ಕೆಲವರು ಹೂಡಿಕೆ ಅಥವಾ ಉಳಿತಾಯವಿದ್ದರೆ ಸಾಕು, ವಿಮೆ ಬೇಡ ಎಂಬ ಅಭಿಪ್ರಾಯ ಹೊಂದಿರುತ್ತಾರೆ. ಆದರೆ, ಇದು ತಪ್ಪು ಎನ್ನುತ್ತಾರೆ ಹಣಕಾಸು ತಜ್ಞರು. ನೆಮ್ಮದಿಯ ಬದುಕಿಗೆ ಹೂಡಿಕೆ ಜೊತೆಗೆ ವಿಮೆ ಕೂಡ ಅಗತ್ಯ. ಏಕೆ? ಇಲ್ಲಿದೆ ಮಾಹಿತಿ.
Business Desk: ಉದ್ಯೋಗ ಸಿಕ್ಕ ತಕ್ಷಣವೇ ಬಹುತೇಕರು ಉಳಿತಾಯ ಅಥವಾ ಹೂಡಿಕೆ ಬಗ್ಗೆ ಆಲೋಚಿಸುತ್ತಾರೆ. ಅದೇ ತನ್ನ ಹಾಗೂ ಇಡೀ ಕುಟುಂಬದ ಸಂರಕ್ಷಣೆಗೆ ಆರೋಗ್ಯ ವಿಮೆ ಅಥವಾ ಟರ್ಮ್ ಇನ್ಯುರೆನ್ಸ್ ಖರೀದಿಸುವ ಬಗ್ಗೆ ಯೋಚಿಸೋರು ಕಡಿಮೆ. ಆದರೆ, ನೆಮ್ಮದಿಯ ಜೀವನಕ್ಕೆ ವಿಮೆ ಹಾಗೂ ಹೂಡಿಕೆ ಇವೆರಡೂ ಅಗತ್ಯ. ಕೆಲವರು ಪ್ರತಿ ತಿಂಗಳು ತಮ್ಮ ಆದಾಯದಲ್ಲಿ ಒಂದು ಭಾಗವನ್ನು ಉಳಿತಾಯ ಖಾತೆ ಅಥವಾ ತುರ್ತು ನಿಧಿಗಾಗಿ ಮೀಸಲಿಡುತ್ತಾರೆ. ಅನಿರೀಕ್ಷಿತವಾಗಿ ಎದುರಾಗುವ ವೆಚ್ಚಗಳನ್ನು ನಿಭಾಯಿಸಲು ಇದು ನೆರವಾಗಲಿ ಎಂಬುದು ಅವರ ಆಶಯ. ಹಾಗಂತ ವಿಮೆಯ ಅಗತ್ಯವಿಲ್ಲ ಎಂದು ಭಾವಿಸೋದು ತಪ್ಪಾಗುತ್ತದೆ. ನಮ್ಮ ಹಣಕಾಸು ಯೋಜನೆ ಹಾಗೂ ರಿಸ್ಕ್ ಮ್ಯಾನೇಜ್ಮೆಂಟ್ ನ ಅಗತ್ಯವಾದ ಭಾಗವೇ ವಿಮೆ ಎಂದು ಹೇಳಬಹುದು. ಅಪಘಾತಗಳು, ಅನಾರೋಗ್ಯಾಥವಾ ಕೋವಿಡ್ -19ನಂತಹ ಪೆಂಡಾಮಿಕ್ ಸಂದರ್ಭಗಳಲ್ಲಿ ಬಹುತೇಕರಿಗೆ ಆರೋಗ್ಯ ವಿಮೆಯ ಮಹತ್ವದ ಅರಿವಾಗಿರುತ್ತದೆ. ಇಂದು ಆರೋಗ್ಯ ಸೇವೆಗಳು ದುಬಾರಿಯಾಗಿವೆ. ಆಸ್ಪತ್ರೆಯ ಬಿಲ್ ಲಕ್ಷಗಳಲ್ಲೇ ಇರುತ್ತದೆ. ಹೀಗಿರುವಾಗ ಇಷ್ಟೊಂದು ದೊಡ್ಡ ಮೊತ್ತವನ್ನು ಆ ಕ್ಷಣಕ್ಕೆ ಭರಿಸೋದು ಮಧ್ಯಮ ವರ್ಗದವರಿಗೆ ಖಂಡಿತಾ ಕಷ್ಟಸಾಧ್ಯ.
ಹೂಡಿಕೆ ಜೊತೆಗೆ ವಿಮೆ ಏಕೆ ಅಗತ್ಯ?
ಫೈನಾನ್ಷಿಯಲ್ ಪ್ಲಾನಿಂಗ್ ನಲ್ಲಿ ವಿಮೆ ಹಾಗೂ ಹೂಡಿಕೆ ಎರಡೂ ಕೂಡ ಪ್ರಮುಖ ಪಾತ್ರ ಹಿಸುತ್ತವೆ. ಹೀಗಾಗಿ ಈ ಎರಡನ್ನೂ ಕೂಡ ಜೊತೆ ಜೊತೆಗೆ ನಡೆಸಿಕೊಂಡು ಹೋಗೋದು ಅಗತ್ಯ. ಹೂಡಿಕೆ ಜೊತೆಗೆ ವಿಮೆ ಕೂಡ ಏಕೆ ಅಗತ್ಯ? ಇದಕ್ಕೆ ಇಲ್ಲಿದೆ ಕೆಲವು ಕಾರಣಗಳು:
1.ಜೀವನಶೈಲಿ ಸಂಬಂಧಿ ಕಾಯಿಲೆಗಳ ವಿರುದ್ಧ ಹೋರಾಡಲು
ಇಂದಿನ ಜೀವನಶೈಲಿಯೇ ಅನೇಕ ರೋಗಗಳಿಗೆ ಮೂಲವಾಗಿದೆ. ಅದರಲ್ಲೂ 45 ವಯಸ್ಸಿನೊಳಗಿನವರಲ್ಲಿ ಇಂಥ ಕಾಯಿಲೆಗಳು ಹೆಚ್ಚುತ್ತಿವೆ. ಸಕ್ಕರೆ ಕಾಯಿಲೆ, ಬೊಜ್ಜು, ಶ್ವಾಸಕೋಶ ಸಂಬಂಧಿ ಸಮಸ್ಯೆ ಹಾಗೂ ಹೃದ್ರೋಗಗಳು ಹಿಂದೆ ವಯಸ್ಸದವರಲ್ಲಿ ಕಾಣಿಸಿಕೊಳ್ಳುತ್ತಿತ್ತು. ಆದರೆ, ಇಂದು ಈ ಎಲ್ಲ ರೋಗಗಳು ಯುವಜನಾಂಗದಲ್ಲೇ ಹೆಚ್ಚಾಗಿ ಕಂಡುಬರುತ್ತಿದೆ. ದೈಹಿಕ ಶ್ರಮವಿಲ್ಲದ ಜೀವನಶೈಲಿ, ಒತ್ತಡ, ಮಾಲಿನ್ಯ, ಅನಾರೋಗ್ಯಕರ ತಿನ್ನುವ ಅಭ್ಯಾಸಗಳು, ಗಜೆಟ್ ಅಡಿಕ್ಷನ್ ಹಾಗೂ ನಿಯಮಬದ್ಧವಲ್ಲದ ಜೀವನಶೈಲಿಯೇ ಈ ಎಲ್ಲ ಕಾಯಿಲೆಗಳು ಕಾಣಿಸಿಕೊಳ್ಳಲು ಕಾರಣವಾಗಿವೆ. ಹೀಗಿರುವಾಗ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಈ ಕಾಯಿಲೆಗಳ ವಿರುದ್ಧ ಹೋರಾಟ ನಡೆಸಬಹುದು. ಅದರಲ್ಲೂ ಇಂದು ಆಸ್ಪತ್ರೆ ವೆಚ್ಚಗಳು ದುಬಾರಿಯಾಗಿರುವ ಕಾರಣ ಆರ್ಥಿಕ ಸಂಕಷ್ಟ ಎದುರಾಗದಂತೆ ತಡೆಯಲು ಆರೋಗ್ಯ ವಿಮೆ ಹೊಂದಿರೋದು ಅತ್ಯಗತ್ಯ. ನೀವು ಹೂಡಿಕೆ ಮಾಡಿದ್ದರೂ ಆ ಅನಿರೀಕ್ಷಿತ ಸಂದರ್ಭದಲ್ಲಿ ಅದರ ಪ್ರಯೋಜನ ಸಿಗದೆ ಹೋಗಬಹುದು.
NPS vs Fixed Deposit: 30ರ ಹರೆಯದಲ್ಲಿ ಹೂಡಿಕೆಗೆ ಯಾವುದು ಬೆಸ್ಟ್? ಯಾವುದು ಉತ್ತಮ ರಿಟರ್ನ್ಸ್ ನೀಡುತ್ತೆ?
2.ಕುಟುಂಬದ ಸುರಕ್ಷತೆಗೆ
ಆರೋಗ್ಯ ವಿಮೆ ನಿಮ್ಮ ಕುಟುಂಬ ಸದಸ್ಯರ ಆರೋಗ್ಯ ರಕ್ಷಣೆಗೂ ಅಗತ್ಯ. ಕುಟುಂಬದ ಪ್ರತಿ ಸದಸ್ಯರಿಗೂ ಪ್ರತ್ಯೇಕ ಆರೋಗ್ಯ ವಿಮಾ ಪಾಲಿಸಿ ಖರೀದಿಸುವ ಬದಲು ಒಂದೇ ಪಾಲಿಸಿಯಡಿ ಇಡೀ ಕುಟುಂಬದ ಸದಸ್ಯರು ಕವರ್ ಆಗುವಂತೆ ನೋಡಿಕೊಳ್ಳುವುದು ಉತ್ತಮ. ನಿಮ್ಮ ವಯಸ್ಸಾದ ಹೆತ್ತವರು ಹಾಗೂ ಮಕ್ಕಳು ಈ ಪಾಲಿಸಿಯಡಿ ಕವರ್ ಆಗುವಂತೆ ನೋಡಿಕೊಳ್ಳಿ. ನಿಮ್ಮ ಬಳಿ ದೊಡ್ಡ ಮೊತ್ತದ ಆರೋಗ್ಯ ವಿಮೆಯಿದ್ದರೆ ಅವರಿಗೆ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆ ಸಿಗುವಂತೆ ನೋಡಿಕೊಳ್ಳಬಹುದು.
3.ಸುರಕ್ಷಿತವಾಗಿರಲು ಬೇಗ ವಿಮೆ ಮಾಡಿಸಿ
ಆರೋಗ್ಯ ವಿಮೆಯನ್ನು ಜೀವನದಲ್ಲಿ ಎಷ್ಟು ಬೇಗ ಖರೀದಿಸುತ್ತೀರೋ ಅಷ್ಟು ಹೆಚ್ಚಿನ ಪ್ರಯೋಜನಗಳಿವೆ. ಏಕೆಂದರೆ ವಯಸ್ಸು ಕಡಿಮೆಯಿದ್ದಷ್ಟು ನೀವು ಹೆಚ್ಚು ಆರೋಗ್ಯವಾಗಿರುತ್ತೀರಿ. ಹೀಗಾಗಿ ವಿಮೆಯನ್ನು ಕಡಿಮೆ ವೆಚ್ಚದಲ್ಲಿ ಖರೀದಿಸಬಹುದು. ಹಾಗೆಯೇ ವಯಸ್ಸದಂತೆ ಈ ವಿಮೆಯ ಪ್ರಯೋಜನಗಳನ್ನು ಕೂಡ ಪಡೆದುಕೊಳ್ಳಬಹುದು.
ಗೃಹಸಾಲ ಬೇಗ ಮರುಪಾವತಿಸೋದಾ ಅಥವಾ ಹೂಡಿಕೆ ಮಾಡೋದಾ? ಈ ಗೊಂದಲಕ್ಕೆ ಇಲ್ಲಿದೆ ಉತ್ತರ
4.ಆರ್ಥಿಕ ಸಂಕಷ್ಟದಿಂದ ಪಾರಾಗಲು
ಸಮರ್ಪಕವಾದ ಆರೋಗ್ಯ ವಿಮೆ ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೆ ಉತ್ತಮ ರಕ್ಷಣೆ ನೀಡುವ ಜೊತೆಗೆ ಹಣಕಾಸಿನ ಸ್ಥಿರತೆ ಕೂಡ ಒದಗಿಸುತ್ತದೆ. ಅನಿರೀಕ್ಷಿತ ಘಟನೆಗಳಿಂದ ನಿಮಗೆ ಹಣಕಾಸಿನ ನಷ್ಟವಾಗುವುದು ಅಥವಾ ಸಂಕಷ್ಟ ಎದುರಾಗುವುದನ್ನು ತಡೆಯುತ್ತದೆ.
