ಇಂಡಿಗೋ ವಿಮಾನಯಾನ ಸಂಸ್ಥೆಯ ಸರ್ವರ್‌ನಲ್ಲಿ ತೊಂದರೆ ಕಾಣಿಸಿಕೊಂಡ ಕಾರಣ ಸಾವಿರಾರು ಪ್ರಯಾಣಿಕರು ತೊಂದರೆ ಅನುಭವಿಸಿದ ಘಟನೆ ನಡೆದಿದೆ.
ಬೆಂಗಳೂರು/ ಮುಂಬೈ [ಜು.2]: ಇಂಡಿಗೋ ವಿಮಾನಯಾನ ಸಂಸ್ಥೆಯ ಸರ್ವರ್‌ನಲ್ಲಿ ತೊಂದರೆ ಕಾಣಿಸಿಕೊಂಡ ಕಾರಣ, ಬೆಂಗಳೂರಿನಿಂದ ದೇಶದ ವಿವಿಧ ಭಾಗಗಳಿಗೆ ತೆರಳಬೇಕಿದ್ದ ಸಾವಿರಾರು ಪ್ರಯಾಣಿಕರು ತೊಂದರೆ ಅನುಭವಿಸಿದ ಘಟನೆ ಸೋಮವಾರ ನಡೆದಿದೆ.
ತಾಂತ್ರಿಕ ಸಮಸ್ಯೆ ಕಾರಣ ಇಂಡಿಗೋದ ಸರ್ವರ್ ಸೋಮವಾರ ಮುಂಜಾನೆ ಅರ್ಧ ಗಂಟೆ ಸ್ಥಗಿತಗೊಂಡಿತ್ತು. ಹೀಗಾಗಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿವಿಧ ಭಾಗಗಳಿಗೆ ತೆರಳಬೇಕಿದ್ದ 29 ವಿಮಾನಗಳ ಸಂಚಾರದಲ್ಲಿ ವ್ಯತ್ಯವಾಯಿತು. ಈ ಬಗ್ಗೆ ಪ್ರಕಟಣೆ ಹೊರಡಿಸಿದ ಇಂಡಿಗೋ ವಿಮಾನಯಾನ ಸಂಸ್ಥೆ, ‘ಸರ್ವರ್‌ನಲ್ಲಿ ತಾಂತ್ರಿಕ ದೋಷ ಎದುರಾಗಿ ವಿಮಾನ ಟಿಕೆಟ್ ಕಾಯ್ದಿರಿಸುವ ವ್ಯವಸ್ಥೆಯು ಸೋಮವಾರ ಬೆಳಗ್ಗಿನ ಜಾವ 4.29ರಿಂದ 5.07 ಗಂಟೆವರೆಗೂ ಸ್ಥಗಿತಗೊಂಡಿತ್ತು.
ಬಳಿಕ ಪರ್ಯಾಯ ವ್ಯವಸ್ಥೆ ಮೂಲಕ ಪ್ರಯಾಣಿಕರಿಗೆ ಟಿಕೆಟ್ ಬುಕ್ ಮಾಡಿಕೊಡಲಾಯಿತು. ಇದರಿಂದಾಗಿ 29 ವಿಮಾನಗಳ ಸಂಚಾರದಲ್ಲಿ ಅರ್ಧ ಗಂಟೆ ವಿಳಂಬವಾಗಿದೆ. ಇದಕ್ಕಾಗಿ ವಿಷಾದಿಸುತ್ತೇವೆ’ ಎಂದು ಹೇಳಿದೆ. ಆ ಬಳಿಕ ಸರ್ವರ್ ಅನ್ನು ಸರಿಪಡಿಸಲಾಗಿದ್ದು, ಕಾರ್ಯ ನಿರ್ವಹಣೆಯಲ್ಲಿ ಯಾವುದೇ ಸಮಸ್ಯೆ ಎದುರಾಗಿಲ್ಲ ಎಂದು ಹೇಳಿದೆ.
