ಮಾಹಿತಿ ಸೋರಿಕೆ ನಿಲ್ಲಿಸಿದ್ದೇವೆ, ಚೀನಾ ಹೂಡಿಕೆ ತಪ್ಪಿಸುತ್ತಿದ್ದೇವೆ!
ಮಾಹಿತಿ ಸೋರಿಕೆ ನಿಲ್ಲಿಸಿದ್ದೇವೆ, ಚೀನಾ ಹೂಡಿಕೆ ತಪ್ಪಿಸುತ್ತಿದ್ದೇವೆ| ವಿವಾದಗಳಿಗೆ ‘ದೇಸಿ ಟ್ವೀಟರ್’ ಕೂ ಸ್ಪಷ್ಟನೆ
ಬೆಂಗಳೂರು(ಫೆ.13): ಭಾರತದ ಟ್ವೀಟರ್ ಎಂದೇ ಪ್ರಸಿದ್ಧವಾಗಿರುವ ಹಾಗೂ ಮೂರು ದಿನಗಳಿಂದ ದೊಡ್ಡ ಪ್ರಮಾಣದಲ್ಲಿ ನೋಂದಣಿ ಕಾಣುತ್ತಿರುವ ‘ಕೂ’ ಆ್ಯಪ್ ಬಗ್ಗೆ ಕೆಲ ವಿವಾದಗಳು ಕೇಳಿಬಂದಿದ್ದು, ಅದಕ್ಕೆ ಕಂಪನಿ ಸ್ಪಷ್ಟನೆ ನೀಡಿದೆ.
‘ಕೂ’ ಆ್ಯಪ್ ತಾನು ಸಂಪೂರ್ಣ ದೇಸಿ ಎಂದು ಹೇಳಿಕೊಂಡು ಆತ್ಮನಿರ್ಭರ ಭಾರತ ಪ್ರಶಸ್ತಿ ಪಡೆದಿದ್ದರೂ ಇದರಲ್ಲಿ ಚೀನಾದ ಹೂಡಿಕೆದಾರರಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಜೊತೆಗೆ, ಈ ಆ್ಯಪ್‌ನಲ್ಲಿ ಬಳಕೆದಾರರ ಖಾಸಗಿ ಮಾಹಿತಿಗಳು ಸೋರಿಕೆಯಾಗಿವೆ ಎಂಬ ಆರೋಪವೂ ಕೇಳಿಬಂದಿದೆ.
ಶುಕ್ರವಾರ ಈ ಕುರಿತು ಸ್ಪಷ್ಟನೆ ನೀಡಿರುವ ಬೆಂಗಳೂರು ಮೂಲದ ಕೂ ಕಂಪನಿಯ ಸಿಇಒ ಅಪ್ರಮೇಯ ರಾಧಾಕೃಷ್ಣ, ‘ಬಳಕೆದಾರರ ಖಾಸಗಿ ಮಾಹಿತಿ ಸೋರಿಕೆಯಾಗಿದೆ ಎಂಬ ಆರೋಪ ತಪ್ಪು. ಬಳಕೆದಾರರು ತಮ್ಮ ಪ್ರೊಫೈಲ್‌ನಲ್ಲಿ ಸ್ವಯಂಪ್ರೇರಿತರಾಗಿ ವಯಸ್ಸು, ಜನ್ಮದಿನಾಂಕ, ವಿವಾಹ ಹಾಗೂ ಇತರ ವಿವರಗಳನ್ನು ಪ್ರದರ್ಶಿಸಿದ್ದರೆ ಮಾತ್ರ ಅದು ಹೊರಗಿನವರಿಗೆ ಸಿಗುತ್ತಿದೆ. ಇನ್ನು, ಇ-ಮೇಲ್ ಐಡಿ ಬಳಸಿ ಲಾಗಿನ್ ಆದ ಶೇ.4ರಷ್ಟುಕೂ ಬಳಕೆದಾರರ ಇ-ಮೇಲ್ ಐಡಿ ಮಾತ್ರ ಸೋರಿಕೆಯಾಗಿತ್ತು. ಅದನ್ನು ಈಗ ಸರಿಪಡಿಸಲಾಗಿದೆ’ ಎಂದು ಹೇಳಿದ್ದಾರೆ.
ಚೀನಾ ಹೂಡಿಕೆಯ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, ಬಾಂಬಿನೇಟ್ ಟೆಕ್ನಾಲಜೀಸ್ ಕಂಪನಿಯು ಕೂ ಮತ್ತು ವೋಕಲ್ (ಕ್ವೋರಾ ರೀತಿಯ ಆ್ಯಪ್) ಆ್ಯಪ್‌ಗಳ ಮಾತೃ ಕಂಪನಿಯಾಗಿದೆ. ವೋಕಲ್‌ನಲ್ಲಿ ಚೀನಾದ ಶಿಯೋಮಿಯ ವೆಂಚೂರ್ ಕ್ಯಾಪಿಟಲ್ ವಿಭಾಗವಾದ ಶುನ್ವೆ ಎಂಬ ಕಂಪನಿ ಸಣ್ಣಪ್ರಮಾಣದ ಬಂಡವಾಳ ಹೂಡಿದೆ. ಅದನ್ನೂ ಈಗ ಭಾರತೀಯ ಹೂಡಿಕೆದಾರರೇ ಖರೀದಿಸುತ್ತಿದ್ದಾರೆ. ಶೀಘ್ರದಲ್ಲೇ ಚೀನಾದ ಹೂಡಿಕೆಯಿಂದ ನಮ್ಮ ಕಂಪನಿ ಮುಕ್ತವಾಗಲಿದೆ ಎಂದು ತಿಳಿಸಿದ್ದಾರೆ.