ಭಾರತದ ಮೊದಲ ಬಜೆಟ್‌

ಭಾರತದ ಮೊದಲ ಬಜೆಟ್‌ ಅನ್ನು 1869ರ ಫೆಬ್ರವರಿ 18ರಂದು ಜೇಮ್ಸ್‌ ವಿಲ್ಸನ್‌ ಅವರು ಮಂಡಿಸಿದರು. ಭಾರತೀಯ ವೈಸ್‌ರಾಯ್‌ಗೆ ಸಲಹೆ ನೀಡುತ್ತಿದ್ದ ಇಂಡಿಯನ್‌ ಕೌನ್ಸಿಲ್‌ನ ಹಣಕಾಸು ಸದಸ್ಯರು ಅವರಾಗಿದ್ದರು. ಆದರೆ, ಅವರು ವೃತ್ತಿಯಲ್ಲಿ ಒಬ್ಬ ವ್ಯಾಪಾರಿಯಾಗಿದ್ದರು. ಟೋಪಿಗಳನ್ನು ತಯಾರಿಸಿ ಅವುಗಳನ್ನು ಮಾರಾಟ ಮಾಡಿ ಜೀವನ ನಿರ್ವಹಿಸುತ್ತಿದ್ದರು. ಹಣಕಾಸು ವ್ಯವಹಾರಗಳ ಬಗ್ಗೆ ಅವರಿಗಿದ್ದ ಜ್ಞಾನ ಮತ್ತು ಪಾಂಡಿತ್ಯವನ್ನು ಮನಗಂಡು ಹಣಕಾಸು ಸದಸ್ಯರನ್ನಾಗಿ ನೇಮಿಸಿಕೊಳ್ಳಲಾಗಿತ್ತು.

ಮೊದಲ ಹಣಕಾಸು ಸಚಿವರು ಕಾಂಗ್ರೆಸ್ಸಿಗರಲ್ಲ!

ನಮ್ಮ ಮೊದಲ ಹಣಕಾಸು ಸಚಿವರು ಕಾಂಗ್ರೆಸ್‌ ಪಕ್ಷದ ಸದಸ್ಯರೇ ಆಗಿರಲಿಲ್ಲ. ಸ್ವಾತಂತ್ರ್ಯ ಸಂಗ್ರಾಮದ ಸ್ಫೂರ್ತಿಯನ್ನು ಕಾಯ್ದುಕೊಳ್ಳಲು ಕಾಂಗ್ರೆಸ್ಸೇತರ ಸದಸ್ಯರಾದ ಡಾ. ಅಂಬೇಡ್ಕರ್‌ ಅವರಂಥಹ ವಿದ್ವಾಂಸರನ್ನು ಮೊದಲ ಪ್ರಧಾನಿ ಜವಾಹರಲಾಲ್‌ ನೆಹರು ಸಂಪುಟಕ್ಕೆ ನೇಮಿಸಿಕೊಂಡಿದ್ದರು. ಹಣಕಾಸು ಖಾತೆಯನ್ನು ಸರ್‌. ಆರ್‌.ಕೆ. ಶಣ್ಮುಗಂ ಚೆಟ್ಟಿಅವರಿಗೆ ನೀಡಲಾಗಿತ್ತು. ಶಣ್ಮುಗಂ ಅವರು ಈ ಹಿಂದೆ ಕೊಚ್ಚಿನ್‌ ರಾಜ್ಯದ ದಿವಾನರಾಗಿ ಕಾರ್ಯನಿರ್ವಹಿಸಿದ್ದರು.

ಬಜೆಟ್‌ನೊಂದಿಗೆ ಬ್ರಿಟಿಷರ ನಂಟು

ನಮ್ಮ ಬಜೆಟ್‌ ಹಲವು ಸಂದರ್ಭದಲ್ಲಿ ಬ್ರಿಟಿಷ್‌ ಬಜೆಟ್‌ಗೆ ಹೋಲಿಕೆಯಾಗುತ್ತದೆ. ಹಲವಾರು ವರ್ಷಗಳ ವರೆಗೆ ಬಜೆಟ್‌ ಅನ್ನು ಸಂಜೆ 5.30ರ ವೇಳೆಗೆ ಮಂಡಿಸಲಾಗುತ್ತಿತ್ತು. ಆ ವೇಳೆ ಬ್ರಿಟನ್‌ನಲ್ಲಿ ಮಧ್ಯಾಹ್ನ ಆಗಿರುತಿತ್ತು. ಆರ್‌.ಕೆ. ಶಣ್ಮುಗಂ ಅವರು ಬಜೆಟ್‌ ಸಿದ್ಧಪಡಿಸುವ ಸಂದರ್ಭದಲ್ಲಿ ಬ್ರಿಟನ್‌ನಲ್ಲಿ ಹಗರಣವೊಂದು ಉಂಟಾಗಿದ್ದರಿಂದ ಗೌಪ್ಯತೆ ಕಾಪಾಡಿಕೊಂಡು, ಬಜೆಟ್‌ ಅನ್ನು ಭಾರತದಲ್ಲಿ ಮಂಡಿಸಲಾಯಿತು.

1947ರಲ್ಲಿ ಬಜೆಟ್‌ ದಿನ ಬ್ರಿಟನ್‌ ಖಜಾಂಚಿ ಹಗ್‌ ಡಾಲ್ಟನ್‌ ಸಂಸತ್ತಿಗೆ ತೆರಳುವಾಗ ಪತ್ರಕರ್ತರನ್ನು ಭೇಟಿ ಮಾಡಿ ತೆರಿಗೆ ಬದಲಾವಣೆಯ ಬಗ್ಗೆ ಒಂದಷ್ಟುಮಾಹಿತಿಗಳನ್ನು ನೀಡಿದ್ದರು. ಬಜೆಟ್‌ ಭಾಷಣಕ್ಕೂ ಮುನ್ನ ಪತ್ರಕರ್ತರು ಈ ಸುದ್ದಿಯನ್ನು ಪ್ರಸಾರ ಮಾಡಿದ್ದರು. ಈ ತಪ್ಪಿಗಾಗಿ ಡಾಲ್ಟನ್‌ ರಾಜೀನಾಮೆ ನೀಡಬೇಕಾಗಿ ಬಂತು. ಹೀಗಾಗಿ ಶಣ್ಮುಗಂ ಚೆಟ್ಟಿಅವರು ಬಜೆಟ್‌ ರಹಸ್ಯ ಕಾಪಾಡಿಕೊಳ್ಳಲು ಹೆಚ್ಚಿನ ಆದ್ಯತೆ ನೀಡಿದರು.

ಸಂಯುಕ್ತ ಭಾರತದ ಮೊದಲ ಬಜೆಟ್‌

ಜಾನ್‌ ಮಥಾಯ್‌ ಅವರ ಉತ್ತರಾಧಿಕಾರಿಯಾದ ಶಣ್ಮುಗಂ ಚೆಟ್ಟಿ1949​-50ನೇ ಸಾಲಿನಲ್ಲಿ ಅತ್ಯಂತ ಸರಳ ಹಾಗೂ ಎಲ್ಲರಿಗೂ ಅರ್ಥವಾಗುವ ಬಜೆಟ್‌ ಅನ್ನು ಮಂಡಿಸಿದರು. ಬಜೆಟ್‌ ಮಂಡನೆ ಬಳಿಕ ಹಣದುಬ್ಬರ ಮತ್ತು ಆರ್ಥಿಕ ನೀತಿಗಳ ಬಗ್ಗೆ ಸಣ್ಣದೊಂದು ವಿವರಣೆ ನೀಡಿದ್ದರು. ಇದು ಸಂಯುಕ್ತ ಭಾರತದ ಮೊದಲ ಬಜೆಟ್‌ ಎನಿಸಿಕೊಂಡಿತ್ತು. ರಾಜವಂಶಸ್ಥರ ಆಳ್ವಿಕೆಯಲ್ಲಿದ್ದ ರಾಜ್ಯಗಳ ಹಣಕಾಸು ಹೇಳಿಕೆಯನ್ನು ಬಜೆಟ್‌ ಒಳಗೊಂಡಿತ್ತು. ಯೋಜನಾ ಆಯೋಗದ ರಚನೆ ಮತ್ತು ಪಂಚವಾರ್ಷಿಕ ಯೋಜನೆಯ ಅಗತ್ಯ ಬಜೆಟ್‌ನ ಮುಖ್ಯ ಸಂಗತಿಯಾಗಿತ್ತು.

ವಿದೇಶಿ ವ್ಯವಹಾರಗಳ ಬಜೆಟ್‌

ಇದುವರೆಗೆ ಮಂಡಿಸಲಾದ ಬಜೆಟ್‌ಗಳು ವಿದೇಶಿ ವ್ಯವಹಾರಗಳ ವಿಷಯಗಳನ್ನು ಒಳಗೊಂಡಿರುವುದಿಲ್ಲ. ಆದರೆ, 1950 ದಶಕದ ಬಜೆಟ್‌ನಲ್ಲಿ ರಷ್ಯಾದ ಪ್ರಭಾವವನ್ನು ಕಾಣಬಹುದಾಗಿತ್ತು. ವಿದೇಶಿ ನೆರವು ಆದಾಯದ ಪ್ರಮುಖ ಮೂಲವಾಗಿತ್ತು. 50ರ ಆರಂಭದ ದಶಕದಲ್ಲಿ ಅಮೆರಿಕ, ಬ್ರಿಟನ್‌ನಿಂದ ಭಾರತ ನೆರವು ಪಡೆದುಕೊಂಡಿತ್ತು. ನಂತರದ ವರ್ಷಗಳಲ್ಲಿ ಯುಎಸ್‌ಎಸ್‌ಆರ್‌ ಹಾಗೂ ಅದರ ಮಿತ್ರ ರಾಷ್ಟ್ರಗಳ ಮೇಲೆ ಭಾರತ ಅವಲಂಬಿತವಾಗಿತ್ತು.

ಎರಡು ವಿಧದ ತೆರಿಗೆಗಳ ಉಗಮ

ದೇಶಮುಖ್‌ ಅವರ ಬದಲಿಗೆ ಬಂದ ಟಿ.ಟಿ. ಕೃಷ್ಣಮಾಚಾರಿ ತೆರಿಗೆ ಪದ್ಧತಿಯ ಬದಲಾವಣೆಗೆ ಆಸಕ್ತಿ ಹೊಂದಿದ್ದರು. 1957ರಲ್ಲಿ ಅವರು ಎರಡು ವಿಧದ ತೆರಿಗೆ ಪದ್ಧತಿಯನ್ನು ಪರಿಚಯಿಸಿದರು. ಆಸ್ತಿ ತೆರಿಗೆ ಹಾಗೂ ವೆಚ್ಚದ ತೆರಿಗೆಯನ್ನು ಅವರು ಜಾರಿಗೊಳಿಸಿದರು. ತೆರಿಗೆ ಕಟ್ಟುವುದನ್ನು ದೇಶದ ಭಕ್ತಿಗೆ ಹೋಲಿಸಿ ತೆರಿಗೆ ಕಟ್ಟುವಂತೆ ಜನರನ್ನು ಪ್ರೆರೇಪಿಸಿದರು.

ಮೊದಲ ಚಿದಂಬರಂ!

ಮಾತಿನೊಂದಿಗೆ ಬಜೆಟ್‌ ಭಾಷಣ ಮುಗಿಸಿದ ಮೊದಲ ಹಣಕಾಸು ಸಚಿವ ಚಿದಂಬರಂ ಸುಬ್ರಮಣಿಯಂ. ‘ನಾನು ಈಗ ಬಜೆಟ್‌ ಅನ್ನು ಸದನದ ಒಪ್ಪಿಗೆಗೆ ಸಮರ್ಪಿಸುತ್ತೇನೆ’ ಎಂದು ಹೇಳಿ ತಮ್ಮ ಬಜೆಟ್‌ ಭಾಷಣವನ್ನು ಸುಬ್ರಮಣಿಯಂ ಮುಕ್ತಾಯಗೊಳಿಸಿರು. ಕಾಲಾಂತರದಲ್ಲಿ ಬಜೆಟ್‌ ಕೊನೆಯಲ್ಲಿ ಹೀಗೆ ಹೇಳುವುದು ವಾಡಿಕೆಯಾಯಿತು. ಹಣಕಾಸು ಸಚಿವರಾದ ಮೊದಲ ಚಿದಂಬರಂ ಅವರು ಇವರಾಗಿದ್ದಾರೆ.

ಬಜೆಟ್‌ನಲ್ಲಿ ಮನಮೋಹನ್‌ ಸಿಂಗ್‌ರ ‘ಇತಿಹಾಸ’

ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು 1991ರಲ್ಲಿ ತಮ್ಮ ಮೊದಲ ಬಜೆಟ್‌ ಮಂಡಿಸಿದರು. ಈ ವೇಳೆ ತಮ್ಮ ವ್ಯಕ್ತಿತ್ವಕ್ಕೆ ವ್ಯತಿರಿಕ್ತವಾಗಿ ವೈಯಕ್ತಿಕ ಸಂಗತಿಗಳನ್ನು ಪ್ರಸ್ತಾಪಿಸಿದ ಮನಮೋಹನ್‌ ಸಿಂಗ್‌ ‘ನಾನು ಬಡ ಕುಟುಂಬದಲ್ಲಿ ಬೆಳೆದವನು. ಪಾಕಿಸ್ತಾನದ ಪ್ರೊನೆ ಗ್ರಾಮದಿಂದ ಭಾರತಕ್ಕೆ ವಲಸೆ ಬರಬೇಕಾಯಿತು. ವಿಶ್ವವಿದ್ಯಾಲಯದ ಸ್ಕಾಲರ್‌ಶಿಪ್‌ಗಳು ಮತ್ತು ಅನುದಾನಗಳು ನನಗೆ ಭಾರತ ಮತ್ತು ಇಂಗ್ಲೆಂಡ್‌ನಲ್ಲಿ ಕಾಲೇಜ್‌ ವ್ಯಾಸಂಗ ಮಾಡಲು ನೆರವಾಯಿತು. ಈ ದೇಶ ನನಗೆ ನನಗೆ ಗೌರವ ಹಾಗೂ ಉನ್ನತ ಸ್ಥಾನ ನೀಡಿದೆ. ದೇಶ ಸೇವೆಗೆ ನನ್ನಿಂದ ನೀಡಬಹುದಾದ ಸೇವೆಯನ್ನು ಪ್ರಾಮಾಣಿಕವಾಗಿ ನೀಡುತ್ತೇನೆ. ಇದನ್ನು ನಾನು ಸದನಕ್ಕೆ ಭರವಸೆ ನೀಡುತ್ತೇನೆ’ ಎಂದು ಐತಿಹಾಸಿಕ ಭಾಷಣವನ್ನು ಬಜೆಟ್‌ ವೇಳೆ ಮನಮೋಹನ್‌ ಸಿಂಗ್‌ ಮಾಡಿದ್ದರು.