ನವದೆಹಲಿ(ಜ.09): ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅವರ ಪುತ್ರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ 2011-12ರಲ್ಲಿ ಸುಮಾರು 100 ಕೋಟಿ ರೂ. ಆದಾಯ ತೆರಿಗೆ ಪಾವತಿಸದೆ ವಂಚಿಸಿದ್ದಾರೆ ಎಂದು ತೆರಿಗೆ ಇಲಾಖೆ ಆರೋಪಿಸಿದೆ. ಅಲ್ಲದೇ ಈ ಕುರಿತು ಇಬ್ಬರಿಗೂ ನೊಟೀಸ್ ಜಾರಿ ಮಾಡಿದೆ.

ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಕೇಸಿಗೆ ಸಂಬಂಧಪಟ್ಟಂತೆ ಆದಾಯ ಕುರಿತು ಪರಾಮರ್ಶೆ ನಡೆಸಿದ ನಂತರ, ಆದಾಯ ತೆರಿಗೆ ಇಲಾಖೆಗೆ ಆದಾಯ ಘೋಷಣೆ ಮತ್ತು ತೆರಿಗೆ ಪಾವತಿಯಲ್ಲಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ ಎನ್ನಲಾಗಿದೆ.

2011-12ರಲ್ಲಿ ಸೋನಿಯಾ ಗಾಂಧಿ 155 ಕೋಟಿ ರೂ. ಹಾಗೂ ರಾಹುಲ್ ಗಾಂಧಿ 155.4 ಕೋಟಿ ರೂ. ಆದಾಯ ಘೋಷಿಸಿದ್ದರು. ಆದರೆ ಅಸಲಿಗೆ ಇವರಿಬ್ಬರೂ ಅದಕ್ಕಿಂತ ಹೆಚ್ಚಿನ ಆದಾಯ ಹೊಂದಿದ್ದರು ಎಂದು ಹೇಳಲಾಗಿದೆ.

ಇದಕ್ಕೂ ಮುನ್ನ ಸುಪ್ರೀಂ ಕೋರ್ಟ್ ನಲ್ಲಿ ತೆರಿಗೆ ಮೌಲ್ಯಮಾಪನ ಮರು ಆರಂಭದ ವಿರುದ್ಧ ಸೋನಿಯಾ ಗಾಂಧಿಯವರ ಪರವಾಗಿ ವಾದ ಮಂಡಿಸಿದ ಪಿ ಚಿದಂಬರಂ, 44 ಕೋಟಿ ರೂ. ತೆರಿಗೆ ಹೇರಿಕೆಯನ್ನು ಅಸಮರ್ಪಕವಾಗಿ ವಿಧಿಸಲಾಗಿದೆ ಎಂದು ಹೇಳಿದ್ದಾರೆ.