ಒಂದು ಬ್ಯುಸಿನೆಸ್ ನಲ್ಲಿ ಸಕ್ಸಸ್ ಸಿಗ್ಬೇಕು ಅಂದ್ರೆ ಪರಿಶ್ರಮ ಅಗತ್ಯ. ತಾಳ್ಮೆ ಇಲ್ಲಿ ಮುಖ್ಯ ಪಾತ್ರವಹಿಸುತ್ತದೆ. ಫೆವಿಕ್ವಿಕ್ ಕಂಪನಿ ಮಾಲೀಕ ಇವೆರಡ ಜೊತೆ ಮಾರುಕಟ್ಟೆಗೆ ಏನು ಅಗತ್ಯವ ಎಂಬುದನ್ನು ತಿಳಿದು ಹೆಜ್ಜೆಯಿಟ್ಟಿದ್ದು, ಯಶಸ್ವಿನ ಮೆಟ್ಟಿಲೇರಲು ಸಾಧ್ಯವಾಗಿದೆ.
ಗಮ್ ಅಂದಾಗ ಮೊದಲು ನೆನಪಿಗೆ ಬರೋದು ಫೆವಿಕಾಲ್. ಈಗ ನಾನಾ ಬಗೆಯ ಗಮ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ರೂ ಜನರ ಮೊದಲ ಆಯ್ಕೆ ಫೆವಿಕಾಲ್. ಅಜ್ಜನಿಂದ ಮೊಮ್ಮಕ್ಕಳವರೆಗೆ ಮನೆಯ ಎಲ್ಲರ ಬಾಯಿಂದ ಬರೋದು ಇದೊಂದೆ ಗಮ್ ಹೆಸರು. ಬಹುತೇಕ ಎಲ್ಲ ಫರ್ನಿಚರ್ ಗಳಿಗೆ ಈ ಗಮ್ ಬಳಸಲಾಗ್ತಿದೆ. ಫೆವಿಕಾಲ್, ಫಿವಿಸ್ಟಿಕ್ ಅಂತ ಕಂಪನಿ ಅನೇಕ ವೆರೈಟಿ ಗಮ್ ಗಳನ್ನು ಈಗ ಮಾರುಕಟ್ಟೆಗೆ ಬಿಟ್ಟಿದೆ. ಅನೇಕ ವರ್ಷಗಳಿಂದ ಮಾರುಕಟ್ಟೆಯಲ್ಲಿ ಯಶಸ್ವಿ ಪಯಣ ಮುಂದುವರೆಸಿರುವ ಈ ಫೆವಿಕಾಲ್ ಗಮ್ ಸಂಸ್ಥಾಪಕ ಯಾರು, ಅವರ ಯಶಸ್ವಿನ ಕಥೆ ಏನು ಎಂಬ ಮಾಹಿತಿ ಇಲ್ಲಿದೆ.
ಫೆವಿಕಾಲ್ ಕಂಪನಿ ಮಾಲೀಕರ ಹೆಸರು ಬಲ್ವಂತ್ ಪರೇಖ್. ಕಠಿಣ ಪರಿಶ್ರಮ ಮತ್ತು ಸತತ ಪ್ರಯತ್ನ ಅವರ ಜೀವನವನ್ನು ಬದಲಿಸಿದೆ. ಅವರ ಈ ಸಾಧನೆಗೆ ಕಾರಣವಾಗಿದೆ. ಯಶಸ್ಸಿನ ತುತ್ತ ತುದಿ ತಲುಪಲು, ಮನೆ ಮನೆಯಲ್ಲಿ ಅವರ ಉತ್ಪನ್ನ ಸಿಗಲು ಕಾರಣ ಅವರ ಹೋರಾಟ. ಬಲ್ವಂತ್ ಪರೇಖ್ ಗುಜರಾತ್ನಲ್ಲಿ ಜನಿಸಿದ್ರು. ಪಾಲಕರು, ಬಲ್ವಂತ್ ಅವರನ್ನು ವಕೀಲರನ್ನಾಗಿ ಬಯಸುವ ಇಚ್ಛೆ ಹೊಂದಿದ್ದರು. ಅದೇ ನಿಟ್ಟಿನಲ್ಲಿ ಕಾನೂನು ಅಧ್ಯಯನ ಮಾಡಲು ಮುಂಬೈಗೆ ಬಂದ ಬಲ್ವಂತ್, ಮಹಾತ್ಮ ಗಾಂಧಿಯವರ ಪ್ರಭಾವಕ್ಕೆ ಒಳಗಾದ್ರು. ಬಲ್ವಂತ್ ಪರೇಖ್ ಕ್ವಿಟ್ ಇಂಡಿಯಾ ಚಳುವಳಿಯಲ್ಲಿಯೂ ಭಾಗವಹಿಸಿದ್ರು. ಇದೇ ವೇಳೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಲ್ವಂತ್, ಹೊಟ್ಟೆಗಾಗಿ ಮುದ್ರಣಾಲಯದಲ್ಲಿ ಕೆಲಸ ಗಿಟ್ಟಿಸಿಕೊಂಡ್ರು.
ಬಲ್ವಂತ್ ಅನೇಕ ಕಂಪನಿಯಲ್ಲಿ ಕೆಲಸ ಮಾಡಿದ್ದಾರೆ. ಪ್ರಿಂಟಿಂಗ್ ಪ್ರೆಸ್ ನಂತ್ರ, ಬಲವಂತ್ ಪರೇಖ್ ಮರದ ವ್ಯಾಪಾರಿಗಾಗಿ ಕೆಲಸ ಮಾಡಿದ್ರು. ಅಷ್ಟೆ ಅಲ್ಲ ಲಾ ಓದಿದ್ರೂ ಪ್ಯೂನ್ ಆಗಿ ಕೆಲಸ ಮಾಡುತ್ತಿದ್ದರು ಬಲ್ವಂತ್ ಪರೇಖ್. ಕುಟುಂಬ ಕಚೇರಿ ಗೋದಾಮಿನಲ್ಲಿ ವಾಸವಾಗಿತ್ತು. ಗೋದಾಮಿನಲ್ಲಿ, ಮರದ ತುಂಡುಗಳ ಜೊತೆ ಇದ್ದ ಬಲ್ವಂತ್, ಮರದ ಕೆಲ್ಸವನ್ನು ಬಹಳ ಸೂಕ್ಷ್ಮವಾಗಿ ಗಮನಿಸಿದ್ರು. ತಮ್ಮದೇ ಬ್ಯುಸಿನೆಸ್ ಶುರು ಮಾಡುವ ಆಸೆ ಹೊಂದಿದ್ದ ಬಲ್ವಂತ್ ಅವರಿಗೆ ಆಸರೆಯಾಗಿದ್ದು ಮೋಹನ್. ಪಾಶ್ಚಿಮಾತ್ಯ ದೇಶಗಳಿಂದ ಭಾರತಕ್ಕೆ ಸೈಕಲ್, ಅಡಿಕೆ, ಕಾಗದದ ಬಣ್ಣ ಸೇರಿದಂತೆ ಅನೇಕ ವಸ್ತುಗಳನ್ನು ಆಮದು ಮಾಡಿಕೊಳ್ಳುವ ಬ್ಯುಸಿನೆಸ್ ಶುರು ಮಾಡಿದ್ರು.
ಫೆವಿಕಾಲ್ ಶುರುವಾಗಿದ್ದು ಹೇಗೆ? : ಇದೇ ವ್ಯವಹಾರದಲ್ಲಿ ಬಲ್ವಂತ್ ಅವರಿಗೆ , ಜರ್ಮನ್ ಕಂಪನಿ ಹೋಚ್ಸ್ಟ್ ಜೊತೆ ಸಂಪರ್ಕ ಬೆಳೆಯಿತು. ಜರ್ಮನಿಗೆ ಹೋಗೋ ಅವಕಾಶ ಸಿಕ್ಕಿತ್ತು. ಅಲ್ಲಿ ಬಹಳಷ್ಟು ಕಲಿತರು. ಬಲ್ವಂತ್ ಪರೇಖ್ ಜರ್ಮನಿಯಿಂದ ಹಿಂದಿರುಗಿ ತನ್ನ ಸಹೋದರನೊಂದಿಗೆ ಡೈಕೆಮ್ ಇಂಡಸ್ಟ್ರೀಸ್ ಎಂಬ ಕಂಪನಿ ಪ್ರಾರಂಭಿಸಿದರು. ಅವರ ಕಂಪನಿ ಮುಂಬೈನ ಜಾಕೋಬ್ ಸರ್ಕಲ್ನಲ್ಲಿ ಬಣ್ಣ, ಕೈಗಾರಿಕಾ ರಾಸಾಯನಿಕ, ವರ್ಣದ್ರವ್ಯ ತಯಾರಿಸಿ ವ್ಯಾಪಾರ ಮಾಡುತ್ತಿತ್ತು. ಮರದ ಕೆಲ್ಸ ಮಾಡುವವರ ಜೊತೆ ಅನೇಕ ದಿನಗಳನ್ನು ಕಳೆದಿದ್ದ ಅವರು, ಮರವನ್ನು ಅಂಟಿಸಲು ಎಷ್ಟು ಕಷ್ಟ ಎಂಬುದನ್ನು ನೋಡಿದ್ದರು. ಅದಕ್ಕೆ ಪರಿಹಾರ ಎನ್ನುವಂತೆ ಗಮ್ ತಯಾರಿಸುವ ಪ್ರಯತ್ನಕ್ಕೆ ಕೈ ಹಾಕಿದ್ರು. ಅದಕ್ಕೆ ಫೆವಿಕಾಲ್ ಎಂದು ನಾಮಕರಣ ಮಾಡಿದ್ರು. ಬಲ್ವಂತ್ ಪರೇಖ್ 1959 ರಲ್ಲಿ ಭಾರತದಲ್ಲಿ ಫೆವಿಕಾಲ್ ಪ್ರಾರಂಭಿಸಿದರು. ನಂತ್ರ ಕಂಪನಿ ಹೆಸರನ್ನು ಪಿಡಿಲೈಟ್ ಎಂದು ಬದಲಾಯಿಸಿದೆ.ಬದಲಾಗುತ್ತಿರುವ ಪ್ರಪಂಚದ ಜೊತೆ ಇದೂ ಬದಲಾಗಿದೆ. ಫೆವಿಕಾಲ್ನಿಂದ ಫೆವಿಕ್ವಿಕ್, Mseal ನಂತಹ ಅನೇಕ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ತಂದಿದೆ. ಪ್ರಸ್ತುತ, ಫೆವಿಕಾಲ್ ಅನ್ನು ವಿಶ್ವದ 54 ದೇಶಗಳಲ್ಲಿ ಮಾರಾಟ ಮಾಡಲಾಗ್ತಿದೆ. ನಿರಂತರ ಪ್ರಯತ್ನದ ನಂತ್ರ ಬಲ್ವಂತ್ 56 ಸಾವಿರ ಕೋಟಿ ರೂ. ಮೌಲ್ಯದ ಸಂಪತ್ತನ್ನು ಹೊಂದಿದ್ದಾರೆ.
