ಜಗತ್ತಿನಲ್ಲಿಯೇ ಅತಿವೇಗವಾಗಿ ಬೆಳೆಯತ್ತಿರುವ Single Malt ವಿಸ್ಕಿ ಎನ್ನುವ ದಾಖಲೆ ಬರೆದ ಭಾರತದ Indri
ಭಾರತದಲ್ಲಿ ಅಚ್ಚರಿ ಎನಿಸುವಂತೆ 30% ಮಾರುಕಟ್ಟೆ ಪಾಲನ್ನು ವಶಪಡಿಸಿಕೊಂಡಿರುವ ಇಂದ್ರಿ, ಪ್ರೀಮಿಯಂ ಸ್ಪಿರಿಟ್‌ಗಳ ಕ್ಷೇತ್ರದಲ್ಲಿ ಇಂದು ಮುಂಚೂಣಿಯಲ್ಲಿ ನಿಂತಿದೆ.
ನವದೆಹಲಿ (ಏ.13): ಇಂದು ವಿಶ್ವದಲ್ಲಿಯೇ ಪ್ರಖ್ಯಾತಿ ಪಡೆದಿರುವ ಇಂದ್ರಿ ಸಿಂಗಲ್ ಮಾಲ್ಟ್ ವಿಸ್ಕಿಯ ಮೂಲ ಭಾರತ. ದೇಶದ ಮೊಟ್ಟಮೊದಲ ಹಾಗೂ ಅತ್ಯಂತ ಫೇಮಸ್ ಆಗಿರುವ ಟ್ರಿಪಲ್ ಕ್ಯಾಸ್ಕ್ ಮಾಲ್ಟ್ ವಿಸ್ಕಿಯ ತಯಾರಕ ಕಂಪನಿ ಪಿಕ್ಕಾಡಿಲಿ ಡಿಸ್ಟಿಲರೀಸ್ ಅಪರೂದ ಗೌರವವನ್ನು ಪಡೆದುಕೊಂಡಿದೆ. ಜಾಗತಿಕ ಸ್ಪಿರಿಟ್ ಮಾರುಕಟ್ಟೆಯಲ್ಲಿ ಭಾರತ ದೊಡ್ಡ ಹೆಜ್ಜೆಗಳನ್ನು ಇಡುತ್ತಿರುವುದಕ್ಕೆ ಸಾಕ್ಷಿ ಎನ್ನುವಂಥ ಮೈಲಿಗಲ್ಲನ್ನು ಸಾಧಿಸಿದೆ. ಹೌದು.. ಇಂದ್ರಿ-ಟ್ರಿನಿಯನ್ನು 'ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಸಿಂಗಲ್ ಮಾಲ್ಟ್ ವಿಸ್ಕಿ' ಎಂದು ಘೋಷಣೆ ಮಾಡಲಾಗಿದೆ. ಇದು ಆ ಬ್ರ್ಯಾಂಡ್‌ಗೆ ಮಾತ್ರವಲ್ಲ, ಜಾಗತಿಕ ಸ್ಪಿರಿಟ್ ಮಾರುಕಟ್ಟೆಯಲ್ಲಿ ಭಾರತಕ್ಕೂ ಹೆಮ್ಮೆ ತಂದಿರುವ ವಿಚಾರವಾಗಿದೆ. ವಿಶ್ವದ ವಿಸ್ಕಿಯ ರಾಜಧಾನಿ ಎನಿಸಿಕೊಂಡಿರುವ ಸ್ಕಾಟ್ಲೆಂಡ್, ಜಪಾನ್, ತೈವಾನ್ ಸೇರಿದಂತೆ ಯಾವುದೇ ದೇಶಗಳ ಸಿಂಗಲ್ ಮಾಲ್ಟ್ ವಿಸ್ಕಿ ಬಿಡುಗಡೆಯಾದ ಎರಡೇ ವರ್ಷಗಳಲ್ಲಿ 1 ಲಕ್ಷ ಕೇಸ್ ಮಾರಾಟವಾದ ದಾಖಲೆ ಬರೆದಿದೆ.
ಈ ಅಭೂತಪೂರ್ವ ಮಾರಾಟದ ದಾಖಲೆಯೊಂದಿಗೆ ಇಂದ್ರಿ-ಟ್ರಿನಿ ಸಿಂಗಲ್ ಮಾಲ್ಟ್ ವಿಸ್ಕಿಯ ತನ್ನ ಮೇಲಿದ್ದ ಎಲ್ಲಾ ನಿರೀಕ್ಷೆಗಳನ್ನೂ ಮೀರಿದ್ದು, ಜಾಗತಿಕವಾಗಿ ಅತಿ ಹೆಚ್ಚು ಮಾರಾಟವಾಗುವ ಸಿಂಗಲ್ ಮಾಲ್ಟ್ ವಿಸ್ಕಿಗಳ ಎಲೈಟ್ ಕ್ಲಬ್‌ನಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷದಲ್ಲಿ ಇಂದ್ರಿ ದೊಡ್ಡ ಮಟ್ಟದ ಬೆಳವಣಿಗೆ ಸಾಧಿಸಿದೆ. ಕಳೆದೊಂದು ವರ್ಷದಲ್ಲಿ ಇಂದ್ರಿಯ ಮಾರಾಟದಲ್ಲಿ ಶೇ. 599 ರಷ್ಟು ಹೆಚ್ಚಳವಾಗಿದೆ. ಇಂದ್ರಿ ಸಿಂಗಲ್ ಮಾಲ್ಟ್ ವಿಸ್ಕಿ ಕೇವಲ ದಾಖಲೆಗಳನ್ನು ಮುರಿಯುತ್ತಿರುವುದು ಮಾತ್ರವಲ್ಲ, ಸ್ಪಿರಿಟ್ ಉದ್ಯಮದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಕಾರಣವಾಗಿದೆ. ಭಾರತದಲ್ಲಿ ವಿಸ್ಕಿ ಮಾರುಕಟ್ಟೆಯಲ್ಲಿ ಶೇ. 30ರಷ್ಟು ಶೇರ್‌ಅನ್ನು ಇದು ವಶಪಡಿಸಿಕೊಂಡಿದೆ. ಅಷ್ಟು ಮಾತ್ರವಲ್ಲದೆ, ಪ್ರೀಮಿಯಂ ಸ್ಪಿರಿಟ್‌ಗಳ ಕ್ಷೇತ್ರದಲ್ಲಿ ಇಂದು ಮುಂಚೂಣಿಯಲ್ಲಿ ನಿಂತಿರುವ ಬ್ರ್ಯಾಂಡ್ ಎನಿಸಿದೆ.
ಮೊದಲು ಭಾರತದ ಮಾರುಕಟ್ಟೆಯಲ್ಲಿ ವಿದೇಶದ ವಿಸ್ಕಿ ಬ್ರ್ಯಾಂಡ್‌ಗಳೇ ಪ್ರಾಬಲ್ಯ ಸಾಧಿಸುತ್ತಿದ್ದವು. ಆದರೆ, ಇಂದ್ರಿ ಭಾರತೀಯರು ಏನು ಸಾಧಿಸಬಲ್ಲರು ಎನ್ನುವುದಕ್ಕೆ ಸಾಕ್ಷಿಯಾಗಿ ನಿಂತಿದೆ. ಇದು ಕೇವಲ ಬ್ರ್ಯಾಂಡ್ ಮಾತ್ರವೇ ಅಲ್ಲ. ಇದು ದೇಶದ ಹೆಮ್ಮೆಯ ಪ್ರತೀಕ. ಭಾರತೀಯ ಸ್ಪಿರಿಟ್‌ಗಳ ಮೌಲ್ಯವನ್ನು ಇನ್ನಷ್ಟು ಎತ್ತರಕ್ಕೆ ಏರಿಸಿದೆ. ಇಂದ್ರಿ ಕೇವಲ ಬದಲಾವಣೆಯಲ್ಲಿ ಮುಂಚೂಣಿಯಲ್ಲಿ ನಿಂತಿಲ್ಲ. ಬದಲಿಗೆ ಒಂದು ಕ್ರಾಂತಿಯನ್ನು ಮುನ್ನಡೆಸುತ್ತಿದೆ' ಎಂದು ಪಿಕ್ಯಾಡಿಲಿ ಡಿಸ್ಟಿಲರೀಸ್‌ನ ಸಿಇಒ ಪ್ರವೀಣ್ ಮಾಳವಿಯಾ ಹೇಳಿದ್ದಾರೆ.
ವಿಸ್ಕಿ ಮಾರಾಟದಲ್ಲೂ 'ಆತ್ಮನಿರ್ಭರ', ಜಾಗತಿಕ ದೈತ್ಯ ವಿಸ್ಕಿ ಕಂಪನಿಗಳ ಮೀರಿಸಿದ ಮೇಡ್ ಇನ್ ಇಂಡಿಯಾ ಲಿಕ್ಕರ್ಸ್!
2021ರಲ್ಲಿ ಮಾರುಕಟ್ಟೆಯ ಬಂದಿದ್ದ ಇಂದ್ರಿಯ ಇಲ್ಲಿಯವರೆಗಿನ ಪ್ರಯಾಣ ಮೈಲಿಗಲ್ಲುಗಳಿಂದಲೇ ಕೂಡಿದೆ. ಇಲ್ಲಿಯವರೆಗೂ ಇಂದ್ರಿ-ಟ್ರಿನಿ ಸಿಂಗಲ್ ಮಾಲ್ಟ್ ವಿಸ್ಕಿ 25ಕ್ಕೂ ಹೆಚ್ಚು ಪ್ರಶಸ್ತಿಗಳಿಂದ ಅಲಂಕರಿಸಲ್ಪಟ್ಟಿದೆ. ವಿಶ್ವ ವಿಸ್ಕಿ ಪ್ರಶಸ್ತಿಗಳು ಮತ್ತು ಅಂತರರಾಷ್ಟ್ರೀಯ ವಿಸ್ಕಿ ಸ್ಪರ್ಧೆಯಂತಹ ಪ್ರತಿಷ್ಠಿತ ಕಾರ್ಯಕ್ರಮಗಳಲ್ಲಿ ಇದು 'ಅತ್ಯುತ್ತಮ ಭಾರತೀಯ ಸಿಂಗಲ್ ಮಾಲ್ಟ್' ನಂತಹ ಗೌರವಗಳನ್ನು ಪಡೆದುಕೊಂಡಿದೆ. ನ್ಯೂಯಾರ್ಕ್ ವರ್ಲ್ಡ್ ವೈನ್ ಮತ್ತು ಸ್ಪಿರಿಟ್ಸ್ ಸ್ಪರ್ಧೆಯಲ್ಲಿ 'ಏಷ್ಯನ್ ವಿಸ್ಕಿ ಆಫ್ ದಿ ಇಯರ್' ಮತ್ತು 'ಚಿನ್ನದ ಪದಕ' ವನ್ನೂ ಗೆದ್ದುಕೊಂಡಿದೆ. ಇಂದ್ರಿ ಕೇವಲ ಭಾರತಕ್ಕೆ ವೈಭವವನ್ನು ತಂದಿಲ್ಲ. ಅಂತರರಾಷ್ಟ್ರೀಯ ವಿಸ್ಕಿ ನಕ್ಷೆಯಲ್ಲಿ ತನ್ನ ಸ್ಥಾನವನ್ನು ದೊಡ್ಡ ಮಟ್ಟದಲ್ಲಿ ಭದ್ರಪಡಿಸಿಕೊಂಡಿದೆ. ವಿಸ್ಕಿಸ್ ಆಫ್ ದಿ ವರ್ಲ್ಡ್ ಅವಾರ್ಡ್ಸ್‌ನಲ್ಲಿ ಸ್ಕಾಚ್ ಮತ್ತು ಅಮೇರಿಕನ್ ಪ್ರತಿಸ್ಪರ್ಧಿಗಳ ಸ್ಪರ್ಧೆಯನ್ನು ಮೀರಿಸಿದ ಇಂದ್ರಿ ದೀಪಾವಳಿ ಕಲೆಕ್ಟರ್ಸ್ ಆವೃತ್ತಿಯು 'ವಿಶ್ವದ ಅತ್ಯುತ್ತಮ ವಿಸ್ಕಿ' ಎನ್ನುವ ಶ್ರೇಯ ಪಡೆದುಕೊಂಡಿತು. ಇದು ಈವರೆಗೆ ಇಂದ್ರಿ ವಿಸ್ಕಿ ಪಡೆದ ಶ್ರೇಷ್ಠ ಗೌರವ ಎನಿಸಿದೆ.
ಮೇಡ್ ಇನ್ ಇಂಡಿಯಾ ವಿಸ್ಕಿಗೆ 'ಜಗತ್ತಿನ ಸರ್ವಶ್ರೇಷ್ಠ ವಿಸ್ಕಿ' ಎನ್ನುವ ಮನ್ನಣೆ!