ಆರ್‌ಬಿಐ ರೆಪೋ ದರ ಇಳಿಕೆಯಿಂದ ಸಾಲದ ಬಡ್ಡಿ ಕಡಿಮೆಯಾಗಲಿದ್ದು, ಇಎಂಐ ಹೊರೆ ತಗ್ಗಲಿದೆ. ಆದರೆ, ಸಣ್ಣ ಉಳಿತಾಯ ಯೋಜನೆಗಳಾದ ಸುಕನ್ಯಾ, ಪಿಪಿಎಫ್ ಮೊದಲಾದವುಗಳ ಬಡ್ಡಿ ದರ ಇಳಿಕೆಯಾಗುವ ಸಾಧ್ಯತೆ ಇದೆ. ಹೂಡಿಕೆದಾರರು ಹೊಸ ಬಡ್ಡಿ ದರ ಜಾರಿಗೆ ಮುನ್ನ ಹೂಡಿಕೆ ಪರಿಗಣಿಸಬಹುದು. ಮ್ಯೂಚುವಲ್ ಫಂಡ್, ಬಾಂಡ್, ಠೇವಣಿಗಳಂತಹ ಪರ್ಯಾಯಗಳನ್ನು ಅನ್ವೇಷಿಸಬಹುದು.

ಆರ್ ಬಿಐ (RBI) ರೆಪೋ ದರ (Repo Rate) ಇಳಿಕೆ ಮಾಡಿ ಜನ ಸಾಮಾನ್ಯರಿಗೆ ನೆಮ್ಮದಿ ಸುದ್ದಿಯನ್ನೇನೋ ನೀಡಿದೆ. ಆದ್ರೆ ಸಣ್ಣ ಉಳಿತಾಯ ಯೋಜನೆ (Small Savings Scheme)ಯಲ್ಲಿ ಹಣ ಹೂಡಿಕೆ (Investment) ಮಾಡುವವರಿಗೆ ಇದ್ರಿಂದ ನಷ್ಟವಾಗುವ ಸಾಧ್ಯತೆ ದಟ್ಟವಾಗಿದೆ. ಆರ್ ಬಿಐ ರೆಪೋ ದರ ಇಳಿಕೆ ಮಾಡಿದ್ಮೇಲೆ ಒಂದೊಂದೇ ಬ್ಯಾಂಕ್ ತಮ್ಮ ಗೃಹ, ವಾಹನ ಮತ್ತು ವೈಯಕ್ತಿಕ ಸಾಲದ ಮೇಲಿನ ಬಡ್ಡಿ ದರವನ್ನು ಇಳಿಕೆ ಮಾಡಲಿದೆ. ಇದ್ರಿಂದ ಸಾಲಗಾರರ ತಿಂಗಳ ಇಎಂಐ ಇಳಿಕೆ ಆಗಲಿದೆ. ಆದ್ರೆ ಸಣ್ಣ ಉಳಿತಾಯ ಯೋಜನೆಗಳಾದ ಸುಕನ್ಯಾ ಸಮೃದ್ಧಿ ಯೋಜನೆ, ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ ಹೂಡಿಕೆ ಮಾಡುವವರಿಗೆ ನಿರಾಸೆ ಕಾದಿದೆ. ಈ ಯೋಜನೆಯ ಬಡ್ಡಿ ದರ ಇಳಿಕೆಯಾಗ್ಬಹುದು ಎಂದು ಅಂದಾಜಿಸಲಾಗ್ತಿದೆ. 2025-26ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ (ಏಪ್ರಿಲ್-ಜೂನ್) ಸರ್ಕಾರ ಈ ಯೋಜನೆಗಳ ಬಡ್ಡಿದರಗಳನ್ನು ಕಡಿತಗೊಳಿಸಬಹುದು ಎನ್ನಲಾಗ್ತಿದೆ.

ಬಡ್ಡಿ ದರ ಕಡಿಮೆ ಆಗಲು ಕಾರಣ ಏನು? : ನಿಮಗೆ ತಿಳಿದಿರುವಂತೆ ಆರ್ ಬಿಐ ಸುಮಾರು ಐದು ವರ್ಷಗಳ ನಂತ್ರ ರೆಪೋ ದರವನ್ನು ಇಳಿಕೆ ಮಾಡಿದೆ. ರೆಪೋ ದರವನ್ನು 25 ಬಿಪಿಎಸ್ ಕಡಿತಗೊಳಿಸಿದೆ. ಈಗ ರೆಪೋ ದರ ಶೇಕಡಾ 6.25ಕ್ಕೆ ಬಂದು ನಿಂತಿದೆ. ಆರ್ ಬಿಐ ನಿಯಮದಂತೆ ಸಾಲಗಳನ್ನು ಅಗ್ಗಗೊಳಿಸಲು ಸರ್ಕಾರ, ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳನ್ನು ಕಡಿಮೆ ಮಾಡುವ ಬಗ್ಗೆ ಚಿಂತನೆ ನಡೆಸುವ ಸಾಧ್ಯತೆ ಹೆಚ್ಚಿದೆ. ಒಂದ್ವೇಳೆ ಸರ್ಕಾರ ಹೀಗೆ ಮಾಡಿದಲ್ಲಿ ಪಿಪಿಎಫ್, ಸುಕನ್ಯಾ ಸಮೃದ್ಧಿ ಯೋಜನೆ, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್‌ಎಸ್‌ಸಿ) ಮತ್ತು ಇತರ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವವರಿಗೆ ಕಡಿಮೆ ಆದಾಯ ಸಿಗಲಿದೆ. 

ಯೂಟ್ಯೂಬ್‌ನಿಂದ ಕಲಿತು ಕೋಟ್ಯಾಧಿಪತಿಯಾದ ವಿದ್ಯಾರ್ಥಿ, ಆರಂಭಿಸಿದ ಉದ್ಯಮ ಯಾವುದು ಗೊತ್ತಾ?

ಸದ್ಯ ನಿರಾಳ : ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ಇಳಿಕೆ ಮಾಡಲು ಸರ್ಕಾರ ಆಲೋಚನೆ ಮಾಡ್ಬಹುದು. ಆದ್ರೆ ಇನ್ನೂ ಇಳಿಕೆಯಾಗಿಲ್ಲ. ಜನವರಿ-ಮಾರ್ಚ್ 2025ರಲ್ಲಿ ಸರ್ಕಾರವು ಈ ಉಳಿತಾಯ ಯೋಜನೆಗಳ ಬಡ್ಡಿದರಗಳಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ. ಅವುಗಳ ಬಡ್ಡಿ ದರ ಸದ್ಯ ಹಿಂದಿನಂತೆ ಇದೆ. ಈ ಬಡ್ಡಿದರಗಳನ್ನು ಪ್ರತಿ ತ್ರೈಮಾಸಿಕದ ಪರಿಶೀಲನೆಯ ನಂತರ ಸರ್ಕಾರ ನಿರ್ಧರಿಸುತ್ತದೆ. ಸರ್ಕಾರ ಕೊನೆಯ ಬಾರಿಗೆ ಕೆಲವು ಯೋಜನೆಗಳ ಮೇಲಿನ ಬಡ್ಡಿದರಗಳನ್ನು 2023-24ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಬದಲಾಯಿಸಿತ್ತು. 

ಯೋಜನೆಯ ಬಡ್ಡಿ ದರಗಳು ಹೀಗಿವೆ : ಸದ್ಯ ಸುಕನ್ಯಾ ಸಮೃದ್ಧಿ ಯೋಜನೆ (SSY) ಬಡ್ಡಿ ದರ ಶೇಕಡಾ 8.2ರಷ್ಟಿದೆ. ಮೂರು ವರ್ಷಗಳ ಸ್ಥಿರ ಠೇವಣಿ ಯೋಜನೆ ಬಡ್ಡಿ ದರ ಶೇಕಡಾ 7.1ರಷ್ಟಿದೆ. ಪಿಪಿಎಫ್ ಬಡ್ಡಿ ದರ ಶೇಕಡಾ 7.1ರಷ್ಟಿದೆ. ಅಂಚೆ ಕಚೇರಿ ಉಳಿತಾಯ ಠೇವಣಿ ಖಾತೆ ಬಡ್ಡಿ ದರ ಶೇಕಡಾ 4ರಷ್ಟಿದೆ. ಕಿಸಾನ್ ವಿಕಾಸ್ ಪತ್ರ ಬಡ್ಡಿ ದರ ಶೇಕಡಾ 7.5ರಷ್ಟಿದೆ. ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC)ದ ಬಡ್ಡಿ ದರ 7.7ರಷ್ಟಿದೆ. ಮಾಸಿಕ ಆದಾಯ ಯೋಜನೆ (MIS) ಬಡ್ಡಿ ದರ 7.4ರಷ್ಟಿದೆ.

ಈರುಳ್ಳಿ ಬೆಳೆದು ಲಕ್ಷಾಧಿಪತಿಯಾದ ರೈತ, ಒಂದು ಋತುವಿಗೆ 25 ಲಕ್ಷ ರೂ ಗಳಿಕೆ!

ಹೂಡಿಕೆದಾರರು ಏನು ಮಾಡ್ಬೇಕು? : ಸಣ್ಣ ಯೋಜನೆಯಲ್ಲಿ ಇನ್ನೂ ಬಡ್ಡಿ ದರ ಬದಲಾಗಿಲ್ಲ. ಹೊಸ ಬಡ್ಡಿ ದರ ಅನ್ವಯವಾಗುವ ಮುನ್ನ ನೀವು ಹೂಡಿಕೆ ಮಾಡುವುದು ಒಳ್ಳೆಯದು. ಮ್ಯೂಚುವಲ್ ಫಂಡ್‌, ಬಾಂಡ್‌ಗಳು ಮತ್ತು ಸ್ಥಿರ ಠೇವಣಿಗಳಂತಹ ಇತರ ಯೋಜನೆಗಳಲ್ಲಿಯೂ ನೀವು ಹೂಡಿಕೆ ಮಾಡಬಹುದು.