ಬೆಂಗಳೂರು(ಆ.29): ಕೇರಳದ ಜಲಪ್ರಳಯದ ಹಿನ್ನೆಲೆಯಲ್ಲಿ ಅಲ್ಲಿನ ಆದಾಯ ತೆರಿಗೆದಾರರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ಆದಾಯ ತೆರಿಗೆ ಸಲ್ಲಿಸಲು ನಿಗದಿ ಮಾಡಿದ್ದ ದಿನಾಂಕವನ್ನು ಕೇರಳ ಜನರಿಗಾಗಿ 15 ದಿನಗಳ ಕಾಲ ಮುಂದೂಡಲಾಗಿದೆ. ಐಟಿಆರ್ ಸಲ್ಲಿಸಲು ಇದೇ ಆಗಸ್ಟ್ 31 ಕೊನೆ ದಿನಾಂಕವಾಗಿತ್ತು. ಆದರೆ ಪ್ರವಾಹದ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ಈ ಅವಧಿಯನ್ನು ಸೆಪ್ಟೆಂಬರ್ 15 ರ ವರೆಗೆ ವಿಸ್ತರಿಸಿದೆ.

ಆದರೆ ಆದಾಯ ತೆರಿಗೆ ಇಲಾಖೆಯ ಈ ನಿರ್ಧಾರ ಇದೀಗ ವಿವಾದದ ಕಿಡಿ ಹೊತ್ತಿಸಿದೆ. ಕಾರಣ ಕೇರಳ ಮಾದರಿಯಲ್ಲೇ ಕರ್ನಾಟಕದ ಕೊಡಗಿನಲ್ಲೂ ಜಲಪ್ರಳಯವಾಗಿದ್ದು, ಐಟಿಆರ್ ಸಡಿಲಿಕೆ ಕೊಡಗಿಗೆ ಏಕಿಲ್ಲ ಎಂಬ ಪ್ರಶ್ನೆ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಜಲಪ್ರಳಯಕ್ಕೆ ಇಡೀ ಕೇರಳ ತತ್ತರಿಸಿ ಹೋಗಿರುವುದು ನಿಜ. ಕೇರಳಕ್ಕೆ 15 ದಿನಗಳ ಐಟಿಆರ್ ಅವಧಿ ವಿಸ್ತರಣೆ ಮಾಡಿದ್ದೂ ಒಳ್ಳೆಯ ನಡೆ. ಆದರೆ ಕೊಡಗಿನಲ್ಲೂ ಅಪಾರ ಪ್ರಮಾಣದ ಹಾನಿ ಸಂಭವಿಸಿದ್ದು, ಕೇರಳಿಗರಷ್ಟೇ ಕನ್ನಡಿಗರೂ ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಕೊಡಗು ಜಿಲ್ಲೆಗಷ್ಟೇ ಅನ್ವಯವಾಗುವಂತೆ ಐಟಿಆರ್ ಅವಧಿ ವಿಸ್ತರಣೆ ಮಾಡಬಹುದಿತ್ತು ಎಂಬುದು ಹಲವರ ಅಭಿಪ್ರಾಯ.