ಗೃಹಸಾಲ ಬೇಗ ಮರುಪಾವತಿಸೋದಾ ಅಥವಾ ಹೂಡಿಕೆ ಮಾಡೋದಾ? ಈ ಗೊಂದಲಕ್ಕೆ ಇಲ್ಲಿದೆ ಉತ್ತರ
ಗೃಹಸಾಲ ಹೊಂದಿರುವ ಬಹುತೇಕರಿಗೆ ಒಂದು ಗೊಂದಲವಂತೂ ಕಾಡೇಕಾಡುತ್ತದೆ. ಅದೇನೆಂದರೆ ಮೊದಲು ಗೃಹಸಾಲ ತೀರಿಸೋದಾ ಅಥವಾ ಹೂಡಿಕೆ ಮಾಡೋದಾ ಎಂಬುದು. ಈ ಗೊಂದಲಕ್ಕೆ ಪರಿಹಾರ ಕಂಡುಕೊಳ್ಳುವುದು ಹೇಗೆ? ಇಲ್ಲಿದೆ ಮಾಹಿತಿ.
Business Desk: ಸ್ವಂತ ಸೂರು ಹೊಂದಬೇಕು ಎಂಬ ಆಸೆಯಿಂದ ಸಾಲ ಮಾಡಿ ಮನೆ ಖರೀದಿಸುತ್ತೇವೆ. ಆದರೆ, ಆ ಬಳಿಕ ಪ್ರತಿ ತಿಂಗಳು ಸಾಲದ ಇಎಂಐ ಪಾವತಿಸುವ ಜವಾಬ್ದಾರಿ ಹೆಗಲೇರುತ್ತದೆ. ತಿಂಗಳ ಖರ್ಚು-ವೆಚ್ಚಗಳ ಜೊತೆಗೆ ಇಎಂಐ ಕೂಡ ಪಾವತಿಸೋದು ಖಂಡಿತಾ ಸುಲಭದ ಕೆಲಸವೇನಲ್ಲ. ಇನ್ನು ಗೃಹಸಾಲ ದೀರ್ಘಾವಧಿಯ ಬದ್ಧತೆಯನ್ನು ಬೇಡುತ್ತದೆ ಕೂಡ. ಗೃಹಸಾಲದ ಮೇಲಿನ ಬಡ್ಡಿದರ ಕೂಡ ಹೆಚ್ಚಿರುವ ಕಾರಣ ಎಷ್ಟು ಇಎಂಐ ಪಾವತಿಸಿದ್ರೂ ಸಾಲದ ಹೊರೆ ತಗ್ಗಿದಂತೆ ಕಾಣಿಸೋದಿಲ್ಲ. ಪ್ರಾರಂಭದ ಕೆಲಸವು ವರ್ಷ ಇಎಂಐ ಮೊತ್ತದಲ್ಲಿ ಬಹುತೇಕ ಭಾಗ ಬಡ್ಡಿಗೆ ಜಮೆಯಾಗುವ ಕಾರಣ ಸಾಲದ ಮೊತ್ತದಲ್ಲಿ ಅಲ್ಪ ಮಟ್ಟಿನ ಇಳಿಕೆಯಷ್ಟೇ ಆಗುತ್ತದೆ. ಇಂಥ ಸಂದರ್ಭಗಳಲ್ಲಿ ಗೃಹಸಾಲವನ್ನು ಆದಷ್ಟು ಬೇಗ ಮರುಪಾವತಿಸಿ ಬಿಡಬೇಕಪ್ಪ ಎಂಬ ಯೋಚನೆ ಮೂಡದೆ ಇರದು. ಆದರೆ, ಇದು ಅಷ್ಟು ಸುಲಭದ ಕೆಲಸ ಕೂಡ ಅಲ್ಲ. ಇನ್ನು ಗೃಹಸಾಲ ಹೊಂದಿರುವಾಗ ಹೂಡಿಕೆ ಮಾಡಬೇಕು ಎಂಬ ಯೋಚನೆ ಬಂದರೂ ಮಾಡಬೇಕಾ ಅಥವಾ ಬೇಡವಾ ಎಂಬ ಗೊಂದಲ ಕಾಡುತ್ತದೆ. ಗೃಹಸಾಲ ಬೇಗ ತೀರಿಸೋದಾ ಅಥವಾ ಹೂಡಿಕೆ ಮಾಡೋದಾ ಎಂಬ ಗೊಂದಲ ಇಂದು ಬಹುತೇಕರನ್ನು ಕಾಡುತ್ತದೆ. ಹಾಗಾದ್ರೆ ಇವೆರಡರಲ್ಲಿ ಯಾವ ಆಯ್ಕೆ ಉತ್ತಮ? ಇಲ್ಲಿದೆ ಮಾಹಿತಿ.
ಗೃಹಸಾಲವನ್ನು ಆದಷ್ಟು ಬೇಗ ಕ್ಲೋಸ್ ಮಾಡೋದಾ ಅಥವಾ ಹೂಡಿಕೆ ಮಾಡೋದಾ ಎಂಬ ಗೊಂದಲಕ್ಕೆ ಉತ್ತರ ಕಂಡುಕೊಳ್ಳಲು ನಾವು ಕೆಲವೊಂದು ಅಂಶಗಳನ್ನು ಗಮನಿಸೋದು ಅಗತ್ಯ. ಗೃಹಸಾಲದ ಮೊತ್ತ, ಅವಧಿ, ಬಡ್ಡಿದರ ಮುಂತಾದವನ್ನು ಪರಿಗಣಿಸಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಈ ಕೆಳಗಿನ ಮೂರು ವಿಧಾನಗಳ ಮೂಲಕ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬಹುದು.
ಜಂಟಿ ಗೃಹ ಸಾಲ ಪಡೆಯೋದು ನಿಜಕ್ಕೂ ಒಳ್ಳೆಯದಾ? ಅದ್ರಿಂದ ಏನೆಲ್ಲ ಪ್ರಯೋಜನಗಳಿವೆ?
1.ಲೆಕ್ಕಾಚಾರ: ನಿಮ್ಮ ಗೃಹಸಾಲದ ಬಡ್ಡಿದರ ಹಾಗೂ ನೀವು ಹೂಡಿಕೆಯಿಂದ ನಿರೀಕ್ಷಿಸುವ ರಿಟರ್ನ್ ಇವೆರಡನ್ನೂ ಹೋಲಿಕೆ ಮಾಡಿ ನೋಡಿ. ಒಂದು ವೇಳೆ ನಿಮ್ಮ ಗೃಹಸಾಲದ ಬಡ್ಡಿದರ ನೀವು ಹೂಡಿಕೆಯಿಂದ ನಿರೀಕ್ಷೆ ಮಾಡುತ್ತಿರುವ ರಿಟರ್ನ್ + ಶೇ.4ರಷ್ಟು ಸುರಕ್ಷಿತ ಮಾರ್ಜಿನ್ ಗಿಂತ ಹೆಚ್ಚಿದ್ದರೆ, ಆಗ ನೀವು ನಿಮ್ಮ ಗೃಹಸಾಲವನ್ನು ಮರುಪಾವತಿ ಮಾಡೋದು ಉತ್ತಮ. ಅಂದಹಾಗೇ ನೀವು ಶೇ.4ರಷ್ಟು ಸೇಫ್ಟಿ ಮಾರ್ಜಿನ್ ಹೊಂದಿರೋದು ಅಗತ್ಯ. ಏಕೆಂದರೆ ದೀರ್ಘಾವಧಿಯಲ್ಲಿ ನಿಮ್ಮ ಗೃಹಸಾಲದ ಬಡ್ಡಿದರದಲ್ಲಿ ಏರಿಕೆ ಹಾಗೂ ಹೂಡಿಕೆ ರಿಟರ್ನ್ಸ್ ನಲ್ಲಿ ಕಡಿಮೆಯಾಗಿರುವ ಸಾಧ್ಯತೆ ಇರುತ್ತದೆ.
ಉದಾಹರಣೆಗೆ ನಿಮ್ಮ ಹೂಡಿಕೆ ರಿಟರ್ನ್ ಅನ್ನು ಶೇ.12ರಷ್ಟು ನಿರೀಕ್ಷೆ ಮಾಡುತ್ತಿದ್ದು, ನಿಮ್ಮ 20 ವರ್ಷಗಳ ಗೃಹಸಾಲದ ಬಡ್ಡಿದರ ಶೇ.8ಕ್ಕಿಂತ ಹೆಚ್ಚಿದ್ದರೆ, ಆಗ ನೀವು ಸಾಲವನ್ನು ಅವಧಿಗೂ ಮುನ್ನ ಮರುಪಾವತಿಸೋದು ಖಂಡಿತಾ ಉತ್ತಮ ನಿರ್ಧಾರ.
2.ನಿಮ್ಮ ಭಾವನೆಗಳು: ಒಂದು ವೇಳೆ ಗೃಹಸಾಲ ನಿಮ್ಮನ್ನು ಹೆಚ್ಚು ಚಿಂತೆಗೀಡು ಮಾಡಿದ್ದು, ಆದಷ್ಟು ಬೇಗ ಅದನ್ನು ಮರುಪಾವತಿಸಬೇಕು ಎಂದು ಭಾವಿಸಿದ್ದರೆ ಅದನ್ನೇ ಮಾಡಿ. ಕೆಲವರಿಗೆ ಒಮ್ಮೆ ಗೃಹಸಾಲದ ಭಾರವನ್ನು ಇಳಿಸಿಕೊಂಡರೆ ಸಾಕು ಎಂಬ ಭಾವನೆ ಇರುತ್ತದೆ. ಅಲ್ಲದೆ, ಇದೇ ಚಿಂತೆ ಅವರನ್ನು ಬೇರೆ ಯಾವುದೇ ಹೂಡಿಕೆ ಅಥವಾ ಅಗತ್ಯ ವೆಚ್ಚಗಳನ್ನು ಮಾಡದಂತೆ ತಡೆದಿರುತ್ತದೆ. ಹೀಗಾಗಿ ಇಂಥ ಸಂದರ್ಭದಲ್ಲಿ ಹೂಡಿಕೆ ಮಾಡೋದಕ್ಕಿಂತ ಗೃಹಸಾಲ ತೀರಿಸೋದೆ ಉತ್ತಮ ನಿರ್ಧಾರ.
Personal Finance: ಬೇಗ ಗೃಹ ಸಾಲದ ಹೊಣೆ ಇಳಿಸ್ಬೇಕಂದ್ರೆ ಹಿಂಗ್ ಮಾಡಿ!
3.ಲೆಕ್ಕಾಚಾರ ಹಾಗೂ ಭಾವನೆಗಳನ್ನು ಒಂದುಗೂಡಿಸಿ: ಈ ವಿಧಾನದ ಮೂಲಕ ನೀವು ನಿಮ್ಮ ಸೇಫ್ಟಿ ಮಾರ್ಜಿನ್ ಅನ್ನು ಶೇ.2-3ಕ್ಕೆ ಇಳಿಸಿಕೊಳ್ಳಬಹುದು. ಹಾಗೆಯೇ ನಿಮ್ಮ ಇಎಂಐ ಮೊತ್ತದಲ್ಲಿ ಪ್ರತಿವರ್ಷ ಶೇ.5ರಷ್ಟು ಏರಿಕೆ ಮಾಡುತ್ತ ಬಂದರೆ 20 ವರ್ಷಗಳ ನಿಮ್ಮ ಗೃಹಸಾಲವನ್ನು 12.5 ವರ್ಷಗಳಿಗಿಂತಲೂ ಕಡಿಮೆ ಅವಧಿಯಲ್ಲಿ ತೀರಿಸಬಹುದು.