ಮತ್ತಷ್ಟು ಗಾಢಗೊಂಡ ಭಾರತತ-ಅಮೆರಿಕ ಸಾಮರಿಕ ಸಂಬಂಧ| ಅಮೆರಿಕದ ಎಂಹೆಚ್ 60 ರೋಮಿಯೋ ಸೀ ಹಾಕ್ ಹೆಲಿಕಾಪ್ಟರ್ ಭಾರತಕ್ಕೆ| ಸಬ್‌ಮರೀನ್ ನಿರೋಧಕ ಹಾಗೂ ಶೋಧ ಕಾರ್ಯಾಚರಣೆ ಕೈಗೊಳ್ಳುವ ಸಾಮರ್ಥ್ಯ| 2.4 ಬಿಲಿಯನ್ ಡಾಲರ್ ಮೊತ್ತದ ಹೆಲಿಕಾಪ್ಟರ್ ಖರೀದಿ ಒಪ್ಪಂದ| ಭಾರತದ ನೌಕಾಪಡೆಗೆ ಶಕ್ತಿ ತುಂಬಲಿದೆ ಎಂಹೆಚ್ 60 ರೋಮಿಯೋ ಸೀ ಹಾಕ್ ಹೆಲಿಕಾಪ್ಟರ್|

ವಾಷಿಂಗ್ಟನ್(ಏ.03): ಭಾರತ-ಅಮೆರಿಕ ನಡುವಿನ ಸಾಮರಿಕ ಸಂಬಂಧ ಮತ್ತಷ್ಟು ಗಾಢವಾಗಿದ್ದು, ಅಮೆರಿಕದ ಸಬ್‌ಮರೀನ್ ನಿರೋಧಕ ಎಂಹೆಚ್ 60 ರೋಮಿಯೋ ಸೀ ಹಾಕ್ ಹೆಲಿಕಾಪ್ಟರ್ ಗಳು ಶೀಘ್ರದಲ್ಲೇ ಭಾರತದ ನೌಕಾಪಡೆಯ ಬತ್ತಳಿಕೆ ಸೇರಲಿವೆ.

ಅತ್ಯಾಧುನಿಕ ಎಂಹೆಚ್ 60 ರೋಮಿಯೋ ಸೀ ಹಾಕ್ ಹೆಲಿಕಾಪ್ಟರ್ ಗಳನ್ನು ಭಾರತಕ್ಕೆ ಮಾರಾಟ ಮಾಡಲು ಅಮೆರಿಕ ಸರ್ಕಾರ ಅನುಮೋದನೆ ನೀಡಿದೆ. ಭಾರತಕ್ಕೆ ಒಟ್ಟು 24 ಹೆಲಿಕಾಪ್ಟರ್ ಗಳನ್ನು ಮಾರಾಟ ಮಾಡಲು ಅಮೆರಿಕ ಮುಂದಾಗಿದ್ದು, ಒಟ್ಟು 2.4 ಬಿಲಿಯನ್ ಡಾಲರ್ ಮೊತ್ತದ ಬೃಹತ್ ಒಪ್ಪಂದ ಇದಾಗಿದೆ.

ಸಾಗರ ತಳದಲ್ಲಿರುವ ಸಬ್‌ಮರೀನ್ ಗಳನ್ನು ಗುರುತಿಸಿ ಅವುಗಳನ್ನು ಹೊಡೆದುರುಳಿಸುವ ಸಾಮರ್ಥ್ಯ ಈ ಎಂಹೆಚ್ 60 ರೋಮಿಯೋ ಸೀ ಹಾಕ್ ಹೆಲಿಕಾಪ್ಟರ್ ಗಳಿಗಿದೆ.

ರಕ್ಷಣಾ ಕಾರ್ಯಾಚರಣೆ ಹಾಗೂ ಶೋಧ ಕಾರ್ಯಾಚರಣೆಯನ್ನು ಕೈಗೊಳ್ಳುವ ಸಾಮರ್ಥ್ಯ ಇದ್ದು, ಅಮೆರಿಕದ ಪ್ರತಿಷ್ಠಿತ ಶಸ್ತ್ರಾಸ್ತ್ರ ತಯಾರಿಕಾ ಮತ್ತು ಮಾರಾಟ ಸಂಸ್ಥೆ ಲಾಕ್‌ ಹೀಡ್ ಮಾರ್ಟಿನ್‌ ಸಂಸ್ಥೆ ಈ ಅತ್ಯಾಧುನಿಕ ಹೆಲಿಕಾಪ್ಟರ್ ಗಳನ್ನು ನಿರ್ಮಾಣ ಮಾಡುತ್ತಿದೆ.

ಭಾರತದ ಜಲಪ್ರದೇಶವನ್ನು ಬಲಪಡಿಸಲು ಹಾಗೂ ಇತ್ತೀಚಿನ ದಿನಗಳಲ್ಲಿ ಜಲಮಾರ್ಗಗಳಿಂದಲೂ ದೇಶದ ಸಾರ್ವಭೌಮತೆಗೆ ಅಪಾಯ ಒದಗುವ ಸಾಧ್ಯತೆಗಳಿರುವುದರಿಂದ ನೌಕಾಪಡೆಗೆ ಈ ರಿತಿಯ ಸುಸಜ್ಜಿತ ಹೆಲಿಕಾಫ್ಟರ್ ಗಳ ಅವಶ್ಯಕತೆ ಇತ್ತು.