Asianet Suvarna News Asianet Suvarna News

ಮೀಸಲಾತಿಗಾಗಿ ಸರ್ಕಾರಗಳ ಮುಂದೆ ಭಿಕ್ಷೆ ಬೇಡುವ ಅವಶ್ಯಕತೆಯಿಲ್ಲ: ಡಾ.ವಿಜಯ ಸಂಕೇಶ್ವರ

ವೀರಶೈವ -ಲಿಂಗಾಯತ ಸಮಾಜ ಬಾಂಧವರು ಎಂದಿಗೂ ಕೊಡುಗೈ ದಾನಿಗಳು. ಮೀಸಲಾತಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮುಂದೆ ಭಿಕ್ಷೆ ಬೇಡುವ ಬೇಡುವ ಅವಶ್ಯಕತೆಯಿಲ್ಲ ಎಂದು ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರಮನ್ ಡಾ.ವಿಜಯ ಸಂಕೇಶ್ವರ ಹೇಳಿದರು.

Dr Vijay Sankeshwar Talks Over Reservation At Hubballi gvd
Author
First Published Oct 17, 2023, 4:45 AM IST

ಹುಬ್ಬಳ್ಳಿ (ಅ.17): ವೀರಶೈವ -ಲಿಂಗಾಯತ ಸಮಾಜ ಬಾಂಧವರು ಎಂದಿಗೂ ಕೊಡುಗೈ ದಾನಿಗಳು. ಮೀಸಲಾತಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮುಂದೆ ಭಿಕ್ಷೆ ಬೇಡುವ ಬೇಡುವ ಅವಶ್ಯಕತೆಯಿಲ್ಲ ಎಂದು ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರಮನ್ ಡಾ.ವಿಜಯ ಸಂಕೇಶ್ವರ ಹೇಳಿದರು. ಸೋಮವಾರ ಸಂಜೆ ನಗರದ ಬಿವಿಬಿ ಕಾಲೇಜಿನ ಬಯೋಟೆಕ್ ಸೆಮಿನಾರ್ ಹಾಲ್‌ನಲ್ಲಿ ಉತ್ತರ ಕರ್ನಾಟಕದ ವೀರಶೈವ ಲಿಂಗಾಯತ ವಾಣಿಜ್ಯ ಮತ್ತು ಉದ್ಯಮಿಗಳ (ಎನ್‌ಕೆವಿಎಲ್‌ಐಸಿ) ಸಮಾರಂಭ ಹಾಗೂ ಬಿಜಿನೆಸ್ ಆ್ಯಪ್ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಶೈಕ್ಷಣಿಕ ಕ್ಷೇತ್ರದಲ್ಲಿ ವೀರಶೈವ ಲಿಂಗಾಯತ ಸಮಾಜ ಬಾಂಧವರದ್ದೇ ಆದ ಹೆಗ್ಗುರುತಿದೆ. ವ್ಯಾಪಾರ ಮತ್ತು ಒಕ್ಕಲುತನದಲ್ಲಿ ನಾವು ಕಿಂಗ್. ನಾನು ಉದ್ಯಮ ಆರಂಭಿಸಿದ ವೇಳೆ ನಮ್ಮವರೇ ನನಗೆ ಸಹಾಯ ಮಾಡಲಿಲ್ಲ. ಅವರೆಲ್ಲರ ಮಧ್ಯದಲ್ಲೂ ನಾನು ಬೆಳೆದೆ. ಕಾಶ್ಮೀರದಲ್ಲೂ ವಿಆರ್‌ಎಲ್ ಕಚೇರಿ ಆರಂಭಿಸಿದೆ. ವ್ಯಾಪಾರದಲ್ಲಿ ನಾನು ಬಂದರೆ ಕೆಲವರಲ್ಲಿ ನಡುಕು ಹುಟ್ಟುತ್ತಿತ್ತು. ನೀವು ಬೆಳೆದರೆ ಹಾಗೆಯೇ ಬೆಳೆಯಬೇಕು. ನಮ್ಮ ಕಾಲ ಮೇಲೆ ನಾವು ನಿಲ್ಲಬೇಕು. ಇದಕ್ಕಾಗಿಯೇ ನಿಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕು ಎಂದರು.

ಹೆದರಿಸಿ ರಾಜಕಾರಣ ಮಾಡುವುದೇ ಡಿಕೆಶಿ ಸ್ಟೈಲ್: ಸಿ.ಟಿ.ರವಿ

ವೀರಶೈವ ಲಿಂಗಾಯತ ಸಮಾಜ ದೊಡ್ಡದು. ಹಿಂದೆ ಸಿದ್ಧಗಂಗಾಮಠದ ಶ್ರೀಗಳು ಹೇಳಿದಂತೆ ವೀರಶೈವ ಲಿಂಗಾಯತ ಹಿಂದು ಧರ್ಮದ ಒಂದು ಭಾಗ. ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ವೀರಶೈವ ಲಿಂಗಾಯತ ಸಮಾಜದವರಿಂದ ನಾನು ಮುಖ್ಯಮಂತ್ರಿಯಾದೆ ಎಂದು ಹೇಳಿದ್ದರು. ಇಷ್ಟೊಂದು ಶಕ್ತಿ ಇರುವ ಸಮಾಜ ನಮ್ಮದು ಎಂದರು. ನಮ್ಮದೇ ಸಮಾಜದ ವೀರೇಂದ್ರ ಪಾಟೀಲ, ಬಿ.ಎಸ್. ಯಡಿಯೂರಪ್ಪ ಅವರಿಗೆ ಅನ್ಯಾಯವಾಯಿತು. ಬೇರೆ ಸಮಾಜದವರನ್ನು ಇದರಲ್ಲಿ ಹೀಗಳೆಯುವುದಿಲ್ಲ. ಆದರೆ, ನಮ್ಮ ಸಮಾಜದವರು ಉನ್ನತ ಸ್ಥಾನಕ್ಕೇರಲು ನಾವೆಲ್ಲರೂ ಶ್ರಮಿಸಬೇಕಿದೆ. 

ಸಮಾಜ ಬಾಂಧವರು ವ್ಯಾಪಾರ- ವಹಿವಾಟುಗಳಲ್ಲಿ ಗಟ್ಟಿ ನಿಲುವು ತಾಳಬೇಕು. ಅದರಲ್ಲೂ ಮನಸ್ಥಿತಿ ಬದಲಾಗದ ಹೊರತು ವ್ಯಾಪಾರ ವೃದ್ಧಿಯಾಗದು ಎಂದರು. ಕೆಸಿಸಿಐ ಮಾಜಿ ಅಧ್ಯಕ್ಷ ಶಂಕರಣ್ಣ ಮುನವಳ್ಳಿ ಮಾತನಾಡಿ, ನಾವೆಲ್ಲರೂ ಹೇಳಿದ ಹಾಗೆಯೇ ನಡೆದುಕೊಳ್ಳಬೇಕು. ನಮ್ಮದೇ ಶಿಕ್ಷಣ ಸಂಸ್ಥೆಯಲ್ಲಿ ಅನೇಕ ಸಮಾಜದ ವಿದ್ಯಾರ್ಥಿಗಳೂ ಇದ್ದಾರೆ. ನಾವು ಬೆಳೆಯುವುದರ ಜತೆಗೆ ಇನ್ನೊಬ್ಬರೂ ಬೆಳೆಯಬೇಕೆನ್ನುವವರು ನಾವು. ಹಾಗಾಗಿ ನಾವು ಉದ್ಯಮ ಸ್ಥಾಪಿಸಿ, ಇತರರಿಗೂ ಮಾದರಿಯಾಗಿ ನಿಲ್ಲಬೇಕು ಎಂದರು. ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಬೇರೆ ಸಮಾಜದವರಲ್ಲೂ ಒಗ್ಗಟ್ಟು ಇದೆ. 

ಕೃಷಿ ಕ್ಷೇತ್ರದ ಬೆಳವಣಿಗೆಗೆ ಹೈಟೆಕ್‌ ಹಬ್‌ ಸ್ಥಾಪನೆ: ಸಚಿವ ಚೆಲುವರಾಯಸ್ವಾಮಿ

ಆರ್ಥಿಕವಾಗಿ ಹಿಂದುಳಿದವರ ಏಳ್ಗೆಗೆ ಅವರು ಶ್ರಮಿಸುತ್ತಿದ್ದಾರೆ. ನಾವೂ ಕೂಡ ಇದೇ ಮಾರ್ಗವನ್ನು ಅನುಸರಿಸಬೇಕು. ಐಎಎಸ್, ಕೆಎಎಸ್ ಅಧಿಕಾರಿಗಳನ್ನು ನಮ್ಮ ಸಮಾಜದಿಂದ ಬೆಳೆಸಬೇಕು ಎಂದರು. ಉದ್ಯಮಿ ಜಯಂತ ಹುಂಬರವಾಡಿ, ವಿಪ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ, ಜೆಡಿಎಸ್ ಮಹಾನಗರ ಜಿಲ್ಲಾಧ್ಯಕ್ಷ ಗುರುರಾಜ ಹುಣಸೀಮರದ, ಉದ್ಯಮಿ ಸಂತೋಷ ಕೆಂಚಾಂಬ, ಉಮೇಶ ಪಾಟೀಲ ಮಾತನಾಡಿದರು. ಎನ್‌ಕೆವಿಎಲ್‌ಐಸಿ ಸಂಸ್ಥಾಪಕ ಅಧ್ಯಕ್ಷ ರಮೇಶ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷ ನಾಗರಾಜ ಎಲಿಗಾರ, ಕಾರ್ಯದರ್ಶಿ ಜಿ.ಜಿ. ದ್ಯಾವನಗೌಡ್ರ, ಉದ್ಯಮಿಗಳಾದ ಎಸ್.ಪಿ. ಸಂಶಿಮಠ, ಗಿರೀಶ ನಲವಡಿ, ವಿಜಯಕುಮಾರ ಪಾಟೀಲ ಸೇರಿದಂತೆ ಹಲವರಿದ್ದರು.

Follow Us:
Download App:
  • android
  • ios