Asianet Suvarna News Asianet Suvarna News

ಏಪ್ರಿಲ್‌ನಿಂದ ಬೆಂಗಳೂರಲ್ಲೂ ಐಫೋನ್‌ ಉತ್ಪಾದನೆ: ಸಚಿವ ಪ್ರಿಯಾಂಕ್‌ ಖರ್ಗೆ

ಜುಲೈನೊಳಗೆ ದೇವನಹಳ್ಳಿಯಲ್ಲಿ 300 ಎಕರೆ ಹಸ್ತಾಂತರ, 50000 ಜನರಿಗೆ ಉದ್ಯೋಗ: ಐಟಿ ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ 

iPhone Production in Bengaluru from April Says Minister Priyank Kharge grg
Author
First Published Jun 2, 2023, 1:54 PM IST

ಬೆಂಗಳೂರು(ಜೂ.02):  ಐಫೋನ್‌ ತಯಾರಿಕಾ ಕಂಪನಿ ಫಾಕ್ಸ್‌ಕಾನ್‌ 2024ರ ಏಪ್ರಿಲ್‌ ವೇಳೆಗೆ ದೇವನಹಳ್ಳಿ ಘಟಕದಲ್ಲಿ ತನ್ನ ಉತ್ಪಾದನೆ ಆರಂಭಿಸುವ ಗುರಿ ಹೊಂದಿದ್ದು, ಇದಕ್ಕೆ ಪೂರಕವಾಗಿ ಜುಲೈನಲ್ಲಿ ಕಂಪನಿಗೆ ಅಗತ್ಯವಿರುವ ಸಂಪೂರ್ಣ ಭೂಮಿ ಹಸ್ತಾಂತರಿಸುವುದಾಗಿ ಐಟಿ ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

ಫಾಕ್ಸ್‌ಕಾನ್‌ ಕಂಪನಿಯ ಜಾಜ್‌ರ್‍ ಚು ನೇತೃತ್ವದಲ್ಲಿ ಉನ್ನತ ಅಧಿಕಾರಿಗಳ ತಂಡವು ಖನಿಜ ಭವನದ ಇನ್ವೆಸ್ವ್‌ ಕರ್ನಾಟಕ ಫೋರಂ ಕಚೇರಿಯಲ್ಲಿ ಗುರುವಾರ ಐಟಿ ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ಹಾಗೂ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿತು.

ಆ್ಯಪಲ್‌ ಕೋಲಾರ ಫ್ಯಾಕ್ಟರಿ ಟಾಟಾ ತೆಕ್ಕೆಗೆ: 'ಐಫೋನ್‌ 15' ಭಾರತದಲ್ಲೇ ಉತ್ಪಾದನೆ

ಫಾಕ್ಸ್‌ಕಾನ್‌ ಕಂಪನಿಗೆ ಭೂಮಿ ಹಸ್ತಾಂತರಿಸುವ ಮೂಲಕ ಹೊಸ ಸರ್ಕಾರವು 13,600 ಕೋಟಿ ರು. ಮೊತ್ತದ ಹೂಡಿಕೆ ಹಾಗೂ ಇದರಿಂದ 50,000 ಜನರಿಗೆ ಉದ್ಯೋಗ ಒದಗಿಸುವ ಯೋಜನೆ ಜಾರಿಗೆ ವೇಗ ನೀಡಿದಂತಾಗಿದೆ. ತೈವಾನ್‌ ಮೂಲದ ಕಂಪನಿಯು ಮೂರು ಹಂತಗಳಲ್ಲಿ ಘಟಕ ನಿರ್ಮಾಣ ಪೂರೈಸಿದ ನಂತರ ವರ್ಷಕ್ಕೆ 2 ಕೋಟಿ ಮೊಬೈಲ್‌ಗಳನ್ನು ತಯಾರಿಸುವ ಗುರಿ ಹೊಂದಿದೆ ಎಂದು ಹೇಳಿದರು.

ದೇವನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಈ ಕಂಪನಿಯ ಕಾರ್ಯ ಯೋಜನೆಗಾಗಿ 300 ಎಕರೆ ಗುರುತಿಸಲಾಗಿದೆ. 2024ರ ಏಪ್ರಿಲ್‌ 1ರ ವೇಳೆಗೆ ಕಂಪನಿಯು ಇಲ್ಲಿ ಉತ್ಪಾದನೆ ಆರಂಭಿಸಲಿದೆ. ಇದನ್ನು ಗಮನದಲ್ಲಿರಿಸಿಕೊಂಡು ಜುಲೈ 1ಕ್ಕೆ ಮೊದಲೇ ಕಂಪನಿಗೆ ಭೂಮಿ ಹಸ್ತಾಂತರಿಸಲಾಗುವುದು. ಜೊತೆಗೆ ದಿನಕ್ಕೆ 50 ಲಕ್ಷ ಲೀಟರ್‌ ನೀರು ಬೇಕಾಗುವುದಾಗಿ ಕಂಪನಿ ತಿಳಿಸಿದೆ. ಅಗತ್ಯ ವಿದ್ಯುತ್‌, ನೀರು ಪೂರೈಕೆ, ರಸ್ತೆ ಸಂಪರ್ಕ ಇತ್ಯಾದಿ ಮೂಲಸೌಕರ್ಯಗಳನ್ನು ಒದಗಿಸಲಾಗುತ್ತದೆ. ಕಂಪನಿಯ ಸಿಬ್ಬಂದಿಗೆ ಬೇಕಾಗುವ ಕೌಶಲ ವಿವರಗಳನ್ನು ಕೂಡ ಕೇಳಲಾಗಿದೆ. ಅದಕ್ಕೆ ತಕ್ಕಂತೆ ಸರ್ಕಾರದ ವತಿಯಿಂದ ಅರ್ಹರಿಗೆ ಕೌಶಲ ತರಬೇತಿ ಕೊಟ್ಟು ಮಾನವ ಸಂಪನ್ಮೂಲ ಲಭ್ಯವಾಗಿಸಲು ಒತ್ತು ಕೊಡುವುದಾಗಿ ಸಚಿವರು ತಿಳಿಸಿದರು.

ಐಟಿ ಬಿಟಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಮಣ ರೆಡ್ಡಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್‌, ಇಲಾಖೆಯ ಆಯುಕ್ತರಾದ ಗುಂಜನ್‌ ಕೃಷ್ಣ ಇದ್ದರು.

Follow Us:
Download App:
  • android
  • ios