ಅಮರಾವತಿ : ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸರ್ಕಾರಿ ನೌಕರರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ್ದಾರೆ. ಚುನಾವಣೆ ವೇಳೆ ನೀಡಿದ್ದ ಭರವಸೆ ಈಡೇರಿಸಲು ಮುಂದಾಗಿದ್ದು, ರಾಜ್ಯದ 5 ಲಕ್ಷ ಸರ್ಕಾರಿ ನೌಕರರಿಗೆ ಶೇ.27ರಷ್ಟು ಮಧ್ಯಂತರ ಪರಿಹಾರ ನೀಡಲು ಅಂಕಿತ ನೀಡಿದ್ದಾರೆ.

ಸರ್ಕಾರಿ ನೌಕರರಿಗೆ ನೀಡುವ ಮಧ್ಯಂತರ ಪರಿಹಾರ ನಿಧಿ 815 ಕೋಟಿ ಮೊತ್ತದಷ್ಟಾಗಲಿದ್ದು,  ಜುಲೈ 1 ರಿಂದ  5 ಫಲಾನುಭವಿಗಳು ಹಣದ ಮೊತ್ತ ಪಡೆಯಲಿದ್ದಾರೆ. 

ನೂತನವಾಗಿ ರಚಿತವಾದ ಸಚಿವ ಸಂಪುಟದೊಂದಿಗೆ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸಭೆ ನಡೆಸಿದ್ದು, ಸರ್ಕಾರಿ ನೌಕರರಿಗೆ ಮಧ್ಯಂತರ ಪರಿಹಾರ ಹಣ ಹಾಗೂ ಸಹಾಯಕ ಪಿಂಚಣಿ ಯೋಜನೆಗೆ ಒಪ್ಪಿಗೆ ಸೂಚಿಸಿದರು.

ಇದೇ ಸಭೆಯಲ್ಲಿ ಸಿಎಂ ಜಗನ್ ಮೋಹನ್ ರೆಡ್ಡಿ ತನ್ನ ಸಂಪುಟ ಸಹೋದ್ಯೋಗಿಗಳಿಗೆ ಖಡಕ್ ಎಚ್ಚರಿಕೆ ಸಂದೇಶವೊಂದನ್ನು ರವಾನಿಸಿದರು. ಒಂದು ವೇಳೆ ಯಾವುದೇ ಸಚಿವರ ಮೇಲೆ ಭ್ರಷ್ಟಾಚಾರ ಆರೋಪ ಕೇಳೀ ಬಂದಲ್ಲಿ ತಕ್ಷಣವೇ ಅಂತಹವರ ವಿರುದ್ಧ ಕ್ರಮ ಕೈಗೊಂಡು ಅಮಾನತುಗೊಳಿಸುವುದಾಗಿ ಹೇಳಿದರು. 

ಅಧಿಕಾರಿಗಳು ಸೂಚನೆ ನೀಡಿದ್ದು ಭ್ರಷ್ಟಾಚಾರವನ್ನು ರಾಜ್ಯದಲ್ಲಿ ಬುಡಸಮೇತ ಕಿತ್ತು ಹಾಕುವುದೇ ನಮ್ಮ ಉದ್ದೇಶ. ಈ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು.  ಜನರಿಗೆ ಉತ್ತ ಆಡಳಿತ ನೀಡುವುದೇ ನಮ್ಮ ಕರ್ತವ್ಯ ಎಂದರು.