* ವೆಂಟಿಲೇಟರ್, ಆಕ್ಸಿಜನ್ ಯಂತ್ರ ಪೂರೈಕೆಗೆ ಬಳಕೆ* ಕಳೆದ ವರ್ಷವೂ 100 ಕೋಟಿ ನೀಡಿದ್ದ ಪ್ರತಿಷ್ಠಾನ* ಕೋವಿಡ್ ಹೋರಾಟಕ್ಕೆ ಇನ್ಫಿ ಫೌಂಡೇಶನ್ 100 ಕೋಟಿ
ನವದೆಹಲಿ(ಮೇ.10): ಕೊರೋನಾ ವಿರುದ್ಧದ ಹೋರಾಟಕ್ಕೆ 100 ಕೋಟಿ ರು. ದೇಣಿಗೆ ನೀಡುವುದಾಗಿ ಬೆಂಗಳೂರು ಮೂಲದ ಇಸ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ ಭಾನುವಾರ ಘೋಷಣೆ ಮಾಡಿದ್ದಾರೆ. ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಕಳೆದ ವರ್ಷವೂ ಫೌಂಡೇಷನ್ 100 ಕೋಟಿ ರು. ದೇಣಿಗೆ ನೀಡಿತ್ತು. ಇದೀಗ ಹೆಚ್ಚುವರಿ 100 ಕೋಟಿ ರು. ಪ್ರಕಟಿಸುವ ಮೂಲಕ ಕೊರೋನಾ ವಿರುದ್ಧದ ಭಾರತದ ಹೋರಾಟಕ್ಕೆ ಇಸ್ಫೋಸಿಸ್ ಒಟ್ಟಾರೆ 200 ಕೋಟಿ ರು. ದೇಣಿಗೆ ನೀಡಿದಂತಾಗಲಿದೆ.
ಖಾಸಗಿ ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಮಾಹಿತಿ ನೀಡಿರುವ ಇಸ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ, ‘ಕಳೆದ ವರ್ಷ ಬೆಂಗಳೂರಿನಲ್ಲಿ ಕೋವಿಡ್ ಆಸ್ಪತ್ರೆ ಸ್ಥಾಪನೆಗೆ ನೆರವು ನೀಡಿದ್ದೆವು. ಈ ಆಸ್ಪತ್ರೆ ಇದೀಗ ಪರಿಪೂರ್ಣವಾಗಿ ಕಾರ್ಯನಿರ್ವಹಿಸುತ್ತಿದೆ. ಕಳೆದ ವರ್ಷ 100 ಕೋಟಿ ರು. ಪೈಕಿ ಶೇ.50ರಷ್ಟುಹಣವನ್ನು ಪಿಎಂ ಕೇರ್ಸ್‌ಗೆ ನೀಡಿದ್ದೆವು. ಆದರೆ ಈ ಸಲ 100 ಕೋಟಿ ರು. ಅನ್ನು ಮೂಲಭೂತ ಸೌಕರ್ಯಗಳ ಪೂರೈಕೆಗಾಗಿ ಬಳಕೆ ಮಾಡಿಕೊಳ್ಳಲಾಗುತ್ತದೆ’ ಎಂದಿದ್ದಾರೆ.
"
ಅಲ್ಲದೆ ನಮ್ಮ ನೆರವಿನ ಹಸ್ತವನ್ನು ಇದೀಗ ನಮ್ಮ ಸಂಸ್ಥೆ ಇರುವ ಮಂಗಳೂರು, ಹೈದರಾಬಾದ್, ಪುಣೆ, ನಾಗ್ಪುರ, ತಿರುವನಂತಪುರ ಹಾಗೂ ದೆಹಲಿಯಲ್ಲೂ ಕೊರೋನಾ ನಿಯಂತ್ರಣಕ್ಕೆ ಬಳಸಲಿದ್ದೇವೆ. ಈ ನಗರಗಳಲ್ಲಿರುವ ಆಸ್ಪತ್ರೆಗಳಿಗೆ ಅಗತ್ಯವಿರುವ ವೆಂಟಿಲೇಟರ್‌ಗಳು, ಆಮ್ಲಜನಕದ ಕಾನ್ಸನ್‌ಟ್ರೇಟರ್‌ಗಳು, ಸ್ಯಾನಿಟೈಸರ್, ಪಿಪಿಇ ಕಿಟ್‌ಗಳು, ಎನ್-95 ಮಾಸ್ಕ್‌ಗಳು ಸೇರಿದಂತೆ ಇನ್ನಿತರ ಉಪಯುಕ್ತ ಉಪಕರಣಗಳನ್ನು ಪೂರೈಸುತ್ತೇವೆ. ಅಲ್ಲದೆ ಆಟೋ ಚಾಲಕರು, ದಿನಗೂಲಿ ಕಟ್ಟಡ ಕಾರ್ಮಿಕರಿಗೆ ಅಕ್ಕಿ, ಆಹಾರದ ಕಿಟ್‌ಗಳನ್ನು ಪೂರೈಸುತ್ತಿದ್ದೇವೆ. ಅಲ್ಲದೆ ಹಲವರು ಕೊರೋನಾದಿಂದ ರಕ್ಷಣೆ ನೀಡುವ ಲಸಿಕೆ ಪಡೆಯುತ್ತಿಲ್ಲ. ಹೀಗಾಗಿ ನಾವು ಲಸಿಕಾ ಜಾಗೃತಿಯನ್ನೂ ಮೂಡಿಸುತ್ತಿದ್ದೇವೆ’ ಎಂದಿದ್ದಾರೆ.
ಕಳೆದ ವರ್ಷ ಬೆಂಗಳೂರಿನಲ್ಲಿ ಕೋವಿಡ್ ಆಸ್ಪತ್ರೆ ಸ್ಥಾಪನೆಗೆ ನೆರವು ನೀಡಿದ್ದೆವು. ಅದು ಈಗ ಕಾರ‍್ಯನಿರ್ವಹಿಸುತ್ತಿದೆ. ಈ ಸಲ 100 ಕೋಟಿ ರು.ಗಳನ್ನು ಮೂಲಭೂತ ಸೌಕರ್ಯಗಳನ್ನು ಒದಗಿಸಲು ಬಳಸುತ್ತೇವೆ.
- ಸುಧಾಮೂರ್ತಿ, ಇಸ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
