ITR Filing: 2022-23ನೇ ಹಣಕಾಸು ಸಾಲಿನ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಗೆ ಈ 10 ದಾಖಲೆಗಳು ಅಗತ್ಯ
2022-23ನೇ ಹಣಕಾಸು ಸಾಲಿನ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಗೆ ಜುಲೈ 31 ಅಂತಿಮ ಗಡುವು. ಈಗಾಗಲೇ ಆದಾಯ ತೆರಿಗೆ ಇಲಾಖೆ ವಿವಿಧ ನಮೂನೆಯ ಐಟಿಆರ್ ಫಾರ್ಮ್ ಗಳನ್ನು ಕೂಡ ಬಿಡುಗಡೆ ಮಾಡಿದೆ. ಇನ್ನು ಐಟಿಆರ್ ಸಲ್ಲಿಕೆ ಮಾಡುವಾಗ ಕೆಲವು ದಾಖಲೆಗಳು ಅಗತ್ಯ. ಹಾಗಾದ್ರೆ ಐಟಿಆರ್ ಫೈಲ್ ಮಾಡುವಾಗ ತೆರಿಗೆದಾರರ ಬಳಿ ಅಗತ್ಯವಾಗಿ ಇರಲೇಬೇಕಿರುವ 10 ದಾಖಲೆಗಳು ಯಾವುವು? ಇಲ್ಲಿದೆ ಮಾಹಿತಿ.
Business Desk: 2022-23ನೇ ಹಣಕಾಸು ಸಾಲಿನ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಗೆ ಜುಲೈ 31 ಅಂತಿಮ ದಿನಾಂಕ. ಐಟಿಆರ್ ಸಲ್ಲಿಕೆಯನ್ನು ಆನ್ ಲೈನ್ ಹಾಗೂ ಆಪ್ ಲೈನ್ ಮೂಲಕ ಮಾಡಬಹುದು. ಇನ್ನು ವಿವಿಧ ತೆರಿಗೆದಾರರಿಗೆ ಏಳು ವಿಧದ ಐಟಿಆರ್ ಫಾರ್ಮ್ ಗಳು ಲಭ್ಯವಿವೆ. ಹೀಗಾಗಿ 2023-24ನೇ ಸಾಲಿನ ಮೌಲ್ಯಮಾಪನ ವರ್ಷಕ್ಕೆ ಐಟಿಆರ್ ಸಲ್ಲಿಕೆ ಮಾಡಲು ಸಮರ್ಪಕವಾದ ಅರ್ಜಿ ನಮೂನೆಯನ್ನು ಆಯ್ಕೆ ಮಾಡೋದು ಅಗತ್ಯ. ಆದಾಯ ತೆರಿಗೆ ಇಲಾಖೆ ಇ-ಫೈಲಿಂಗ್ ಪೋರ್ಟಲ್ ನಲ್ಲಿ ಕಳೆದ ಕೆಲವು ವರ್ಷಗಳಿಂದ ಸಾಕಷ್ಟು ಬದಲಾವಣೆ ಮಾಡಲಾಗಿದ್ದು, ಐಟಿಆರ್ ಸಲ್ಲಿಕೆ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದೆ. ಹೀಗಾಗಿ ಯಾವುದೇ ತೆರಿಗೆ ತಜ್ಞರ ಅಗತ್ಯವಿಲ್ಲದೆ ಈಗ ಐಟಿಆರ್ ಸಲ್ಲಿಕೆ ಮಾಡಬಹುದು. ಆದರೆ, ಹೀಗೆ ಐಟಿಆರ್ ಸಲ್ಲಿಕೆ ಮಾಡುವಾಗ ಯಾವುದೇ ತಪ್ಪುಗಳು ನಡೆಯದಂತೆ ಎಚ್ಚರ ವಹಿಸೋದು ಅಗತ್ಯ. ಹಾಗೆಯೇ ಐಟಿಆರ್ ಫೈಲ್ ಮಾಡುವಾಗ ಕೆಲವು ದಾಖಲೆಗಳು ಅಗತ್ಯ. ಹಾಗಾದ್ರೆ ಐಟಿಆರ್ ಫೈಲ್ ಮಾಡುವಾಗ ತೆರಿಗೆದಾರರ ಬಳಿ ಅಗತ್ಯವಾಗಿ ಇರಲೇಬೇಕಿರುವ 10 ದಾಖಲೆಗಳು ಯಾವುವು? ಇಲ್ಲಿದೆ ಮಾಹಿತಿ.
1.ಪ್ಯಾನ್ ಕಾರ್ಡ್: ಆದಾಯ ತೆರಿಗೆ ರಿಟರ್ನ್ (ITR) ಫೈಲ್ ಮಾಡುವಾಗ ಪ್ಯಾನ್ ಕಾರ್ಡ್ ಅಗತ್ಯವಾಗಿ ಬೇಕಿರುತ್ತದೆ. ಒಂದು ಹಣಕಾಸು ಸಾಲಿನಲ್ಲಿ ನಡೆದ ಎಲ್ಲ ಪ್ರಮುಖ ಹಣಕಾಸಿನ ವಹಿವಾಟುಗಳಿಗೆ ಪ್ಯಾನ್ ಕಾರ್ಡ್ ಮಾಹಿತಿಗಳು ಅಗತ್ಯ. ಮನೆ, ಚಿನ್ನ ಖರೀದಿ ಇತ್ಯಾದಿಗೆ ಟಿಡಿಎಸ್ ಕಡಿತ ಮಾಡಲು ಪ್ಯಾನ್ ಅಗತ್ಯ. ಪ್ಯಾನ್ ಕಾರ್ಡ್ ಅನ್ನು ಆದಾಯ ತೆರಿಗೆ ಇಲಾಖೆ ವಿತರಿಸುತ್ತದೆ.
ITR ಫೈಲ್ ಮಾಡುವಾಗ ಯಾವುದೇ ಕಾರಣಕ್ಕೂ ಈ 5 ತಪ್ಪುಗಳನ್ನು ಮಾಡ್ಬೇಡಿ
2.ಆಧಾರ್ ಕಾರ್ಡ್: ಐಟಿಆರ್ ಸಲ್ಲಿಕೆ ಸಮಯದಲ್ಲಿ ಆಧಾರ್ ಕಾರ್ಡ್ ಕೂಡ ಅತ್ಯಗತ್ಯ. ಪ್ಯಾನ್ ಕಾರ್ಡ್ ಬದಲಿಗೆ ಆಧಾರ್ ಕಾರ್ಡ್ ಬಳಸಿ ಐಟಿಆರ್ ಸಲ್ಲಿಕೆ ಮಾಡಬಹುದು. ಇನ್ನು ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 139AAರ ಅನ್ವಯ ಐಟಿಆರ್ ಫೈಲ್ ಮಾಡುವಾಗ ತೆರಿಗೆದಾರ ಆತ/ಆಕೆಯ ಆಧಾರ್ ಕಾರ್ಡ್ ಮಾಹಿತಿಗಳನ್ನು ನೀಡಬೇಕು. ಒಂದು ವೇಳೆ ತೆರಿಗೆದಾರ ಆಧಾರ್ ಕಾರ್ಡ್ ಹೊಂದಿರದಿದ್ರೆ ಆತ ಅಥವಾ ಆಕೆ ಅದಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದರ ಆಗ ಅವರು ನೋಂದಣಿ ಸಂಖ್ಯೆ ನೀಡಬಹುದು. ಇನ್ನು 2023ರ ಜೂನ್ 30ರೊಳಗೆ ಆಧಾರ್ ಹಾಗೂ ಪ್ಯಾನ್ ಕಾರ್ಡ್ ಲಿಂಕ್ ಮಾಡೋದು ಕೂಡ ಅಗತ್ಯ.
3.ಫಾರ್ಮ್ 16: ವೇತನ ಪಡೆಯುವ ಉದ್ಯೋಗಿಗಳಿಗೆ ಐಟಿಆರ್ ಫೈಲ್ ಮಾಡಲು ಫಾರ್ಮ್ 16 ಅತೀಮುಖ್ಯ ದಾಖಲೆಯಾಗಿದೆ. ಫಾರ್ಮ್ 16 ಆಧಾರದಲ್ಲಿ ಐಟಿಆರ್ ಫೈಲ್ ಮಾಡಲಾಗುತ್ತದೆ. ಈ ಫಾರ್ಮ್ 16 ಅನ್ನು ಉದ್ಯೋಗದಾತ ಸಂಸ್ಥೆಗಳು ನೀಡುತ್ತವೆ.
4.ಫಾರ್ಮ್ 16A, 16B, 16C:ಇವು ಉದ್ಯೋಗಿಗಳಿಗೆ ಅವರ ಉದ್ಯೋಗದಾತ ಸಂಸ್ಥೆಗಳು ನೀಡುವ ಟಿಡಿಎಸ್ ಪ್ರಮಾಣಪತ್ರಗಳು. ಒಂದು ವೇಳೆ ನೀವು ಆಸ್ತಿ ಖರೀದಿ ಅಥವಾ ಮಾರಾಟ ಮಾಡಿದ್ದರೆ ಅಥವಾ ಬಾಡಿಗೆಯಿಂದ ವೇತನ ಪಡೆದಿದ್ದರೆ, ಈ ಅರ್ಜಿಗಳನ್ನು ಬಳಸಲಾಗುತ್ತದೆ. ಫಾರ್ಮ್ 16ಎ ಅನ್ನು ತೆರಿಗೆ ಕಡಿತ ಮಾಡೋರು, 16B ಅನ್ನು ಚರ ಆಸ್ತಿ ಖರೀದಿದಾರರು ಹಾಗೂ 16C ಅನ್ನು ವ್ಯಕ್ತಿ ಅಥವಾ ಹಿಂದೂ ಅವಿಭಜಿತ ಕುಟುಂಬ ಬಾಡಿಗೆ ಪಾವತಿಗೆ ನೀಡುತ್ತದೆ.
5.ಬ್ಯಾಂಕ್ ಸ್ಟೇಟ್ಮೆಂಟ್ಸ್: ಐಟಿಆರ್ ಫೈಲ್ ಮಾಡಲು ಬ್ಯಾಂಕ್ ಸ್ಟೇಟ್ಮೆಂಟ್ಸ್ ಕೂಡ ಅಗತ್ಯ. ನಿಮ್ಮ ಹೆಸರು, ಖಾತೆ ಸಂಖ್ಯೆ, ಐಎಫ್ ಎಸ್ ಸಿ ಕೋಡ್ ಇತ್ಯಾದಿ ಬ್ಯಾಂಕ್ ಖಾತೆ ಮಾಹಿತಿಗಳನ್ನು ಆದಾಯ ತೆರಿಗೆ ರಿಟರ್ನ್ ನಲ್ಲಿ ನಮೂದಿಸೋದು ಅಗತ್ಯ. ತೆರಿಗೆ ರೀಫಂಡ್ ಪ್ರಕ್ರಿಯೆಗೆ ಆದಾಯ ತೆರಿಗೆ ಇಲಾಖೆ ಬ್ಯಾಂಕ್ ಖಾತೆಯನ್ನು ಅಗತ್ಯವಾಗಿ ಪರಿಶೀಲಿಸುತ್ತದೆ.
ಆದಾಯ ತೆರಿಗೆ ವಿವರ ಸಲ್ಲಿಕೆಗೆ ಚಾಲನೆ: ಆನ್‌ಲೈನ್ ಮೂಲಕವೇ ಹೀಗೆ ಸಲ್ಲಿಸಿ..
6.ಫಾರ್ಮ್ 26AS: ಆದಾಯ ತೆರಿಗೆ ಪೋರ್ಟಲ್ ನಿಂದ ಫಾರ್ಮ್ 26AS ಡೌನ್ ಲೋಡ್ ಮಾಡಬಹುದು. ಇದು ತೆರಿಗೆ ಪಾಸ್ ಬುಕ್ ಮಾದರಿಯಲ್ಲೇ ವಾರ್ಷಿಕ ತೆರಿಗೆ ಸ್ಟೇಟ್ಮೆಂಟ್ ಆಗಿದೆ. ಇದರಲ್ಲಿ ನೀವು ಪಾವತಿಸಿದ ತೆರಿಗೆ ಹಾಗೂ ನಿಮ್ಮ ಪ್ಯಾನ್ ಆಧಾರದಲ್ಲಿ ಸರ್ಕಾರ ಕಡಿತಗೊಳಿಸಿದ ತೆರಿಗೆಯ ಮಾಹಿತಿಗಳು ಇರುತ್ತವೆ.
7.ಹೂಡಿಕೆ ದಾಖಲೆಗಳು: ನೀವು ಹಳೆಯ ತೆರಿಗೆ ವ್ಯವಸ್ಥೆ ಅಡಿಯಲ್ಲಿ ಆದಾಯ ತೆರಿಗೆ ಫೈಲ್ ಮಾಡುತ್ತಿದ್ದರೆ ಕಡಿತ ಕ್ಲೇಮ್ ಮಾಡಲು ಹೂಡಿಕೆ ದಾಖಲೆಗಳು ಅಗತ್ಯ. ಇದರಲ್ಲಿ ಪಿಪಿಎಫ್, ಮ್ಯೂಚುವಲ್ ಫಂಡ್ಸ್ ಇತ್ಯಾದಿಗೆ ಸಂಬಂಧಿಸಿದ ದಾಖಲೆಗಳು ಇರುತ್ತವೆ. ಇವು ನಿಮ್ಮ ತೆರಿಗೆ ಹೊರೆ ತಗ್ಗಿಸುತ್ತವೆ.
8.ಬಾಡಿಗೆ ಒಪ್ಪಂದ: ನಿಮಗೆ ಯಾವುದೇ ಬಾಡಿಗೆಯಿಂದ ಆದಾಯ ಬರುತ್ತಿದ್ದರೆ, ಆಗ ಬಾಡಿಗೆ ಒಪ್ಪಂದ ಸಲ್ಲಿಕೆ ಅಗತ್ಯ.
9.ಮಾರಾಟ ಒಪ್ಪಂದ (Sale Deed):ಕಳೆದ ಹಣಕಾಸು ಸಾಲಿನಲ್ಲಿ ನೀವು ಯಾವುದೇ ಬಂಡವಾಳ ಗಳಿಕೆ ಹೊಂದಿದ್ದರೆ, ಐಟಿಆರ್ ಫೈಲ್ ಮಾಡುವಾಗ ಸೇಲ್ ಡೀಡ್ ಸಲ್ಲಿಕೆ ಮಾಡೋದು ಅಗತ್ಯ.
10.ಡಿವಿಡೆಂಡ್ ವಾರಂಟ್ಸ್ : ಐಟಿಆರ್ ಸಲ್ಲಿಕೆ ಮಾಡುವಾಗ ಡಿವಿಡೆಂಡ್ ವಾರಂಟ್ಸ್ ಕೂಡ ಅಗತ್ಯ. ಕಂಪನಿಗಳು ನಿವ್ವಳ ಲಾಭದಿಂದ ಷೇರುದಾರರಿಗೆ ಡಿವಿಡೆಂಡ್ಸ್ ನೀಡುತ್ತವೆ. ಇದು ವೈಯಕ್ತಿಕ ತೆರಿಗೆದಾರರ ವಾರ್ಷಿಕ ಆದಾಯ ಹೆಚ್ಚಿಸುತ್ತದೆ.