ವಿಸ್ಕಿ ಮಾರಾಟದಲ್ಲೂ 'ಆತ್ಮನಿರ್ಭರ', ಜಾಗತಿಕ ದೈತ್ಯ ವಿಸ್ಕಿ ಕಂಪನಿಗಳ ಮೀರಿಸಿದ ಮೇಡ್ ಇನ್ ಇಂಡಿಯಾ ಲಿಕ್ಕರ್ಸ್!
ದೇಶಿಯ ವಿಸ್ಕಿ ಬ್ರ್ಯಾಂಡ್‌ಗಳು ಕಳೆದ ವರ್ಷ ದಾಖಲೆಯ ಮಾರಾಟವಾಗಿದೆ. ಮೊಟ್ಟಮೊದಲ ಬಾರಿಗೆ 2023ರಲ್ಲಿ ದೇಶದಲ್ಲಿ ಸಿಂಗಲ್ ಮಾಲ್ಡ್ ವಿಸ್ಕಿ ಮಾರಾಟದಲ್ಲಿ ದೇಶೀಯ ಕಂಪನಿಗಳು ವಿದೇಶಿದ ಜಾಗತಿಕ ದೈತ್ಯ ಬ್ರ್ಯಾಂಡ್‌ಗಳನ್ನು ಹಿಂದಿಕ್ಕಿವೆ ಎಂದು ಅಧಿಕೃತ ಮಾಹಿತಿ ತಿಳಿಸಿದೆ.
ನವದೆಹಲಿ (ಜ.8): ಮೇಡ್ ಇನ್ ಇಂಡಿಯಾ ಕ್ರೇಜ್ ಎಲ್ಲಾ ಕಡೆ ಸೃಷ್ಟಿಯಾಗಿದೆ. ಆಲ್ಕೋಹಾಲ್ ವಿಚಾರದಲ್ಲೂ ಭಾರತ ಹಿಂದೆ ಬಿದ್ದಿಲ್ಲ. ಮೇಡ್ ಇನ್ ಇಂಡಿಯಾ ವಿಸ್ಕಿ ಮಾರಾಟದಲ್ಲೂ ದೇಶ ತನ್ನ ಛಾಪು ಮೂಡಿಸಲು ಆರಂಭಿಸಿದೆ. ಇದೇ ಮೊದಲ ಬಾರಿಗೆ ದೇಶದಲ್ಲಿ ಸಿಂಗಲ್ ಮಾಲ್ಡ್ ವಿಸ್ಕಿ ಮಾರಾಟದಲ್ಲಿ ದೇಶೀಯ ಕಂಪನಿಗಳು ವಿದೇಶದ ದೈತ್ಯ ಬ್ರ್ಯಾಂಡೆಡ್ ಕಂಪನಿಗಳನ್ನು ಹಿಂದಿಕ್ಕಿದೆ. ಭಾರತೀಯ ಆಲ್ಕೊಹಾಲ್ಯುಕ್ತ ಪಾನೀಯ ಕಂಪನಿಗಳ ಒಕ್ಕೂಟದ (CIABC) ಪ್ರಾಥಮಿಕ ಅಂದಾಜಿನ ಪ್ರಕಾರ, ಸಿಂಗಲ್ ಮಾಲ್ಟ್‌ಗಳ ಒಟ್ಟು ಮಾರಾಟದಲ್ಲಿ ದೇಶೀಯ ಬ್ರಾಂಡ್‌ಗಳ ಪಾಲು ಕಳೆದ ವರ್ಷ ಅಂದರೆ 2023 ರಲ್ಲಿ 53 ಪ್ರತಿಶತವನ್ನು ತಲುಪಿದೆ. ಈ ಅವಧಿಯಲ್ಲಿ, ಒಟ್ಟು 6,75,000 ಕೇಸ್ ಸಿಂಗಲ್ ಮಾಲ್ಟ್‌ಗಳನ್ನು ದೇಶದಲ್ಲಿ ಮಾರಾಟ ಮಾಡಲಾಗಿದೆ. ಇವುಗಳಲ್ಲಿ, ದೇಶೀಯ ಬ್ರಾಂಡ್‌ಗಳ ಮಾರಾಟವು 3,45,000 ಕೇಸ್‌ಗಳಷ್ಟಿದ್ದರೆ, ಸ್ಕಾಟಿಷ್ ಮತ್ತು ಇತರ ವಿದೇಶಿ ಬ್ರ್ಯಾಂಡ್‌ಗಳ ಮಾರಾಟವು 3,30,000 ಕೇಸ್‌ಗಳಷ್ಟಿದೆ. ಒಂದು ಕೇಸ್ ಎಂದರೆ, 9 ಲೀಟರ್ ಮದ್ಯ ಎನ್ನುವ ಅಂದಾಜಾಗಿದೆ. ಇನ್ನು ಸಿಂಗಲ್ ಮಾಲ್ಟ್ ಎನ್ನುವುದು ಒಂದೇ ಧಾನ್ಯದಿಂದ ಒಂದೇ ಡಿಸ್ಟಲರಿಯಲ್ಲಿ ತಯಾರಿಸಿದ ಮದ್ಯ ಎನ್ನುವುದಾಗಿದೆ.
ಸಿಎಐಬಿಸಿ ಪ್ರಧಾನ ನಿರ್ದೇಶಕ ವಿನೋದ್ ಗಿರಿ ಹೇಳುವ ಪ್ರಕಾರ, 'ದೇಶೀಯ ಬ್ರಾಂಡ್‌ಗಳ ಮಾರಾಟವು 2023 ರಲ್ಲಿ ಸುಮಾರು 23 ಪ್ರತಿಶತದಷ್ಟು ಹೆಚ್ಚಾಗಿದೆ ಮತ್ತು ಆಮದು ಮಾಡಿಕೊಂಡ ಮದ್ಯದ ಮಾರಾಟವು ಶೇಕಡಾ 11 ರಷ್ಟು ಹೆಚ್ಚಾಗಿದೆ. ಈ ಸಾಧನೆಯನ್ನು ದೇಶೀಯ ಬ್ರ್ಯಾಂಡ್‌ಗಳ ಮೈಲಿಗಲ್ಲು ಎಂದೇ ಪರಿಗಣಿಸಲಾಗಿದೆ. ಅಮೃತ್ ಡಿಸ್ಟಿಲರೀಸ್ ನ ಜಂಟಿ ನಿರ್ದೇಶಕ ತ್ರಿವಿಕ್ರಮ್ ನಿಕಮ್ ಇದಕ್ಕೆ ಪ್ರತಿಕ್ರಿಯೆ ನೀಡಿದ್ದು, ಇದು ಪ್ರತಿದಿನ ಮಾಡಲಾಗುವ ಸಾಧನೆಯಲ್ಲ. ಕೆಲವು ವರ್ಷಗಳ ಹಿಂದೆ ದೇಶೀಯ ವಿಸ್ಕಿ ವಿಚಾರದಲ್ಲಿ ನಮ್ಮನ್ನು ಗೇಲಿ ಮಾಡಲಾಗುತ್ತಿತ್ತು. ಆದರೆ ಈಗ ನಾವು ಗುಣಮಟ್ಟ ಮತ್ತು ಪರಿಷ್ಕರಣೆಯಲ್ಲಿ ಯಾರಿಗೂ ಕಡಿಮೆಯಿಲ್ಲ ಎಂದು ತೋರಿಸಿದ್ದೇವೆ. Glenlivet, Macallan, Lagavulin ಮತ್ತು Talisker ನಂತಹ ಬ್ರ್ಯಾಂಡ್‌ಗಳು ಈಗ ಅಮೃತ್, ಪಾಲ್ ಜಾನ್, ರಾಂಪುರ್, ಇಂದ್ರಿ ಮತ್ತು ಜ್ಞಾನಚಂದ್‌ನಂತಹ ಸ್ವದೇಶಿ ಬ್ರಾಂಡ್‌ಗಳಿಂದ ಸದ್ದಿಲ್ಲದಂತೆ ಆಗಿವೆ' ಎಂದಿದ್ದಾರೆ.
ಮೇಡ್ ಇನ್ ಇಂಡಿಯಾ ವಿಚಾರ ಎಷ್ಟು ಪ್ರಖ್ಯಾತಿ ಆಗುತ್ತಿದೆ ಎಂದರೆ, ಐಪಿಎಲ್ ಟೀಮ್ ಆರ್‌ಸಿಬಿ ಮಾಲೀಕರಾಗಿರುವ ಡಿಯಾಜಿಯೋ ಮತ್ತು ಪೆನಾರ್ಡ್ ರಿಕಾರ್ಡ್‌ನಂಥ ಜಾಗತಿಕ ದೈತ್ಯ ಕಂಪನಿಗಳು ಕೂಡ ಸ್ಥಳೀಯ ಬ್ರ್ಯಾಂಡ್‌ಗಳನ್ನು ಆರಂಭ ಮಾಡುತ್ತಿದೆ. ಡಿಯಾಜಿಯೊ 2022 ರಲ್ಲಿ ಗೊಡವಾನ್ ಬ್ರಾಂಡ್ ಅನ್ನು ಪ್ರಾರಂಭಿಸಿದರೆ, ಪೆರ್ನಾಡ್ ಇತ್ತೀಚೆಗೆ ತನ್ನ ಮೊದಲ ದೇಸಿ ಸಿಂಗಲ್ ಮಾಲ್ಟ್ ಲಾಂಗಿಟ್ಯೂಡ್ 77 ಅನ್ನು ಬಿಡುಗಡೆ ಮಾಡಿದೆ. ಪೆರ್ನಾಡ್ ಇಂಡಿಯಾದ ಮುಖ್ಯ ಮಾರುಕಟ್ಟೆ ಅಧಿಕಾರಿ ಕಾರ್ತಿಕ್ ಮಹೀಂದ್ರಾ, 'ಭಾರತವು ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಯಾಗಿದೆ ಮತ್ತು ವೈವಿಧ್ಯತೆಯಿಂದ ಕೂಡಿದೆ. ಇಲ್ಲಿನ ಯುವಕರು ಪ್ರಯೋಗ ಮಾಡುತ್ತಿದ್ದಾರೆ ಮತ್ತು ಅವರು ಸಂಪೂರ್ಣವಾಗಿ ವಿಭಿನ್ನ ರೀತಿಯ ಉತ್ಪನ್ನವನ್ನು ಬಯಸುತ್ತಿದ್ದಾರೆ. ಇನ್ನು ಗ್ರಾಹಕರು ಕೂಡ ಹೊಸತನವನ್ನು ಬಯಸುತ್ತಿದ್ದಾರೆ' ಎಂದು ಹೇಳಿದ್ದಾರೆ.
ಮೇಡ್ ಇನ್ ಇಂಡಿಯಾ ವಿಸ್ಕಿಗೆ 'ಜಗತ್ತಿನ ಸರ್ವಶ್ರೇಷ್ಠ ವಿಸ್ಕಿ' ಎನ್ನುವ ಮನ್ನಣೆ!
'ದೇಶಿಯ ಕಂಪನಿಗಳ ಪ್ರಾಬಲ್ಯ ಹೆಚ್ಚುತ್ತಿರುವುದು ವಿದೇಶಿ ಕಂಪನಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ' ಎಂದು ಗೋವಾದ ಸಿಂಗಲ್ ಮಾಲ್ಟ್ ವಿಸ್ಕಿ ತಯಾರಿಕಾ ಕಂಪನಿಯಾದ ಜಾನ್ ಡಿಸ್ಟಿಲರೀಸ್ ನ ಅಧ್ಯಕ್ಷ ಪೌಲ್ ಪಿ ಜಾನ್ ಹೇಳಿದ್ದಾರೆ. 'ದೇಶೀಯ ಬ್ರ್ಯಾಂಡ್ ಎನ್ನುವುದು ಬಹಳ ವರ್ಷಗಳಿಂದ ಮಲಗಿತ್ತು. ಈಗ ಸಡನ್ ಆಗಿ ನಿದ್ರೆಯಿಂದ ಎಚ್ಚರವಾಗಿದ್ದಾಳೆ. ಈಗ ಅವರು (ವಿದೇಶಿ ಬ್ರ್ಯಾಂಡ್‌ಗಳು) ನಮ್ಮನ್ನು ಹಿಡಿಯಲು ಪ್ರಯತ್ನ ಮಾಡ್ತಿದ್ದಾರೆ. ಆದರೆ, ಇದಕ್ಕಾಗಿ ಅವರು ಶಾರ್ಟ್ ಕಟ್ ಮಾರ್ಗವನ್ನು ಅನುಸರಿಸುತ್ತಿದ್ದಾರೆ. ಆದರೆ, ಇದು ಅವರಿಗೆ ಅರ್ಥವಾಗದ ವಿಚಾರ. ಈಗ ಭಾರತದ ಸಮಯ ಬಂದಿದೆ. ಯುರೋಪ್ ಹಾಗೂ ಸ್ಕಾಟಿಷ್ ಬ್ರ್ಯಾಂಡ್‌ಗಳು ಇಲ್ಲಿಯವರೆಗೂ ತಮ್ಮನ್ನು ಯಾರೂ ಹಿಡಿಯೋರಿಲ್ಲ ಎನ್ನುವ ಅಹಂಕಾರದಲ್ಲಿದ್ದವು. ಅದನ್ನು ಭಾರತದ ಸಿಂಗಲ್ ಮಾಲ್ಟ್ ವಿಸ್ಕಿ ತಯಾರಿಸುವ ಕಂಪನಿಗಳು ಮುರಿದುಹಾಕಿವೆ ಎಂದು ಹೇಳಿದ್ದಾರೆ.
80ನೇ ವರ್ಷದಲ್ಲಿ ಬಿಲಿಯನೇರ್ ಪಟ್ಟಿಗೆ ಸೇರಿದ 8ಪಿಎಂ ವಿಸ್ಕಿ ಮಾಲೀಕ!
ಭಾರತೀಯ ಮಾಲ್ಟ್‌ಗಳ ಗುಣಮಟ್ಟ ತುಂಬಾ ಉತ್ತಮವಾಗಿದೆ ಎಂದು ಜಮ್ಮುವಿನ ವಿಸ್ಕಿ ತಯಾರಿಕಾ ಕಂಪನಿಯಾದ ದಿವಾನ್ಸ್ ಮಾಡರ್ನ್ ಬ್ರೂವರೀಸ್‌ನ ಅಧ್ಯಕ್ಷ ಮತ್ತು ಎಂಡಿ ಪ್ರೇಮ್ ದಿವಾನ್ ಹೇಳಿದ್ದಾರೆ. ಇದೇ ಕಾರಣಕ್ಕೆ ಇವುಗಳ ಬೇಡಿಕೆ ಹೆಚ್ಚುತ್ತಿದೆ. ಭಾರತೀಯ ಬ್ರಾಂಡ್‌ಗಳು ಹೊಸ ಪ್ರಯೋಗಗಳನ್ನು ಮಾಡುತ್ತಲೇ ಇರುವಾಗ ಸ್ಕಾಟಿಷ್ ಬ್ರಾಂಡ್‌ಗಳು ಸಂಪ್ರದಾಯದಿಂದ ವಿಮುಖರಾಗಲು ಸಿದ್ಧವಾಗಿಲ್ಲ ಎಂದು ಹೇಳಿದ್ದಾರೆ.