ದೇಶದ 8 ಹೆಸರಾಂತ ಉದ್ಯಮಿಗಳೊಂದಿಗೆ, ಜಿಂದಾಲ್ ನೇತೃತ್ವದಲ್ಲಿ ಇನ್ವೆಸ್ಟ್ ಕರ್ನಾಟಕ ಫೋರಂ
ರಾಜ್ಯಕ್ಕೆ ಬಂಡವಾಳ ಆಕರ್ಷಣೆ ಹಾಗೂ ಮಾರುಕಟ್ಟೆ ಸದೃಢಗೊಳಿಸಲು ಜಿಂದಾಲ್ ನೇತೃತ್ವದಲ್ಲಿ 8 ಹೆಸರಾಂತ ಉದ್ಯಮಿಗಳೊಂದಿಗೆ ಇನ್ವೆಸ್ಟ್ ಕರ್ನಾಟಕ ಫೋರಂ ಪುನಾರಚಿಸಲಾಗಿದೆ.
ಬೆಂಗಳೂರು (ಅ.17): ರಾಜ್ಯಕ್ಕೆ ಹೆಚ್ಚು ಬಂಡವಾಳ ಆಕರ್ಷಿಸುವ ಮತ್ತು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕವನ್ನು ಮಾರುಕಟ್ಟೆ ದೃಷ್ಟಿಯಿಂದ ಸದೃಢವಾಗಿ ಪ್ರತಿಷ್ಠಾಪಿಸುವ ಗುರಿಯೊಂದಿಗೆ ಕೈಗಾರಿಕಾ ಇಲಾಖೆಯು ಖ್ಯಾತ ಉದ್ಯಮಿ ಸಜ್ಜನ್ ಜಿಂದಾಲ್ ನೇತೃತ್ವದಲ್ಲಿ 'ಇನ್ವೆಸ್ಟ್ ಕರ್ನಾಟಕ ಫೋರಂ' (ಐಕೆಎಫ್) ಅನ್ನು ಪುನಾರಚಿಸಿದೆ.
ಐಕೆಎಫ್ ಪುನಾರಚನೆಗೆ ಸಂಬಂಧಿಸಿದಂತೆ ಅ.13ರಂದು ಆದೇಶ ಹೊರಡಿಸಲಾಗಿದೆ. ಜಿಂದಾಲ್ ಸ್ಟೀಲ್ ವರ್ಕ್ಸ್ ಉದ್ಯಮದ ಮಾಲೀಕರಾಗಿರುವ ಸಜ್ಜನ್ ಜಿಂದಾಲ್ ಅವರನ್ನು ಉಕ್ಕು ವಲಯದಿಂದ ಆಯ್ಕೆ ಮಾಡಲಾಗಿದ್ದು, ಇವರು ಫೋರಂನ ನಿರ್ದೇಶಕ ಮತ್ತು ಕೋ-ಚೇರ್ ಪರ್ಸನ್ ಆಗಿ ಕೆಲಸ ಮಾಡಲಿದ್ದಾರೆ ಎಂದು ಐಕೆಎಫ್ ಅಧ್ಯಕ್ಷರೂ ಆದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.
ಮಿಕ್ಕಂತೆ, ಆಟೋಮೊಬೈಲ್ ಕ್ಷೇತ್ರದಿಂದ ಕಿರ್ಲೋಸ್ಕರ್ ಸಿಸ್ಟಮ್ಸ್ ನ ಅಧ್ಯಕ್ಷೆ ಗೀತಾಂಜಲಿ ಕಿರ್ಲೋಸ್ಕರ್, ಏರೋಸ್ಪೇಸ್ ಮತ್ತು ರಕ್ಷಣಾ ವಲಯದಿಂದ ಏಕಸ್ ಇಂಕ್ ಸಮೂಹದ ಅಧ್ಯಕ್ಷ ಅರವಿಂದ್ ಮೆಳ್ಳಿಗೇರಿ, ಉತ್ಪಾದನಾ ಸೇವೆಗಳ ವಲಯದಿಂದ ಜೆಟ್ವರ್ಕ್ಸ್ ಕಂಪನಿಯ ಸಹಸಂಸ್ಥಾಪಕ ಅಂಕಿತ್ ಫತೇಪುರಿಯಾ ಮತ್ತು ಮಶೀನ್ ಟೂಲ್ಸ್ ವಲಯದಿಂದ ಕೆನ್ನಮೆಟಲ್ ವ್ಯವಸ್ಥಾಪಕ ನಿರ್ದೇಶಕ ವಿಜಯಕೃಷ್ಣನ್ ವೆಂಕಟೇಶನ್ ಅವರನ್ನು ಇನ್ವೆಸ್ಟ್ ಕರ್ನಾಟಕ ಫೋರಂನ ನಿರ್ದೇಶಕರುಗಳನ್ನಾಗಿ ನೇಮಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಕಾನೂನು ಪದವಿಗೆ ಸೇರದಿದ್ದರೆ ನಾನು ಕುರಿ ಕಾಯುತ್ತ ಇರಬೇಕಿತ್ತು: ಸಿದ್ದರಾಮಯ್ಯ
ಕಾರ್ಯತಂತ್ರ ಹೂಡಿಕೆ ಸಮಿತಿ (ಎಸ್ಐಸಿ) ರಚನೆ: ಇದರ ಜತೆಯಲ್ಲೇ ಇನ್ವೆಸ್ಟ್ ಕರ್ನಾಟಕ ಫೋರಂ ಅಡಿಯಲ್ಲಿ ಹೂಡಿಕೆ ಆಕರ್ಷಣೆಗೆ ಅಗತ್ಯ ಮಾರ್ಗದರ್ಶನ ನೀಡುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ಕಾರ್ಯತಂತ್ರ ಹೂಡಿಕೆ ಸಮಿತಿಯನ್ನು (Strategic Investment Committee-SIC) ಕೂಡ ರಚಿಸಲಾಗಿದೆ. ಇದಕ್ಕೆ ನಾನಾ ಉದ್ಯಮ ವಲಯಗಳಿಂದ 8 ಖ್ಯಾತನಾಮರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ ಎಂದು ಪಾಟೀಲ ತಿಳಿಸಿದ್ದಾರೆ.
ತಾವು ಅಧ್ಯಕ್ಷರಾಗಿರುವ ಈ ಸಮಿತಿಗೆ ಸರಕಾರವು ಮೆಸರ್ಸ್ ಎಎಂಡಿ ಇಂಕ್ ನಿರ್ದೇಶಕ ಮೃತ್ಯುಂಜಯ ಹಿರೇಮಠ, ಸಿಬಿಆರ್ ಇ ಸೌತ್ ಏಷ್ಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಮ್ ಟಿ ಚಂದನಾನಿ, ಆ್ಯಕ್ಸೆಲ್ ಪಾರ್ಟನರ್ಸ್ ಸಂಸ್ಥೆಯ ಪ್ರಶಾಂತ್ ಪ್ರಕಾಶ್, ಜೆರೋದಾ ಸಹ ಸಂಸ್ಥಾಪಕ ನಿಖಿಲ್ ಕಾಮತ್, ಪೆಪ್ಪರ್ ಗ್ಲೋಬಲ್ ಸಂಸ್ಥೆಯ ಹಿರಿಯ ವ್ಯವಸ್ಥಾಪಕ ನಿರ್ದೇಶಕ ರವಿ ಮಾನಚಂದ್, ಮೆರಿಕಾ ಗ್ರೂಪ್ ನ ಹೂಡಿಕೆ ನಿರ್ದೇಶಕ ಅಶ್ವಿನ್ ಕೃಷ್ಣಸ್ವಾಮಿ, ಕ್ಯಾಪಿಟಾಲ್ಯಾಂಡ್ ಸಿಇಒ ಗೌರೀಶಂಕರ್ ನಾಗಭೂಷಣಂ ಮತ್ತು ಖ್ಯಾತ ಉದ್ಯಮಿ ಕಾಸರಗೋಡು ಉಲ್ಲಾಸ್ ಕಾರಂತ್ ಅವರನ್ನು ಸದಸ್ಯರನ್ನಾಗಿ ಮಾಡಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಮೀಸಲಾತಿಗಾಗಿ ಸರ್ಕಾರಗಳ ಮುಂದೆ ಭಿಕ್ಷೆ ಬೇಡುವ ಅವಶ್ಯಕತೆಯಿಲ್ಲ: ಡಾ.ವಿಜಯ ಸಂಕೇಶ್ವರ
ಈ ಸಮಿತಿಯು ಅಮೆರಿಕ, ಜರ್ಮನಿ, ಫ್ರಾನ್ಸ್, ನೆದರ್ಲೆಂಡ್ಸ್, ಜಪಾನ್, ದಕ್ಷಿಣ ಕೊರಿಯಾ ಮತ್ತು ತೈವಾನ್ ದೇಶದ ಕಂಪನಿಗಳೊಂದಿಗೆ ವ್ಯವಹರಿಸಲಿದ್ದು, ಹೆಚ್ಚಿನ ಹೂಡಿಕೆಯನ್ನು ಸೆಳೆಯಲು ಶ್ರಮಿಸಲಿದೆ. ಇದರ ಜತೆಗೆ ಸುಗಮ ವಾಣಿಜ್ಯ ಸಂಸ್ಕೃತಿಯನ್ನು ರೂಢಿಸಲು ನೆರವು ನೀಡಲಿದೆ ಎಂದು ಸಚಿವರು ಹೇಳಿದ್ದಾರೆ. ಈ ಸಮಿತಿಯಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಮತ್ತು ಆಯುಕ್ತೆ ಗುಂಜನ್ ಕೃಷ್ಣ ಕೂಡ ಸದಸ್ಯರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.