR ಫೈಲ್ ಮಾಡುವಾಗ ತಪ್ಪಾದ್ರೆ ಚಿಂತೆ ಬೇಡ, ಸರಿಪಡಿಸಲು ಅವಕಾಶವಿದೆ; ಅದು ಹೇಗೆ? ಇಲ್ಲಿದೆ ಮಾಹಿತಿ
ಐಟಿಆರ್ ಫೈಲ್ ಮಾಡುವಾಗ ಸಣ್ಣಪುಟ್ಟ ತಪ್ಪುಗಳಾಗುವುದು ಸಹಜ. ಆದಾಯ ತೆರಿಗೆ ಇಲಾಖೆ ಕೂಡ ತೆರಿಗೆದಾರರಿಗೆ ಈ ತಪ್ಪುಗಳನ್ನು ಸರಿಪಡಿಸಲು ಅವಕಾಶ ಕಲ್ಪಿಸಿದೆ. ಹಾಗಾದ್ರೆ ಐಟಿಆರ್ ನಲ್ಲಿ ತಪ್ಪುಗಳಾಗಿದ್ರೆ ಅದನ್ನು ಸರಿಪಡಿಸೋದು ಹೇಗೆ? ಇಲ್ಲಿದೆ ಮಾಹಿತಿ.
Business Desk: 2022-23ನೇ ಹಣಕಾಸು ಸಾಲಿನ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಗೆ ಜುಲೈ 31 ಅಂತಿಮ ದಿನಾಂಕ. ಐಟಿಆರ್ ಸಲ್ಲಿಕೆಯನ್ನು ಆನ್ ಲೈನ್ ಹಾಗೂ ಆಪ್ ಲೈನ್ ಮೂಲಕ ಮಾಡಬಹುದು. ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಕೆ ಮಾಡುವಾಗ ಸಣ್ಣಪುಟ್ಟ ತಪ್ಪುಗಳನ್ನು ಮಾಡೋದು ಸಹಜ. ಆದಾಯ ತೆರಿಗೆ ಇಲಾಖೆ ಕೂಡ ತೆರಿಗೆದಾರರಿಗೆ ಈ ತಪ್ಪುಗಳನ್ನು ಸರಿಪಡಿಸಲು ಅವಕಾಶ ಕಲ್ಪಿಸಿದೆ. ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 139(5) ತೆರಿಗೆದಾರರಿಗೆ ಪರಿಷ್ಕೃತ ರಿಟರ್ನ್ ಸಲ್ಲಿಕೆ ಮಾಡುವ ಮೂಲಕ ತಮ್ಮ ಮೂಲ ತೆರಿಗೆ ರಿಟರ್ನ್ ನಲ್ಲಿನ ತಪ್ಪುಗಳನ್ನು ಸರಿಪಡಿಸಲು ಅವಕಾಶ ಕಲ್ಪಿಸಿದೆ. ಐಟಿಆರ್ ನಲ್ಲಿರುವ ತಪ್ಪುಗಳನ್ನು ಸರಿಪಡಿಸಲು ತೆರಿಗೆದಾರರು ಸಂಬಂಧಪಟ್ಟ ಮೌಲ್ಯಮಾಪನ ವರ್ಷ ಕೊನೆಗೊಳ್ಳುವ ಮುನ್ನ ಪರಿಷ್ಕೃತ ರಿಟರ್ನ್ ಸಲ್ಲಿಕ ಮಾಡಬೇಕು. ಮೌಲ್ಯಮಾಪನ ವರ್ಷವೆಂದ್ರೆ ಐಟಿಆರ್ ಸಲ್ಲಿಕೆ ಮಾಡಿರುವ ಹಣಕಾಸು ವರ್ಷದ ಬೆನ್ನಲ್ಲೇ ಬರುವ ವರ್ಷ. ಪರಿಷ್ಕೃತ ಐಟಿಆರ್ ಸಲ್ಲಿಕೆ ಅಂದ್ರೆ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 139(5) ಅಡಿಯಲ್ಲಿ ಬರುವ ಅಗತ್ಯ ತಿದ್ದುಪಡಿಗಳನ್ನೊಳಗೊಂಡ ಹೊಸ ರಿಟರ್ನ್ ಸಲ್ಲಿಕೆ. ಪರಿಷ್ಕೃತ ರಿಟರ್ನ್ ಫೈಲ್ ಮಾಡುವ ಮೂಲಕ ತೆರಿಗೆದಾರರು ನಿಖರ ಮಾಹಿತಿಯೊಂದಿಗೆ ತಮ್ಮ ರಿಟರ್ನ್ ಅನ್ನು ಮರು ಸಲ್ಲಿಕೆ ಮಾಡಬೇಕು. ಪರಿಷ್ಕೃತ ರಿಟರ್ನ್ ಸಲ್ಲಿಕೆ ಮಾಡುವಾಗ ತಪ್ಪುಗಳನ್ನು ಸರಿಪಡಿಸಲು ಮೂಲ ರಿಟರ್ನ್ ಮಾಹಿತಿಗಳನ್ನು ನೀಡುವುದು ಅಗತ್ಯ.
ಪರಿಷ್ಕೃತ ಐಟಿಆರ್ ಸಲ್ಲಿಕೆ ಹೇಗೆ?
*ಆದಾಯ ತೆರಿಗೆ ಇಲಾಖೆ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ.
*ನಿಮ್ಮ ಯೂಸರ್ ಐಡಿ (ಪ್ಯಾನ್) ಹಾಗೂ ಕಾಪ್ಚಾ ಕೋಡ್ ಬಳಸಿ ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್ ಗೆ ಲಾಗಿನ್ ಆಗಿ.
*ಲಾಗಿನ್ ಆದ ಬಳಿಕ ಇ-ಫೈಲಿಂಗ್ ಮೆನುಗೆ ತೆರಳಿ. ಈಗ 'Income Tax Return'ಲಿಂಕ್ ಮೇಲೆ ಕ್ಲಿಕ್ ಮಾಡಿ.
*ಮುಂದಿನ ಪುಟದಲ್ಲಿ ಸೂಕ್ತ ಮೌಲ್ಯಮಾಪನ ವರ್ಷ, ಐಟಿಆರ್ ಫಾರ್ಮ್ ಸಂಖ್ಯೆ ಹಾಗೂ ಫೈಲಿಂಗ್ ವಿಧಾನ (ಮೂಲ ಅಥವಾ ಪರಿಷ್ಕೃತ ರಿಟರ್ನ್) ಆಯ್ಕೆ ಮಾಡಿ.
*'Prepare and submit online'ಆಯ್ಕೆ ಮಾಡಿ.
ITR Filing:ಈಗ ಆನ್ ಲೈನ್ ನಲ್ಲಿ ಐಟಿಆರ್ ಫಾರ್ಮ್ 2 ಲಭ್ಯ; ಇದನ್ನು ಯಾರು ಬಳಸಬಹುದು?
*ಆನ್ ಲೈನ್ ಐಟಿಆರ್ ಫಾರ್ಮ್ ನಲ್ಲಿ 'General Information'ಟ್ಯಾಬ್ ಗೆ ತೆರಳಿ ಹಾಗೂ 'Revised Return'ಆಯ್ಕೆ ಮಾಡಿ.
*ಸ್ವೀಕೃತಿ ಸಂಖ್ಯೆ ಹಾಗೂ ಮೂಲ ಐಟಿಆರ್ ಫೈಲ್ ಮಾಡಿದ ದಿನಾಂಕ ನಮೂದಿಸಿ. ಪರಿಷ್ಕೃತ ಐಟಿಆರ್ ಫೈಲ್ ಮಾಡುವಾಗ 15 ಅಂಕೆಗಳ ಸ್ವೀಕೃತಿ ಸಂಖ್ಯೆ ನೀಡುವುದು ಕಡ್ಡಾಯ.
*ಈಗ ಆನ್ ಲೈನ್ ಐಟಿಆರ್ ಫಾರ್ಮ್ ನಲ್ಲಿ ಸಂಬಂಧಪಟ್ಟ ಮಾಹಿತಿಯನ್ನು ಭರ್ತಿ ಅಥವಾ ತಿದ್ದುಪಡಿ ಮಾಡಿ.
*ಒಮ್ಮೆ ನೀವು ಮಾಹಿತಿಯನ್ನು ಮರುಪರಿಶೀಲಿಸಿ, ದೃಢೀಕರಿಸಿದ ಬಳಿಕ ಐಟಿಆರ್ ಸಲ್ಲಿಕೆ ಮಾಡಿ.
ITR ಫೈಲ್ ಮಾಡುವಾಗ ಯಾವುದೇ ಕಾರಣಕ್ಕೂ ಈ 5 ತಪ್ಪುಗಳನ್ನು ಮಾಡ್ಬೇಡಿ
ರೀಫಂಡ್ ಕ್ಲೇಮ್ ಮಾಡಲು ಐಟಿಆರ್ ಸಲ್ಲಿಕೆ ಹೇಗೆ?
*ಹೆಚ್ಚುವರಿಯಾಗಿ ಪಾವತಿಸಿರುವ ತೆರಿಗೆಯನ್ನು ಆದಾಯ ತೆರಿಗೆ ಇಲಾಖೆ ನಿಮ್ಮ ಖಾತೆಗೆ ಕ್ರೆಡಿಟ್ ಮಾಡಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ನಿಮ್ಮ ಟ್ಯಾಕ್ಸ್ ಕ್ರೆಡಿಟ್ ಸ್ಟೇಟ್ಮೆಂಟ್ (ಫಾರ್ಮ್ 26AS) ಪರಿಶೀಲಿಸಿ.
*ನೀವು ಐಟಿಆರ್ ಸಲ್ಲಿಕೆ ಮಾಡಿದ ಬಳಿಕ ಹಾಗೂ ನಿಮ್ಮ ಟ್ಯಾಕ್ಸ್ ಕ್ರೆಡಿಟ್ ಸ್ಟೇಟ್ಮೆಂಟ್ ಪರಿಶೀಲಿಸಿದ ಬಳಿಕ ಹೆಚ್ಚುವರಿಯಾಗಿ ಪಾವತಿಸಿದ ತೆರಿಗೆಯ ರೀಫಂಡ್ ಕ್ಲೇಮ್ ಮಾಡಬಹುದು.
*ಆದಾಯ ತೆರಿಗೆ ಇಲಾಖೆ ಇ-ಪೋರ್ಟಲ್ ನಲ್ಲಿ ರೀಫಂಡ್ ಮನವಿ ಸಲ್ಲಿಕೆ ಮಾಡುವ ಮೂಲಕ ನೀವು ರೀಫಂಡ್ ಮೊತ್ತವನ್ನು ಪಡೆಯಬಹುದು.
*ಒಮ್ಮೆ ನೀವು ರೀಫಂಡ್ ಮನವಿ ಸಲ್ಲಿಕೆ ಮಾಡಿದ ಬಳಿಕ ನಿಮ್ಮ ರೀಫಂಡ್ ಸ್ಟೇಟಸ್ ಅನ್ನು ಆನ್ ಲೈನ್ ನಲ್ಲಿ ಪರಿಶೀಲಿಸಬಹುದು.
*ಒಂದು ವೇಳೆ ರೀಫಂಡ್ ಕ್ಲೇಮ್ ಮಾಡುವಾಗ ಯಾವುದೇ ತೊಂದರೆ ಎದುರಾದರೆ ತೆರಿಗೆ ಸಲಹೆಗಾರ ಅಥವಾ ಸಿಎ ಅವರಿಂದ ಸಲಹೆ ಪಡೆಯಿರಿ.