Asianet Suvarna News Asianet Suvarna News

ಬಂಗಾರದ ಬೆಲೆ ಗಗನಕ್ಕೇರಿದರೂ ಭಾರತದಲ್ಲಿ ತಗ್ಗದ ಖರೀದಿ; ಚಿನ್ನದ ಬೇಡಿಕೆಯಲ್ಲಿ ಶೇ.8ರಷ್ಟು ಏರಿಕೆ

ಭಾರತೀಯರ ಚಿನ್ನದ ಮೇಲಿನ ವ್ಯಾಮೋಹಕ್ಕೆ ಬೆಲೆಯೇರಿಕೆ ಕೂಡ ಕಡಿವಾಣ ಹಾಕಲು ಸಾಧ್ಯವಿಲ್ಲ ಎಂಬುದು ಈಗ ಸಾಬೀತಾಗಿದೆ. ಚಿನ್ನದ ಬೆಲೆ ಸಾರ್ವಕಾಲಿಕ ಗರಿಷ್ಠ ಏರಿಕೆ ಕಂಡಿದ್ದರೂ ಭಾರತದಲ್ಲಿ ಮಾತ್ರ ಚಿನ್ನಕ್ಕೆ ಬೇಡಿಕೆ ತಗ್ಗಿಲ್ಲ, ಬದಲಿಗೆ ಶೇ.8ರಷ್ಟು ಏರಿಕೆಯಾಗಿದೆ. 

Indias Gold Rush Demand Soars 8 percent Despite High Prices anu
Author
First Published Apr 30, 2024, 5:34 PM IST | Last Updated Apr 30, 2024, 5:34 PM IST

ನವದೆಹಲಿ (ಏ.30):  ಭಾರತೀಯರು ಬಂಗಾರಪ್ರಿಯರು ಎಂಬ ವಿಚಾರ ಇಡೀ ಜಗತ್ತಿಗೆ ತಿಳಿದಿದೆ. ಆದರೆ, ಇದು ಈ ಮಟ್ಟಿಗೇನಾ ಎಂಬಂತಹ ಬೆಳವಣಿಗೆ ಇತ್ತೀಚೆಗೆ ನಡೆದಿದೆ. ಕಳೆದ ಕೆಲವು ಸಮಯದಿಂದ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಸಾಮಾನ್ಯವಾಗಿ ಚಿನ್ನದ ಬೆಲೆಯಲ್ಲಿ ಏರಿಕೆಯಾದಾಗ ಬೇಡಿಕೆ ತಗ್ಗೋದು ಕಾಮನ್. ಆದರೆ, ಇದು ಭಾರತದ ಮಾರುಕಟ್ಟೆಗೆ ಅನ್ವಯಿಸೋದಿಲ್ಲ ಎಂಬುದು ಸಾಬೀತಾಗಿದೆ. ಚಿನ್ನದ ಬೆಲೆ ಸಾರ್ವಕಾಲಿಕ ಏರಿಕೆ ಕಂಡಿದ್ದರೂ ಭಾರತದಲ್ಲಿ ಮಾತ್ರ ಬಂಗಾರದ ಬೇಡಿಕೆಯಲ್ಲಿ ಶೇ.8ರಷ್ಟು ಹೆಚ್ಚಳ ಕಂಡುಬಂದಿದೆ. ಮಾರ್ಚ್ ತ್ರೈಮಾಸಿಕದಲ್ಲಿ ಚಿನ್ನದ ಬೇಡಿಕೆ ವಾರ್ಷಿಕ 136.6 ಟನ್ ಗೆ ಹೆಚ್ಚಳವಾಗಿದೆ ಎಂದು ವಿಶ್ವ ಚಿನ್ನದ ಮಂಡಳಿ ಮಾಹಿತಿ ನೀಡಿದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಚಿನ್ನವನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸುತ್ತಿರೋದು ಕೂಡ ಬೇಡಿಕೆ ಹೆಚ್ಚಲು ಕಾರಣವಾಗಿದೆ ಎಂದು ಹೇಳಲಾಗಿದೆ.

ಈ ವರ್ಷದ ಜನವರಿ-ಮಾರ್ಚ್ ಅವಧಿಯಲ್ಲಿ ಭಾರತದ ಚಿನ್ನದ ಬೇಡಿಕೆ ಮೌಲ್ಯದ ಆಧಾರದಲ್ಲಿ ಶೇ.20ರಷ್ಟು ಏರಿಕೆ ಕಂಡಿದ್ದು, 75,470 ಕೋಟಿ ರೂ. ತಲುಪಿದೆ. ಇನ್ನು ಇದೇ ಅವಧಿಯಲ್ಲಿ ಗಾತ್ರದಲ್ಲಿ ಹಾಗೂ ತ್ರೈಮಾಸಿಕದ ಸರಾಸರಿ ಬೆಲೆಯಲ್ಲಿ ಶೇ.11ರಷ್ಟು ಹೆಚ್ಚಳವಾಗಿದೆ. ಇಂದು (ಏ.30) ವಿಶ್ವ ಚಿನ್ನ ಮಂಡಳಿ (ಡಬ್ಲ್ಯು ಜಿಸಿ) ಬಿಡುಗಡೆಗೊಳಿಸಿದ ತನ್ನ ಜಾಗತಿಕ ವರದಿ 'ಚಿನ್ನದ ಬೇಡಿಕೆ ಟ್ರೆಂಡ್ಸ್ ಕ್ಯು 1 2024' ಆಭರಣ ಹಾಗೂ ಹೂಡಿಕೆ ಸೇರಿದಂತೆ ಭಾರತದಲ್ಲಿ ಒಟ್ಟು ಚಿನ್ನದ ಬೇಡಿಕೆಯನ್ನು ತೋರಿಸಿದೆ. ಈ ವರ್ಷದ ಜನವರಿ-ಮಾರ್ಚ್ ಅವಧಿಯಲ್ಲಿ ಚಿನ್ನದ ಬೇಡಿಕೆ ಒಂದು ವರ್ಷದ ಹಿಂದಿನ 126.3 ಟನ್ ನಿಂದ 136.6 ಟನ್ ಗೆ ಹೆಚ್ಚಳವಾಗಿದೆ. 

ಅಕ್ಷಯ ತೃತೀಯದಂದು ಚಿನ್ನ – ಬೆಳ್ಳಿಯಲ್ಲಿ ಯಾವುದು ಕೊಳ್ಳೋದು ಬೆಸ್ಟ್ ?

ಒಟ್ಟು ಚಿನ್ನದ ಬೇಡಿಕೆಯಲ್ಲಿ ಭಾರತದಲ್ಲಿ ಆಭರಣದ ಬೇಡಿಕೆಯಲ್ಲಿ ಶೇ.4ರಷ್ಟು ಏರಿಕೆ ಕಂಡುಬಂದಿದ್ದು, 91.9 ಟನ್ ನಿಂದ 95.5 ಟನ್ ಗೆ ಏರಿಕೆಯಾಗಿದೆ. ಇನ್ನು ಒಟ್ಟು ಹೂಡಿಕೆ ಬೇಡಿಕೆಯಲ್ಲಿ ಶೇ.19ರಷ್ಟು ಹೆಚ್ಚಳವಾಗಿದ್ದು, 34.4 ಟನ್ ನಿಂದ 41.1 ಟನ್ ಗೆ ಏರಿಕೆಯಾಗಿದೆ. 

ಇಂಡಿಯಾ ಡಬ್ಲ್ಯು ಜಿಸಿ ಪ್ರಾದೇಶಿಕ ಸಿಇಒ ಸಚಿನ್ ಜೈನ್, ಚಿನ್ನದ ಬೇಡಿಕೆಯಲ್ಲಿನ ಹೆಚ್ಚಳ ಚಿನ್ನದ ಜೊತೆಗಿನ ಭಾರತದ  ಬಿಡಿಸಲಾಗದ ಸುದೀರ್ಘ ಬಾಂಧವ್ಯವನ್ನು ನೆನಪಿಸಿದೆ ಎಂದು ಹೇಳಿದ್ದಾರೆ. ಜೈನ್ ನಿರೀಕ್ಷೆ ಪ್ರಕಾರ ಭಾರತದಲ್ಲಿ ಚಿನ್ನದ ಬೇಡಿಕೆ ಈ ವರ್ಷ 700-800 ಟನ್ ತನಕ ಇರಲಿದೆ. 

ಇದೇ ರೀತಿ ಬೆಲೆಯಲ್ಲಿ ಏರಿಕೆಯಾದ್ರೆ, ಬೇಡಿಕೆ ತಗ್ಗುವ ನಿರೀಕ್ಷೆಯಿದೆ ಎಂದು ಸಚಿನ್ ಜೈನ್ ತಿಳಿಸಿದ್ದಾರೆ. 2023ರಲ್ಲಿ ದೇಶದ ಚಿನ್ನದ ಬೇಡಿಕೆ 747.5 ಟನ್ ಇತ್ತು. ಆಭರಣಗಳು ಹಾಗೂ ಚಿನ್ನದ ಗಟ್ಟಿ, ನಾಣ್ಯ, ಇಟಿಎಫ್ ಸೇರಿದಂತೆ ಹೂಡಿಕೆ ಉತ್ಪನ್ನಗಳ ಬೇಡಿಕೆಯಲ್ಲಿ ಈಗಾಗಲೇ ಹೆಚ್ಚಳವಾಗಿದೆ ಎಂಬ ಮಾಹಿತಿಯನ್ನು ಜೈನ್ ನೀಡಿದ್ದಾರೆ. 

ಇತಿಹಾಸದಲ್ಲೇ ಅಧಿಕ ಚಿನ್ನ ಮಾರಾಟ, ಅಡ ಇಟ್ಟಿದ್ದು ಮೋದಿ ಅವಧಿಯಲ್ಲಿ: ಜೈರಾಂ

'ಈ ಹಿಂದಿನಿಂದಲೂ ಚಿನ್ನದ ಬೆಲೆಯಲ್ಲಿ ಇಳಿಕೆಯಾದ ಸಂದರ್ಭದಲ್ಲಿ ಭಾರತ ಹಾಗೂ ಚಿನ್ನದ ಮಾರುಕಟ್ಟೆಗಳಲ್ಲಿ ಹೆಚ್ಚಿನ ಪ್ರತಿಕ್ರಿಯೆ ವ್ಯಕ್ತವಾಗುತ್ತಿತ್ತು. ಅದೇ ಪಾಶ್ಚಿಮಾತ್ಯ ಮಾರುಕಟ್ಟೆಗಳು ಚಿನ್ನದ ಬೆಲೆ ಏರಿಕೆಯಾದ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದವು. ಆದರೆ, ಇದೇ ಮೊದಲ ಬಾರಿಗೆ ಸಂಪೂರ್ಣ ವ್ಯತಿರಿಕ್ತ ಬೆಳವಣಿಗೆ ಘಟಿಸಿದೆ. ಚಿನ್ನದ ಬೆಲೆಯಲ್ಲಿ ಏರಿಕೆಯಾದ ಸಂದರ್ಭದಲ್ಲಿ ಭಾರತೀಯ ಹಾಗೂ ಚೀನಾದ ಮಾರುಕಟ್ಟೆಗಳು ಪ್ರತಿಸ್ಪಂದನೆ ನೀಡಿವೆ' ಎಂದು ಸಚಿನ್ ಜೈನ್ ತಿಳಿಸಿದ್ದಾರೆ. 

ಇನ್ನು ಚಿನ್ನದ ಬೇಡಿಕೆಯಲ್ಲಿ ಭಾರೀ ಏರಿಕೆಯಾಗಲು ಇನ್ನೊಂದು ಕಾರಣ ಆರ್ ಬಿಐ ದೊಡ್ಡ ಪ್ರಮಾಣದಲ್ಲಿ ಚಿನ್ನ ಖರೀದಿಸುತ್ತಿರೋದು ಎಂದು ಜೈನ್ ತಿಳಿಸಿದ್ದಾರೆ. 2023ನೇ ಸಾಲಿನ ಇಡೀ ವರ್ಷದಲ್ಲಿ ಆರ್ ಬಿಐ 16 ಟನ್ ಚಿನ್ನ ಖರೀದಿಸಿತ್ತು. ಆದರೆ, ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಈಗಾಗಲೇ ಆರ್ ಬಿಐ 19 ಟನ್ ಚಿನ್ನ ಖರೀದಿ ಮಾಡಿದೆ ಎಂದು ಜೈನ್ ತಿಳಿಸಿದ್ದಾರೆ. 


 

Latest Videos
Follow Us:
Download App:
  • android
  • ios